ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರ ಗ್ರಾಮದ ಆರಾಧ್ಯ ದೇವರಾದ ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರ ದೇವರುಗಳ ಜಾತ್ರೆಯ ಅಂಗವಾಗಿ ಕಳೆದ ದಿನಾಂಕ 21 ಹಾಗೂ22 ರಂದು ಹತಾರ ಸೇವೆ, ಹೇಳಿಕೆ, ಸುತಗಾಯಿ ಒಡೆಯುವ ಕಾರ್ಯಗಳು ಸಡಗರ ಸಂಭ್ರಮದಿoದ ನೆರವೇರಿದವು.
ಕಳೆದ ದಿನಾಂಕ 21ರಂದು ಶನಿವಾರ ರಾತ್ರಿ ೮-೦೦ ಘಂಟೆಯ ಸುಮಾರಿಗೆ ಶ್ರೀ ಮಾರುತೇಶ್ವರ ಪಲ್ಲಕ್ಕಿ ಹಾಗೂ ನೂರಾರು ಭಕ್ತರು ಬರಗಾಲಿನಿಂದ ತಿಮ್ಮಾಪುರದ ಪತ್ರಿಗಿಡದ ಬಸವೇಶ್ವರನಿಗೆ ಪೂಜೆ ಸಲ್ಲಿಸಿ, ಕಿರಸೂರ ಗ್ರಾಮಕ್ಕೆ ತೆರಳಿದರು.ನಂತರ ಅಲ್ಲಿನ ಹನುಮಂತ ದೇವರಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಹಡಗಲಿ ಸಮೀಪದ ಮಲಪ್ರಭಾ ನದಿಗೆ ಹೋಗಿ ಸ್ನಾನ ಮಾಡಿದ ನಂತರ ನದಿಯಲ್ಲಿ ಪೂಜೆ ಪುನಸ್ಕಾರಗಳು ನಡೆದವು. ಅಲ್ಲಿಂದ ಹೊರಟು ಹಡಗಲಿ ಗ್ರಾಮಕ್ಕೆ ಅಲ್ಲಿಯ ಹನಮಂತ ದೇವರಿಗೆ ಪೂಜೆ ಸಲ್ಲಿಸಿ ನಂತರ ಅಲ್ಲಿ ಮುಂಜಾನೆ ೪-೦೦ ರ ಸುಮಾರಿಗೆ ಹನಮಂತ ದೇವರ ಕಟ್ಟೆಯ ಮೇಲೆ ಶ್ರೀ ಮಾರುತೇಶ್ವರ ಪೂಜಾರಿ (ಸಜೀವಪ್ಪ ಪೂಜಾರಿ)ಯು ಕಾಲೋಚಿತ ದೈವಾಧೀನ ಉತರಿ ಹಸ್ತಾ, ಚಿಟ ಚಿತ್ತಿ ಸಂಪೂರ್ಣ ಮಳೆಯ ಸಂಪೂರ್ಣ ಬೆಳೆ ಎಂಬ ಗೂಡಾರ್ಥದ ಹೇಳಿಕೆಯನ್ನು ಹೇಳಿದರು. ನಂತರ ಪಲ್ಲಕ್ಕಿ ಹಾಗೂ ಭಕ್ತರು ತಿಮ್ಮಾಪೂರ ಗ್ರಾಮಕ್ಕೆ ಬಂದು ತಲುಪಿದರು.
ದಿನಾಂಕ 22ರಂದು ರವಿವಾರ ಬೆಳಿಗ್ಗೆ ಎರಡೂ ದೇವರಿಗೆ ರುದ್ರಾಭಿಷೇಕ, ಕಳಸದ ಮೆರವಣಿಗೆ, ಗೋಪುರಕ್ಕೆ ಕಳಸಾರೋಹಣ, ಹೊಳೆಯಿಂದ ತಂದ ನೀರನ್ನು ದೇವರಿಗೆ ಪೂಜೆ ಸಲ್ಲಿಸಿ ನಂತರ ಪೂಜಾರಿಗಳಿಂದ ರೋಮಾಂಚನಗೊಳಿಸುವ ಹತಾರಸೇವೆ ನಡೆಯಿತು. ಗ್ರಾಮದ ಬಸವರಾಜ ಹೂನೂರ ಅವರ ಮನೆಯಿಂದ ಬಸವೇಶ್ವರನ ರಥೋತ್ಸವಕ್ಕೆ ರುದ್ರಾಕ್ಷಿ ಮಾಲೆಯನ್ನು ಸಕಲ ವಾದ್ಯ ಮೇಳ ಹಾಗೂ ಸುಮಂಗಲಿಯರ ಕುಂಭಮೇಳದೊಂದಿಗೆ ಮತ್ತು ಬಾದಾಮಿ ತಾಲೂಕಿನ ಗೋವಿನಕೊಪ್ಪ ಗ್ರಾಮದ ಶ್ರೀ ಕನಕದಾಸ ಮಹಿಳಾ ಡೊಳ್ಳು ಕುಣಿತದ ಮೂಲಕ ವಿಜೃಂಭಣೆಯಿಂದ ಮೆರವಣಿಗೆಯ ಮೂಲಕ ಮಾರುತೇಶ್ವರ ಹಾಗೂ ಬಸವೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು.
