ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೆಳವಣಿಗೆ ಯಾವುದು..!?

ಪ್ರತಿಯೊಬ್ಬ ಮನುಜನ ಜೀವನದಲ್ಲೂ ಬಾಲ್ಯ, ಯೌವ್ವನ, ಮುಪ್ಪು ಎಂಬ ಮೂರು ಹಂತಗಳಿರುತ್ತವೆ. ಈ ಎಲ್ಲಾ ಹಂತದಲ್ಲಿನ ನಮ್ಮ ನಡಿಗೆಯ ಮೊತ್ತವೆ ಸಾರ್ಥಕ ಜೀವನ. ಬಾಲ್ಯ ನಮ್ಮಿಡೀ ಜೀವನದ ಅಡಿಪಾಯ ಎಂದರೆ ತಪ್ಪಾಗಲಾರದು.
ಬಾಲ್ಯದಲ್ಲಿ ನಾವು ಬೆಳೆಸಿಕೊಳ್ಳುವ ಹವ್ಯಾಸಗಳು, ಅಥವಾ ನಮ್ಮ ಪೋಷಕರು ನಮಗೆ ನೀಡುವ ಸಂಸ್ಕಾರ, ನಾವು ಬೆಳೆಯುವ ವಾತಾವರಣ, ಎಲ್ಲವೂ ನಮ್ಮ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿರುತ್ತವೆ. ಹಿಂದೆಲ್ಲಾ ಹೆತ್ತವರು ಈಗಿನ ರೀತಿ ಅಗತ್ಯಕ್ಕಿಂತ ಹೆಚ್ಚಿನ ಕಾಳಜಿ ಮಾಡಿ ಮಕ್ಕಳನ್ನು ಬೆಳೆಸುತ್ತಿರಲಿಲ್ಲ. ಮೂರು ನಾಲ್ಕು ಮಕ್ಕಳು, ಮನೆಯ ಆರ್ಥಿಕ ಪರಿಸ್ಥಿತಿಗಳ ಬವಣೆಯ ನಡುವೆಯೂ ಒಂದು ನೆಮ್ಮದಿಯ ಬದುಕು ಕಂಡುಕೊಳ್ಳಲು ಸಫಲರಾಗುತ್ತಿದ್ದರು .ಅಣ್ಣ ತಮ್ಮ ಅಕ್ಕ ತಂಗಿಯರ ನಡುವೆ ಇದ್ದುದರಲ್ಲೇ ಹೊಂದಿಕೊಂಡು ಬೆಳೆವ ಮಕ್ಕಳಿಗೆ ಅನಾಯಸವಾಗಿ ಮನೆಯ ಕಷ್ಟ ನಷ್ಟ ಆಗು ಹೋಗುಗಳ ಪರಿಚಯ ಇರುತ್ತಿತ್ತು. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ಮಕ್ಕಳ ಮೇಲಿನ ಅತಿಯಾದ ವ್ಯಾಮೋಹವನ್ನೇ,ಹೆತ್ತವರು ತಾವು ‘ಮಾಡುವ ಕಾಳಜಿ ಅದು’ಎಂದು ತಪ್ಪಾಗಿ ತಿಳಿದುಕೊಂಡು ಅವರ ಸರ್ವತೋಮುಖ ಬೆಳವಣಿಗೆಗೆ ಅಡ್ಡಿಯಾಗುತ್ತಿದ್ದಾರೆ..!

ತತ್ಪರಿಣಾಮ…
ಮಕ್ಕಳು ಸೀಮಿತ ಅಥವಾ ಸಂಕುಚಿತ ವಾತಾವರಣದಲ್ಲಿ ಬೆಳೆದು ಹೈಬ್ರಿಡ್ ತಳಿಗಳಂತೆ ತಯಾರಾಗುತ್ತಿದ್ದಾರೆ. ಹೊಸ ಸವಾಲು, ಪ್ರತಿಕೂಲ ಸಂದರ್ಭಗಳು ಬಂದಾಗ ಎದುರಿಸಿ ನಿಲ್ಲುವ ಸಾಮರ್ಥ್ಯ ಕಳೆದುಕೊಂಡು ಕುಸಿದು ಕೂರುತ್ತಿದ್ದಾರೆ. ಕೇಳಲು ಇದು ತಮಾಷೆ ಎನಿಸಿದರೂ ಸತ್ಯವೇ..! ಸಂಬಂಧಗಳ ಮೌಲ್ಯಗಳ ಅರಿವು ಸಿಕ್ಕದಾಗುತ್ತಿದೆ. ಇದರ ಮದ್ಯೆ ಆಧುನಿಕ ತಂತ್ರಜ್ಞಾನ, ಗ್ಯಾಜೆಟ್ ಗಳ ದಾಳಿಗೆ ಸಿಲುಕಿ ಮನುಷ್ಯ ಮನುಷ್ಯರ ನಡುವೆ ಇದ್ದ ಆತ್ಮೀಯ ಮಾತುಕತೆಗಳ ಕೊಂಡಿ ಕಳಚಿಕೊಳ್ಳುತ್ತಾ ಬದುಕಿನಲ್ಲಿ ದಕ್ಕಿದ ಕೆಲವು ಸಂಬಂಧಗಳ ಮಾಧುರ್ಯದ ಬೆಲೆ ತಿಳಿಯದಾಗುತ್ತಿದೆ. ಸುತ್ತಲಿನ ಸೌಂದರ್ಯ ಸವಿಯುತ್ತಾ ಜೀವನ ಕಲೆ ಕಲಿಯುವ ಮಾಂತ್ರಿಕತೆಯಿಂದ, ಸದಾ ಅಂತರ್ಜಾಲದೊಳಗೆ ಮುಳುಗಿ ಯಾಂತ್ರಿಕತೆಯ ಕಡೆಗೆ ಸಾಗುತ್ತಿದ್ದೇವೆ. ಇಂತ ವಾತಾವರಣದಲ್ಲಿ ಬೆಳೆದ ನಮ್ಮ ಮುಂದಿನ ತಲೆಮಾರುಗಳು ಕಲಿಯುವುದಾದರು ಇನ್ನೇನನ್ನು..?! ಇದನ್ನೇ ತಾನೇ.

