ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡಿನ ಶ್ರೇಷ್ಠ ಸಾಹಿತಿ ಗೊ. ರು. ಚನ್ನಬಸಪ್ಪ

ಕರುನಾಡಿನ ಶ್ರೇಷ್ಠ ಪ್ರಗತಿಪರ ಚಿಂತಕರು, ಸಾಹಿತಿಗಳಾಗಿ, ಜಾನಪದ ವಿದ್ವಾಂಸರಾಗಿ, ಶಿಕ್ಷಕರಾಗಿ, ಕನ್ನಡ ಸಾಹಿತ್ಯ, ಶರಣ ಸಾಹಿತ್ಯ ಪರಿಷತ್ತುಗಳ ಆಡಳಿತಗಾರರಾಗಿ ಈ ನಾಡಿನಲ್ಲಿ ಅನೇಕ ನಿಸ್ವಾರ್ಥ ಸೇವೆಗಳ ಮಾಡಿ ಜನಮನ್ನಣೆ ಗಳಿಸಿ, ಪ್ರಸಿದ್ಧಿ ಪಡೆದವರು ಗೊ ರು ಚನ್ನಬಸಪ್ಪ ಶರಣರು.
ಗೊ. ರು. ಚ. ಕನ್ನಡ ಸಾಹಿತ್ಯ ಲೋಕಕ್ಕೆ ಅದರಲ್ಲೂ ವಿಶೇಷವಾಗಿ ಜಾನಪದ ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿದವರು.
ನಾಡಿನ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಗೊಂಡೇದಹಳ್ಳಿಯಲ್ಲಿ 18 ನೇ ಮೇ 1930 ರಲ್ಲಿ ಜನಿಸಿದರು.
ಇವರ ತಂದೆ ತಿಂಗಳಿಗೆ ಏಳು ರೂ. ಸಂಬಳದಲ್ಲಿ ಅನುದಾನಿತ ಶಾಲೆಯೊಂದರಲ್ಲಿ ಉಪಾಧ್ಯಾಯರಾಗಿದ್ದರು. ತಾಯಿಯವರು ಕಂಡವರ ಹೊಲಕ್ಕೆ ದಿನಕ್ಕೆ ಮೂರು ಆಣೆ ಕೂಲಿಗೆ ಹೋಗಿ ಕೆಲಸ ಮಾಡುತ್ತಿದ್ದರಂತೆ. ರಜಾ ದಿನಗಳಲ್ಲಿ ಬಾಲಕ ಚನ್ನಬಸಪ್ಪನವರೂ ಸಹ ಕೂಲಿಗೆ ಹೋಗುತ್ತಿದ್ದರಂತೆ ಅವರಿಗೆ ದಿನಕ್ಕೆ ಒಂದೂವರೆ ಆಣೆ ಕೂಲಿ ಸಿಗುತಿತ್ತಂತೆ “ಆ ಹಣಕ್ಕಿಂತ ಮುಖ್ಯವಾಗುತ್ತಿದ್ದುದು ನಾವು ಕೂಲಿ ಹೋಗುತ್ತಿದ್ದ ಹೊಲದವರು ಕೊಡುತ್ತಿದ್ದ ಒಂದು ಹೊತ್ತಿನ ಊಟ!” ಎಂದು ತಮ್ಮ ಬಾಲ್ಯವನ್ನು ಗೊ.ರು. ಚನ್ನಬಸಪ್ಪನವರು ಯಾವಾಗಲೂ ನೆನಪು ಮಾಡಿಕೊಳ್ಳುತ್ತಾರೆ.
ಹುಟ್ಟಿದ ಹಳ್ಳಿ ಸೇವೆಯೇ ಅವರ ಕರ್ತವ್ಯಗಳಲ್ಲಿ ಒಂದಾಯಿತು. ಖಾದಿ ಧರಿಸುವುದು ಅವರ ರೂಢಿಯಾಯಿತು. ಈ ಎರಡನ್ನೂ ಇಂದಿಗೂ ಗೊ. ರು. ಚ. ರವರು ಪರಿಪಾಲಿಸಿಕೊಂಡು ಬರುತ್ತಿದ್ದಾರೆ.

