ಏನಿದು ಸ್ಫೋಟಕ ವಸ್ತುಗಳ ಕಾಯಿದೆ, 1908 ಹಾಗೂ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 288
ದಿ. 12 / 12 / 2024 ರಂದು ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಮೇಲೆ ಮಿಡಿಗೇಶಿ ಪೋಲಿಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿರುತ್ತದೆ ಹಾಗೂ ಡ್ರೋನ್ ಪ್ರತಾಪ್ ರ ಬಂಧನವು ಆಗಿರುತ್ತದೆ.
ಈ ಬಂಧನಕ್ಕೆ ಕಾರಣವೇನೆಂದು ನೋಡಿದಾಗ ಡ್ರೋನ್ ಪ್ರತಾಪ್ ನೀರಿನ ಸಂಪರ್ಕಕ್ಕೆ ಬಂದಾಗ ಸ್ಪೋಟಗೊಳ್ಳುವಂತಹ ರಾಸಾಯನಿಕ ವಸ್ತುವನ್ನು ಕವರ್ ನಲ್ಲಿ ಉಂಡೆಮಾಡಿ ಕೃಷಿ ಹೊಂಡಕ್ಕೆ ಎಸೆದಿರುತ್ತಾರೆ, ಆಗ ಅದು ದೊಡ್ಡದಾಗಿ ಸ್ಪೋಟಗೊಂಡಿರುತ್ತದೆ. ಈ ವಿಚಾರವಾಗಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 288 ಪ್ರಕಾರ ಹಾಗೂ ಸ್ಫೋಟಕ ವಸ್ತುಗಳ ಕಾಯಿದೆ, 1908 ಸೆಕ್ಷನ್ 03 ರ ಪ್ರಕಾರ ಮಿಡಿಗೇಶಿ ಪೋಲಿಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿರುತ್ತದೆ.
ಯಾರೇ ಆಗಲಿ ಒಂದು ಕೃತ್ಯವನ್ನು ಮಾಡಿದಾಗ ಅದು ಕಾನೂನು ಬದ್ದವಾಗಿದ್ದಲ್ಲಿ ಏನೂ ತೊಂದರೆ ಆಗುವುದಿಲ್ಲ ಆದರೆ ಆ ಕೃತ್ಯ ಕಾನೂನು ಬಾಹಿರವಾಗಿದ್ದರೆ ಅದಕ್ಕೆ ಕಾನೂನಿನ ಪ್ರಕಾರ ದಂಡನೆ ಇರುತ್ತದೆ. ಹಾಗಾದರೆ ಡ್ರೋನ್ ಪ್ರತಾಪ್ ವಿಚಾರದಲ್ಲಿ ನೋಡುವುದಾದರೆ, ಡ್ರೋನ್ ಪ್ರತಾಪ್ ಮಾಡಲಾದ ಸ್ಪೋಟದ ಹಿಂದೆ ಯಾವುದೇ ವಿಧವಾದ ದುರುದ್ದೇಶ ಅಥವಾ ಬೇರೆಯವರಿಗೆ ತೊಂದರೆ ಕೊಡುವ ಉದ್ದೇಶವೂ ಇರಲಿಲ್ಲ ಹಾಗೂ ಈ ಸ್ಪೋಟದಿಂದ ಯಾರಿಗೂ ತೊಂದರೆ ಆಗಿರುವುದಿಲ್ಲ ಮತ್ತು ಯಾವುದೇ ಆಸ್ತಿಗೆ ಹಾನಿಯಾಗಿರುವುದಿಲ್ಲ, ಈ ಸ್ಫೋಟವನ್ನು ಪ್ರತಾಪ್ ಪ್ರಾಯೋಗಿಕವಾಗಿ ಮಾಡಿರುತ್ತಾರೆ.
ಹಾಗಾದರೆ ಬಂಧನವೇಕೆ?
ಆದರೆ ಇಲ್ಲಿ ಉದ್ಭವಿಸುವ ಪ್ರಶ್ನೆ ಎಂದರೆ “ಸ್ಪೋಟದ ಹಿಂದೆ ಯಾವುದೇ ದುರುದ್ದೇಶವಿಲ್ಲ, ಸ್ಪೋಟದಿಂದ ಯಾರಿಗೂ ತೊಂದರೆ ಆಗಿಲ್ಲ, ಯಾರ ಆಸ್ತಿಗೂ ನಷ್ಟ ಆಗಿಲ್ಲ ಹಾಗೂ ಈ ಸ್ಫೋಟ ಪ್ರಾಯೋಗಿಕ ದೃಷ್ಟಿಯಿಂದ ಮಾಡಲಾಗಿದೆ” ಹಾಗಾದರೆ ಈ ಎಫ್.ಐ.ಆರ್ ಹಾಗೂ ಬಂಧನ ಏಕೆ, ಎಂಬುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ ಆಗಿದೆ ಹಾಗಾದರೆ, ಇದಕ್ಕೆ ಉತ್ತರವನ್ನು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 288 ಮತ್ತು ಸ್ಫೋಟಕ ವಸ್ತುಗಳ ಕಾಯಿದೆ, 1908 ಪ್ರಕಾರ ಅರಿಯೋಣ.
ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 288 ಪ್ರಕಾರ,
• ಯಾವುದೇ ಸ್ಫೋಟಕ ವಸ್ತುವಿನೊಂದಿಗೆ, ಮಾನವನ ಜೀವಕ್ಕೆ ಅಪಾಯವನ್ನುಂಟುಮಾಡುವ, ಅಥವಾ ಇತರ ವ್ಯಕ್ತಿಗೆ ಗಾಯ ಅಥವಾ ಗಾಯವನ್ನು ಉಂಟುಮಾಡುವ ಸಾಧ್ಯತೆಯಿರುವ ಯಾವುದೇ ಕೃತ್ಯವನ್ನು ದುಡುಕಿನ ಅಥವಾ ನಿರ್ಲಕ್ಷ್ಯದಿಂದ ಮಾಡುವುದು,
• ತನ್ನ ಬಳಿ ಇರುವ ಯಾವುದೇ ಸ್ಫೋಟಕ ವಸ್ತುವನ್ನು ಸರಿಯಾಗಿ ಸಂರಕ್ಷಿಸದೇ ನಿರ್ಲಕ್ಷ್ಯ ವಹಿಸುವುದು ಹಾಗೂ ಮಾನವ ಜೀವಕ್ಕೆ ಯಾವುದೇ ಸಂಭವನೀಯ ಅಪಾಯದಿಂದ ರಕ್ಷಿಸಲು ನಿರ್ಲಕ್ಷ್ಯ ವಹಿಸುವುದು.
ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 288 ಪ್ರಕಾರ, ಆರು ತಿಂಗಳವರೆಗೆ ವಿಸ್ತರಿಸಬಹುದಾದ ಅವಧಿಯ ವಿವರಣೆಯ ಜೈಲು ಶಿಕ್ಷೆ ಅಥವಾ ಐದು ಸಾವಿರ ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸಬಹುದು.
ಸ್ಫೋಟಕ ವಸ್ತುಗಳ ಕಾಯಿದೆ, 1908
ಜೀವ ಅಥವಾ ಆಸ್ತಿಗೆ ಅಪಾಯವನ್ನುಂಟುಮಾಡುವ ಸ್ಫೋಟವನ್ನು ಉಂಟುಮಾಡುವ ಕೃತ್ಯಕ್ಕೆ ಶಿಕ್ಷೆ, ಯಾವುದೇ ವ್ಯಕ್ತಿ, ಕಾನೂನುಬಾಹಿರವಾಗಿ ಮತ್ತು ದುರುದ್ದೇಶಪೂರಿತವಾಗಿ,
• ಯಾವುದೇ ಸ್ಫೋಟಕ ವಸ್ತುವಿನ ಸ್ಫೋಟವು, ಸಾಮಾನ್ಯವಾಗಿ ಜೀವಕ್ಕೆ ಹಾನಿ ಮತ್ತು ಆಸ್ತಿಗೆ ( ವಸ್ತುಗಳಿಗೆ ) ಹಾನಿ ಉಂಟುಮಾಡುವಂತಿದ್ದು, ಈ ಸ್ಪೋಟದಿಂದ ಜೀವ ಹಾನಿ ಅಥವಾ ಆಸ್ತಿಯ ( ವಸ್ತುಗಳ ) ಹಾನಿ ಉಂಟಾದರೆ ಅಥವಾ ಸ್ಪೋಟದಿಂದ ಯಾವುದೇ ಹಾನಿ ಉಂಟಾಗದಿದ್ದರೂ ಸ್ಫೋಟಕ ವಸ್ತುಗಳ ಕಾಯಿದೆ, 1908 ಸೆಕ್ಷನ್ 03 ರ ಪ್ರಕಾರ 10 ವರ್ಷಗಳ ವರೆಗಿನ ಕಠಿಣಕರ ಜೈಲುವಾಸ ಶಿಕ್ಷೆ ಮತ್ತು ದಂಡವನ್ನು ಒಳಗೊಂಡಿರುತ್ತದೆ.
• ಇನ್ನೂ ವಿಶೇಷವಾಗಿ ಸ್ಪೋಟಕ ವಸ್ತು ಎಂದು ಗುರುತಿಸಿರುವ ಸ್ಪೋಟಕವನ್ನು ಸ್ಪೋಟಿಸಿದರೆ, ಅದರಿಂದ ಯಾವುದೇವಿದವಾದ ಜೀವಹಾನಿ ಅಥವಾ ವಸ್ತುಹಾನಿ ಆಗಲಿ ಅಥವಾ ಯಾವುದೇ ರೀತಿಯ ಹಾನಿ ಆಗದೆ ಇದ್ದರೂ ಕೂಡಾ ಸ್ಫೋಟಕ ವಸ್ತುಗಳ ಕಾಯಿದೆ, 1908 ಸೆಕ್ಷನ್ 03 ರ ಪ್ರಕಾರ ಜೀವಾವಧಿ ಕಠಿಣ ಜೈಲುವಾಸ ಶಿಕ್ಷೆ ಮತ್ತು ದಂಡ ಒಳಗೊಂಡಿರುತ್ತದೆ.