ಈಗಿನ ಮಕ್ಕಳಿಗೆ ಹಿರಿಯರೆಂದರೆ ಗೌರವ ಇಲ್ಲ, ಸಂಸ್ಕೃತಿ ಸಂಪ್ರದಾಯ ಗೊತ್ತಿಲ್ಲ, ಯಾವುದರಲ್ಲೂ ಆಸಕ್ತಿ ಇಲ್ಲ, ಗಟ್ಟಿತನ ಇಲ್ಲ. ಜೆನರೇಶನ್ ಗ್ಯಾಪ್ ಸೃಷ್ಟಿಯಾಗುತ್ತಿದೆ ಎಂದೆಲ್ಲಾ ದೂರುವ ಮೊದಲು, ನಾವು ನಮ್ಮ ಮಕ್ಕಳಿಗೆ ಇದನ್ನೆಲ್ಲ ಆಸಕ್ತಿಯಿಂದ ಕಲಿಸುತ್ತಿದ್ದೇವ ? ಜನಗಳೊಳಗೆ ಬೆರೆತು ನಲಿಯುವುದನ್ನು ತಿಳಿಸಿಕೊಡುತ್ತಿದ್ದೇವಾ ? ಮೊದಲು ನಾವದನ್ನು ಪಾಲಿಸುತ್ತಿದ್ದೇವಾ..?, ಆಯ್ಕೆಯ ಸ್ವಾತಂತ್ರ್ಯ ಕೊಟ್ಟು ಅವರಿಷ್ಟದ ಬದುಕು ಪೊರೆಯುವ ಕಲೆ ಕಲಿಯಲು ಪ್ರೋತ್ಸಾಹಿಸುತ್ತಿದ್ದೇವಾ ? ಎಂಬುದನ್ನು ಯೋಚಿಸಬೇಕು ಅಲ್ಲವೇ..? ಅದೇ ಹಳೆ ಮೊಂಡುವಾದ ವಿಷಯಗಳಿಗೆ ಅಂಟಿಕೂರುವ ಬದಲು, ಸದಾ ಇತರರನ್ನು ಮತ್ತು ಸುತ್ತಲಿನ ಪರಿಸ್ಥಿತಿಯನ್ನು ದೂರುತ್ತಾ ಕೂರುವ ಬದಲು, ಇನ್ನಾದರೂ ಬಿಗುಮಾನವನ್ನು ಕಡಿಮೆ ಮಾಡಿಕೊಂಡು, ನಮ್ಮ ತಪ್ಪುಗಳನ್ನು ಒಪ್ಪಿಕೊಂಡು,ಬದುಕಿನ ಹೊಸತನಗಳಿಗೆ ತೆರೆದುಕೊಳ್ಳುತ್ತಾ, ಕಲಿಯುತ್ತಾ ಮತ್ತು ನಾವು ಕಲಿತ ಜೀವನಪಾಠಗಳ ಸಾರವನ್ನು ಮುಂದಿನ ಪೀಳಿಗೆಗೆ ತಲುಪಿಸುತ್ತಾ ಚಲನಶೀಲರಾಗಿ ಬದುಕುವುದನ್ನು ರೂಢಿಸಿಕೊಳ್ಳೋಣ. ಹಳೇ ಬೇರಿಗೆ ಹೊಸ ಚಿಗುರು ಮೆರಗು ನೀಡಲಿ. ಜೀವನ ಹಸಿರಾಗಿ ನಳನಳಿಸುವಂತೆ ನೋಡಿಕೊಳ್ಳೋಣ. ಇದೇ ನಿಜವಾದ ನಮ್ಮ ಬೆಳವಣಿಗೆ.
ಏನಂತೀರಿ..?

  • ಪಲ್ಲವಿ ಚೆನ್ನಬಸಪ್ಪ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