ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

ಸೂರ್ಯಮಾನ ಪಂಚಾಂಗದಂತೆ, ಪ್ರತಿ ವರ್ಷ ಧನುರ್ ರಾಶಿಯಿಂದ ಮಕರ ರಾಶಿಗೆ ಸೂರ್ಯ ಚಲಿಸುವ ಬದಲಾವಣೆ ಪರ್ವವಾದ ಮಕರ ಸಂಕ್ರಾಂತಿ ಜನವರಿ ೧೪.
ಸಂಕ್ರಾಂತಿ ಹಬ್ಬ, ಸತ್ವ ಶಕ್ತಿಗಳ ಸಂಗಮ.
ಎಳ್ಳು ಬೆಲ್ಲ ತರುತ್ತದೆ ಚೈತನ್ಯ, ಚಳಿಯಿಂದ ವಿರಾಮ.
ಸುಗ್ಗಿ ಬಂದು ಸಮೃದ್ಧಿ ತರಲು, ರೈತರ ಮನಸಿಗೆ ಆರಾಮ.
ನಡುಗಿಪ ಚಳಿಯಿಂದ ಈಗ ಕುದಿವ ಬೇಗೆಗೆ ಓನಾಮ.
ಹೊಸ ಕಬ್ಬು, ಕಡಲೇಕಾಯಿ, ಹೊಸ ಭತ್ತ, ಎಳ್ಳು, ಎಲ್ಲಾ ಬಂದಿರುವಾಗ, ಇಡೀ ಪ್ರಕೃತಿಯಲ್ಲಿ ಚೈತನ್ಯ, ಉತ್ಸಾಹ. ಚಳಿಯಿಂದ ಮೈಕೈ ಬಿರಿತ ಕಂಡವರಿಗೆ, ಎಣ್ಣೆಸ್ನಾನದಿಂದ ಹಿತ. ತಲೆ, ಮೈಗೆ, ಎಣ್ಣೆ ಹಚ್ಚಿದಾಗ ಮೈಗೂ ಬಿಸಿ, ಆರಾಮ

ಪೌರಾಣಿಕ ಹಿನ್ನೆಲೆ:
ಪಂಚ ಪಾಂಡವರು ಹಾಗೂ ತನ್ನ ಕುಟುಂಬದ ಶ್ರೇಯಸ್ಸಿಗಾಗಿ, ಪ್ರತಿ ದಿನ ದ್ರೌಪದಿ ಸೂರ್ಯನನ್ನು ಪ್ರಾರ್ಥಿಸುತ್ತಿದ್ದ ಮಂತ್ರ ಓಂ ಹ್ರೀಂ ಸೂರ್ಯಾಯ ನಮಃ ಓಂ. ಈ ಸಂಕ್ರಾಂತಿಯಂದು ೧೦೮ ಬಾರಿ ಈ ಸೂರ್ಯಮಂತ್ರ ಜಪಿಸಬೇಕು. ಮಕರ ಸಂಕ್ರಾಂತಿಯಿಂದ ಆರಂಭವಾದ ಉತ್ತರಾಯಣ ಕಾಲದ ೬ ತಿಂಗಳು ದೇವತೆಗಳ ದಿನ. ಎಲ್ಲಾ ಶುಭ ಕಾರ್ಯಗಳಿಗೆ ಆದರ್ಶ.

ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಸೂರ್ಯೋಪಾಸನೆ:
ನಮ್ಮಲ್ಲಿ ಆತ್ಮ ಸ್ವರೂಪನಾಗಿರುವ ಪರಮಾತ್ಮ, ಆಕಾಶದಲ್ಲಿ ಪ್ರಜ್ವಲವಾಗಿ ಮಿನುಗುವ ಸೂರ್ಯನಾಗಿದ್ದಾನೆ. ನಮ್ಮ ಆತ್ಮದ ಬಗ್ಗೆ ಅರಿಯಲು, ಸೂರ್ಯನ ಉಪಾಸನೆ ಅನಿವಾರ್ಯ. ಈ ಹಬ್ಬದ ಸಂದೇಶ – ನಾವು ಮುಳುಗಿರುವ ಅಜ್ಞಾನದ ಭ್ರಮೆಯಿಂದ ಹೊರಬಂದು, ನಮ್ಮಲ್ಲಿರುವ ಜ್ಞಾನ ಜ್ಯೋತಿಯನ್ನು ಹಚ್ಚಿ ಸಂತಸದಿಂದ ಅದು ಚೆನ್ನಾಗಿ ಹೆಚ್ಚು ಪ್ರಕಾಶಮಾನವಾಗಿ ಬೆಳಗುವಂತೆ ಮಾಡಬೇಕಾಗಿದೆ. ಈ ಮೂಲಕ ಪರಿಶುದ್ಧತೆ, ಜ್ಞಾನ ಹಾಗೂ ಬುದ್ಧಿಗಳನ್ನು ಹೆಚ್ಚಿಸಿಕೊಳ್ಳಬೇಕು.
ಸೂರ್ಯನ ಉಪಾಸನಾ ಮಂತ್ರಗಳು
ಜಪ ಕುಸುಮ ಸಂಕಷಂ ಕಾಶ್ಯಪೇಯಂ ಮಹಾದ್ಯುತಿಂ
ತಮೋರಿಮ್ ಸರ್ವ ಪಾಪಧನಂ ಪ್ರಣತೋಮಿ ದಿವಾಕರಮ್ ಶಾರೀರಿಕ, ಭಾವನಾತ್ಮಕ, ಆಧ್ಯಾತ್ಮಿಕ ಈ ಮೂರೂ ಮಟ್ಟಗಳಲ್ಲಿ ಮೇಲೇರಲು, ಸೂರ್ಯೋದಯಕ್ಕೆ ಮೊದಲು ಎದ್ದು ಸ್ನಾನ ಮಾಡಿ, ತಾಮ್ರದ ಬಿಂದಿಗೆಯಲ್ಲಿಯ ನೀರು ಹಾಗೂ ಹೂಗಳಿಂದ ಎರಡೂ ಕೈಗಳಿಂದ ಅರ್ಪಿಸುತ್ತಾ ಗಾಯತ್ರೀ ಮಂತ್ರ ಜಪಿಸಬೇಕು. ಋಗ್ವೇದದಲ್ಲಿಯ ಈ ಶ್ಲೋಕ ಸೂರ್ಯನನ್ನು ಪ್ರಾರ್ಥಿಸುವುದಾಗಿದೆ.
ಓಂ ಭೂರ್ಬುವಸ್ವಃ ತತ್ಸ ವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ
ಧೀಯೋ ಯೋನಃ ಪ್ರಚೋದಯಾತ್
ಓ ದೇವರೇ, ಜೀವರಕ್ಷಕನೇ, ಜೀವನದ ಆಧಾರವೇ, ಯಾರು ಸ್ವಯಂಭೂವೋ, ಎಲ್ಲಾ ನೋವುಗಳಿಂದ ಮುಕ್ತನೋ, ಯಾರ ಸಂಪರ್ಕದಿಂದ ಆತ್ಮ ಎಲ್ಲಾ ತೊಂದರೆಗಳೂ ದೂರವಾಗುವಾವೋ, ಯಾರು ಬ್ರಹ್ಮಾಂಡ ಸೃಷ್ಟಿಯನ್ನೆಲ್ಲಾ ವ್ಯಾಪಿಸಿರುವನೋ, ಯಾರು ಎಲ್ಲರನ್ನು ಕಾಯುವನೋ, ಸೃಷ್ಟಿಕರ್ತನಾಗಿ ಇಡೀ ವಿಶ್ವಕ್ಕೇ ಶಕ್ತಿ ಕೊಡುವನೋ, ಸಂತಸ ನೀಡುವನೋ, ಯಾರು ಒಪ್ಪಿಕೊಳ್ಳಲು ಅರ್ಹನಾಗಿರುವನೋ, ಅತ್ಯಂತ ಶ್ರೇಷ್ಟನೂ, ಪರಿಶುದ್ಧನೂ, ನಮ್ಮನ್ನು ಪರಿಶುದ್ಧಗೊಳಿಸಬಲ್ಲವನೂ, ಆದ ಆ ದೇವರನ್ನು ನಾವೆಲ್ಲಾ ಅಪ್ಪಿಕೊಳ್ಳೋಣ. ಇದರಿಂದ ನಮ್ಮ ಮಾನಸಿಕ ಚಟುವಟಿಕೆಗಳನ್ನು ಆತ ಸರಿಯಾದ ದಿಕ್ಕಿನಲ್ಲಿ ನಿರ್ದೇಶಿಸಲಿ.

