ಉತ್ತರ ಕನ್ನಡ/ಶಿರಸಿ :ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಶ್ರೀಗಳವರ ಮಾರ್ಗದರ್ಶನದಲ್ಲಿ 8 ಲಕ್ಷ ತುಳಸಿ ಅರ್ಚನೆಯು 200 ವೈದಿಕರನ್ನು ಒಳಗೊಂಡು ಶಾಸ್ತ್ರೋಕ್ತವಾಗಿ ಶ್ರೀ ಮಠದಲ್ಲಿ ನೆರವೇರಿತು. 1999 ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶರಕ್ಷಣೆಗಾಗಿ ಪರಮ ಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಕೋಟಿ ತುಳಸಿ ಅರ್ಚನೆಯನ್ನು ಸಂಕಲ್ಪಿಸಿ ನೆರವೇರಿಸಿದರು. ಅವತ್ತಿನಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಪ್ರತಿವರ್ಷವೂ ಎಂಟು ಲಕ್ಷ ತುಳಸಿ ಅರ್ಚನೆಯು ನಡೆಯುತ್ತ ಬಂದಿದೆ. ಅಂದಿನಿಂದ ಪ್ರತಿವರ್ಷವು ಕೂಡ ದೇಶದ ಸೈನಿಕರ ಬಲ ವೃದ್ಧಿಯಾಗಲಿ, ಲೋಕದಲ್ಲಿ ಧರ್ಮ ನೆಲೆಸಲಿ, ದೇಶ ರಾಮ ರಾಜ್ಯವಾಗಲಿ, ಲೋಕ ಕಲ್ಯಾಣವಾಗಲಿ ಎಂಬ ಸಂಕಲ್ಪವನ್ನು ಮಾಡಿ ತುಳಸಿ ಆರ್ಚನೆಯು ನಡೆಯುತ್ತದೆ. ಇಂದು ಕೂಡ ಅದೇ ಸಂಕಲ್ಪದಿಂದ ತುಳಸಿ ಅರ್ಚನೆಯು ನೆರವೇರಿತು. ಭಗವಾನ್ ಶ್ರೀಕೃಷ್ಣನಿಗೆ ಉಭಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಕಲ್ಪೋಕ್ತ ಮಹಾಪೂಜೆ, ಮಹಾಮಂಗಳಾರತಿಯು ನೆರವೇರಿತು. ಈ ತುಳಸಿ ಅರ್ಚನೆಯನ್ನು ಶ್ರೀ ಮಠದ ಅಧ್ಯಾಪಕ ವೃಂದದವರು, ಉಮ್ಮಚಿಗಿ, ಸ್ವರ್ಣವಲ್ಲಿ, ನಡಗೋಡು ಪಾಠಶಾಲೆಗಳ ವಿದ್ಯಾರ್ಥಿಗಳು ನೆರವೇರಿಸಿದರು. ಅಂದು ಸೈನಿಕರ ರಕ್ಷಣೆಗಾಗಿ ತುಳಸಿ ಆರ್ಚನೆಯನ್ನು ಸಂಕಲ್ಪಿಸಿ ಪ್ರತಿವರ್ಷ ಎಂಟು ಲಕ್ಷ ತುಳಸಿ ಅರ್ಚನೆಯನ್ನು ಮಾಡುತ್ತಾ ಬಂದು ಇಂದಿಗೆ ಇಪ್ಪತೈದು ವರ್ಷ ತುಂಬಿದೆ. ಇಂದಿನ ತುಳಸಿ ಅರ್ಚನೆಗೆ ಶ್ರೀ ಮಠಕ್ಕೆ ತುಳಸಿಯನ್ನು ಶ್ರೀ ಮಠದ ಭಕ್ತರು ಒದಗಿಸಿ ಕೊಟ್ಟಿರುವುದು ಧರ್ಮ ಶೃದ್ದೆಯ ಜಾಗೃತಿಯಾಗಿದೆ ಎಂದು ಶ್ರೀ ಸ್ವರ್ಣವಲ್ಲೀ ಶ್ರೀಗಳು ಅಭಿಪ್ರಾಯ ಪಟ್ಟರು.
ವರದಿ:ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