ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ತಾಲೂಕ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ಪುಣ್ಯತಿಥಿ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.
ಡಾ.ಬಿ.ಆರ್ ಅಂಬೇಡ್ಕರ್ ಅವರು ಬರೀ ಸಂವಿಧಾನ ಶಿಲ್ಪಿ ಮಾತ್ರವಲ್ಲದೇ ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ದಿಟ್ಟತನದಿಂದ ಹೋರಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾನ್ ಮಾನವತಾವಾದಿಯಾಗಿದ್ದರು. 1891 ಏಪ್ರಿಲ್-14 ರಂದು ಜನಿಸಿದ ಅವರು 1956 ಡಿಸೆಂಬರ್-06ರಂದು ದೇಹತ್ಯಾಗ ಮಾಡಿದರು. ಬೌದ್ಧ ಧರ್ಮದ ಗುರಿಗಳಲ್ಲಿ ಮಹಾ ಪರಿನಿರ್ವಾಣವೂ ಒಂದು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಸೇರಿದ್ದ ಕಾರಣ ಅವರು ದೇಹತ್ಯಾಗ ಮಾಡಿದ ದಿನವನ್ನು ಮಹಾಪರಿರ್ವಾಣ ದಿನವನ್ನಾಗಿ ಆಚರಿಸಲಾಗುತ್ತಿದೆ.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ತಹಶೀಲ್ದಾರರಾದ ಅಮರೇಶ ಜಿ.ಕೆ ಅವರು ಪುಪ್ಪಾರ್ಚನೆ ಮಾಡಿದರು. ನಂತರ ಒಂದು ನಿಮಿಷದ ಮೌನಾಚರಣೆಯ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕೋರಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಸರುಲ್ಲಾ, ಪಟ್ಟಣ ಪಂಚಾಯಿತಿ ಇಂಜಿನಿಯರ್ ಬಿರಾದಾರ್, ಸಮುದಾಯ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ.ಬದ್ಯಾನಾಯ್ಕ, ಜಿಲ್ಲಾ ಡಿ.ಎಸ್.ಎಸ್. ಮುಖಂಡರಾದ ಬದ್ದಿಮರಿಸ್ವಾಮಿ, ತೆಗ್ಗಿನಕೇರಿ ಕೊಟ್ರೇಶ್, ತಾಲೂಕು ಡಿ.ಎಸ್.ಎಸ್. ಮುಖಂಡರಾದ ಹನುಮಂತಪ್ಪ ವಕೀಲರು, ಪರಶುರಾಮ, ಕೊಲಾರಪ್ಪ, ವೀರಭದ್ರಪ್ಪ, ಎ.ಎಸ್.ಐ. ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಯಾದ ವೀರೇಶ ತುಪ್ಪದ, ಸದಾನಂದಯ್ಯ, ಉಪತಹಶೀಲ್ದಾರ್ ಅನ್ನದಾನೇಶ ಬಿ ಪತ್ತಾರ್ ಹಾಗೂ ಕಛೇರಿಯ ಸಿಬ್ಬಂದಿಯವರು ಹಾಜರಿದ್ದರು.
