ಹಿರೇಮಠ ಸಂಸ್ಥಾನ ಭಾಲ್ಕಿ ಶ್ರೀ ಮಠವು ಕರುನಾಡಿನಲ್ಲಿ ಕನ್ನಡ ಕಟ್ಟಿದ ವಿಶ್ವಶ್ರೇಷ್ಠ ಮಠ, ಬಸವ ತತ್ವಗಳ ನೈಜ ಆಚರಣೆಗೆ ತಂದ ಶ್ರಿಮಠ, ಬಡವರ ನೊಂದವರ ಮಠ, ಬಸವ ತತ್ವ ಜಗದಗಲ ಪ್ರಚಾರ ಮಾಡುತ್ತಿರುವ ಮಠ, ಇದು ನಿರ್ಗತಿಕರ ಅನಾಥರ ಮಠ, ಇದು ಭಾವೈಕ್ಯತೆಯ ಮಠ, ಇದು ಸೌಹಾರ್ದತೆಯ ಮಠ. ಈ ಮಠ ಬಸವಾದಿ ಶರಣರು ಹಾಕಿ ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿರುವ ಶ್ರೀಮಠ, ಇದು ಸರ್ವ ಜನಾಂಗದ ಮಠ,ಇದು ದಲಿತರು, ಅಂಗವಿಕಲರು, ವಿಧವೆಯರು, ಸಾಹಿತಿಗಳಿಗೆ ಮತ್ತು ಕಲಾವಿದರಿಗೆ ಆಶ್ರಯ ನೀಡಿದ ಮಾನವೀಯತೆಯ ಮಠ. ನಮ್ಮೆಲ್ಲರ ಮಠ. ಬಸವಣ್ಣನವರನ್ನು ಹಾಸಿಕೊಂಡು, ಹೊದ್ದುಕೊಂಡಿರುವಂಥ ಮಠ. ಇವನಾರು, ಇವನಾರು ? ಎನ್ನದೇ, ಎಲ್ಲರೂ ನಮ್ಮವರೆನ್ನುವ ಮಠ.
ಸಕಲ ಜೀವಾತ್ಮರಿಗೆ ಲೇಸನ್ನು ಬಯಸುತ್ತಾ, ಕನ್ನಡವನ್ನು ಕಟ್ಟುವ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಗಡಿ ಭಾಗದಲ್ಲಿ ಕನ್ನಡದ ಉಳಿವಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರೀ ಮಠವೇ ಸಂಸ್ಥಾನ ಹಿರೇಮಠ ಭಾಲ್ಕಿ ಮಠ ಎಂಬುದನ್ನು ಇಲ್ಲಿ ಸ್ಮರಣೀಯವಾಗಿದೆ.
ಇತಿಹಾಸದಿಂದಲೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕಲ್ಯಾಣ ಕರ್ನಾಟಕ ಭಾಗವು ಪರಕೀಯ ಆಳ್ವಿಕೆ. ಸ್ಥಳೀಯರ ಅಭಿಮಾನ ಶೂನ್ಯತೆ ಜನಮಾನಸದ ಅಸಹಕಾರ ಶೋಷಣೆಗೆ ಒಳಗಾದ ಜನಸಮುದಾಯಕ್ಕೆ ನೆರವಾಗಿ ಬಂದವರು ಲಿಂಗೈಕ್ಯ ಡಾ.ಚೆನ್ನಬಸವ ಪಟ್ಟದೇವರು ಇವರ ಮೊದಲ ಹೆಸರು ಮಹಾರುದ್ರಪ್ಪ, ಬೀದರ ಜಿಲ್ಲೆಯ ಔರಾದ ತಾಲೂಕಿನ ಕಮಲನಗರದಲ್ಲಿ ಬುಳ್ಳಾ ಮನೆತನದ ರಾಜಪ್ಪ- ಸಂಗಮ್ಮ ದಂಪತಿಗಳಿಗೆ ಮಗುವಾಗಿ ಜನಿಸಿದ, ಇವರು ಐದು ವರ್ಷ ತುಂಬುವಾಗಲೇ ತಂದೆ-ತಾಯಿಗಳನ್ನು ಕಳೆದುಕೊಂಡು ಅನಾಥರಾದರು. ಬಾಲ್ಯದ 9 ರಿಂದ 12 ವರ್ಷಗಳವರೆಗೆ ಭಾಲ್ಕಿ ಹಿರೇಮಠ ಶಾಖಾ ಮಠದ ಕಮಲನಗರದಲ್ಲಿ ಅನಾಥ ಬಾಲಕನಾಗಿ ಕಂತಿ ಭಿಕ್ಷೆ ಎತ್ತುತ್ತಾ ಸಮಯ ಕಳೆದರು. ಮಠಗಳ ದನ ಕಾಯ್ದು ಬದುಕು ಸವೆಸುತ್ತಿರುವಾಗ, ಭಾಲ್ಕಿ ಹಿರೇಮಠ ಪೂಜ್ಯರ ಕಣ್ಣಿಗೆ ಬಿದ್ದರು. ತರುವಾಯ ಇವರ ಪ್ರಾಮಾಣಿಕತೆ ನಿಷ್ಠೆಯನ್ನು ಕಂಡು ಭಾಲ್ಕಿ ಹಿರೇಮಠದ ಶ್ರೀ ಸಿದ್ಧ ಬಸವ ಸ್ವಾಮಿಗಳು ದೀಕ್ಷೆ ನೀಡಿ ಸಂಸ್ಕಾರ ಬೋಧಿಸಿ, “ ಚನ್ನಬಸವ” ನೆಂಬ ಹೆಸರಿಟ್ಟು ಸಮೀಪದ ಮುಧೋಳ ಶಿವಲಿಂಗ ಸ್ವಾಮಿಗಳ ಸೇವೆಗೆ ಕಳುಹಿಸಿದರು. ಈ ಹೊತ್ತಿಗಾಗಲೆ “ಚೆನ್ನಬಸವ” ಅಕ್ಷರ ಜ್ಞಾನ ಪಡೆದು ಮರಾಠಿ ಉರ್ದು- ಕನ್ನಡ ಕಲಿಯುತ್ತಿದ್ದರು. ವಿಶೇಷವೆಂದರೇ ಕನ್ನಡ ಭಾಷೆಯನ್ನು ಮೊಡಿ ಲಿಪಿ ಎಂದು ಬರೆಯುತ್ತಿದ್ದರು. ಇವರ ಅಕ್ಷರ ಪ್ರೀತಿಯನ್ನು ಕಂಡ ಶಿವಲಿಂಗ ಮಹಾಸ್ವಾಮಿಗಳು ಔರಾದ (ಬಿ.) ದಲ್ಲಿನ ಕೇದಾರಗಳಂಗಳಪ್ಪನವರ ಕನ್ನಡ ಶಾಲೆಗೆ (ಜಿಲ್ಲೆಯಲ್ಲಿ ಇವರೊಬ್ಬರೆ ಕನ್ನಡ ಕಲಿಸುವವರಿದ್ದರು) ಕಳುಹಿಸಿದರು. ಚೆನ್ನಬಸವ ರವರು ಇಲ್ಲಿಯೇ ಕನ್ನಡದ ಪ್ರಮುಖ ಕಾವ್ಯಗಳಾದ “ರಾಜಶೇಖರ ವಿಳಾಸ, ಶಬರಶಂಕರ ವಿಳಾಸ, ಕರ್ನಾಟಕ ಶಬ್ದ ಮಂಜರಿ, ಬಸವರಾಜ, ವಿಜಯ” ವಿಧ್ಯಾಭ್ಯಾಸ ಮಾಡಿದರು. ಪ್ರಸಾದ (ಊಟ)ಕ್ಕಾಗಿ ವಾರದ ಮನೆ ನಿಗದಿಗೊಂಡಿತ್ತು. ಆದರೆ ಮಠದ ದಾಸೋಹಕ್ಕಾಗಿ ಮನೆಗೆ ಮನೆಗೆ ಕಂತಿ ಭಿಕ್ಷೆಗಾಗಿ ತೆರಳಿ ದಾಸೋಹ ತರಬೇಕಾಗಿತ್ತು. ಅದರಂತೆ ದಿನಾಲೂ ಕಂತಿ ಭಿಕ್ಷೆ ಬೇಡಿಕೊಂಡು ತರುತ್ತಿದ್ದರು.
