ಶಿವಮೊಗ್ಗ : ಸರ್ಕಾರದ ಸಚಿವರು ಹಾಗೂ
ಕಾಂಗ್ರೆಸ್ ಪಕ್ಷ ದ ಜೊತೆ ಸರ್ಕಾರದ ಕೈ ಗೊಂಬೆಯಾಗಿ ಪಾಲಿಕೆ ಅಧಿಕಾರಿಗಳು ವರ್ತಿಸುತ್ತಿರುವುದು ದಿಗ್ಬ್ರಮೆ ಉಂಟು ಮಾಡಿದೆ ಎಂದು ಶಿವಮೊಗ್ಗ ಶಾಸಕ ಶ್ರೀ ಎಸ್ ಎನ್ ಚನ್ನಬಸಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 8 ವರ್ಷಗಳಿಂದ ಗೋವಿಂದಾಪುರ ಮತ್ತು ಗೋಪಿಶೆಟ್ಟಿಹಳ್ಳಿಯ ಆಶ್ರಯ ಬಡಾವಣೆಯ ಮನೆಗಳನ್ನು ಹಂಚಿಕೆ ಮಾಡುವಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಈ ಮೊದಲೇ ನಿಗದಿಯಂತೆ ಇಂದು 638 ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರ ಸೂಚನೆಯಂತೆ ಹಾಗೂ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನಕುಮಾರ್ ಅವರ ಆಶಯದಂತೆ ಏಕಾಏಕಿ ರದ್ದು ಮಾಡಿರುವ ಕಮಿಷನರ್ ಕ್ರಮ ಅಕ್ಷಮ್ಯ, ಈ ಕಾರ್ಯಕ್ರಮವನ್ನು ರದ್ದುಗೊಳಿಸಿ ಬಡವರ ಬದುಕಲ್ಲಿ ಚೆಲ್ಲಾಟವಾಡುತ್ತಿರುವುದು ಅತ್ಯಂತ ನೀಚ ಸಂಗತಿ!!
ಈ ಕಾರ್ಯಕ್ಕೆ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ನಮ್ಮ ಮಹಾನ್ ಅವಿದ್ಯಾವಂತ ಶಿಕ್ಷಣ ಸಚಿವರು ಉತ್ತರಿಸಬೇಕಾಗಿದೆ. ಸಚಿವರು ಹಾಗೂ ಕಾಂಗ್ರೆಸ್ ಅಧ್ಯಕ್ಷರ ಕಾರ್ಯಕ್ರಮವನ್ನು ಮುಂದೂಡಿ ಎಂದು ಹೇಳಿರುವುದಾಗಿ ಸ್ವತಃ ಪಾಲಿಕೆ ಆಯುಕ್ತರು ಒಪ್ಪಿಕೊಂಡಿರುವುದು ವಿಪರ್ಯಾಸದ ಸಂಗತಿ. ಇಷ್ಟಾದರೂ ಆಯುಕ್ತರು ಬನ್ನಿ ಎಂದರೆ ಬರಲ್ಲ ಎನ್ನುವ ದಾಕ್ಷಿಣ್ಯದ ಮಾತುಗಳನ್ನಾಡುತ್ತಿರುವುದು ಆಡಳಿತದ ದುರಾವಸ್ಥೆಯ ಪರಮಾವಧಿ !
ಕಾಂಗ್ರೆಸ್ ಪಕ್ಷದ ಕೈ ಗೊಂಬೆಯಾಗಿ ಬಡವರ ವಿರುದ್ಧವಾಗಿ ನಿಂತಿರುವ ಆಯುಕ್ತರೆ ಆಶ್ರಯ ಸಮಿತಿ ಬದುಕಿದೆ. ಆಶ್ರಯ ಸಮಿತಿಯ ಅಧ್ಯಕ್ಷನಾಗಿ ನಾನು ಕೂಡಾ ಬದುಕಿದ್ದೇನೆ. ಆಶ್ರಯ ಯೋಜನೆಯ ಫಲಾನುಭವಿಗಳಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಡೆಯುತ್ತಲೇ ಇರುತ್ತದೆ ಎಂದು ಶಿವಮೊಗ್ಗ ಶಾಸಕ ಶ್ರೀ ಎಸ್ ಎನ್ ಚನ್ನಬಸಪ್ಪ ಅವರು ಸ್ಪಷ್ಟ ಪಡಿಸಿದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