ಗೊ ರು ಚನ್ನಬಸಪ್ಪನವರ ಬದುಕು

ಕನ್ನಡ ಸಾಹಿತ್ಯ ಹಾಗೂ ಜಾನಪದ ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿರುವ ಗೊ. ರು. ಚೆನ್ನಬಸಪ್ಪನವರು ರುದ್ರಪ್ಪಗೌಡರು ಮತ್ತು ಅಕ್ಕಮ್ಮ ದಂಪತಿಗಳ ಮಗನಾಗಿ ಜನಿಸಿದರು ಮಾಧ್ಯಮಿಕ ಮತ್ತು ಪ್ರೌಢಶಾಲಾ ತರಗತಿಗಳಲ್ಲಿ ಅಭ್ಯಾಸ ಮಾಡಿದರು. ಇಂತಹ ಸಮಯದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲುಗೊಂಡಿದ್ದರು. (ಅಂದರೆ ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಕೀರ್ತಿ ಇವರದು)
ಸ್ವಾತಂತ್ರ್ಯಕ್ಕಾಗಿ ನಿರಂತರವಾಗಿ ಹೋರಾಟ ಮಾಡಿದವರಲ್ಲಿ ಚನ್ನಬಸವ ನವರು ಒಬ್ಬರು ಎನ್ನುವುದು ಇಲ್ಲಿ ಹೆಮ್ಮೆಯಿಂದ ಹೇಳಲು ಬಯಸುತ್ತೇವೆ. ಮುಂದೆ 1948 ರ ವರ್ಷದಲ್ಲಿ ಶಾಲಾ ಶಿಕ್ಷಕರಾಗಿ 18ನೇ ವಯಸ್ಸಿನಲ್ಲೇ ತಮ್ಮ ಕಾಯಕ ಜೀವನವನ್ನು ಆರಂಭಿಸಿದ ಚನ್ನಬಸಪ್ಪನವರು. ಭೂದಾನ ಚಳುವಳಿ, ವಯಸ್ಕರ ಶಿಕ್ಷಣ ಮತ್ತು ಸೇವಾದಳಗಳಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸಿ,ವಿವಿಧ ಸಂಘಸಂಸ್ಥೆಗಳಿಗಾಗಿ ದುಡಿದ್ದಾರೆ. ಗಾಂಧೀಜಿಯ ಪ್ರಭಾವದಿಂದ ಖಾದಿ ಧರಿಸುವುದು ಇವರ ರೂಢಿಯಾಯಿತು. ಈ ಎರಡನ್ನೂ ಇಂದಿಗೂ ಅವರು ಪರಿಪಾಲಿಸಿಕೊಂಡು ಬರುತ್ತಿರುವುದು ನಾವೆಲ್ಲರೂ ಕಾಣುತ್ತೇವೆ. ಗೊ. ರು. ಚನ್ನಬಸಪ್ಪನವರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಕಮಿಷನರ್ ಆಗಿ ಮಹತ್ವದ ಸೇವೆ ಸಹ ಸಲ್ಲಿಸಿದ್ದಾರೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅನೇಕ ಮಹತ್ವಪೂರ್ಣ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.ಕರುನಾಡಿಗೆ ಮಾದರಿಯಾಗಿದ್ದಾರೆ.
ಅಲ್ಲದೆ ಕನ್ನಡ ಜಾನಪದ ಕ್ಷೇತ್ರಕ್ಕೆ ಮರೆಯಲಾರದ ಸೇವೆಯನ್ನು ಸಲ್ಲಿಸಿದ್ದಾರೆ. ಭಾರತದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ಇವರ ಪಾತ್ರ ಮಹತ್ವದಾಗಿತ್ತು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿ, ಪರಿಷತ್ತು ಬಲಿಷ್ಠವಾಗುವಲ್ಲಿ ತಮ್ಮದೇ ಆದ ಕಾಯಕಸೇವೆ ಸಲ್ಲಿಸಿದ್ದಾರೆ. ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ. ಸಧ್ಯ ಇದೆ ಪರಿಷತ್ತಿನ ಗೌರವ ಸಲಹೆಗಾರರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಇನ್ನು ಸಾಂಸ್ಕೃತಿಕ ಕಾರ್ಯಕ್ರಮ, ಗೀತ-ಸಂಗೀತ, ಕಾವ್ಯ-ಕಾವೇರಿ ಪ್ರಾರಂಭಿಸಿದ ಹೆಗ್ಗಳಿಕೆ ಇವರದು. ವಿದೇಶಿ ಕನ್ನಡಿಗರ ಆಹ್ವಾನದ ಮೇರೆಗೆ ಅಮೆರಿಕಾ ಭೇಟಿ, ಅಲ್ಲಿ ಕನ್ನಡದ ಕಂಪು ಹರಿಸಿದ ಹಿರಿಮೆಗೆ ಸಾಕ್ಷಿಯಾಗಿದ್ದಾರೆ. ಕನ್ನಡ ಮತ್ತು ಶರಣ ಸಾಹಿತ್ಯ ಪರಿಷತ್ತುಗಳ ಬೆಳವಣಿಗೆಗಾಗಿ ದತ್ತಿ ನಿಧಿ ಸಂಗ್ರಹಣೆ ಕಾರ್ಯ ಸಹ ಇವರ ನೇತೃತ್ವದಲ್ಲಿ ಮಾಡಿರುವುದು ಮರೆಯಲಾಗದ ಕೆಲಸವಾಗಿದೆ. ಇದಲ್ಲದೆ ಇವರ ಅವಧಿಯಲ್ಲಿ ಅನೇಕ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಹಾಗೆಯೇ ಇವರು ನೂರೈವತ್ತಕ್ಕೂ ಹೆಚ್ಚು ಮಹತ್ವ ಪೂರ್ಣ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಧಾರೆಯೆರೆದಿದ್ದಾರೆ.

