ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡದೆ
ಚಾಡಿ ಮಾತನು ಕೇಳುತ ಚಾಚೂ ತಪ್ಪದೆ
ಹಿರಿಯರ ಬುದ್ಧಿಯ ಮಾತಿಗೆ ತಲೆ ಬಾಗದೆ
ಸಾಗುತಿಹರು ಮನದಿ ಅಜ್ಞಾನವಿರಿಸಿ.
ಸ್ವಾರ್ಥ ಸಾಧನೆಗೆ ಪರರ ಬಲಿ ಕೊಟ್ಟು
ಮಾನ ಮರ್ಯಾದೆ ಎಲ್ಲವನ್ನೂ ಬಿಟ್ಟು
ಗೋಮುಖ ವ್ಯಾಘ್ರದ ವೇಷ ತೊಟ್ಟು
ನಡೆದಿಹರು ಹಗಲುವೇಷ ಧರಿಸಿ.
ತಾವೇ ಕಷ್ಟದ ಸಂಕೋಲೆಯಲ್ಲಿ ಸಿಲುಕಿ
ಮತ್ತೊಬ್ಬರ ತಪ್ಪುಗಳ ಕೆದಕಿ ಹುಡುಕಿ
ಮುನ್ನಡೆಯುವವರ ಹಿಡಿದು ಹಿಂದೆ ನೂಕಿ
ನಡೆದಿಹರು ನೊಂದ ಮನವ ಬೆದರಿಸಿ.
ಹೊಟ್ಟೆಗೆ ಸೇರಿದ ವಿಷವು ಒಬ್ಬರ ಕೊಂದರೆ
ಕಿವಿಗೆ ಇಳಿದ ವಿಷಯ ಊರಿಗೇ ತೊಂದರೆ
ಸತ್ಯವು ಎಲೆ ಮರೆಯ ಕಾಯಿಯಂತಿರೆ
ನಡೆದಿಹರು ಮಿಥ್ಯವನು ಕಂಕುಳಲ್ಲಿರಿಸಿ.
ಚುಚ್ಚು ಮಾತಿನ ಬಾಯಿಗೆ ಬೀಗ ಬಡಿಸಿ
ಕಾಮಾಲೆ ಕಣ್ಣಿನ ಮನುಜರ ದೂರವಿರಿಸಿ
ದ್ವೇಷ ಅಸೂಯೆಗಳ ಸುಟ್ಟು ಕರಕಲಾಗಿಸಿ
ಬದುಕೋಣ ಸಾಮರಸ್ಯದ ಬಂಧ ಬೆಳೆಸಿ.
✍️ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
( ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು )
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.