ಓದುವ ಗೀಳು ಹೊಂದಿದ್ದ ಚೆನ್ನಬಸವರವರು ಮೈಸೂರಿನಿಂದ ಬರುತ್ತಿದ್ದ ಕನ್ನಡ ಪತ್ರಿಕೆ “ಮೈಸೂರು ಸ್ಟಾರ್” ಕಡ್ಡಾಯವಾಗಿ ಓದುತ್ತಿದ್ದರು. ಅದರಲ್ಲಿ ಶಿವಯೋಗ ಮಂದಿರದ ವಿಷಯಗಳು ಓದಿ ಆ ಮಠದ ಬಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದರು. ಆದರೆ ಅಲ್ಲಿಗೆ ಹೋಗುವ ಹಂಬಲವಿದ್ದಾದರೂ ಅದು ಕೈಗೂಡಲಿಲ್ಲ, ಇತ್ತ ಭಾಲ್ಕಿ ಹಿರೇಮಠಕ್ಕೆ ಹೊಸ ಪಟ್ಟಾಧ್ಯಕ್ಷರು ಬೇಕಾಗಿದ್ದರು. ಕಾಸಿರಾಯ ದೇಶಮುಖ, ಶಿವಲಿಂಗಪ್ಪ ಖಂಡ್ರೆ ಇದಕ್ಕಾಗಿ ಯೋಗ್ಯರನ್ನು, ಹುಡುಕುತ್ತಿರುವಾಗ ನಿಷ್ಠೆ, ಕರುಣೆ, ಸಚ್ಚಾರಿತ್ರ್ಯ, ಪ್ರಾಮಾಣಿಕತೆ ಮೈಗೂಡಿಸಿಕೊಂಡು ತಿಳಿವಳಿಕೆಯಿಂದ ಅಪಾರ ಜ್ಜಾನಿಯಾಗಿದ್ದ ಕ್ರಿಯಾಶೀಲ ಚೆನ್ನಬಸವ ರವರು ಇವರೆಲ್ಲರ ಕಣ್ಣಿಗೆ ಬಿದ್ದರೂ, ಜನಾನುರಾಗಿಯಾಗಿ ಬೆಳೆಯುತ್ತಿರುವ ಚನ್ನಬಸವರು ಭಾಲ್ಕಿ ಶ್ರೀ ಮಠಕ್ಕೆ ಸೂಕ್ತ ವ್ಯಕ್ತಿ ಎಂದು ಗಮನಿಸಿ , ದೇಶಮುಖರು ಇವರನ್ನು ತರಬೇತಿಗಾಗಿ ಶಿವಯೋಗ ಮಂದಿರಕ್ಕೆ ಕಳುಹಿಸಿದ್ದರು.
ಮಠದ ಜವಾಬ್ದಾರಿ:
ಹಾನಗಲ್ ಶಿವಯೋಗ ಮಂದಿರದಲ್ಲಿ ತರಬೇತಿಯನ್ನು ಪಡೆದಾದ ಮೇಲೆ “ಚೆನ್ನಬಸವ” “ಪಟ್ಟದೇವರು” ಎಂದು ನಾಮಾಂಕಿತಗೊಂಡರು 1924ರಲ್ಲಿ ನಡೆದ ಭಾಲ್ಕಿ ಹಿರೇಮಠ ಪೀಠಾರೋಹಣದಂದು. ಶಿವಯೋಗ ಮಂದಿರದಲ್ಲಿ ತರಬೇತಿ ನೀಡಿದ ಹಾನಗಲ್ ಕುಮಾರ ಸ್ವಾಮಿಯವರೆ ಬಂದು ತಮ್ಮ ಪ್ರೀತಿಯ ಶಿಷ್ಯನಿಗೆ ಪೀಠಾರೋಹಣ ಮಾಡಿಸಿ “ಮಠಕ್ಕಾಗಿ ನೀನಲ್ಲ ನೀನಗಾಗಿ ಮಠವಿದೆ” ಎಂದು ಆಶೀರ್ವಚನ ನೀಡಿ, ಮಾರ್ಗದರ್ಶನ ಮಾಡಿ, ಈ ಭಾಗದಲ್ಲಿ ಶಿಕ್ಷಣ, ಶರಣ ತತ್ವ, ದಿನ ದಲಿತರ ಸೇವೆಗೆ ಬದುಕು ಮೀಸಲಾಗಿರಲಿ ಎಂದು ಹೇಳಿ ಭಾಲ್ಕಿ ಹಿರೇಮಠ ಸಂಸ್ಥಾನದ ಜವಾಬ್ದಾರಿಗಳನ್ನು ನೀಡಿದರು.
ಆದರೆ ಆ ಸಮಯದಲ್ಲಿ ಮಠದ ವ್ಯವಸ್ಥೆ ಬಹಳಷ್ಟು ಕಠಿಣ ಪರಿಸ್ಥಿತಿಯಲ್ಲಿತ್ತು. ವಿಶೇಷವಾಗಿ ಆರ್ಥಿಕ ಸ್ಥಿತಿ ಬಹಳ ಹದಗೆಟ್ಟು ಹೋಗಿತ್ತು. ಯಾವುದೇ ರೀತಿಯ ಸಂಪನ್ಮೂಲ ಕ್ರೂಢೀಕರಣ ಇರಲಿಲ್ಲ. ಶಾಖಾ ಮಠಗಳು ಸ್ವತಂತ್ರವೆಂಬಂತೆ ಇದ್ದವು.
ಇದನ್ನೇ ಸವಾಲಾಗಿ ಸ್ವೀಕರಿಸಿದ ಶ್ರೀಗಳು ಹಗಲಿರುಳೆನ್ನದೆ ಶ್ರೀಗಳು ಮಠದ ಅಭಿವೃದ್ಧಿಗಾಗಿ ಕಟ್ಟಿಕೊಂಡು ಊರೂರು ಗಲ್ಲಿ ಗಲ್ಲಿ ಸುತ್ತಿ, ಮಠದ ಸರ್ವಾಂಗೀಣ ಅಭಿವೃದ್ಧಿಗಾಗಿ ಮುನ್ನುಡಿ ಬರೆದರು.
ಹೀಗೆ ಮಠದ ಎಲ್ಲಾ ಸಮಸ್ಯೆಗಳನ್ನೂ ಸರಿಪಡಿಸಿ, ಎಲ್ಲಾ ಶಾಖಾ ಮಠಗಳು ಭಾಲ್ಕಿ ಹಿರೇಮಠದ ಅಧೀನಕ್ಕೆ ತಂದರು, ಕಾರೆಮುಂಗಿ, ಮೊರಗಿಯಲ್ಲಿರುವ ಮಠದ ಹೊಲಗಳ ಉಳುಮೆಯನ್ನು ಸ್ವತ: ತಾವೇ ಮಾಡಿದರು. ಕಾಯಕವೇ ಕೈಲಾಸವೆಂದು ಸಾರಿದರು. ದಾಸೋಹಕ್ಕೆ ಹೆಸರುವಾಸಿಯಾದರು. ಸರ್ವರೂ ಸಮಾನರೆಂದು ಸಾರಿದರು. ಹೀಗೆ ನಿರಂತರ ಪರಿಶ್ರಮದಿಂದ ಶ್ರೀ ಮಠವು ಸರ್ವಾಂಗೀಣ ಏಳಿಗೆ ಹೊಂದಲು ಸಾಧ್ಯವಾಯಿತು. ಈ ಎಲ್ಲಾ ಏಳಿಗೆಗೆ ಕಾರಣೀಕರ್ತರು ನಮ್ಮ ಪೂಜ್ಯ ಲಿಂಗೈಕ್ಯ ಶತಾಯುಷಿಗಳಾದ ಪಟ್ಟದೇವರು.
ಇನ್ನು ನಿಜಾಮರ ಕಾಲದಲ್ಲಿ ಅಂದರೆ 1936 ರಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ( ಈಗಿನ ಕಲ್ಯಾಣ ಕರ್ನಾಟಕ ಭಾಗದಲ್ಲಿ )
ಹೊರಗಡೆ ಉರ್ದು ಬೋರ್ಡ ಹಾಕಿ, ಕನ್ನಡವನ್ನು ಕಲಿಸಿ – ಕನ್ನಡ ಭಾಷೆಯನ್ನು ಬೆಳಗಿಸಿದ ಕೀರ್ತಿ ಭಾಲ್ಕಿಯ ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ.