ಗೊ ರ ಚನ್ನಬಸಪ್ಪ ನವರ ದತ್ತಿ ನಿಧಿಯಿಂದ
ಅಂದರೆ ಇವರು ನೀಡಿರುವ ಹಣದಿಂದ
ಇವರ ಹೆಸರಿನಲ್ಲಿ ಪ್ರತಿ ವರ್ಷ ಶರಣ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಸಾಧಕರನ್ನು ಹಾಗೂ ಕೃತಿಗಳನ್ನು ರಚಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸವನ್ನು ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದ್ದಾರೆ.
ಹೀಗೆ ಇವರ ನಿಸ್ವಾರ್ಥ ಕಾರ್ಯ ನಿರ್ವಹಣೆಗಾಗಿ ಅನೇಕ ಸಂಘ ಸಂಸ್ಥೆ, ಸರಕಾರಗಳಿಂದ ಪ್ರಶಸ್ತಿ ಬಂದಿವೆ. ಅದರಲ್ಲಿ ಪ್ರಮುಖವಾದ ಪ್ರಶಸ್ತಿಗಳೆಂದರೆ
ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ, ಬಸವ ಪ್ರಶಸ್ತಿ ಸೇರಿದಂತೆ ಮುಂತಾದುವು ಸೇರಿವೆ. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗೊ. ರು. ಚನ್ನಬಸಪ್ಪ ಶರಣರು ಸಂಪೂರ್ಣವಾಗಿ ತೊಡಗಿಸಿಕೊಂಡು ಅತ್ಯಂತ ಭಕ್ತಿ ಭಾವದಿಂದ ಶ್ರಮಿಸಿದ್ದಾರೆ.

ಅಂದಹಾಗೆ ಗೊ ರು ಚನ್ನಬಸಪ್ಪ ನವರು
ನಮ್ಮ ದೇಶ ಕಂಡ ಅತ್ಯುತ್ತಮ ಪ್ರಗತಿಪರ ಚಿಂತಕರು,ಸೌಹಾರ್ದತೆಯ ಪ್ರತಿಪಾದಕರು, ಸರ್ವ ಧರ್ಮಗಳ ಸಮನ್ವಕಾರರು, ವಿಶ್ವ ಭಾತೃತ್ವ
ಪ್ರತಿರೂಪವೇ ಆಗಿ ನಿಸ್ವಾರ್ಥ ಜಾನಪದ,ಕನ್ನಡ ಸಾಹಿತ್ಯ, ಶರಣ ಸಾಹಿತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಮತಾವಾದ ಹರಿಕಾರ,ಸಕಲ ಜೀವಿಗಳಿಗೆ ಲೇಸನ್ನೇ ಬಯಸಿದ ವಿಶ್ವ ಬಂಧು ಅಣ್ಣ ಬಸವಣ್ಣನವರ ಹಾಗೂ ವಿಶ್ವ ದಾರ್ಶನಿಕರ
ಆಶಯದಂತೆ ಸರ್ವರ ಹಾಗೂ ನಾಡಿನ ಹಿತಕ್ಕಾಗಿ ದುಡಿಯುತ್ತಿದ್ದಾರೆ.
ಅಲ್ಲದೆ ಮಾನವೀಯತೆ ಮೌಲ್ಯಗಳು, ಸಮಾನತೆಯ ತತ್ವಗಳನ್ನು ದೇಶದ ಉದ್ದಗಲಕ್ಕೂ ಉಪನ್ಯಾಸಗಳ ಮೂಲಕ ಜನರಲ್ಲಿ ಮೌಲ್ಯಾಧಾರಿತ ತತ್ವಗಳು ಬಿತ್ತುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ನಾವೆಲ್ಲರೂ ಕಾಣುತ್ತಿದ್ದೇವೆ ಹೀಗೆ ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ, ವಿದೇಶದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಗೊ. ರು. ಚನ್ನಬಸಪ್ಪ ನವರು, ಈ ನಾಡಿನ ಹೆಮ್ಮೆಯ ಶ್ರೇಷ್ಠ ಶರಣರೆಂದೇ ಖ್ಯಾತಿ ಪಡೆದಿದ್ದಾರೆ.

