ಬೆಂಗಳೂರು : ಆನಂದರಾವ್ ವೃತ್ತದ ಬಳಿ ಇರುವ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಾಡಿಸಲಾಯಿತು.
ಬೆಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ, ಡಾ. ಬಸವರಾಜ ಸಾದರ ಅವರು ಕನ್ನಡ ಸಂಸ್ಕೃತಿ- ನಮ್ಮ ಹೆಮ್ಮೆ ಕುರಿತು ಮಾತನಾಡುತ್ತಾ ಕವಿರಾಜ ಮಾರ್ಗದಲ್ಲಿ ಕನ್ನಡ ಸಂಸ್ಕೃತಿಯ ಮಹತ್ವ ಹೇಗೆ ಪ್ರಸ್ತುತಗೊಂಡಿತ್ತು ಎಂಬುದನ್ನು ವಿವರಿಸಿದರು. ಯಾವುದು ಕನ್ನಡ ಸಂಸ್ಕೃತಿ, ಯಾವುದು ವಿಕೃತಿ ಎಂಬ ಬಗ್ಗೆ ವಿಚಾರ ಪೂರ್ಣ ವಿಷಯಗಳನ್ನು ಮಂಡಿಸಿ ಕನ್ನಡ ನಾಡು ನುಡಿ ಕಟ್ಟಲು ಶ್ರಮಿಸಬೇಕಾದ ಅಗತ್ಯವನ್ನು ತಿಳಿಸಿದರು.
ಅದಕ್ಕೂ ಮೊದಲು ತುಮಕೂರು ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಆರ್ ಶ್ರೀಧರ್ ಶಾಸ್ತ್ರೀ ಅವರು ಸಿದ್ದಗಂಗೆಯ ಸಿದ್ದಿ ಪುರುಷ, ತ್ರಿದಾಸೋಹ ತ್ರಿವಿಕ್ರಮ,ಶ್ರೀ ಶ್ರೀ ಶ್ರೀ ಶಿವಕುಮಾರ್ ಸ್ವಾಮಿಗಳ ಕುರಿತು ಮಾತನಾಡುತ್ತಾ, ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ದಿನಾಲು ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು 6 ಘಂಟೆ ಸಮಯಕ್ಕೆ ಪ್ರತಿ ದಿನ ತಪ್ಪದೇ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪಾಠ ಮಾಡುವುದನ್ನು, ಆಶ್ರಮಕ್ಕೆ ಬರುವ ಪ್ರತಿಯೊಂದು ಪತ್ರಗಳಿಗೂ ಸ್ಪಂದಿಸುವ ರೀತಿ, ಆಶ್ರಮ ನಡೆಸುವ ಸಲುವಾಗಿ ಶಿಷ್ಯ ಸಮುದಾಯ, ನಗರದಲ್ಲಿ ಸಂಚರಿಸಿ ವಿದ್ಯಾ ಪೋಷಣೆ ಮಾಡುತ್ತಿರುವ ರೀತಿಯ ಬಗ್ಗೆ ಹಾಗೂ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಮೇರು ವ್ಯಕ್ತಿತ್ವದ ಕುರಿತು ಮಹತ್ವದ ಸಂಗತಿಗಳನ್ನು ತಿಳಿಸಿದರು. ನಂತರ ರಾಜೇಶ್ವರಿ ಸಾದರ ಹಾಗೂ ಕವಿತಾ ಸಾದರ ಅವರು ನಡೆಸಿಕೊಟ್ಟ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಕನ್ನಡ ಗೀತೆಗಳು ಹಾಗೂ ವಚನಗಳ ಗಾಯನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು. ಕರ್ನಾಟಕದ ಹೆಮ್ಮೆಯ ಪುರುಷರೊಬ್ಬರನ್ನು ಪರಿಚಯಿಸಿದ್ದು, ಕನ್ನಡ ಸಂಸ್ಕೃತಿಯ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಿದ್ದು,ನಮ್ಮ ಹೆಮ್ಮೆಯ ಸಂಸ್ಕೃತಿ, ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದು ಕನ್ನಡ ರಾಜ್ಯೋತ್ಸವ ಅರ್ಥಪೂರ್ಣವಾಗುವಂತೆ ಮಾಡಿತು.
ಇದೇ ಸಂದರ್ಭದಲ್ಲಿ ಬಸವರಾಜ ಸಾದರ ದಂಪತಿಗಳನ್ನು ಹಾಗೂ ಕಲಾವಿದರುಗಳಾದ ರಾಜೇಶ್ವರಿ ಸಾದರ ಹಾಗೂ ಕವಿತಾ ಸಾದರ ಅವರನ್ನು ಸನ್ಮಾನಿಸಲಾಯಿತು.
ಭೂಮಿ ಪ್ರಕಾಶನದ ಮಾಲಕಿ ವಿಶಾಲಕ್ಷಿ ಶರ್ಮ ಅವರು ಪರಿಸರ ಪಾಠ ನೆರವೇರಿಸಿದರು. ನಿವೃತ್ತ ಪ್ರಾಚಾರ್ಯ ಜಿ. ವಿ. ಹೆಗಡೆಯವರು ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು.
ಡಾ. ಅಂಬುಜಾಕ್ಷಿ ಬೀರೇಶ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಇಂಜಿನಿಯರ್ ನಂಜುಂಡಸ್ವಾಮಿ, ಕವಿಗಳಾದ ಕಾಶೀನಾಥ್ ಹಂದ್ರಾಳ, ಕೊಪ್ಪರಂ ಅನ್ನಪೂರ್ಣ, ಹೇಮಂತ, ಸಂಘದ ಹಿರಿಯ ಸದಸ್ಯರುಗಳಾದ ಬಿ. ಸತ್ಯನಾರಾಯಣ, ಉಲಿಗೆಸ್ವಾಮಿ, ಎಸ್ ಜೆ ಕೃಷ್ಣಮೂರ್ತಿ, ಈರಪ್ಪ ಹಾಗೂ ಶಾರದಾ ತ್ಯಾಗರಾಜ್, ವಾಸುದೇವ್ ಕಾರಂತ್, ಗೀತಾ ಸಭಾಹಿತ, ದಿಲೀಪ ಭಟ್, ವಿನುತ ಗಾಯತ್ರಿ, ರಮೇಶ್ ರಾವ್ ಮುಂತಾದ ಗಣ್ಯರು ಉಪಸ್ಥಿತರಿದ್ದರು ಎಂದು ಕಾರ್ಯಕ್ರಮ ಸಂಯೋಜಕ ಶ್ರೀ ವಿಶ್ವೇಶ್ವರ ಗಾಯತ್ರಿ ಅವರು ತಿಳಿಸಿದ್ದಾರೆ.
ವರದಿ ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.