ಕನ್ನಡವನ್ನು ವಿಶ್ವ ಭಾಷೆಗಳಿಗೆ ಸಮಾನವಾಗಿ ಬೆಳೆಸುವ ನಿಟ್ಟಿನಲ್ಲಿ ಇವರ ಅನುಪಮ ಸೇವೆ ಎಂದೆಂದಿಗೂ ಮರೆಯಲಾಗದು.
ಇದಲ್ಲದೇ ಈ ಭಾಗದ ಶರಣರ ಸಮಾಜಿಕ ಸಾಮರಸ್ಯದ ಸೇತುವೆಗಳಾದ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ,ಸಂಗೀತ ಸೇರಿದಂತೆ ಮೊದಲಾದ ಜನಪರ
ಕ್ಷೇತ್ರಗಳಿಗೆ ಹೆಚ್ಚು ಒತ್ತು ಕೊಟ್ಟು ಜನಸಾಮಾನ್ಯರ ದನಿಗೆ ದನಿಯಾಗಿ, ಅವರುಗಳ ಮಾನಸಿಕ ನೆಮ್ಮದಿಗೆ ಕಾರಣೀಭೂತರಾಗಿದ್ದಾರೆ. ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರೇರಣೆದಾಯಕ ಕೆಲಸಗಳನ್ನು ಮಾಡಿದ್ದಾರೆ.
ಸರ್ವರಿಗೂ ಮಾದರಿಯಾಗಿ ಬದುಕಿ, ಇತರರಿಗೆ ಆದರ್ಶ ಚೇತನರಾಗಿ ಬಾಳಿದ ನಮ್ಮ ಹೆಮ್ಮೆಯ ಕಲ್ಯಾಣದ ಪ್ರಜ್ವಲ್ ಜ್ಯೋತಿ ಭಾಲ್ಕಿ ಹಿರೇಮಠ ಸಂಸ್ಥಾನದ ಪರಮ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರು ಎಂದು ಜನಸಾಮಾನ್ಯರು ಅಭಿಮಾನದಿಂದ ಕರೆಯುತ್ತಾರೆ.
ಸಮಾನತೆ ದನಿ ಲಿಂ. ಚನ್ನಬಸವ ಪಟ್ಟದ್ದೇವರು
ಅಂದಿನ ಸಮಾಜದಲ್ಲಿ ದಲಿತರಿಗೆ ಸಮಾನತೆಯ ಭಾಗ್ಯ ಇರಲಿಲ್ಲ ಹಾಗೆ ಮೇಲ್ವರ್ಗದ ಜನರ ಗಲ್ಲಿಗಳಲ್ಲಿ ಕುಡಿಯುವ ನೀರನ್ನು ಉಪಯೋಗಿಸಲು ಸಹ ಬೀಡುತ್ತಿರಲಿಲ್ಲಾ – ಕೊಡುತ್ತಿರಲಿಲ್ಲ. ಹಾಗಾಗಿ ಇದನ್ನು ಕಂಡ ಪಟ್ಟದ್ದೇವರು ಇಂತಹ ಹೀನ ಪದ್ಧತಿಗೆ ತೀಲಾಂಜಲಿ ನೀಡಬೇಕೆಂಬ ಉದ್ದೇಶದಿಂದ
ದಲಿತರನ್ನು ತಮ್ಮ ಮಠಕ್ಕೆ ಕರೆಯಿಸಿ ಮೊಟ್ಟ ಮೊದಲ ಬಾರಿಗೆ (ಶ್ರೀಮಠದ) ಬಾವಿಯ ನೀರನ್ನು (ದಲಿತರ)ಮನೆಗೆ ಒಯ್ಯಲು ಮತ್ತು ಕುಡಿಯಲು ಕೊಟ್ಟರು. ಭಾಲ್ಕಿಯಲ್ಲಿ ಸತತವಾಗಿ ಬರಗಾಲ ಬಂದಾಗ ದಲಿತ ಬಂಧುಗಳಿಗೆ ಮಠದ ಬಾವಿಯ ನೀರು ಒಯ್ಯಲು ತಿಳಿಸಿದರು, ಈ ಮೂಲಕ ಶರಣರ ವಾಣಿಯಂತೆ ನಡೆದರು. ದಲಿತರಿಗೆ ಲಿಂಗಾಯತ ಧರ್ಮದ ಲಿಂಗದೀಕ್ಷೆ ನೀಡಿದರು. ಅವರೊಂದಿಗೆ ಲಿಂಗಾಯತರ ಸಂಬಂಧ ಬೆಳೆಸಲು ಶ್ರಮಿಸಿದರು. ಶ್ರೀಗಳ ಇಷ್ಟಲಿಂಗ ಪೂಜಾ ಸಮಯದಲ್ಲಿ (ಶ್ರೀಗಳ ಕೋಣೆಯಲ್ಲಿ ) ದಲಿತರಿಗೆ ಮುಕ್ತ ಪ್ರವೇಶ ನೀಡಿ ಸಮಾನತೆಯನ್ನು ಮೆರೆದರು. ಸಹ ಪಂಕ್ತಿ ಸಹಭೋಜನ ಮಾಡಿ ಔರ್ದಾಯತೆಯನ್ನು ಸಾರಿದರು.
ಸರ್ವರೂ ಸಮಾನರು ಎನ್ನುವ ಬಸವಣ್ಣನವರ ಆಶಯಗಳನ್ನು ಜಾರಿಗೆ ತಂದ ಕೀರ್ತಿ ಇವರದಾಗಿತ್ತು ಮತ್ತು ದಲಿತರ ಗಲ್ಲಿಗಳಿಗೆ ತೆರಳಿ ಶರಣರ ಸಂದೇಶಗಳನ್ನು ತಿಳಿಸುವ ಕಾರ್ಯ, ಅವರ ಮನೆಗಳಲ್ಲಿ ಪ್ರಸಾದ ಮಾಡುವ ಪದ್ಧತಿ,ಅವರ ಮಕ್ಕಳಿಗೆ ಉಚಿತವಾಗಿ ವಿಧ್ಯಾಭ್ಯಾಸ,
ಉದ್ಯೋಗವಕಾಶ,ಮಹಿಳೆಯರಿಗೆ ಸಮಾನ ಹಕ್ಕಿನ ಆದ್ಯತೆ,ಶ್ರೀಮಠದಲ್ಲಿ ಅವರಿಗೆ ಮುಕ್ತವಾದ ಸ್ವಾತಂತ್ರ್ಯ,ಆತ್ಮಸ್ಥೈರ್ಯ ತುಂಬಿರುವುದು ಸೇರಿ ಇತ್ಯಾದಿ ಹಲವಾರು ಕೆಲಸಗಳನ್ನು ಚಾಚೂ ತಪ್ಪದೇ
ಮಾಡುವ ಮೂಲಕ ಶ್ರೀಮಠದ ಘನತೆಯನ್ನು ಹೆಚ್ಚಿಸಿದ್ದಾರೆ.