ಗಾಂಧಿ ಚಿಂತಕರು ಚನ್ನಬಸಪ್ಪನವರು:

ಅಂದು ಗಾಂಧೀಜಿ ಕೊಟ್ಟ ಗ್ರಾಮೋದ್ಧಾರದ ಕರೆಯಲ್ಲಿ ಗ್ರಾಮ ಭಾರತದಲ್ಲಿ ನೈತಿಕ ಬಲ ಮತ್ತು ಆತ್ಮವಿಶ್ವಾಸವನ್ನು ಹುಟ್ಟಿಸುವ ಒಂದು ಆಶಯವಿತ್ತು. ಸ್ವಾತಂತ್ರ್ಯಾನಂತರ ಗ್ರಾಮೀಣಾಭಿವೃದ್ಧಿಯ ಕೆಲಸಗಳೇನೋ ಆಗುತ್ತಿವೆ. ಆದರೆ ಗ್ರಾಮೀಣರ ನೈತಿಕ ಬಲ ಮತ್ತು ಆತ್ಮವಿಶ್ವಾಸಗಳು ನೆಲಕಚ್ಚಿ ಹೋಗಿವೆ. ಇದು ನಿಜಕ್ಕೂ ಒಂದು ನಿರಾಸೆಯ ಬೆಳವಣಿಗೆ. ನಮ್ಮ ಪ್ರಜಾಪ್ರಭುತ್ವದ ನೆಲಗಟ್ಟೇ ಹಳ್ಳಿಗಳು ಆದರೆ ಆ ನೆಲಗಟ್ಟನ್ನು ಭದ್ರಪಡಿಸುವ ಪ್ರಾಮಾಣಿಕ ಪ್ರಯತ್ನ ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ರಾಜಕೀಯ ವ್ಯವಸ್ಥೆಗಳಿಂದ ನಡೆಯಲಿಲ್ಲವೆಂದೇ ಅನಿಸುತ್ತದೆ. ನಮ್ಮ ಹಳ್ಳಿಗಳ ಕ್ರಿಯಾಶೀಲ ಬದುಕನ್ನು ಹಾಳುಮಾಡಿರುವ, ಅಲ್ಲಿನ ಜನರ ಪರಂಪರೆಯ ಜೀವನ ಸಂಸ್ಕೃತಿಯನ್ನು ವಿಕೃತಗೊಳಿಸಿರುವ ಒಂದು ದೊಡ್ಡ ಅನಿಷ್ಟವೆಂದರೆ ಅಲ್ಲಿ ಪ್ರವೇಶಿಸುವ ಅಪಕ್ವ ರಾಜಕೀಯ. ಈ ಕಳವಳಕಾರಿ ಬೆಳವಣಿಗೆಯ ಬಗೆಗೆ ಪ್ರಜ್ಞಾವಂತರೆಲ್ಲಾ ಗಂಭೀರವಾಗಿ ಆಲೋಚಿಸಬೇಕು.” ಎನ್ನುತ್ತಾರೆ ಗೊ. ರು. ಚನ್ನಬಸಪ್ಪನವರು.
ಅಂತೆಯೇ ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿಯ ಉನ್ನತಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಗೊ ರು ಚ ಕೆಲಸ ಮಾಡುತ್ತಿದ್ದಾರೆ. ಗಾಂಧೀಜಿ ಕಂಡ ಕನಸು ಈಡೇರಿಸುವ ದಿಸೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಗ್ರಾಮೀಣಾಭಿವೃದ್ಧಿಗಾಗಿ ಈ ಇಳಿ ವಯಸ್ಸಿನಲ್ಲಿಯೂ ದುಡಿಯುತ್ತಿದ್ದಾರೆ.

