ಶಿವಮೊಗ್ಗ: ಪಾರಂಪರಿಕ ಅರಣ್ಯ ಪರಿಚಯ, ಗಿಡಮೂಲಿಕೆಗಳ ಪರಿಚಯ, ಪ್ರಾಣಿ ಪಕ್ಷಿಗಳ ಪರಿಚಯವನ್ನು ಶಾಲಾ ಕೋಣೆಯಲ್ಲಿ ಪುಸ್ತಕದಲ್ಲಿ ಓದಿದರೆ ಮಕ್ಕಳ ಅನುಭವಕ್ಕೆ ನಿಲುಕದು. ಹಾಗಾಗಿ ಕಾಡಿನಲ್ಲಿಯೇ ಶಾಲಾ ತರಗತಿಯನ್ನು ಆರಂಭಿಸುವ ಯೋಜನೆಯೊಂದಿಗೆ ಕಾಡಿನಲೊಂದು ದಿನ ಕಲಿಕೆ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ರವಿಚಂದ್ರ ಅವರು ಶಾಲಾ ಮಕ್ಕಳು ಮತ್ತು ಸಹ ಶಿಕ್ಷಕರ ತಂಡದೊಂದಿಗೆ ಸೃಜನಶೀಲ ಶಿಕ್ಷಣದ ಜೊತೆಗೆ ಜೀವನ ಶಿಕ್ಷಣ ಮತ್ತು ಕೌಶಲ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಮಕ್ಕಳ ಇಕೋ ಕ್ಲಬ್ ವತಿಯಿಂದ ಸುಳ್ಳೂರು ಗ್ರಾಮ ವಲಯದ ಅರಣ್ಯದಲ್ಲಿ ವನವಿಹಾರ ಹಾಗೂ ಪಾರಂಪರಿಕ ಅರಣ್ಯ ಪರಿಚಯ ಹಾಗೂ ಜಾಗೃತಿಯ ಆಂದೋಲನವನ್ನು ವಿಶಿಷ್ಟ ಚಟುವಟಿಕೆಗಳ ಮೂಲಕ ಮಾಡಿಲಾಗಿದೆ. ಈ ಬರ್ಡ್ ಸಂಸ್ಥೆಯವರು ಕಳಿಸಿರುವ ಪಕ್ಷಿಗಳ ಕಾರ್ಡ್, ಚಾರ್ಟ್ ಗಳನ್ನು ಬಳಸಿಕೊಂಡು ನೇರವಾಗಿ ಕಾಡಿನಲ್ಲಿ ವಿಹರಿಸಿ ಪಕ್ಷಿಗಳನ್ನು ಗುರುತಿಸಿ ಅವುಗಳ ಸಮೀಕ್ಷೆ ಮಾಡಿ ಪರಿಚಯ ಮಾಡಿಕೊಡಲಾಗಿದೆ.

ಕಾಡಿನಲ್ಲಿರುವ ಪಾರಂಪರಿಕ ಗಿಡಗಳು, ಗಿಡಮೂಲಿಕೆಗಳನ್ನು ಕಾಡಿನಲ್ಲಿ ಸಮೀಕ್ಷೆ ಮಾಡಿ ಅವುಗಳ ಬೆಳವಣಿಗೆ, ಗಾತ್ರ, ಎಲೆ,ಹೂವುಗಳ ವಾಸನೆ ಮತ್ತಿತರ ವಿವರಗಳನ್ನು ಸಂಗ್ರಹಿಸಿದ್ದಾರೆ. ಅವುಗಳ ಕುರಿತು ಚರ್ಚೆ ನಡೆಸಿದ್ದಾರೆ. ಕಾಡಿನಲ್ಲಿ ಪರಿಸರದ ಕುರಿತು ಕಥೆಗಳನ್ನು ಜಾಗೃತಿ ಗೀತೆಗಳನ್ನು ಹಾಡಿಸಿ ಮಕ್ಕಳಿಂದ ಕಾಡಿನ ಕಥೆ ಕಟ್ಟುವ ಆಟ ಆಡಿಸಲಾಗಿದೆ. ಶಾಲಾ ಮಕ್ಕಳೇ ಸಂಪಾದಿಸುವ ಮಕ್ಕಳ ಮಂದಾರ ಪತ್ರಿಕೆಗಾಗಿ ಬರಹಗಳನ್ನು ಅಲ್ಲಿಯೇ ಬರೆಸಲಾಗಿದೆ. ಕಾಡಿನಲ್ಲಿಯೇ ಕೆಲವು ಗ್ರಾಮೀಣ ಕ್ರೀಡೆಗಳನ್ನು ಆಡಿಸಲಾಗಿದೆ.
ಹೀಗೆ ಹಲವಾರು ಚಟುವಟಿಕೆಗಳನ್ನು ಮಾಡಿಸುವ ಮೂಲಕ ನಿಸರ್ಗ ಪ್ರೀತಿ ಜೊತೆಗೆ, ಪಾರಂಪರಿಕ ಅರಣ್ಯ ಸಂರಕ್ಷಣಾ ಅಭಿಯಾನ ಮಾಡಿದ್ದಾರೆ. ಮಕ್ಕಳ ಸೃಜನಶೀಲ ಶಿಕ್ಷಣ, ಜೀವನ ಶಿಕ್ಷಣಕ್ಕೆ , ಅನುಭವ ಜನ್ಯ ಶಿಕ್ಷಣಕ್ಕೆ ಇಂತಹ ವಿನೂತನ ಶೈಕ್ಷಣಿಕ ಪ್ರಯೋಗಗಳು ಅತಿ ಅಗತ್ಯವಿದ್ದು ಪ್ರತಿ ವರ್ಷ ಇಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುತ್ತೇವೆ ಎಂದು ಮುಖ್ಯ ಗುರುಗಳಾದ ರವಿಚಂದ್ರ ಅವರು ತಿಳಿಸಿದರು.