ಶ್ರೀಮಠದ ಸಮರ್ಥ ಉತ್ತರಾಧಿಕಾರಿ:
ಕಲ್ಯಾಣ ಕರ್ನಾಟಕದ ಹೆಮ್ಮೆಯ ಭಾಲ್ಕಿ ಹಿರೇಮಠ ಸಂಸ್ಥಾನ ಶ್ರೀ ಮಠ, ಬಸವಾದಿ ಪ್ರಮಥರ ತತ್ವದ ಮಠ, ಇದು ಜನಸಾಮಾನ್ಯರ ಪ್ರೀತಿಯ, ಸಕಲ ಜೀವಾತ್ಮರ ಮಠ. ಬಸವಣ್ಣನವರ ಆದಿಯಾಗಿ ಇಡೀ ಶರಣ ಸಂಕುಲದ ಸಂದೇಶಗಳನ್ನು ಹಾಸಿಕೊಂಡು , ಹೊದ್ದುಕೊಂಡಿರುವಂಥ ವಿಶ್ವಮಠ. ಇವನಾರವ, ಇವನಾರವ ಎನ್ನದೇ, ಎಲ್ಲರೂ ನಮ್ಮವರೆನ್ನುವ ಮೌಲ್ಯಾಧಾರಿತ ಸಮಾನತೆಯ ಸಿದ್ದಾಂತ ಸಾರುವ ಭಾವೈಕ್ಯದ ಮಠ. ಬಡವರಿಗೆ, ದೀನರಿಗೆ,ದಲಿತರಿಗೆ, ಅಂಗವಿಕಲರಿಗೆ, ಅಬಲೆಯರಿಗೆ, ವಿಧವೆಯರು ಅನಾಥರು, ಕಲಾವಿದರಿಗೆ ಆಶ್ರಯ ನೀಡಿರುವಂಥ ಸಮತಾವಾದದ ಶ್ರೇಷ್ಠ ಶ್ರೀ ಮಠ. ಇಂತಹ ವೈಚಾರಿಕ ಮಠದ ಪೀಠಾಧಿಪತಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ನಮ್ಮೆಲ್ಲರ ಪೂಜ್ಯನೀಯ
ಮಾತೃ ಹೃದಯದ ಸೃಜನಶೀಲ, ವೈಚಾರಿಕ ಬರಹಗಾರರು, ಸಾವಿರಾರು ಮಕ್ಕಳಿಗೆ ಬಸವಾದಿ ಶಿವಶರಣರ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ, ಪ್ರಗತಿಪರ ಶಿಕ್ಷಣ ಚಿಂತಕರು. ನೂರಾರು ಅನಾಥ ಮಕ್ಕಳ ಸಂರಕ್ಷಕರು. ಲಿಂಗಾಯತ – ವಚನ ವಿಶ್ವವಿದ್ಯಾಲಯದ ರೂವಾರಿಗಳು, ಆಧುನಿಕ ಅನುಭವ ಮಂಟಪದ ಅಧ್ಯಕ್ಷರು. ಕಲೆ, ಸಾಹಿತ್ಯ, ಶಿಕ್ಷಣ, ಧರ್ಮ, ಸಮಸಮಾಜದ ಏಳಿಗೆ, ವಿಶೇಷವಾಗಿ ದೀನ ದಲಿತರ,ಮಹಿಳೆಯರ ಸಂವರ್ಧನೆಗಾಗಿ ದುಡಿಯುತ್ತಿರುವ ಸಾಮಾಜಿಕ ಸಾಮರಸ್ಯದ ಹರಿಕಾರರು. ಸರ್ವ ಧರ್ಮ ಸಮನ್ವಯತೆಯ ಪ್ರತಿಪಾದಕರು. ಬಸವತತ್ವವನ್ನು ನಾಡಿನಾಚೆಗೂ ಪಸರಿಸಲು, ಪ್ರಚೂರ ಪಡಿಸಲು ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಗಳಲ್ಲಿ ಬಸವ ಪರಿಷತ್ತು ಸ್ಥಾಪಿಸಿದ ಬಸವತತ್ವದ ಸಾಂಸ್ಕೃತಿಕ ರಾಯಭಾರಿಗಳು, ನಾಡಿನ ವಿದ್ವಾಂಸರ ಕೃತಿಗಳನ್ನು ಪ್ರಕಟಿಸಿ,ಅಕ್ಷರ ಪ್ರೀತಿ ಮೆರೆದವರು, ನಮ್ಮ ಕಲ್ಯಾಣ ನಾಡಿನ ಹೆಮ್ಮೆಯ ಕನ್ನಡಮಠದ ಕನ್ನಡ ಜಂಗಮ ಮೂರ್ತಿಗಳಾದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದೇವರು ಎಂದು ಹೆಮ್ಮೆಯಿಂದ ಹೇಳಲು ಬಯಸುತ್ತೇವೆ.
ಶರಣ ಬಂಧುಗಳೇ…
ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರು ಪಟ್ಟಾಧಿಕಾರ ವಹಿಸಿಕೊಂಡ ಕೂಡಲೇ ಮಠದ ಸರ್ವಾಂಗೀಣ ಅಭಿವೃದ್ಧಿ ಸೇರಿ ಎಲ್ಲಾ ಶಾಖಾ ಮಠಗಳ ಜೀರ್ಣೋದ್ಧಾರ ಕಾರ್ಯ ಕೈಗೊಂಡಿದ್ದಾರೆ. ಭಾಲ್ಕಿ ಹಿರೇಮಠ ಸಂಸ್ಥಾನದ ಮಠವನ್ನು ದೇಶಕ್ಕೆ ಮಾದರಿ ಮಠವನ್ನಾಗಿಸುವಲ್ಲಿ ಸತತವಾಗಿ ದುಡಿಯುತ್ತಿದ್ದಾರೆ.
ಶ್ರೀಮಠದ ಶೈಕ್ಷಣಿಕ ಸೇವೆ
ನಿನ್ನೊಡವೆ ಎಂಬುದು ಜ್ಞಾನರತ್ನ , ಜ್ಞಾನವೇ ಶಕ್ತಿ ಎಂಬ ವಾಕ್ಯದಂತೆ ಶ್ರೀ ಮಠವು ಶಿಕ್ಷಣ ರಂಗದಲ್ಲಿ ಮಹತ್ವದ ಕ್ರಾಂತಿಕಾರಿ ಬದಲಾವಣೆ ಮುನ್ನುಡಿ ಬರೆದಿದೆ. ಅಲ್ಪ ಸಮಯದಲ್ಲಿ ಶಿಕ್ಷಣ ಕ್ಷೇತ್ರವನ್ನು ಬೃಹತಾಗಿ ಬೆಳೆಸಿದ್ದು ಪೂಜ್ಯ ಬಸವಲಿಂಗ ಪಟ್ಟದೇವರ ಪರಿಶ್ರಮ. ಬೀದರ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಶಿಕ್ಷಣ ಸಂಸ್ಥೆಗಳು ಸ್ಥಾಪಿಸಿ, ಅಷ್ಟೇ ಏಕೆ ಕಲುಬುರಗಿ ಜಿಲ್ಲೆಯಲ್ಲಿಯೂ ಪ್ರವೇಶ ಮಾಡುವ ಮೂಲಕ ಶಿಕ್ಷಣ ರಂಗದಲ್ಲಿ ಯಶಸ್ವಿಯಾಗಿ ದಾಪುಗಾಲು ಹಾಕಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಮತ್ತು ಮಕ್ಕಳ ಭೌದ್ದಿಕ ಚಿಂತನೆಗೆ ನಿಲುಕುವ ಶಿಕ್ಷಣವನ್ನು ಶ್ರೀ ಮಠದಿಂದ ನೀಡಲಾಗುತ್ತಿದೆ.
1992 ರಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ನ್ನು ಸ್ಥಾಪಿಸಿ, ನಲವತ್ತು ಮಕ್ಕಳಿಂದ ಪ್ರಾಂಭವಾದ ಈ ಸಂಸ್ಥೆ ಈದಿಗ ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಶಿಕ್ಷಕರು ಹಾಗೂ ಸಿಬ್ಬಂದಿಯವರು ಸಧ್ಯ ಶ್ರೀಮಠದ ಸಂಸ್ಥೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣದ ಜೊತೆ ಮಕ್ಕಳಲ್ಲಿ ಬಸವ ಧರ್ಮ ಸಂಸ್ಕಾರ ಸಂಸ್ಕ್ರತಿ ಬೆಳೆಸುವುದು ಈ ಶ್ರೀಮಠದ ವೈಶಿಷ್ಟ್ಯವಾಗಿದೆ.
ಜಾತಿ, ಮತ – ಪಂಥ ಭೇದವಿಲ್ಲದೆ ಶ್ರೀಮಠದಲ್ಲಿ ಸರ್ವರಿಗೂ ಮುಕ್ತ ಮನಸ್ಸಿನಿಂದ ಪ್ರವೇಶವಿದೆ.