ಬಸವಾದಿ ಪ್ರಮಥರ ಚಿಂತನೆ

ಬಸವಣ್ಣನವರು ಸೇರಿದಂತೆ ವಿಶ್ವ ದಾರ್ಶನಿಕರು ಕೇವಲ ಇಂದು ಭಾಷಣದ ವಸ್ತುಗಳಾಗಿದ್ದಾರೆ ಹೊರತು ಆಚರಣೆಯಲ್ಲ ಮೌಲ್ಯಾಧಾರಿತ ಆಲೋಚನೆಗಳು ಮಾಯವಾಗಿ ಸಮಾಜ ತಪ್ಪು ದಾರಿಗೆ ಹೋಗುತ್ತಿದೆ ಎನ್ನುವ ಆತಂಕ ಗೊ. ರು. ಚ ರವರಿಗೆ ಎಲ್ಲೂ ಒಂದು ಕಡೆ ಕಾಡುತ್ತಿದೆ. ಇದಕ್ಕೆ ತಾರ್ತಿಕ ಅಂತ್ಯ ಹಾಡಲು ಗೊ. ರು. ಚನ್ನಬಸಪ್ಪ ಶರಣರು ನವ ಸಮಾಜ ನಿರ್ಮಾಣದ ಬೆಳವಣಿಗೆಗಾಗಿ ಸದಾ ಬಸವಾದಿ ಪ್ರಮಥರ ತತ್ವ
ಚಿಂತನೆ ಮಾಡುತ್ತಿದ್ದಾರೆ. ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಸಾಮಾನ್ಯರಿಗೆ ಶರಣರ ಚಿಂತನೆಗಳನ್ನು ಉಣಬಡಿಸುವ ಕೆಲಸ ಮಾಡುತ್ತಿದ್ದಾರೆ.
ದತ್ತಿನಿಧಿ ಕಾರ್ಯಕ್ರಮಗಳ ಮೂಲಕ ಶರಣರ ಸಂದೇಶಗಳನ್ನು ದೇಶ ವಿದೇಶಗಳಲ್ಲಿ ಬಿತ್ತುತ್ತಿದ್ದಾರೆ.
ಹೀಗೆ ಗೊ. ರು. ಚನ್ನಬಸಪ್ಪ ಶರಣರು ವಿಚಾರ ಕ್ರಾಂತಿಗೆ ಮುನ್ನುಡಿ ಬರೆಯುತ್ತಿದ್ದಾರೆ. ಗೊಡ್ಡು ಸಂಪ್ರದಾಯಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದಾರೆ, ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಸಮರ ಸಾರಿದ್ದಾರೆ. ಅಸ್ಪೃಶ್ಯತೆಯಂಥ ಸಾಮಾಜಿಕ ಪಿಡುಗಿನ ವಿರುದ್ಧ ಸದಾ ದ್ವನಿ ಎತ್ತುತ್ತಿದ್ದಾರೆ. ಜನರಲ್ಲಿ ವೈಜ್ಞಾನಿಕ – ವೈಚಾರಿಕ ತಿಳುವಳಿಕೆಗಳ ಬಗ್ಗೆ ಅರಿವು ಮೂಡಿಸಲು ಸತತವಾಗಿ ಶ್ರಮಿಸುತ್ತಿದ್ದಾರೆ. ನಿರ್ಲಕ್ಷಿತ ಸಮುದಾಯಕ್ಕೆ ಆಸರೆಯಾಗಿ ದುಡಿಯುವ ಕೆಲಸ ಮಾಡುತ್ತಿದ್ದಾರೆ. ವಚನ ಚಳವಳಿ ಆಶಯಗಳನ್ನು ಹೊತ್ತು ಜನಸಾಮಾನ್ಯರನ್ನು ಗೊಡ್ಡು ಸಂಪ್ರದಾಯದ ಕುರಿತು ಎಚ್ಚರಿಸಿ,ಮೌಲ್ಯಯುತ ಆಚರಣೆಗಳನ್ನು ಆಚರಿಸುವಂತೆ ತಿಳಿಸುತ್ತಿದ್ದಾರೆ.
ಇನ್ನು ಬಸವ ತತ್ವ ಅನುಷ್ಠಾನಕ್ಕಾಗಿ ತಮ್ಮ ಇಡೀ ಜೀವನ ಮುಡಿಪಾಗಿಟ್ಟಿದ್ದಾರೆ. ಸಮಾಜದಲ್ಲಿ ದ್ವೇಷದ ವಿಷಯ ಬೀಜ ಬಿತ್ತುವ ಕೆಲಸ ಖಂಡಿತಾ ಬೇಡ, ಪ್ರೀತಿ – ಸ್ನೇಹ, ಸೌಹಾರ್ದತೆ – ಶಾಂತಿಯ ವೈಜ್ಞಾನಿಕ ವಿಚಾರಗಳು ಬಿತ್ತುವ ಕೆಲಸ ಆಗಬೇಕೆಂದು ಕರೆಯನ್ನು ನೀಡುತ್ತಿದ್ದಾರೆ ಮತ್ತು ಈ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೆ
ಬಹುಮುಖ್ಯವಾಗಿ ಜನರಲ್ಲಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿರುವ, ಸಮುದಾಯದಲ್ಲಿ ಸೌಹಾರ್ದ ಮೂಡಿಸುವ ವಾತಾವರಣ ನಿರ್ಮಾಣವಾಗಬೇಕಾದ ಅಗತ್ಯವಿದೆ. ಬಹುಸಂಸ್ಕೃತಿಯನ್ನು ಜನರು ಒಪ್ಪಿಕೊಳ್ಳುವಂತಹ ಕೆಲಸವಾಗಬೇಕು. ಅದುವೇ ನಿಜವಾದಂತಹ ಪ್ರಜಾಪ್ರಭುತ್ವದ ಲಕ್ಷಣ ಎಂದು ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ನವರು ಯಾವಾಗಲೂ ಹೇಳುತ್ತಿರುತ್ತಾರೆ. ಅಂತೆಯೇ
ಈ ನಿಟ್ಟಿನಲ್ಲಿ ಬಸವಾದಿ ಶರಣರ ಸಂದೇಶಗಳನ್ನು ಸರ್ವರೂ ಅಳವಡಿಸಿಕೊಂಡು ಸಾಗಬೇಕು, ಸಾಗಿದಾಗ ಮಾತ್ರ ಸರ್ವರ ಜೀವನ ಸುಂದರಮಯವಾಗುತ್ತದೆ ಎನ್ನುತ್ತಾರೆ ಗೊ. ರು. ಚ.

