ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಕಳೆದ 20 ವರ್ಷಗಳಿಂದ ರಾಮದುರ್ಗದ ಜನತೆ ಲೋಕಾಪೂರದಿಂದ ರಾಮದುರ್ಗ, ಶಿರಸಂಗಿ ಕಾಳಮ್ಮದೇವಿ, ಸವದತ್ತಿ ಯಲ್ಲಮ್ಮ ಮಾರ್ಗವಾಗಿ ಧಾರವಾಡಕ್ಕೆ ರೈಲ್ವೆ ಮಾರ್ಗ ಆಗಬೇಕೆಂದು ಒತ್ತಾಯಿಸಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ.
ಈ ಹೋರಾಟದ ಫಲವಾಗಿ 2016-17 ರಿಂದ ರೈಲ್ವೆ ಇಲಾಖೆಯಿಂದ ಸರ್ವೇ ಕಾರ್ಯ ನಡೆದು 2019 ರಲ್ಲಿ ರೂ.1667 ಕೋಟಿ ಕ್ರಿಯಾ ಯೋಜನೆಯು ಆಗಿ ಕೆಲಸ ಪ್ರಾರಂಭವಾಗದೇ ಉಳಿದಿದೆ. ಕೆಲಸ ಏಕೆ ಪ್ರಾರಂಭವಾಗಲಿಲ್ಲ ಎಂಬುದು ನಿಗೂಢವಾಗಿದೆ.
ಕೂಡಲೇ ಲೋಕಾಪುರದಿಂದ ಧಾರವಾಡದವರೆಗೆ ರೈಲ್ವೆ ಮಾರ್ಗ ಪ್ರಾರಂಭ ಮಾಡಿ 3-4 ಜಿಲ್ಲೆಗಳ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ರಾಮದುರ್ಗ ತಾಲೂಕಾ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಸದಸ್ಯರು ರಾಜ್ಯ ರೈಲ್ವೆ ಸಚಿವರಾದ ಮಾನ್ಯ ವಿ. ಸೋಮಣ್ಣನವರಿಗೆ ಮನವಿ ನೀಡಿ ಒತ್ತಾಯಿಸಿದರು.
ಸವದತ್ತಿ ಯಲ್ಲಮ್ಮಾ ದೇವಸ್ಥಾನಕ್ಕೆ ಪ್ರತಿ ವರ್ಷ 1.09 ಕೋಟಿ ಜನ ಭಕ್ತಾಧಿಗಳು ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಿಂದ ಬರುತ್ತಾರೆ. ರೈಲ್ವೆ ಮಾರ್ಗ ಆಗುವುದರಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲವಾಗುತ್ತದೆ. ಶಿರಸಂಗಿಯಲ್ಲಿ ಐತಿಹಾಸಿಕ ಕಾಳಮ್ಮದೇವಿ ದೇವಾಲಯ ಇದೆ. ಇಲ್ಲಿಯೂ ಸಹ ಲಕ್ಷಾಂತರ ಭಕ್ತರು ಗೋವಾ ಮತ್ತು ಮಹಾರಾಷ್ಟ್ರದಿಂದ ಬರುತ್ತಾರೆ.
ಶ್ರೀರಾಮಚಂದ್ರ ಸೀತಾಮಾತೆಯನ್ನು ಹುಡುಕಿಕೊಂಡು ಬಂದಿರುವ ಐತಿಹಾಸಿಕ ಶಬರಿ ದೇವಸ್ಥಾನ ಹಾಗೂ ಪ್ರಸಿದ್ಧ ವೀರಭದ್ರ ದೇವಸ್ಥಾನವು ಕೂಡಾ ರಾಮದುರ್ಗ ತಾಲೂಕಿನಲ್ಲಿ ಇದೆ. ಇಲ್ಲಿಯೂ ಲಕ್ಷಾಂತರ ಭಕ್ತರು ಬರುತ್ತಾರೆ. ಇದನ್ನು ಹೊರತುಪಡಿಸಿ ಆಸು-ಪಾಸು 12 ಸಕ್ಕರೆ ಫ್ಯಾಕ್ಟರಿಗಳು, 6 ಸಿಮೆಂಟ್ ಫ್ಯಾಕ್ಟರಿಗಳು, ಕ್ರಶ್‌ರಗಳು ಮತ್ತು ಹಲವಾರು ಸಣ್ಣ ಸಣ್ಣ ಕೈಗಾರಿಕೆಗಳು ಇವೆ. ಮುಖ್ಯವಾಗಿ ಧಾರವಾಡ ಪೀಠಕ್ಕೆ ಹತ್ತಾರು ಜಿಲ್ಲೆಗಳಿಂದ ದಾವೆದಾರರು, ನ್ಯಾಯವಾದಿಗಳು ಧಾರವಾಡ ಹೈಕೋರ್ಟ ಗೆ ಬರುತ್ತಾರೆ. ಈ ಎಲ್ಲಾ ಜನರಿಗೂ ಅನಕೂಲವಾಗಲು ಕೂಡಲೇ ಲೋಕಾಪೂರದಿಂದ ಧಾರವಾಡದ ವರೆಗೆ ರೈಲ್ವೆ ಮಾರ್ಗ ಪ್ರಾರಂಭಿಸಬೇಕೆಂದು ರೈಲ್ವೆ ಹೋರಾಟ ಸಮಿತಿಯ ಪ್ರಮುಖರು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ರಾಜ್ಯ ರೈಲ್ವೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕುತಬುದ್ದೀನ್ ಖಾಜಿ, ರಾಮದುರ್ಗ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಮುಖಂಡರುಗಳಾದ ಜಿ.ಎಮ್. ಜೈನೇಖಾನ್, ಪ್ರದೀಪ ಪಟ್ಟಣ, ಮೊಹಮ್ಮದಶಫಿ ಬೆಣ್ಣಿ, ಜಹೂರ ಹಾಜಿ, ಎಮ್.ಕೆ. ಯಾದವಾಡ, ಸುಭಾಷ ಘೋಡಕೆ, ಜಿ.ಬಿ. ರಂಗನಗೌಡ ಮತ್ತು ಸುರೇಶ ಪತ್ತೇಪುರ, ಅಭಿಜೀತ ಮುನ್ನವಳ್ಳಿ, ಜಾವಿದ ಯಾದವಾಡ, ಡಿ.ಎಫ್. ಹಾಜಿ. ದಾದಾಪೀರ ಕೆರೂರ ಮುಂತಾದವರು ಉಪಸ್ಥಿತರಿದ್ದರು.