ರಾಮಾಯಣದಲ್ಲಿ:
ವಾಲ್ಮೀಕಿ ರಾಮಾಯಣದಲ್ಲಿ, ಸೂರ್ಯನಿಗೆ ಸಮರ್ಪಿಸಲಾದ, ಆದಿತ್ಯ ಹೃದಯದ ೩೧ ಶ್ಲೋಕಗಳಿವೆ. ರಾಮಾಯಣದ ಯುದ್ಧಕಾಂಡದ ೧೦೭ನೇ ಅಧ್ಯಾಯದಲ್ಲಿ ರಾವಣನ ವಿರುದ್ಧ ಯುದ್ಧ ಮಾಡಹೊರಟ ಶ್ರೀ ರಾಮನಿಗೆ, ಶಕ್ತಿ ಹಾಗೂ ಚೈತನ್ಯ ತುಂಬಲು, ಅಗಸ್ತ್ಯ ಖುಷಿಗಳು ನಿವೇದಿಸಿದರಂತೆ. ಇದರ ಐದನೇ ಶ್ಲೋಕದ, ಸರ್ವಮಂಗಳ ಮಾಂಗಲ್ಯಂ ಸರ್ವ ಪಾಪ ಪ್ರನಾಶನಂ ಚಿಂತಾ ಶೋಕ ಪ್ರಶಮನಂ ಆಯುರ್ವರ್ಧನಮುತ್ತಮಮ್ ಈ ಮಂತ್ರ ಪಠಣದಿಂದ ಸರ್ವಪಾಪಗಳೂ ನಾಶವಾಗುತ್ತವೆ. ಎಲ್ಲ ಸಂದೇಹಗಳು ದೂರವಾಗುತ್ತವೆ. ಚಿಂತೆ ದುಃಖ, ಆತಂಕ, ಕೋಪ ಓಡುತ್ತವೆ,. ಆಯಸ್ಸು ಹೆಚ್ಚುತ್ತದೆ.

ಹಬ್ಬದ ವೈಶಿಷ್ಠ್ಯಗಳು:
ಸಂಕ್ರಾಂತಿಯ ವೈಶಿಷ್ಟ್ಯವೆಂದರೆ ಎಳ್ಳು – ಬೆಲ್ಲದ ಉಂಡೆಗಳು, ಮಕರ ಸಂಕ್ರಾಂತಿಯ ಕಿಚಡಿ, ಕಾಳುಗಳು ಹಾಗೂ ಬಟ್ಟೆಗಳ ದಾನ, ಪವಿತ್ರ ಕ್ಷೇತ್ರಗಳಲ್ಲಿಯ ನದಿ ಸ್ನಾನ, ಸೂರ್ಯನ ಪೂಜೆ, ಮಕರ ಜ್ಯೋತಿದರ್ಶನ ಹಾಗೂ ಪ್ರತೀ ವರ್ಷ ಜನವರಿ ೧೪ರಂದು ಅಹಮದಾಬಾದ್ನಲ್ಲಿ ನಡೆಯುವ ಅಂತರ್ರಾಷ್ಟ್ರೀಯ ಗಾಳಿಪಟ ಹಾರಿಸುವ ಸ್ವರ್ಧೆ.