ಇಲ್ಲಿ ಡಿಪ್ಲೊಮಾ, ಇಂಜಿನಿಯರಿಂಗ್, ಬಿ.ಎಡ್ , ಡಿ.ಎಡ್, ಮುಂತಾದ ಉನ್ನತ ಶಿಕ್ಷಣ ಪಡೆಯುವರಿಗೆ ಈ ಪ್ರಸಾದ ನಿಲಯ ಆಶ್ರಯ ತಾಣವಾಗಿದೆ. ಸಂಗೀತ ಶಾಲೆಯನ್ನು ಸಹ ಶ್ರೀಗಳು ಆರಂಭಿಸಿದ್ದಾರೆ. ಔರಾದ ತಾಲೂಕಿನ ಖೇಡ ಗ್ರಾಮದಲ್ಲಿ “ ನೀಲಾಂಬಿಕಾ ಅಂಗವಿಕಲ ವಸತಿ ಸಂಗೀತ ಪಾಠಶಾಲೆಯನ್ನು 1994 ರಲ್ಲಿ ಪ್ರಾರಂಭಿಸಿದ್ದಾರೆ. ಇದು ಅನೇಕ ಮಹಿಳೆಯರಿಗೆ ಇದು ಆಶಾಕಿರಣವಾಗಿದೆ. ಅಂಗವಿಕಲರ ಬಾಳಿನ ಬೆಳಕಾಗಿದೆ. ಸಂಗೀತ ಕಲಿತ ಅನೇಕರು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಹೀಗಾಗಿ ಅನೇಕ ಸಂಗೀತಾಸಕ್ತರಿಗೆ ಇದು ಉಪ ಜೀವನಕ್ಕೆ ಆಧಾರ ಸ್ತಂಭವಾಗಿದೆ. ಅದೇ ರೀತಿ
ಅನೈತಿಕದಿಂದಲೋ, ಮತ್ತಾವ ಕರಂದಿಂದಲೋ ಹೆರಿಗೆಯಾದ ಕೂಡಲೇ ತಿಪ್ಪೆಯಲ್ಲಿ ಬೇಲಿಯಲ್ಲಿ , ಚರಂಡಿಯಲ್ಲಿ ಬಿಸಾಡಿದ,ಬಿಸಾಡುವ ಮಕ್ಕಳನ್ನು ಎತ್ತಿಕೊಂಡು ಬಂದು ಸಾಕುತ್ತಿರುವವರು ಪೂಜ್ಯ ಶ್ರೀಗಳು, ನಿಜಕ್ಕೂ ಶ್ರೀಗಳ ಸೇವೆ ದೊಡ್ಡದು. ಶ್ರೀಮಠದ ಅನಾಥ ನಿಲಯದಲ್ಲಿ 150 ಕ್ಕೂ ಹೆಚ್ಚು ಮಕ್ಕಳು ಸಧ್ಯ ಇದ್ದಾರೆ. ಅವರಿಗೆ ಯಾವುದೇ ಕೊರತೆ ಇಲ್ಲದಂತೆ,ನೋಡಿಕೊಂಡು ಶ್ರೀ ಮಠವು ಬರುತ್ತಿದೆ.
ಶ್ರೀಮಠದ ದಾಸೋಹ
“ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯಾ” ಎಂಬ ಬಸವ ವಾಣಿಯಂತೆ ಶ್ರೀ ಮಠವು ದಾಸೋಹವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಮಠಕ್ಕೆ ಯಾರೆ ಬರಲಿ ನಿರಂತರ ದಾಸೋಹ ನಡೆಯುತ್ತದೆ. ಮಠದ ಒಲೆಯಲ್ಲಿ ಬೆಂಕಿ ನಂದುವುದೇ ಇಲ್ಲ . ಸದಾಕಾಲ ನಿರಂತರವಾಗಿ ದಾಸೋಹ ಇದ್ದೇ ಇರುತ್ತದೆ. ಪ್ರತಿ ತಿಂಗಳ ನಡೆಯುವ ಶರಣ ಸಂಗಮ,
ಪೂಜ್ಯರ ಸ್ಮರಣೋತ್ಸವ , ಪೂಜ್ಯರ ಜಯಂತಿಯ ಕಾರ್ಯಕ್ರಮಗಳಲ್ಲಿ ದಾಸೋಹ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗುತ್ತದೆ.
ಶ್ರೀ ಮಠದ ಚನ್ನಬಸವೇಶ್ವರ ಗುರುಕುಲ ವಸತಿ ಶಾಲೆ
ಶ್ರೀಮಠದ ಕನಸಿನ ಕೂಸು ಇದು, ಇಂದು ಕರ್ನಾಟಕ ರಾಜ್ಯದಲ್ಲಿಯೇ ಮಾದರಿ ಶಾಲೆ ಎನಿಸಿಕೊಂಡಿದೆ. ರಾಜ್ಯಮಟ್ಟದ ಅಗ್ರ ಶ್ರೇಣಿಯಲ್ಲಿ ಸ್ಥಾನ ಪಡೆದು ಮುಖ್ಯಮಂತ್ರಿ, ಶಿಕ್ಷಣ ಮಂತ್ರಿಗಳಿಂದ ಪ್ರಶಸ್ತಿ ಪದಕ ಪಡೆದುಕೊಂಡಿದೆ.ಎಲ್.ಕೆ.ಜಿ. ಯಿಂದ ಪಿ.ಯು.ಸಿ. ವರೆಗೆ ಶಿಕ್ಷಣ ನೀಡಲಾಗುತ್ತದೆ. ಕನ್ನಡ ಮಾಧ್ಯಮದಲ್ಲಿದ್ದರೂ ಇಂಗ್ಲಿಷ್ ಕಲಿಯುವಲ್ಲಿ ಹಿಂದೆ ಬಿದ್ದಿಲ್ಲ ಎಂಬುದು ಸಾಬೀತು ಮಾಡಿ ತೋರಿಸಿದೆ. ಇಲ್ಲಿ ಪಾಸಾದ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಯಶಸ್ಸು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಇತರೆ ಸಂಸ್ಥೆಯಲ್ಲಿ ಪ್ರವೇಶ ಪಡೆದು ಅಲ್ಲಿ ಶ್ರೀಮಠದ ವಿದ್ಯಾರ್ಥಿಗಳೇ ಮುಂಚೂಣಿ ಸ್ಥಾನದಲ್ಲಿದ್ದಾರೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಸಂಸ್ಕಾರ ಸಹಿತವಾದ ಈ ಸಂಸ್ಥೆ ಕಲ್ಯಾಣ ನಾಡಿಗೆ ಕೀರ್ತಿ ತರುತ್ತಿದೆ. ಇಂಥ ಆದರ್ಶ ಸಂಸ್ಕಾರಯುವಾದ ವಸತಿ ಶಾಲೆ ಮಾಡಿದ ಶ್ರೀ ಮಠವು ದೇಶಕ್ಕೆ ಮಾದರಿ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.
ಹಾನಗಲ್ ಕುಮಾರೇಶ್ವರ ಉಚಿತ ಪ್ರಸಾದ ನಿಲಯ
ಹಿರೇಮಠ ಸಂಸ್ಥಾನದ ಭಾಲ್ಕಿ ಮಠದಿಂದ
ಬಡವರಿಗೆ ಅನಾಥರಿಗೆ ಆಶ್ರಯ ನೀಡುವ ಪ್ರಸಾದ ನಿಲಯ ಆರಂಭಿಸಲಾಗಿದೆ. ಶ್ರೀಮಠದಲ್ಲಿ ಇರುವ ಎಲ್ಲಾ ಮಕ್ಕಳು ಪೂಜ್ಯರ ದೃಷ್ಟಿಯಲ್ಲಿ ನಿಜವಾದ ಜಂಗಮರು. ಎಡದ ಕೈಯಲ್ಲಿ ಲಿಂಗಪೂಜೆ ಬಲದ ಕೈಯಲ್ಲಿ ಜಂಗಮ ಸೇವೆ ಅಪ್ಪ ಬಸವಗುರುವಿನ ವಾಣಿ ಪ್ರತ್ಯಕ್ಷ್ಯ ಆಚರಣೆ ಮಠದಲ್ಲಿ ಕಾಣಬಹುದು. ಎಲ್ಲಾ ಜಾತಿ, ಮತ-ಪಂಥ ಭೇದವಿಲ್ಲದೆ ಸರ್ವರಿಗೂ ಮಠದಲ್ಲಿ ಪ್ರವೇಶವಿದೆ. ಬಸವ ಸಂಸ್ಕಾರದೊಂದಿಗೆ ಇಲ್ಲಿನ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ದೇಶವಿದೇಶಗಳಲ್ಲಿ ದೊಡ್ಡ ದೊಡ್ಡ ಸ್ಥಾನದಲ್ಲಿದ್ದಾರೆ. ಕೇವಲ ಇಪ್ಪತ್ತೈದು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಪ್ರಸಾದ ನಿಲಯ ಇಂದು ಎಂಟು
ನೂರು ಹೆಚ್ಚು ಮಕ್ಕಳಿಂದ ವಿಸ್ತರಿಸಿದ್ದು ಶ್ರೀಮಠದ ಹೆಗ್ಗಳಿಕೆ ಸಾಕ್ಷಿಯಾಗಿದೆ.
ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯ
ಶ್ರೀಮಠದಿಂದ ಬಡ ಮತ್ತು ಪ್ರತಿಭಾವಂತರಿಗೆ ಬೀದರ ನಗರದಲ್ಲಿ ಪ್ರಸಾದ ನಿಲಯ ಪ್ರಾರಂಭವಾಗಿದೆ. ಇಲ್ಲಿ ಡಿಪ್ಲೊಮಾ, ಇಂಜಿನಿಯರಿಂಗ್, ಬಿ.ಎಡ್ , ಡಿ.ಎಡ್, ಮುಂತಾದ ಉನ್ನತ ಶಿಕ್ಷಣ ದೊರೆಯುತ್ತದೆ.
ಅನೇಕರು ಉನ್ನತ ಶಿಕ್ಷಣ ಪಡೆದು ಶ್ರೀಮಠಕ್ಕೆ ಕೀರ್ತಿ ತರುತ್ತಿದ್ದಾರೆ.
ಶ್ರೀಮಠದಿಂದ ಆಂಧ್ರದಲ್ಲಿ ಕನ್ನಡ ಶಾಲೆಗಳು
ಕನ್ನಡಿಗರು ಬಹುಸಂಖ್ಯೆಯಲ್ಲಿ ಇದ್ದರೂ ಆಂಧ್ರಕ್ಕೆ ಸೇರಿದ ಮೇದಕ ಜಿಲ್ಲೆಯ ನಾರಾಯಖೇಡ ತಾಲೂಕಿನಲ್ಲಿ ಕಾರಾಮುಂಗಿ ಮತ್ತು ಮೋರ್ಗಿಗಳಲ್ಲಿ ಕನ್ನಡ ಶಾಲೆಗಳು ಶ್ರೀಮಠದಿಂದ ಆರಂಭಿಸಲಾಗಿದೆ. ಇದಕ್ಕೆ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ ಪರಿಶ್ರಮವೇ ಕಾರಣ. ನಾಲ್ಕು ನೂರು ಮಕ್ಕಳು ಹೆಚ್ಚು ಮಕ್ಕಳು ಈ ಕನ್ನಡ ಶಾಲೆಯಲ್ಲಿ ಓದುತ್ತಿದ್ದಾರೆ.
ಶ್ರೀಮಠದ ಸಂಗೀತ ಶಾಲೆ
ಸಂಗೀತವೂ ಸರ್ವರ ಮನಸ್ಸಿಗೆ ಹಿತ ನೀಡುವ ಸಾಧನವಾಗಿದೆ. ಈ ನಿಟ್ಟಿನಲ್ಲಿ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಶ್ರೀಮಠದಲ್ಲಿ ಸಂಗೀತ ಶಾಲೆಯನ್ನು ಆರಂಭಿಸಿದ್ದಾರೆ. ಇಲ್ಲಿ ಸಂಗೀತ ಕಲಿತ ಅನೇಕರು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಅನೇಕರು ಸಂಗೀತ ಕ್ಷೇತ್ರದಲ್ಲಿ ಮಿನುಗುತ್ತಿದ್ದಾರೆ.
ಶ್ರೀಮಠ ಪುಸ್ತಕ ಪ್ರಕಟಣೆಗಳು
ಪುಸ್ತಕಗಳು ಮನುಷ್ಯರ ಅತ್ಯುತ್ತಮ ಸಂಗಾತಿಗಳಾಗಿದ್ದು ನಮ್ಮ ಸಂಸ್ಕೃತಿಯನ್ನ ಪಸರಿಸುವ ಮತ್ತು ಜ್ಞಾನವನ್ನು ಹೆಚ್ಚಿಸುವ ಸಾಧನವಾಗಿದೆ. ಮಾಹಿತಿ ಮತ್ತು ತಂತ್ರಜ್ಞಾನದ ಪ್ರಾಬಲ್ಯದಿಂದಾಗಿ ಪುಸ್ತಕ ಸಂಸ್ಕೃತಿ ಮರೆಯಾಗುತ್ತಿದೆ. ಓದುವ ವಲಯ ಕಡಿಮೆಯಾಗುತ್ತಿದೆ. ಹಾಗಾಗಿ ಉತ್ತಮ ಲೇಖಕರಿಂದ ಉತ್ತಮ ವಿಚಾರಗಳನ್ನು ಬರೆಸಿ ಪುಸ್ತಕಗಳನ್ನು ಪ್ರಕಟಿಸುವದರೊಂದಿಗೆ ಅಕ್ಷರ ಸಂಸ್ಕೃತಿಯನ್ನು ಬೆಳೆಸುವ ಸದುದ್ದೇಶದಿಂದ ಪೂಜ್ಯ ಶ್ರೀ. ಡಾ. ಬಸವಲಿಂಗ ಪಟ್ಟದ್ದೆವರು ‘ಬಸವ ಧರ್ಮ ಪ್ರಸಾರ ಸಂಸ್ಥೆ ಹಿರೇಮಠ ಸಂಸ್ಥಾನ, ಭಾಲ್ಕಿ ’ ಎಂಬ ಹೆಸರಿನಲ್ಲಿ ಪ್ರಕಾಶನ ಸಂಸ್ಥೆ ತೆರೆದು ನೂರಾರು ಪುಸ್ತಕಗಳನ್ನು ಶ್ರೀಮಠದಿಂದ ಪ್ರಕಟಿಸುವ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವುದು ಮತ್ತು ಬಸವ ತತ್ವವನ್ನು ಪುಸ್ತಕ ಸಂಸ್ಕೃತಿಯ ಮೂಲಕ ಪ್ರಚಾರ ಮಾಡುತ್ತಿರುವುದು ಶ್ರೀಮಠದ ಐತಿಹಾಸಿಕ ಕಾರ್ಯವಾಗಿದೆ.
ಶ್ರೀಮಠದಿಂದ ಪುಸ್ತಕಗಳ ಮೆರವಣಿಗೆ
ಅಡ್ಡಪಲ್ಲಕ್ಕಿ ,ಉದ್ದ ಪಲ್ಲಕ್ಕಿಗಳಿಗೆ ಆಸ್ಪದ ನೀಡದೇ ವೈಚಾರಿಕ ಚಿಂತನೆಗಳಿಗೆ ಆದ್ಯತೆ ನೀಡುವ ಶ್ರೀ ಮಠವು ಯಾವುದೇ ತರಹದ ಮೆರವಣಿಗೆ ಮಾಡದೆ, ಪುಸ್ತಕಗಳ ಮರವಣಿಗೆಯನ್ನು ಶ್ರೀಮಠದಿಂದ ಅದ್ದೂರಿಯಾಗಿ ಮಾಡಲಾಗುತ್ತಿದೆ. ವಿಶೇಷವಾಗಿ ಹೇಳಬೇಕಾದರೆ ವಚನ ಜಾತ್ರೆ ಕಾರ್ಯಕ್ರಮ ಜನಮನ್ನಣೆಯ ಕಾರ್ಯಕ್ರಮವನ್ನಾಗಿ ಪ್ರತಿವರ್ಷವೂ ಶ್ರಿ ಮಠದಿಂದ ಹಮ್ಮಿಕೊಳ್ಳಲಾಗುತ್ತಿದೆ. ಹಾಗಾಗಿಯೇ
ನಾಡಿನ ಯಾವುದೇ ಸಂಘ – ಸಂಸ್ಥೆ ಮತ್ತು ಸರಕಾರಗಳು ಮಾಡದೇ ಇರುವ ಜನಪರ ಕೆಲಸಗಳು ಭಾಲ್ಕಿಯ ಮಠದಿಂದ ನಿರಂತರವಾಗಿ ನಡೆಯುತ್ತಿದೆ.