• ಅನುಮಾನಾಸ್ಪದ ಸಂದರ್ಭಗಳಲ್ಲಿ, ಸ್ಫೋಟಕಗಳನ್ನು ತಯಾರಿಸುವುದು ಅಥವಾ ಹೊಂದಿರುವುದು ( ಸಂಗ್ರಹಿಸಿರುವುದು ), ಸ್ಫೋಟಕ ವಸ್ತುಗಳ ಕಾಯಿದೆ, 1908 ಸೆಕ್ಷನ್ 05 ರ ಪ್ರಕಾರ 10 ವರ್ಷಗಳ ವರೆಗಿನ ಕಠಿಣಕರ ಜೈಲುವಾಸ ಶಿಕ್ಷೆ ಮತ್ತು ದಂಡ ವನ್ನು ಒಳಗೊಂಡಿರುತ್ತದೆ ಮತ್ತು ಆ ಸ್ಪೋಟಕವು ” ವಿಶೇಷವಾಗಿ ಸ್ಪೋಟಕ ವಸ್ತು ಎಂದು ಗುರುತಿಸಿರುವ ಸ್ಪೋಟಕ ” ಆಗಿದ್ದರೆ ಜೀವಾವಧಿ ಕಠಿಣ ಜೈಲುವಾಸ ಶಿಕ್ಷೆ ಮತ್ತು ದಂಡ ಒಳಗೊಂಡಿರುತ್ತದೆ.
• ಸ್ಫೋಟಕಗಳನ್ನು ತಯಾರಿಸಲು, ಸಂಗ್ರಹಿಸಿಡಲು ಅಥವಾ ಸ್ಫೋಟಿಸಲು ಉತ್ತೇಜನ ಹಾಗೂ ಸಹಾಯ ಮಾಡುವ ವ್ಯಕ್ತಿಗೆ ಸ್ಫೋಟಕ ವಸ್ತುಗಳ ಕಾಯಿದೆ, 1908 ಸೆಕ್ಷನ್ 06 ರ ಪ್ರಕಾರ ಸ್ಪೋಟಿಸಿವ ಅಥವಾ ಅನುಮಾನಾಸ್ಪದವಾಗಿ ಸ್ಪೋಟಕಗಳನ್ನು ಸಂಗ್ರಹಿಸುವ ವ್ಯಕ್ತಿಗೆ ಎಷ್ಟು ಪ್ರಮಾಣದ ಶಿಕ್ಷೆ ಆಗುವುದೋ ಅಷ್ಟೇ ಪ್ರಮಾಣದ ಶಿಕ್ಷೆ ಆಗಲಿದೆ.
ಈಗ ಡ್ರೋನ್ ಪ್ರತಾಪ್ ವಿಚಾರದಲ್ಲಿ, ಪ್ರತಾಪ್ ಮಾಡಲಾದ ಸ್ಪೋಟದಿಂದ ಯಾರಿಗೂ ತೊಂದರೆ ಆಗಿಲ್ಲ ಮತ್ತು ಯಾವ ಆಸ್ತಿಗೂ ಹಾನಿಯಾಗಿಲ್ಲ ಮತ್ತು ಪ್ರಾಯೋಗಿಕ ಉದ್ದೇಶದಿಂದ ಈ ಸ್ಫೋಟವನ್ನು ಮಾಡಲಾಗಿದೆ. ಆದರೆ ಯಾವುದೇ ತೀವ್ರಕರವಾದ ಸ್ಫೋಟವು, ಸ್ಫೋಟಕ ವಸ್ತುಗಳ ಕಾಯಿದೆ, 1908 ಹಾಗೂ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 288 ಪ್ರಕಾರ ದಂಡನೀಯ ಅಪರಾಧವಾಗಿರುತ್ತದೆ.
ಈ ವಿಚಾರದಲ್ಲಿ ನಾವು ಅರಿಯಬೇಕಾಗಿರುವುದೇನೆಂದರೆ, ಯಾವುದೇ ಕೃತ್ಯ ಮಾಡುವ ಮುನ್ನ ಅದು ಕಾನೂನು ಪ್ರಕಾರ ಸರಿಯೇ ಅಥವಾ ಇಲ್ಲವೇ ಎಂಬುದು ಅರಿಯುವುದು ಮುಖ್ಯ ಒಂದುವೇಳೆ ಮಾಡಲಾದ ಕೃತ್ಯದಿಂದ ಯಾರಿಗೂ ತೊಂದರೆ ಆಗಿರುವುದಿಲ್ಲ ಆದರೆ ಅದು ಕಾನೂನು ಬಾಹಿರ ಕೃತ್ಯವಾಗಿದ್ದರೆ ಅದಕ್ಕೆ ಕಾನೂನು ಪ್ರಕಾರ ದಂಡನೆ ಇರುತ್ತದೆ.
- ಕಿರಣ್ ಕೆ.ಟಿ, ವಕೀಲರು.
ತುಮಕೂರು,