ಅಂದು ಸಾಯಂಕಾಲ ಪೂಜಾರಿ ಮನೆಯಿಂದ ‘ಮಾವಿನ ಮರತಪ್ಪ’ ಎಂಬ ಹತಾರಸೇವೆ ಹನಮಂತ ದೇವರ ಮೂರ್ತಿಯನ್ನು ದೇವಸ್ಥಾನಕ್ಕೆ ತರಲಾಯಿತು. ನಂತರಹನಮoತ ದೇವರ ಅರ್ಚಕರು ಭರಮದೇವರ ಕಟ್ಟೆಯ ಮೇಲೆ ನಿಂತು “ ಉತ್ರರಿ ಹಸ್ತ ಚಿತ್ತಿ, ಗಿಂಡಿ ನೀರು ,ಬಂಡಿಲೇ ಅಣ್ಣ”ಎಂಬ ಗೂಢಾರ್ಥದ ಹೇಳಿಕೆ ಹೇಳಿದರು. ಇದೇ ಸಂದರ್ಭದಲ್ಲಿ ಸುತಗಾಯಿ ಒಡೆಯುವ ಕಾರ್ಯ ಸಂಭ್ರಮದಿಂದ ಜರುಗಿತು. ಈ ಜಾತ್ರೆಯಲ್ಲಿ ಸಾವಿರಾರು ಕಾಯಿಗಳು ಮಾರಾಟವಾದವು ಎಂದು ವ್ಯಾಪಾರಸ್ಥರು ತಿಳಿಸಿದರು. ಜಾತ್ರೆಯ ಅಂಗವಾಗಿ ಗ್ರಾಮದ ಪ್ರತಿಯೊಂದು ಮನೆಗಳ ಮುಂದೆ ರಂಗೋಲಿ, ಓಣಿಗಳಲ್ಲಿ ಕಳಸದ ಮೆರವಣಿಗೆ ಸಂದರ್ಭದಲ್ಲಿ ಪೂಜೆ, ಕಾಯಿ ಒಡೆಯುವುದು ಮುಂತಾದ ಸಂಪ್ರದಾಯ ಪದ್ಧತಿಗಳು ಸಾಮಾನ್ಯವಾಗಿ ಕಂಡು ಬoದವು.
ಈ ಜಾತ್ರಾ ಮಹೋತ್ಸವದಲ್ಲಿ ಚಿತ್ತರಗಿ, ಕಿರಸೂರ, ಹಡಗಲಿ, ಬೇವೂರ, ಹಳ್ಳೂರ, ಭಗವತಿ, ಹುನಗುಂದ, ಇಲಕಲ್ಲ ಮುಂತಾದ ಗ್ರಾಮಗಳ ಸದ್ಭಕ್ತರು ದೇವಸ್ಥಾನಗಳಿಗೆ ತೆರಳಿ ಭಕ್ತಿಯ ನಮನ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.
ಪ್ರತಿ ವರ್ಷ ಮಾರುತೇಶ್ವರ ಮತ್ತು ಶ್ರೀ ಬಸವೇಶ್ವರ ಜಾತ್ರೆ ಹುಬ್ಬಿ ಮಳೆ ಕೊನೆಯ ವಾರದಲ್ಲಿ ಹಾಗೂ ಉತ್ತರಿ ಮಳೆ ಆರಂಭಗೊಳ್ಳುವ ಸಮಯದಲ್ಲಿ ದೇವರಿಗೆ ನೀರು ಹಾಕುವುದರೊಂದಿಗೆ ಆರಂಭವಾಗುವ ಈ ಜಾತ್ರೆಯು ಹಲವು ವಿಧಿ ವಿಧಾನ ಮತ್ತು ಸಂಪ್ರದಾಯಗಳನ್ನು ಆಚರಿಸುವ ವಿಶೇಷತೆ ಇಲ್ಲಿದೆ.