ಶ್ರೀಮಠದಿಂದ ಪುಸ್ತಕ ಬಿಡುಗಡೆ
ಕೇವಲ ಆಧ್ಯಾತ್ಮಿಕ, ಸಾಮಾಜಿಕ ಕಾರ್ಯಗಳಿಗೆ ಸೀಮಿತವಾಗದೆ ಸಮಾಜ ಮುಖಿ ಚಿಂತನೆಯುಳ್ಳ ಪುಸ್ತಕ, ಕೃತಿಗಳು ಮಠದಿಂದ ಇಲ್ಲಿಯವರೆಗೆ 150 ಕ್ಕೂ ಹೆಚ್ಚು (ಪುಸ್ತಕಗಳು) ಬಿಡುಗಡೆ ಮಾಡಲಾಗಿದೆ. ಶ್ರೀಮಠದ ಪುಸ್ತಕಗಳ ಮೇಲೆ ಜನ ಸಾಮಾನ್ಯರದು ಅಪಾರವಾದ ಅಭಿಮಾನ ಮತ್ತು ಪ್ರೀತಿ ಇದೆ ಹಾಗಾಗಿ ನಿರಂತರವಾಗಿ ಶ್ರೀಮಠದಿಂದ ಪುಸ್ತಕ ಬಿಡುಗಡೆ ಕಾರ್ಯ ಮಾಡಲಾಗುತ್ತಿದೆ.
ಶ್ರೀಮಠದ ಸಾಹಿತ್ಯ ಸೇವೆ
ಇಷ್ಟಲಿಂಗ ಪೂಜಾ ವಿಧಾನ, ಬಸವಜ್ಯೋತಿ, ಶಿವಶರಣೆಯರ ವಚನಗಳು, ಬಸವ ನೈವಿದ್ಯ, ಶರಣ ಸಾಹಿತ್ಯ ದರ್ಪಣ, ಧರ್ಮಗುರು ಬಸವಣ್ಣ ಮತ್ತು ಅಷ್ಟಾವರಣ, ಬಸವ ವಚನ ಸಿಂಚನ, ಚನ್ನಬಸವ ಪಟ್ಟದೇವರು,ಬಸವತತ್ವಗಳ ಆಚರಣೆ ಮತ್ತು ನಾವು , ಬಸವ ಚಿಂತನ, ಬಸವ ಸಂತತಿಗಳು, ಹೀಗೆ ಹತ್ತು
ಹಲವು ಪುಸ್ತಕಗಳನ್ನು ಶ್ರೀಮಠದಿಂದ ಪ್ರಕಟಣೆಗೊಂಡಿವೆ. ಪುಸ್ತಕಗಳು ಮನುಷ್ಯರ ಅತ್ಯುತ್ತಮ ಸಂಗಾತಿಗಳಾಗಿದ್ದು ನಮ್ಮ ಸಂಸ್ಕೃತಿಯನ್ನು ಪಸರಿಸುವ ಮತ್ತು ಜ್ಞಾನವನ್ನು ಹೆಚ್ಚಿಸುವ ಸಾಧನವಾಗಿದೆ ಎಂದು ಯಾವಾಗಲೂ ಇಂದಿನ ಶ್ರೀಗಳು ಪ್ರತಿಪಾದಿಸುತ್ತಾರೆ. ಮಾಹಿತಿ ಮತ್ತು ತಂತ್ರಜ್ಞಾನದ ಪ್ರಾಬಲ್ಯದಿಂದಾಗಿ ಪುಸ್ತಕ ಸಂಸ್ಕೃತಿ ಮರೆಯಾಗುತ್ತಿದೆ. ಓದುವ ವಲಯ ಕಡಿಮೆಯಾಗುತ್ತಿದೆ. ಹಾಗಾಗಿ ಉತ್ತಮ ಲೇಖಕರಿಂದ ಉತ್ತಮ ವಿಚಾರಗಳನ್ನು ಬರೆಸಿ ಪುಸ್ತಕಗಳನ್ನು ಪ್ರಕಟಿಸುವದರೊಂದಿಗೆ ಅಕ್ಷರ ಸಂಸ್ಕೃತಿಯನ್ನು ಬೆಳೆಸುವ ಸದುದ್ದೇಶದಿಂದ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರು ಮುಂದಾಗಿ, ಬಸವ ಧರ್ಮ ಪ್ರಸಾರ ಸಂಸ್ಥೆ ಹಿರೇಮಠ ಸಂಸ್ಥಾನ ಭಾಲ್ಕಿ ಎಂಬ ಹೆಸರಿನಲ್ಲಿ ಪ್ರಕಾಶನ ಸಂಸ್ಥೆ ತೆರೆದು ನೂರಾರು ಪುಸ್ತಕಗಳನ್ನು ಶ್ರೀಮಠದಿಂದ ಪ್ರಕಟಿಸಿದ್ದಾರೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವುದು ಮತ್ತು ಬಸವ ತತ್ವವನ್ನು ಪುಸ್ತಕ ಸಂಸ್ಕೃತಿಯ ಮೂಲಕ ಪ್ರಚಾರ ಮಾಡುತ್ತಿರುವುದು ಶ್ರೀಗಳ ಗಮನಾರ್ಹ ಸಾಧನೆಯಾಗಿದೆ. ಅಂತೆಯೇ ಇಂದಿನ
ಆಧುನಿಕತೆಯಿಂದ ಕೊಡಿದ ಮಕ್ಕಳು ನಮ್ಮ ಸಂಸ್ಕ್ರತಿಯಿಂದ ವಿಮುಖರಾಗುತ್ತಿದ್ದಾರೆ.ಅದಕ್ಕಾಗಿ ಅವರಲ್ಲಿ ಓದಿನ ಆಸಕ್ತಿ, ಬಸವ ತತ್ವದ ಅರಿವು ಮುಡಿಸುವುದಕ್ಕಾಗಿ ಶ್ರೀಮಠದ ಮುಖ್ಯ ಧ್ಯೇಯವಾಗಿದೆ. ಅದೇ ರೀತಿ ಸಾಹಿತ್ಯ, ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಹಿರೇಮಠ ಸಂಸ್ಥಾನ ಭಾಲ್ಕಿ ವತಿಯಿಂದ ಪ್ರತಿ ವರ್ಷ ಸನ್ಮಾನಿಸಿ ಪ್ರೋತ್ಸಾಹಿಸಲಾಗುತ್ತಿದೆ. ಅಂತಹವರಿಗೆ ಡಾ. ಚನ್ನಬಸವ ಪಟ್ಟದೇವರ ಪ್ರಶಸ್ತಿ ಪತ್ರ ರೂ.10,000/- ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.
ಮಠದ ಕಿರಿಯ ಪೀಠಾಧಿಪತಿಯಾಗಿ
ಪೂಜ್ಯ ಬಸವಲಿಂಗ ಪಟ್ಟದೇವರಿಗೆ ಆಶ್ರಯವಾಗಿ ಸದ್ಯ ಪೂಜ್ಯ ಗುರು ಬಸವ ಪಟ್ಟದ್ದೇವರು ಕಿರಿಯ ಪೀಠಾಧಿಪತಿಗಳಾಗಿ ಜವಾಬ್ದಾರಿ ಹೊತ್ತುಕೊಂಡು ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಹತ್ತು ಹಲವು ವಿನೂತನ ಅಭಿವೃದ್ಧಿಯ ಕಲ್ಯಾಣ ಕಾರ್ಯಗಳನ್ನ ಶ್ರೀಮಠದಿಂದ ಮಾಡಿಕೊಂಡು ಬರುತ್ತಿದ್ದಾರೆ. ಶರಣರ ವೈಜ್ಞಾನಿಕ ಮತ್ತು ವೈಚಾರಿಕ ತತ್ತ್ವಗಳು ಬಿತ್ತುವ ಕೆಲಸ ಸಹ ಚಾಚೂ ತಪ್ಪದೇ ನಿರ್ವಹಣೆ ಮಾಡುಕೊಂಡು ಬರುತ್ತಿರುವುದು ಕಾಣುತ್ತಿದ್ದೇವೆ. ಕೆಟ್ಟ ಚಟಗಳಿಗೆ ದಾಸರಾದ ಎಷ್ಟೋ ವ್ಯಕ್ತಿಗಳನ್ನು ತಿದ್ದಿ ತೀಡಿ ಸರಿದಾರಿಗೆ ತಂದು ಅವರ ನೆಮ್ಮದಿ ಜೀವನಕ್ಕೆ ಕಾರಣಿಕರ್ತರು ಪೂಜ್ಯ ಶ್ರೀಗಳು. ಸ್ವಚ್ಛತಾ ಆಂದೋಲನಗಳನ್ನು ಹಮ್ಮಿಕೊಂಡು ಅನೇಕ ಕಾರ್ಯಕ್ರಮಗಳು ಮಠದಿಂದ ಮಾಡುತ್ತಿದ್ದಾರೆ.