ಕರ್ನಾಟಕದಲ್ಲಿ ಆಚರಣೆ :
ಕುಟುಂಬದಲ್ಲಿ ಪಿತೃಗಳಿಗೆ ತರ್ಪಣ ನೀಡುವ ಕಾಲವಿದು. ಅಂದು ಸ್ನಾನ ಮಾಡಲು, ಮೈ ಉಜ್ಜಲು, ಹವನ ಹಾಗೂ ತರ್ಪಣಗಳಿಗೆ ಎಳ್ಳನ್ನೇ ಬಳಸುತ್ತಾರೆ. ಇದು ಎಲ್ಲ ಪಾಪಗಳನ್ನೂ ತೊಳೆಯುವದೆಂಬ ನಂಬಿಕೆ. ಹಬ್ಬದಲ್ಲಿ ಕುಟುಂಬದವರೆಲ್ಲಾ ಹೊಸಬಟ್ಟೆ ಧರಿಸಿ, ಎಳ್ಳು – ಬೆಲ್ಲ ತಿಂದು, ಹಿರಿಯರಿಗೆ ಕಿರಿಯರು ನಮಸ್ಕರಿಸಿ ಆಶೀರ್ವಾದ ಪಡೆಯುವುದು, ಸಂಜೆ ಮಕ್ಕಳ ತಲೆ ಮೇಲೆ ಎಲಚಿ ಹಣ್ಣು ಎರೆದು ಆರತಿ ಮಾಡುವುದು,. ಕರ್ನಾಟಕದ ಪದ್ಧತಿ. ಪುಟ್ಟ ಹುಡುಗಿಯರು ಆಕರ್ಷಕ ಬಟ್ಟೆಗಳನ್ನು ಧರಿಸಿ, ಬಟ್ಟೆ ಮುಚ್ಚಿದ ತಟ್ಟೆಯಲ್ಲಿ, ದೇಶಿ ಎಳ್ಳು, ಬೆಲ್ಲ, ಕಬ್ಬು, ಬಾಳೆಹಣ್ಣು, ಬಿಳಿ ಅಥವಾ ಬಣ್ಣದ ಸಕ್ಕರೆ ಅಚ್ಚು ತಂದು, ತಮ್ಮ ಇಡೀ ಬೀದಿಯ, ಊರಿನ, ಆತ್ಮೀಯರು, ಪರಿಚಿತರಿಗೆ ಎಳ್ಳು ಬೀರುವ ಸಂಭ್ರಮದಲ್ಲಿ, ಸರಸರ ಓಡಾಡುತ್ತಾರೆ. ಬಿಳಿ ಎಳ್ಳನ್ನು ಹುರಿದು, ಹುರಿದ ಕಡಲೆಕಾಯಿ, ಹುರಿಗಡಲೆ, ಆಕರ್ಷಕವಾಗಿ ಮಾಡಿದ ಕೊಬ್ಬರಿ ಚೂರು, ಬೆಲ್ಲದ ಚೂರು, ಎಲ್ಲ ಸೇರಿಸಿದ, ಎಳ್ಳು – ಬೆಲ್ಲ ತಿನ್ನಲು ಬಲುರುಚಿ. ಮೈಸೂರು, ಬೆಂಗಳೂರು ಭಾಗದಲ್ಲಿ ಈ ಎಳ್ಳನ್ನು ಮಿತ್ರರು, ಬಂಧುಗಳು ಪರಸ್ಪರ ವಿನಿಮಯ ಮಾಡಿಕೊಂಡು, ಎಳ್ಳು- ಬೆಲ್ಲ ತಗೊಂಡು ಒಳ್ಳೆಯವರಾಗಿ ಒಳ್ಳೆ ಮಾತಾಡೋಣ ಅಂತಾರೆ. ಉತ್ತರ ಕನಾಟಕದಲ್ಲಿ ಕುಸುರೆಳ್ಳು ವಿನಿಮಯ. ಇಲ್ಲಿ ಹೊಸದಾಗಿ ಮದುವೆಯಾದಾಕೆ ಮದುವೆಯಾದ ವರ್ಷದಿಂದ, ೫ ವರ್ಷ, ೫ ಮುತ್ತೈದೆಯರಿಗೆ ಬಾಳೆಹಣ್ಣುಗಳನ್ನು, ವರ್ಷದಿಂದ ವರ್ಷಕ್ಕೆ, ೫ರ ಮಗ್ಗಿ ರೀತಿ ಗುಣಿಸುತ್ತಾ ಕೊಡುವ ಪದ್ಧತಿಯಿದೆ. ಮಹಿಳೆಯರ ರಂಗೋಲಿ ನೈಪುಣ್ಯತೆ, ಗಾಳೀಪಟ ಸ್ವರ್ಧೆ, ಆಕರ್ಷಕವಾಗಿ ಸಿಂಗರಿಸಿದ ಎತ್ತು ದನಗಳು, ಅವುಗಳಿಗೆ ಕಿಚ್ಚು ಹಾಯಿಸುವ ಗ್ರಾಮೀಣ ರೂಢಿ, ಎಲ್ಲ ಈ ಹಬ್ಬದ ಆಚರಣೆಗಳು.

