ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರದ ಜಮೀನುಗಳಲ್ಲಿನ ಹತ್ತಿ ಬೆಳೆಗಳನ್ನು ನಾಲವಾರ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಉಮೇಶ ಭರಿಕರ ಬುಧವಾರ ಪರಿಶೀಲನೆ ನಡೆಸಿದರು.
ಹತ್ತಿ ಬೆಳೆಯುವ ಜಮೀನುಗಳ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಉಮೇಶ ಭರಿಕರ ಹತ್ತಿ ಬೆಳೆಯಲ್ಲಿ ಕಾಯಿಕೊರಕ ನಿರ್ವಗಣೆಗೆ ಸಲಹೆ ನೀಡಿದರು.
ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದ ಹತ್ತಿ ಬೆಳೆ ಹೂವಾಡುವ ಹಂತದಲ್ಲಿದ್ದು ಈ ಸಂದರ್ಭದಲ್ಲಿ ಗುಲಾಬಿ ಕಾಯಿಕೊರಕದ ಬಾಧೆ ಪ್ರಾರಂಭವಾಗುತ್ತಿದೆ. ರೈತರು ಹುಳದ ಬಾಧೆಗೆ ಸೂಕ್ತ ನಿರ್ವಹಣೆ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ ಎಂದು ನಾಲವಾರ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಉಮೇಶ ಭರಿಕರ ತಿಳಿಸಿದ್ದಾರೆ.
ತಾಲೂಕಿನ ನಾಲವಾರದ ಹತ್ತಿ ಬೆಳೆಯುವ ಜಮೀನುಗಳ ಪ್ರದೇಶದಲ್ಲಿ ಬುಧವಾರ ಅವರು ಸಮೀಕ್ಷೆ ಕೈಕೊಂಡು ರೈತರಿಗೆ ಸಲಹೆ ನೀಡಿದ್ದಾರೆ. ಹತ್ತಿಯು ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಪ್ರಸಕ್ತ ವರ್ಷ ಹತ್ತಿ ಬೆಳೆ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಸಾಮಾನ್ಯವಾಗಿ ಕಳೆದ ವರ್ಷದ ಬೆಳೆಯ ಅವಶೇಷಗಳಿಂದಲೇ ಹತ್ತಿಯ ಗುಲಾಬಿ ಕಾಯಿಕೊರಕ ಸುಪ್ತಾವಸ್ಥೆಯ ಕೋಶಗಳು ಹೊರಬಂದು ಚಿಟ್ಟೆಗಳು ಬೆಳೆಗಳಲ್ಲಿ ಮೊಟ್ಟೆಗಳನ್ನಿಟ್ಟು, ಮೊಟ್ಟೆಯಿಂದ ಹೊರಬಂದ ಕೀಟಗಳು ಬಾಧೆಯನ್ನುಂಟು ಮಾಡುತ್ತವೆ. ರೈತರು ಕೀಟದ ಬಾಧೆಯನ್ನು ಅರಿತುಕೊಳ್ಳಲು ಕೀಟದ ಸಮೀಕ್ಷೆ ಮಾಡುವುದು ಒಳ್ಳೆಯದು. ಈ ಕೀಟದ ಸಮೀಕ್ಷೆಗಾಗಿ ಪ್ರತಿ ಎಕರೆಗೆ 2 ರಂತೆ ಲಿಂಗಾಕರ್ಷಕ ಬಲೆಗಳನ್ನು ಹಾಕಬೇಕು. ಬಲೆಯಲ್ಲಿ ಪ್ರತಿದಿನ ಒಂದು ಎಕರೆಗೆ ಒಂದು ಬಲೆಯಲ್ಲಿ 4 ಕೀಟಗಳು ಕಂಡುಬಂದರೆ ನಿರ್ವಹಣೆ ಕ್ರಮಗಳನ್ನು ಅನುಸರಿಸಬೇಕು. ಈ ಕೀಟದ ಗಂಡು ಪತಂಗಗಳನ್ನು ಸಾಮೂಹಿಕವಾಗಿ ಆಕರ್ಷಿಸಿ ನಾಶಪಡಿಸಲು ಪ್ರತಿ ಎಕರೆಗೆ 8-10 ರಂತೆ ಮೋಹಕ ಬಲೆಗಳನ್ನು ಸಮಾನಾಂತರವಾಗಿ ಅಳವಡಿಸಿ ಗಂಡು ಕೀಟಗಳ ನಿಯಂತ್ರಣ ಮಾಡುವುದರಿಂದ ಹೆಣ್ಣು ಕೀಟಗಳಿಂದ ಸಂತತಿಯು ಮುಂದುವರೆಯದೆ ಕೀಟದ ನಿರ್ವಹಣೆ ಸಾಧ್ಯವಾಗುವುದು. ಮೋಹಕ ಬಲೆಗಳನ್ನು ಬೆಳೆಯ ಮಟ್ಟಕ್ಕಿಂತ 20 ರಿಂದ 30 ಸೆಂ. ಮೀ. ಎತ್ತರದಲ್ಲಿರಬೇಕು. 20 ರಿಂದ 30 ದಿನಗಳಿಗೊಮ್ಮೆ ಲೂರ್ಗಗಳನ್ನು ಬದಲಾಯಿಸಬೇಕು. ಈ
ರೀತಿಯ ಸಾಮೂಹಿಕವಾಗಿ ಎಲ್ಲಾ ಕಾಯಿಗಳು ಬಲಿಯುವ ಹಂತದವರೆಗೆ ಕೀಟವನ್ನು ನಿಯಂತ್ರಣ ಮಾಡಬೇಕೆಂದು ಹೇಳಿದರು.
ಬೆಳೆಯು 100 ದಿನಗಳಿಗಿಂತ ಕಡಿಮೆ ಅವದಿಯದಾಗಿದ್ದರೆ 2 ಮಿ. ಲೀ. ಪ್ರೊಫೆನೋಫಾಸ್ 50 ಇ.ಸಿ. ಅಥವಾ 1.0 ಗ್ರಾಂ ಥಯೋಡಿಕಾರ್ಬ್ 75 ಡಬ್ಲೂ.ಪಿ ಅಥವಾ 2.0 ಮಿ. ಲೀ. ಕ್ವಿನಾಲ್ ಫಾಸ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 100 ದಿನಗಳ ನಂತರದ ಬೆಳೆಯಾಗಿದ್ದರೆ ಅವಶ್ಯಕತೆಗನುಸಾರವಾಗಿ 0.5 ಮಿ. ಲೀ. ಲ್ಯಾಮ್ಯಾಸ್ಟೆಲೋಡ್ರಿನ್ ಅಥವಾ 0.5 ಮಿ. ಲೀ. ಡೆಕಾಮೈಥಿನ್ 2.8 ಇ. ಸಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಪ್ರತಿ ಎಕರೆಗೆ 200-250 ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು. ಲಿಂಗಾಕರ್ಷಕಗಳನ್ನು ಬಳಸಿ ಕೀಟದ ನಿರ್ವಹಣೆ ಮಾಡುವುದರಿಂದ ವಾತಾವರಣದಲ್ಲಿ ರಸಾಯನಿಕಗಳಿಂದಾಗುವ ಮಾಲಿನ್ಯ ಮತ್ತು ದುಷ್ಪರಿಣಾಮಗಳನ್ನು ಕಡಿಮೆಗೊಳಿಸಬಹುದು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ನಾಲವಾರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಮುಖ್ಯಸ್ಥ ಡಾ. ಉಮೇಶ ಭರಿಕರ ಮೊಬೈಲ್ ಸಂಖ್ಯೆ 9948313525 ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.