ಜಾನಪದ ಸಾಹಿತ್ಯ ಸೇವೆಯಲ್ಲಿ ಗೊ ರು ಚ :

ಗೊ.ರು ಚನ್ನಬಸಪ್ಪನವರ ಇನಿದಾದ ದನಿಯಲ್ಲಿ ಜನಪದ ಸಾಹಿತ್ಯ ಸುಧೆಯನ್ನು ಸವಿಯುವುದೇ ಸೊಗಸು. ಚನ್ನಬಸಪ್ಪ ಶರಣರು ಹಿರಿಯ ಜಾನಪದ ತಜ್ಞರು ಹೌದು, ಮಾಜಿ ಕರ್ನಾಟಕ ಜಾನಪದ ಅಕಾಡೆಮಿಯ ಕ್ರಿಯಾಶೀಲ ಅಧ್ಯಕ್ಷರಾಗಿ ಕನ್ನಡ ಜಾನಪದ ಕ್ಷೇತ್ರಕ್ಕೆ ಗುರುತರವಾದ ಸೇವೆ ಸಲ್ಲಿಸಿದ್ದಾರೆ. ಭಾರತದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ಅವರ ಪಾತ್ರ ದೊಡ್ಡದು. ಮೈದುನ ರಾಮಣ್ಣ, ಗ್ರಾಮಗೀತೆಗಳು, ಬಾಗೂರು ನಾಗಮ್ಮ ಮತ್ತು ಇತರ ಹಾಡುಗಳು ಸೇರಿದಂತೆ ಅನೇಕ ಕೃತಿಗಳು ನಾಡಿಗೆ ನೀಡಿದ ವಿದ್ವತ್ತಿಗೆ ಸಾಕ್ಷಿಯಾಗಿದ್ದಾರೆ. 1977ರಲ್ಲಿ ಅವರು ಸಂಪಾದಿಸಿದ `ಕರ್ನಾಟಕ ಜನಪದ ಕಲೆಗಳು’ ಇಂದಿಗೂ ಮಾದರಿ ಕೃತಿಯಾಗಿದೆ.ಅವರ ಇತ್ತೀಚಿನ ‘ಆಲೋಚನೆ’ ಎನ್ನುವ ಕೃತಿಯ ತನಕ ಅವರ ಜಾನಪದ ಅಧ್ಯಯನದ ಬೇರೆ ಬೇರೆ ನೆಲೆಯ ಆಲೋಚನ ವಿನ್ಯಾಸಗಳು ಜಾನಪದ ಅಧ್ಯಯನಕಾರರಿಗೆ ಉಪಯುಕ್ತವಾಗಿವೆ.

ಗೊ ರು ಚ ರವರ ಪ್ರಮುಖ ಕೃತಿಗಳು ಹಾಗೂ ಕಸಾಪ ಸಂಘಟನೆ :