ವಿವಿಧ ರಾಜ್ಯಗಳಲ್ಲಿ:
ಗುಜರಾತಿನಲ್ಲಿ ಉತ್ತರಾಯಣ, ಹರಿಯಾಣ, ಪಂಜಾಬ್ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಮಾಘಿ, ಆಸ್ಲಾಂನಲ್ಲಿ ಬೋಗಾಲಿ ಬಿಹು, ಕಾಶ್ಮೀರದಲ್ಲಿ ಶಿಷುರ್ ಸಾಯೆನ್ ಕ್ರಾತ್, ಉತ್ತರಪ್ರದೇಶ ಹಾಗೂ ಪಶ್ಚಿಮ ಬಿಹಾರದಲ್ಲಿ ಖಿಚಡಿ ಎಂಬ ಹೆಸರಿನಲ್ಲಿ, ಈ ಹಬ್ಬದ ಆಚರಣೆಯಾದರೆ ಆಂಧ್ರಪ್ರದೇಶದಲ್ಲಿ ಭೋಗಿ ಮಕರಸಂಕ್ರಾಂತಿ ಕನುಮಾ ಹಾಗೂ ಮುಕ್ಕನುಮಾ ಎಂಬ ೪ ದಿನಗಳ ಆಚರಣೆ. ತಮಿಳುನಾಡಿನಲ್ಲೂ ಭೋಗಿ, ತಾಯ್ ಪೊಂಗಲ್, ಮಾಟ್ಟುಪೊಂಗಲ್ ಹಾಗೂ ಕಾನುಮ್ ಪೊಂಗಲ್ ಎಂಬ ೪ ದಿನಗಳ ಆಚರಣೆ. ಕೇರಳದ ಶಬರಿಮಲೈದಲ್ಲಿ ಮಕರ ಜ್ಯೋತಿ ದರ್ಶನವೇ ಹಬ್ಬ.

ವಿದೇಶಗಳಲ್ಲಿ:
ನೇಪಾಳದಲ್ಲಿ ಮಾಘಿ ಸಂಕ್ರಾಂತಿ ಅಥವಾ ಖಿಚಡಿ ಸಂಕ್ರಾಂತಿ, ಥಾಯ್ಲ್ಯಾಂಡ್ನಲ್ಲಿ ಸೊಂಗ್ಕ್ರಣ್, ಲಾವೋಸ್ ದಲ್ಲಿ ಪಿ ಮಾ ಲಾವೊ, ಮೈನ್ಮಾರ್ದಲ್ಲಿ ಥಿಂಗ್ಯಾನ್, ಕಾಂಬೋಡಿಯಾದಲ್ಲಿ ಮೊಹಾ ಸಂಗಕ್ರಣ್, ಶ್ರೀಲಂಕಾದಲ್ಲಿ ಪೊಂಗಲ್ / ಉಳವರ್ ತಿರುನಾಳ್, ಬಾಂಗ್ಲಾ ದೇಶದಲ್ಲಿ ಶಾಕ್ರಿನ್ / ಪೌಷ್ ಸಂಗ್ ಕ್ರಾಂತಿ ಎಂದು ಆಚರಿಸುತ್ತಾರೆ.

ಸಂಕ್ರಾಂತಿ ಹಬ್ಬದ ಸಂದೇಶ:
ಒಟ್ಟಿನಲ್ಲಿ ಆಧ್ಯಾತ್ಮಿಕ ಸಬಲೀಕರಣ, ಶಾಂತಿ, ಸಮೃದ್ಧಿ ಹಾಗೂ ಸಂತಸಗಳ ಸಂಕೇತವೇ ಮಕರ ಸಂಕ್ರಾಂತಿ. ಸಂಕ್ರಾಂತಿಯಂದು ತಯಾರಿಸುವ ಕಿಚಡಿ ಅಥವಾ ಪೊಂಗಲ್, ಜೀವನದಲ್ಲಿ ಸರಳತೆಯ ಸಂಕೇತ. ಸಂದೇಹ ಅಪನಂಬಿಕೆ ಸ್ವಾರ್ಥಗಳ ಚಳಿ ದೂರಾಗಿ, ನಂಬಿಕೆಯ ಶಾಖ ನಮ್ಮೆಲ್ಲರ ಮೈ ಮನಸ್ಸುಗಳನ್ನು ಕಾಯಲಿ ಎಂಬುದೇ ನನ್ನ ಹಾರೈಕೆ.

-ಎನ್.ವ್ಹಿ.ರಮೇಶ್, ನಿವೃತ್ತ ಕಾರ್ಯಕ್ರಮ ಅಧಿಕಾರಿ, ಆಕಾಶವಾಣಿ ಮೈಸೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