ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿ ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದೆ.
ಗ್ರಾಮೀಣ ಭಾಗದ, ಚಿಲ್ಲರೆ, ಚಹಾದ ಅಂಗಡಿ,ಹೋಟೆಲ್ ಸೇರಿದಂತೆ ಹಲವು ಮನೆಗಳಲ್ಲೂ ಸಹ ಕದ್ದು ಮುಚ್ಚಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ.
ತಾಲೂಕಿನಾದ್ಯಂತ ಕಳೆದ ತಿಂಗಳಿನಿಂದ ಸುರಿದ ಸತತ ಮಳೆಯ ಹಾನಿಯಿಂದಾಗಿ ದುಡಿಯುವ ಕೈಗಳಿಗೆ ಕೆಲಸ ಇಲ್ಲವಾಗಿದೆ, ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆಯೂ ಇಲ್ಲದಾಗಿದೆ. ಜನರು ಆರ್ಥಿಕ ಸಂಕಷ್ಟದಲ್ಲಿದ್ದರೂ ಗ್ರಾಮೀಣ ಭಾಗದ ಕೆಲವರು ಗ್ರಾಮದಲ್ಲಿಯೇ ಸುಲಭವಾಗಿ ಸಿಗುವ ಮದ್ಯ ಸೇವನೆಯಿಂದ ಇದರ ಚಟಕ್ಕೆ ಬಿದ್ದು ಇದರಿಂದ ಮತ್ತಷ್ಟು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.
ಗ್ರಾಮೀಣ ಭಾಗದ ಕೆಲವು ಗೂಡಂಗಡಿ, ಸಣ್ಣಪುಟ್ಟ ಮಾಂಸಾಹಾರಿ ಹೋಟೆಲ್‌ಗಳು, ಕೆಲವರು ಮನೆಗಳಲ್ಲಿ, ಅಂಗಡಿಗಳೂ ಸಹ ಮದ್ಯ ಮಾರಾಟ ಕೇಂದ್ರವಾಗಿ ಮಾರ್ಪಟ್ಟಿದೆ ಕೆಲವರು ಇದನ್ನು ನಕಲಿ ಮದ್ಯ ಎನ್ನುತ್ತಿದ್ದರೂ ಸಂಬಂಧಪಟ್ಟ ಇಲಾಖೆಯವರು ಮಾತ್ರ ಜಾಣ ನಿದ್ರೆಗೆ ಜಾರಿದ್ದಾರೆ. ನಗರ ಪಟ್ಟಣದ ವೈನ್ ಶಾಪ್ ಗಳಿಂದ ಖರೀದಿಸಿ 10-20 ರೂ. ಹೆಚ್ಚುವರಿ ದರ ವಿಧಿಸಿ ಮಾರಾಟ ಸಹ ಮಾಡುತ್ತಾರೆ.
ಮದ್ಯ ಮಾರಾಟಕ್ಕೆ ಕೊನೆ ಇಲ್ಲ:
ಕೆಲವರು ಮನೆಗಳಲ್ಲಿ ತೋಟ, ಕೊಟ್ಟಿಗೆ, ನೆಲದೊಳಗೆ ಹೊಂಡ ಮಾಡಿ, ಮನೆಯ ಅಟ್ಟ, ಶೌಚ ಗೃಹಗಳಲ್ಲೂ ಮಾರಾಟ ಮಾಡಲು ಮದ್ಯ ಶೇಖರಿಸಿ ಇಡುತ್ತಾರೆ.
ಈ ಬಗ್ಗೆ ಗ್ರಾಮೀಣ ಭಾಗದಲ್ಲಿ ಕಠಿಣ ಕ್ರಮ ವಹಿಸದ ಪೊಲೀಸ್ ಮತ್ತು ಅಬಕಾರಿ ಇಲಾಖೆ ಆಗಾಗ ದಾಳಿ ನಡೆಸಿ ಪ್ರಕರಣ ದಾಖಲಿಸಿದರೂ ಅಕ್ರಮ ಮದ್ಯ ಮಾರಾಟಕ್ಕೆ ಕೊನೆ ಇಲ್ಲದಂತಾಗಿದೆ ಎಂಬುದು ಗ್ರಾಮೀಣ ಭಾಗದ ಮಹಿಳೆಯರ ಅಳಲು.
ಎಗ್ಗಿಲ್ಲದೇ ಸಾಗಿದೆ ದಂಧೆ:
ಇದಕ್ಕೆ ಕೈಗನ್ನಡಿಯಂತೆ ತಾಲೂಕಿನ ಅಮಕುಂದಿ ಗ್ರಾಮದ ರುದ್ರಮುನಿ ಎಂಬಾತ ಹಗಲುತ್ತಿನಲ್ಲಿಯೇ ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿರುವುದು ವಿಪರ್ಯಾಸವೇ ಸರಿ, ಸ್ಥಳೀಯ ಗ್ರಾಮಸ್ಥರು ಆತನನ್ನು ಪ್ರಶ್ನಿಸಿದಾಗ ಸಂಬಂಧಪಟ್ಟ ಇಲಾಖೆಯವರಿಗೆ ಮಾಹಿತಿ ನೀಡಿ ಎಂದು ಉಡಾಫೆ ಉತ್ತರವನ್ನು ನೀಡುತ್ತಿದ್ದಾನೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ವ್ಯಾಪ್ತಿಯಲ್ಲಿ ಕೆಲವು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಆಯಾ ಭಾಗದ ಸಾರ್ವಜನಿಕರು ದೂರುತ್ತಿದ್ದರೂ ಸಂಬಂಧಪಟ್ಟ ಇಲಾಖೆಯವರು ಮಾತ್ರ ಕಣ್ಣಿದ್ದು ಕುರುಡರಂತೆ ಇದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ ಸಿದ್ದೇಶ ಜಿ ವೆಂಕಟಾಪುರ