ಮಹಾದೇವಿ, ಸದಾಶಿವ ಶಿವಾಚಾರ್ಯ, ಕರ್ನಾಟಕ ಪ್ರಗತಿಪಥ, ಚೆಲುವಾಂಬಿಕೆ, ಕುನಾಲ, ಸಾಕ್ಷಿ ಕಲ್ಲು, ಬೆಳ್ಳಕ್ಕಿ ಹಿಂಡು ಬೆದರ್ಯಾವೊ, ಬಾಗೂರು ನಾಗಮ್ಮ, ಗ್ರಾಮ ಗೀತೆಗಳು, ವಿಭೂತಿ, ಕರ್ನಾಟಕ ಜನಪದಕಲೆಗಳು ಗೊ.ರು. ಚನ್ನಬಸಪ್ಪನವರ ಪ್ರಮುಖ ಬರಹಗಳಾಗಿವೆ.
ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ 1975-77ರಲ್ಲಿ ಜಾನಪದ ವಿಭಾಗದ ಸಂಚಾಲಕರಾಗಿದ್ದರು. 1987-88ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ ಸಂಪಾದಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇನ್ನು 1989-92ರಲ್ಲಿ ಪರಿಷತ್ ಗೌರವ ಕಾರ್ಯದರ್ಶಿಯಾಗಿ ಮೂರು ಸಮ್ಮೇಳನಗಳ ನಿರ್ವಹಣೆ ಮಾಡಿ ಎಲ್ಲರಿಂದಲೂ ಸೈ ಎನಿಸಿಕೊಂಡವರು. 1990ರಲ್ಲಿ ಪರಿಷತ್‌ನಲ್ಲಿ ಪ್ರಥಮ ಬಾರಿಗೆ ಬಂಡಾಯ ಸಾಹಿತ್ಯ ಸಮಾವೇಶ ಆಯೋಜಿಸಿ ಜನ ಸಾಮಾನ್ಯರ ಪ್ರೀತಿಗೆ ಪಾತ್ರರಾಗಿದರು. ಮತ್ತೆ
1992-95ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಮೂರು ಸಮ್ಮೇಳನಗಳನ್ನು ನಡೆಸಿ, ‘ಒಬ್ಬ ಕನ್ನಡಿಗ ಒಂದು ರೂಪಾಯಿ’ ಎಂಬ ಘೋಷಣೆಯೊಂದಿಗೆ ದೇಣಿಗೆ ಸಂಗ್ರಹಿಸುವ ಮೂಲಕ ಪರಿಷತ್ ಅನ್ನು ಆರ್ಥಿಕವಾಗಿ ಸ್ವಾವಲಂಬನೆ ಮಾಡುವಲ್ಲಿ ನಿರಂತರವಾಗಿ ಶ್ರಮಿಸಿದ್ದಾರೆ.

ಗೊ ರು ಚ ರವರ ಕನ್ನಡದ ಕಳಕಳಿ:

ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷೆಯಲ್ಲೇ ಇರಬೇಕು. ಇದನ್ನು ಜಗತ್ತಿನ ಎಲ್ಲಾ ಶಿಕ್ಷಣ ತಜ್ಞರು ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಸರ್ಕಾರ ಶಿಕ್ಷಣ ನೀತಿಯನ್ನು ರೂಪಿಸಲು ದಿಟ್ಟ ಕ್ರಮ ಕೈಗೊಳ್ಳಬೇಕು ಎಂಬುದು ಇವರ ವಾದವಾಗಿದೆ. ಒಂದು ಬಾರಿ ಕಡ್ಡಾಯವಾದರೆ ಜನರೂ ಅದಕ್ಕೆ ಖಂಡಿತವಾಗಿಯೂ ಒಪ್ಪಿಕೊಂಡು ಅಪ್ಪಿಕೊಂಡುಬಿಡುತ್ತಾರೆ’ ಎನ್ನುವುದು ಗೊ.ರು. ಚನ್ನಬಸಪ್ಪನವರ ಅಂತರಾಳದ ಮಾತುಗಳಾಗಿವೆ. ‘ಕನ್ನಡಕ್ಕೆ ಈಗಿನ ತೊಂದರೆ ಎಂದರೆ ಇಂಗ್ಲಿಷ್. ಪೋಷಕರಿಗೆ ನಮ್ಮ ಮಕ್ಕಳ ಭವಿಷ್ಯ ಭದ್ರವಾಗಬೇಕೆಂಬ ಉದ್ದೇಶದಿಂದ ಜಗತ್ತಿನಲ್ಲಿ ಹೆಚ್ಚು ವ್ಯಾವಹಾರಿಕ ಭಾಷೆಯಾಗಿರುವ ಇಂಗ್ಲಿಷ್‌ಗೆ ಪ್ರಾಮುಖ್ಯ ನೀಡುತ್ತಿದ್ದಾರೆ. ನಾವು ಇಂಗ್ಲಿಷ್ ಕಲಿಯುವುದನ್ನು ಬೇಡ ಎನ್ನುವ ಅಗತ್ಯವಿಲ್ಲ. ಆದರೆ ಕನ್ನಡ ಭಾಷೆ ಮೊದಲಾಗಬೇಕು. ಬೇರೆ ಭಾಷೆಯಲ್ಲಿ ನೀಡುವಂತ ತರಬೇತಿಗಳು ಸಹ ಕನ್ನಡದಲ್ಲಿಯೂ ದೊರೆಯುವಂತೆ ಮಾಡಬೇಕು. ಈ ತನ್ಮೂಲಕ
ಇಂತಹ ತರಬೇತಿ ಪ್ರಾಥಮಿಕ ಶಿಕ್ಷಣದಲ್ಲೇ ಸಿಗುತ್ತದೆ ಎಂಬ ಭರವಸೆ ಪೋಷಕರಲ್ಲಿ ಬಂದು ಅದು ಮನದಟ್ಟಾದರೆ ಯಾರೂ ವಿರೋಧ ಮಾಡುವುದಿಲ್ಲ’ ಎನ್ನುತ್ತಾರೆ. ಹಾಗೆಯೇ
ಜನರಲ್ಲಿ ಭಾಷೆ ಬಗ್ಗೆ ಅಭಿಮಾನ ಉಂಟು ಮಾಡಬೇಕಾದ ಕೆಲಸವನ್ನು ಸರ್ಕಾರ ಮಾತ್ರ ಮಾಡಿದರೆ ಸಾಲದು. ಶಿಕ್ಷಣ ಸಂಸ್ಥೆಗಳು, ಸಾಹಿತ್ಯ ಪರಿಷತ್ತು ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ಭಾಷೆಯನ್ನು ಉತ್ತೇಜಿಸುವಂತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು. ಪೋಷಕರೊಂದಿಗೆ ಹೆಚ್ಚು ನಿಕಟ ಸಂಪರ್ಕ ಹೊಂದಿರುವ ಶಿಕ್ಷಕರು, ಭಾಷೆ ಕಲಿಯುವ ಬಗ್ಗೆ ಅರಿವು ಮೂಡಿಸಬೇಕು. ಸಾಮಾನ್ಯ ಜನರೊಂದಿಗೆ ಸಂಪರ್ಕ ಹೊಂದುವ ಮೂಲಕ ಸಾಹಿತಿಗಳೂ ಕನ್ನಡ ಭಾಷೆ ಬೆಳವಣಿಗೆಗೆ ಸಹಕರಿಸಬೇಕು. ಇದಕ್ಕೆಲ್ಲ ಸರ್ಕಾರ ಉತ್ತೇಜನ ನೀಡಬೇಕು. ಅದಕ್ಕೆ ಅಗತ್ಯವಾದ ನೀತಿಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು ಎಂಬುದು ಗೊ. ರು. ಚ ರವರ ಆಶಯವಾಗಿದೆ.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ

ಕರುನಾಡಿನ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ಗೊ. ರು. ಚನ್ನಬಸಪ್ಪನವರು ಮಂಡ್ಯದಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಈ ಮೂಲಕ ಒಬ್ಬ ಶ್ರೇಷ್ಠ ಕನ್ನಡ ಸಾಹಿತಿಗೆ ಸಲ್ಲಬೇಕಾದಂತ ಗೌರವ ಸಿಕ್ಕಿದಂತಾಗಿದೆ.

ಗೌರವದ ನುಡಿ

ಶರಣರ ತತ್ವ ಸಿದ್ಧಾಂತಗಳಾದ ಕಾಯಕ, ದಾಸೋಹ,ಶಿಕ್ಷಣ,ಸಮಾನತೆ, ಮಾನವೀಯತೆ ಎಂಬ ನಿಸ್ವಾರ್ಥ ಸೇವೆಗಳು ಜನಸಾಮಾನ್ಯರಿಗೆ ಪಸರಿಸುತ್ತಾ, ಸಂಘಟನೆ, ಹೋರಾಟಗಳು ಕೈಗೊಳುತ್ತಾ, ಶೈಕ್ಷಣಿಕ,ಸಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ವಿಭಾಗ ಸೇರಿದಂತೆ ವಿವಿಧ ಜನಪರ,ಸಾಹಿತ್ಯ, ಜಾನಪದ ಪರ ಸೇವಾ ಕೈಂಕರ್ಯಗಳು ಕೈಗೊಂಡು ಗೊ. ರು. ಚನ್ನಬಸಪ್ಪ ಸದ್ದುಗದ್ದಲವಿಲ್ಲದ ಸಾಧನಾ ಶಿಖರದಲ್ಲಿ ಕಂಗೊಳಿಸುತ್ತಿದ್ದಾರೆ.

ಲೇಖಕರು – ಸಂಗಮೇಶ ಎನ್ ಜವಾದಿ.
ಬರಹಗಾರರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು.
ಗೌರವ ಕಾರ್ಯದರ್ಶಿ: ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು,
ಬೀದರ ಜಿಲ್ಲೆ.,9663809340.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