ಅದೇ ರೀತಿಯಿಂದ ಬಸವಾದಿ ಶರಣರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಿಂಗಳಿಗೊಮ್ಮೆ ಪ್ರತಿಯೊಬ್ಬ ಶರಣರ ಹೆಸರಿನಲ್ಲಿ ವಿಚಾರ ಮತ್ತು ಚಿಂತನಾ ಗೋಷ್ಠಿಗಳನ್ನು ಶ್ರೀಮಠದಲ್ಲಿ ಹಮ್ಮಿಕೊಂಡು ವಚನ ಸಾಹಿತ್ಯದ ರಸದೌತಣ ಬಡಿಸುವ ಕೆಲಸ ಮಾಡುತ್ತಿದ್ದಾರೆ.
ಶ್ರೀಮಠದ ಹೃದಯವಂತ ಶ್ರೀಗಳು
ಮಠಗಳೆಂದರೆ ಕೇವಲ ಧರ್ಮ ಪ್ರಚಾರಕ್ಕೆ ಮೀಸಲು ಎನ್ನುವ ಇಂದಿನ ದಿನಗಳಲ್ಲಿ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರು ಹಾಗೂ ಗುರು ಬಸವ ಪಟ್ಟದ್ದೇವರು ಒಟ್ಟಿಗೆ ಸಾಹಿತ್ಯಿಕ,ಸಾಮಾಜಿಕ,ಶೈಕ್ಷಣಿಕ, ಸಾಂಸ್ಕೃತಿಕವಾಗಿ ಹಾಗೂ ಕನ್ನಡ, ನಾಡು- ನುಡಿ,ಭಾಷಾ ಬೆಳವಣಿಗೆಗಾಗಿ ಜೊತೆಗೆ
ಕನ್ನಡ ಭಾಷೆ ಗಟ್ಟಿಯಾಗಿ – ಉಳಿಯಲು ಮತ್ತು ಬೆಳೆಯಲು ಶ್ರಮಿಸುತ್ತಿದ್ದಾರೆ. ಧರ್ಮ ಸೇವೆಯ ಜೊತೆ ಜೊತೆಗೆ ನೂರಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಣೆ ಮಾಡಿದ್ದಾರೆ. ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಕೆಲಸ ಮಾಡುತ್ತಿದ್ದಾರೆ. ಶರಣ ಸಂಸ್ಕೃತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಕಾಯಕದಲ್ಲಿ ನಿರಂತರಾಗಿದ್ದಾರೆ. ಕಲ್ಯಾಣ ಕರ್ನಾಟಕದ ಸಮಗ್ರಹ,ಸರ್ವಾಂಗೀಣ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ.
ಪೂಜ್ಯ ಶ್ರೀ ಬಸವಲಿಂಗ ಪಟ್ಟದೇವರು ಕನ್ನಡ ಜಂಗಮರಾಗಿ, ಬಸವ ತತ್ವ ಪ್ರಸಾರಕರಾಗಿ, ಸಮಾಜ ಸೇವೆಕರಾಗಿ, ಶೈಕ್ಷಣಿಕ ಅಭಿವೃದ್ಧಿ ಹರಿಕಾರರಾಗಿ , ಕನ್ನಡತ್ವದ ವಿಕಾಸ ಪುರುಷರಾಗಿ, ಬಡವರ,ದೀನ, ದುರ್ಬಲರ, ಮಹಿಳೆಯರ ಪರ ನಿಂತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ.
ಶ್ರೀಮಠದಿಂದ ಅಂತರ್ಜಾತಿ ವಿವಾಹವೇರ್ಪಡಿಸಿ ಸಾಮಾಜಿಕ ಸಾಮರಸ್ಯ ಈ ನಾಡಿನಲ್ಲಿ ಬಿತ್ತಿ, ರಾಷ್ಟ್ರೀಯ ಭಾವೈಕ್ಯತೆ ಗಟ್ಟಿಗೊಳಿಸಲಾಗುತ್ತಿದೆ.
ಕೊನೆಯ ಮಾತು
ಬಸವಣ್ಣನವರ ಕರ್ಮಭೂಮಿ, ಶರಣರು ನಡೆದಾಡಿದ ಪಾವನನೆಲ.ಭಾವೈಕ್ಯತೆಯ, ಸೌಹಾರ್ದ, ಸಹೋದರತೆ ,ಸಹಬಾಳ್ವೆ ,ಸಮಾನತೆಗಾಗಿ ಶ್ರಮಿಸಿದ ಕಾಯಕ ತತ್ವದ ಭೊಮಿ, ಕಲ್ಯಾಣ ನಾಡಿನ ಮುಕುಟವೆಂದೇ ಪ್ರಸಿದ್ಧಿ ಪಡೆದು ಜನಸಾಮಾನ್ಯರ ಪ್ರೀತಿಯ ಶ್ರೀ ಮಠವೆಂದೆ ಖ್ಯಾತಿ ಪಡೆದ ಮಠವೇ ಭಾಲ್ಕಿ ಹಿರೇಮಠ ಸಂಸ್ಥಾನ ಮಠ.
ಶ್ರೀ ಮಠವು ಜಾತಿ ಮತ ಪಂಥಗಳ ಬೇದ ಭಾವನೆಗಳು ಹೊಡೆದು ಹಾಕಿ ಕಾಯಕ ಸಿದ್ಧಾಂತದ ನೀತಿಗಳು, ಬಸವಾದಿ ಪ್ರಮಥರ ವೈಚಾರಿಕ ಚಿಂತನೆಗಳು ಜನಸಾಮಾನ್ಯರಲ್ಲಿ ನಿರಂತರವಾಗಿ ಬಿತ್ತುವ ಕೆಲಸ ಮಾಡುತ್ತಿದೆ. ಹೀಗೆ ವಿವಿಧ ಹಂತಗಳಲ್ಲಿ ಕನ್ನಡವನ್ನು ಕಟ್ಟುವ ಕೆಲಸ ನಿರಂತರವಾಗಿ ಮಠದಿಂದ ಮಾಡಿಕೊಂಡು ಬರಲಾಗುತ್ತಿದೆ. ಅದೇ ರೀತಿ
ಶ್ರೀ ಮಠವು ಶತಮಾನಗಳಿಂದ ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಲ್ಯಾಣ ಕರ್ನಾಟಕ ಭಾಗದ ಹಾಗೂ ಕರುನಾಡಿನ ಸರ್ವಾಂಗೀಣ, ಸರ್ವೊತ್ತಮ
ಅಭಿವೃದ್ಧಿಗಾಗಿ ಹಗಲಿರುಳು ಎನ್ನದೆ ದುಡಿಯುತ್ತಿದೆ. ಅದಕ್ಕಾಗಿ ಇಂದು ದೇಶದ ಹೆಮ್ಮೆಯ ಮಠವಾಗಿ ಬೆಳಗುತ್ತಿದೆ.

- ಸಂಗಮೇಶ ಎನ್ ಜವಾದಿ
ಬರಹಗಾರರು, ಚಿಂತಕರು, ಹೋರಾಟಗಾರರು.
ಬೀದರ ಜಿಲ್ಲೆ.
9663809340.
