ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಇಂದು ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿ, ಶಿಕ್ಷಕರ ಜೊತೆ ಶಿಕ್ಷಕರಾದ ಜಿಲ್ಲಾಧಿಕಾರಿಗಳು
ನಿರಂತರ ನಾಲ್ಕು ಘಂಟೆಗಳ ಕಾಲ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು
ತಂದೆ ತಾಯಿಯನ್ನು ಗೌರವದಿಂದ ಕಂಡವರು, ಉನ್ನತ ಹುದ್ದೆಯ ಭಾಗ್ಯ ವೀಕೆಂಡ್ ವಿತ್ ಸ್ಟೂಡೆಂಟ್ಸ್ ವಿನೂತನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳೇ ಮೊದಲ ಅತಿಥಿ.
ಕೊಟ್ಟೂರು : ಶಿಕ್ಷಕರು ಮೊದಲ ಆಧ್ಯತೆಯಲ್ಲಿ ನಿಮ್ಮ ಆರೋಗ್ಯ, ಹಾಗೆಯೇ ನಿಮ್ಮ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾಗಿ ಬೋಧನೆ ಮಾಡಿ ಕರ್ಮ ಸಿದ್ಧಾಂತದಂತೆ ನಿಮ್ಮ ಮಕ್ಕಳಿಗೆ ಉನ್ನತ ಹುದ್ದೆಗಳು ಲಭಿಸಲಿವೆ. ಹೆತ್ತ ಮಕ್ಕಳ ಸಾಧನೆಗಿಂತಲೂ ವಿದ್ಯಾರ್ಥಿಗಳ ಸಾಧನೆ ತಮ್ಮ ಜೀವನದ ಸಾರ್ಥಕದ ಕ್ಷಣ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮಾದರಿಯಲ್ಲಿ “ವೀಕೆಂಡ್ ವಿತ್ ಸ್ಟೂಡೆಂಟ್ಸ್” ಕಾರ್ಯಕ್ರಮವನ್ನು ಕೊಟ್ಟೂರಿನ ಇಂದು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು, ಶುಕ್ರವಾರ ಸಂಜೆ 6.30 ರಿಂದ ರಾತ್ರಿ 10.30ಗಳವರೆಗೂ ನೆರದಿದ್ದ ವಿದ್ಯಾರ್ಥಿಗಳ ಮುಖದಲ್ಲಿ, ಹಾಜರಿದ್ದ ಶಿಕ್ಷಕರ ಮನಸ್ಸಿನಲ್ಲಿ ಉಪಸ್ಥಿತರಿಂದ ಕಂದಾಯ ಇಲಾಖೆ ಅಧಿಕಾರಿಗಳ ಹೃದಯದಲ್ಲಿ ಧನ್ಯತಾ ಭಾವಕ್ಕೆ ಸಾಕ್ಷಿಯಾಯಿತು. “ವೀಕೆಂಡ್ ವಿತ್ ಸ್ಟೂಡೆಂಟ್ಸ್” ಕಾರ್ಯಕ್ರಮಕ್ಕೆ ಸರಿಯಾಗಿ ಸಂಜೆ 6.30ಕ್ಕೆ ವಿಜಯನಗರ ಜಿಲ್ಲಾಧಿಕಾರಿ ಶ್ರೀ ಎಂ.ಎಸ್. ದಿವಾಕರ ಇವರ ಆಗಮನವಾಗಿ ಬಿಡುವಿಲ್ಲದೆ ಸತತ 4 ಗಂಟೆಗಳ ಕಾಲ ವಿದ್ಯಾರ್ಥಿಗಳ ಜೊತೆ ಮಗುವಾಗಿ, ಶಿಕ್ಷಕರ ಜೊತೆ ಶಿಕ್ಷಕರಾಗಿ ಮೈ ರೋಮಾಂಚನವಾಗುವಂತೆ ತಮ್ಮ ಬಾಲ್ಯದ ದಿನಗಳಿಂದ ಪ್ರಸ್ತುತ ಜಿಲ್ಲಾಧಿಕಾರಿ ಹುದ್ದೆಗೆ ಬರುವವರೆಗೂ ತಮ್ಮ ಜೀವನದ ಸಿಹಿ – ಕಹಿ ಘಟನೆಗಳನ್ನು ಸ್ವಾರಸ್ಯಕರವಾಗಿ, ಸರಳವಾಗಿ ಎಲ್ಲರಿಗೂ ಮನಮುಟ್ಟುವಂತೆ ಅದ್ಭುತವಾಗಿ ತಿಳಿಸಿದರು. ಇಂದು ಸಂಸ್ಥೆಯ ಆಡಳಿತಾಧಿಕಾರಿ ವೀರಭದ್ರಪ್ಪನವರು