
ಮೈಸೂರು: ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಸಧ್ಯದಲ್ಲೇ ವಿವಿಧ ಕನ್ನಡ ಪರ ಸಂಘಟನೆಗಳ ಜೊತೆ ಗೂಡಿ ಬೃಹತ್ ಪಾದಯಾತ್ರೆ ಮಾಡುವುದಾಗಿ ಕನ್ನಡ ಚುಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.
ಕಳೆದ ಎರಡು,ಮೂರು ವರ್ಷಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಚಾಮುಂಡಿ ಬೆಟ್ಟದ ನಂದಿ ಮಾರ್ಗ ಕುಸಿದು ಬಿದ್ದಿತ್ತು.
ಅದಾಗಿ ಮೂರು ವರ್ಷಗಳೇ ಕಳೆದರೂ ಸರಿಪಡಿಸುವ ಕಾರ್ಯ ಆರಂಭವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಅನೇಕ ಕುಟುಂಬಗಳು ವಾಸವಾಗಿವೆ,ಅಲ್ಲದೆ ದೇಶ ವಿದೇಶಗಳಿಂದ ಪ್ರತಿದಿನ ಸಾವಿರಾರು ಪ್ರವಾಸಿಗರು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಾರೆ.
ಯಾರಿಗಾದರೂ ಆರೋಗ್ಯದಲ್ಲಿ ಏರು ಪೇರು ಉಂಟಾದರೆ ಪ್ರಥಮ ಚಿಕಿತ್ಸೆ ಮಾಡಲು ಬೆಟ್ಟದಲ್ಲಿ ಸುಸಜ್ಜಿತವಾದ ಆಸ್ಪತ್ರೆ ಇಲ್ಲ, ಅಷ್ಟೇ ಏಕೆ ತುರ್ತು ಚಿಕಿತ್ಸಾ ವಾಹನ ವ್ಯವಸ್ಥೆ ಕೂಡಾ ಇಲ್ಲದಿರುವುದು ದುರಂತದ ಸಂಗತಿ ಎಂದು ತೇಜಸ್ವಿ ಬೇಸರ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಆಡಳಿತಾಧಿಕಾರಿಗಳಿಗೆ ತುರ್ತು ಚಿಕಿತ್ಸಾ ವಾಹನ (ಅಂಬುಲೆನ್ಸ್) ವಾಹನ 24/7 ವ್ಯವಸ್ಥೆ ಮಾಡುವಂತೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ದೂರಿದ್ದಾರೆ.
ನಂದಿ ರಸ್ತೆ ದುರಸ್ತಿ, ಸುಸಜ್ಜಿತವಾದ ಆಸ್ಪತ್ರೆಯ ನಿರ್ಮಾಣ, ತುರ್ತು ಚಿಕಿತ್ಸಾ ವಾಹನ ನೀಡುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇದೇ ಡಿಸೆಂಬರ್ ನಲ್ಲಿ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಲವು ಕನ್ನಡಪರ ಸಂಘಟನೆಗಳ ಜೊತೆಗೂಡಿ ನೂರೊಂದು ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಗ್ರಹಾರ ವೃತ್ತದಿಂದ ಚಾಮುಂಡಿ ಬೆಟ್ಟದ ದೇವಸ್ಥಾನದ ವರೆಗೂ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.