ಕೇಳುವ ಪ್ರಶ್ನೆಗಳಿಗೆ ಅತ್ಯುತ್ತಮವಾಗಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು. ತಮ್ಮ ವ್ಯಾಸಂಗ ಸಂಧರ್ಭದಲ್ಲಿ ಮೊದಲ ಬೆಂಚಿನ ವಿದ್ಯಾರ್ಥಿಯಾಗಿದ್ದು, ವಿದ್ಯಾರ್ಥಿಗಳ ಪರಿಶ್ರಮದಿಂದ ಮಾತ್ರ ತಮ್ಮ ಶಿಕ್ಷಕರನ್ನು ಆಕರ್ಷಿಸಲು ಸಾಧ್ಯವೆಂದು ತಿಳಿಸಿದರು. ಯಶಸ್ಸಿಗೆ ಅಡ್ಡದಾರಿಯಿಲ್ಲ, ಪರಿಶ್ರಮಕ್ಕೆ ಪರ್ಯಾಯವಿಲ್ಲ, ಓದು, ಓದು, ಓದು ಅಷ್ಟೇ ನಿಮ್ಮ ಜೀವನವಾಗಿರಲಿ. ಯಾವುದೇ ಮನೋರಂಜನೆಗಳಿಗೆ ಸಮಯ ವ್ಯರ್ಥ ಮಾಡದಿರಿ, ಏನಾದರೂ ಸಾಧನೆ ಮಾಡಿ ಉನ್ನತ ಹುದ್ದೆ ಪಡೆಯಿರಿ. ಕೊನೆ ಪಕ್ಷ ಉತ್ತಮ ನಾಗರೀಕರಾದರೂ ಅದು ಸಹ ಉತ್ತಮವೇ. ಅಂಕಗಳು ಕಡಿಮೆ ಬಂದಾಗ ಕುಗ್ಗದಿರಿ, ಅತ್ಯುತ್ತಮ ಅಂಕಗಳು ಬಂದಾಗ ಆ ಶ್ರೇಣಿಯನ್ನು ಹಾಗೇ ಮುಂದುವರೆಸುವ ರೂಢಿ ಮಾಡಿಕೊಳ್ಳಿ. ತಮ್ಮ ಸಹಪಾಠಿ ಅಂಕಗಳ ವಿಷಯದಲ್ಲಿ ಬಲಿಷ್ಠವಾಗಿದ್ದರೆ, ನಿಮ್ಮ ಹೋರಾಟವು ರೋಚಕವಾಗಿರುತ್ತದೆ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಕೊಟ್ಟೂರು ತಾಲೂಕು ತಹಶೀಲ್ದಾರರು ಅಮರೇಶ್ ಮಾತನಾಡಿ ಇಂತಹ ಜಿಲ್ಲಾಧಿಕಾರಿಗಳ ಜೊತೆ ಕೆಲಸ ಮಾಡುತ್ತಿರುವುದು ನಮ್ಮ ಸೌಭಾಗ್ಯವೆಂದು ತಿಳಿಸಿದರು. ಕಾರ್ಯಕ್ರಮಕ್ಕೆ ಹೊಸಪೇಟೆ ಅರ್ಬನ್ ಡೆವಲಪ್ಮೆಂಟ್ ಕಮಿಷನರ್ ಈರಣ್ಣ ಬಿರಾದರ್, ಹೊಸಪೇಟೆ ನಿರ್ಮಿತಿ ಯೋಜನಾ ನಿರ್ದೇಶಕರಾದ ರವಿಕುಮಾರ್, ಪಿ.ಎಸ್. ನಾಗರಾಜ, ಜಿಲ್ಲಾಧಿಕಾರಿಗಳ ಸಹೋದರ ಬಸವರಾಧ್ಯ ಹಾಗೂ ಜಿಲ್ಲಾಧಿಕಾರಿಗಳ ಧರ್ಮಪತ್ನಿ ಶ್ರೀಮತಿ ರೂಪಾ, ಮಗ ಜ್ಞಾನಸಾಗರ ಉಪಸ್ಥಿತರಿದ್ದರು. ಮಾನ್ಯ ಜಿಲ್ಲಾಧಿಕಾರಿಗಳಿಗೆ ಇಂದು ವಿದ್ಯಾಸಂಸ್ಥೆ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು.ನನ್ನ ವೃತ್ತಿ ಜೀವನದಲ್ಲೇ ನನಗೆ ಸಾಕಷ್ಟು ಬದುಕಿನ ರೂಪರೇಷೆಗಳನ್ನು ಹೇಳಿಕೊಟ್ಟ ಅದ್ಭುತ ಕಾರ್ಯಕ್ರಮ ಇದಾಗಿದ್ದು, ಡಿ.ಸಿ. ಸಾಹೇಬರಿಂದ ನನ್ನ ಬದುಕಿನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳುವುದಿದೆ ಎಂಬ ಭಾವ ಮೂಡಿದೆ ಎಂದು ಜಿಲ್ಲಾಧಿಕಾರಿಗಳ ಮಾತುಗಳಿಂದ ಪ್ರೇರೇಪಿತರಾದ ಹೊಸಹಳ್ಳಿ ವೈಭವ ಪ್ರೌಢಶಾಲೆಯ ಮುಖ್ಯಗುರುಗಳಾದ ಪ್ರಕಾಶ್ ಗೌಡ್ರು ತಿಳಿಸಿದರು.