ಭಾರತದ ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ 8 ಶತಮಾನಗಳಷ್ಟು ಹಿಂದೆಯೇ ಮುನ್ನುಡಿ ಬರೆದವರು ನಮ್ಮ 12ನೇ ಶತಮಾನದ ಬಸವಾದಿ ಶಿವಶರಣರು. ಸಮಸ್ತ ಪ್ರಜೆಗಳಿಗೆ ಜನತಂತ್ರ ವ್ಯವಸ್ಥೆಯ ಪರಮಾಧಿಕಾರ, ವ್ಯಕ್ತಿ ಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕುಗಳಿಗೆ ಸರ್ವ ಸಮಾನತೆಯೆಂಬ ಕನ್ನಡಿ ಹಿಡಿದವರೇ ಶಿವಶರಣರು. ತಮ್ಮ ವಚನಗಳ ಮೂಲಕ ಅಂದು ಸಾರಿದ ಸಮಾನತೆಯ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. 12ನೇ ಶತಮಾನ ಎನ್ನುವುದು ಈಗಲೂ ನಮ್ಮನ್ನು ಭಾವನಾತ್ಮಕವಾಗಿಯೇ ಆಳುತ್ತಿದೆ. ಆಚರಣೆಗಳ ಭಾರಕ್ಕೆ ಬಗ್ಗಿ ಹೋಗಿದ್ದ ಸನಾತನ ಸಂಸ್ಕೃತಿಯಲ್ಲಿ ಬೆಳೆದಿದ್ದ ಕೀಳರಿಮೆಯನ್ನು ಅಂದು ವಚನ ಸಂಸ್ಕೃತಿಯೆಂಬ ಧಾರ್ಮಿಕ ಸಮತಾವಾದದ ಕ್ರಾಂತಿಯು ಆವರಿಸಿಕೊಂಡಿತ್ತು. ತನ್ನ ಸ್ನೇಹಮಯ ಸರಳವಾದ ಭಾಷೆಯ ಮೂಲಕ ಜನರ ನಾಡಿ ಮಿಡಿತದೊಳಗೆ ನುಗ್ಗಿ ಎಲ್ಲಾ ವರ್ಗಗಳ ವಿವೇಕ ಜಾಗೃತಿಯ ಕೆಲಸವನ್ನು ಕನ್ನಡ ನಾಡಿನ ಪುಣ್ಯ ಭೂಮಿಯ ವಚನ ಸಾಹಿತ್ಯವು ಪರಿಣಾಮಕಾರಿಯಾಗಿ ಕೆಲಸ ಮಾಡಿತ್ತು. ಆ ಧಾರ್ಮಿಕ ಕ್ರಾಂತಿಗೆ ಶೋಷಿತ ವರ್ಗಕ್ಕೆ ಬೆನ್ನೆಲುಬಾಗುವ ಆಶಯವಷ್ಟೇ ಇರಲಿಲ್ಲ. ಎಲ್ಲೆಡೆಯೂ ಸಮಾನತೆಯ ತತ್ವವನ್ನು, ಜಾತಿ ರಹಿತ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ನಿಷ್ಕಳಂಕ ಕಾಳಜಿಯೂ ಶರಣರಿಗಿತ್ತು.
ಬಸವಣ್ಣ, ಅಲ್ಲಮಪ್ರಭು, ಅಂಬಿಗರ ಚೌಡಯ್ಯ,
ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಹಡಪದ ಅಪ್ಪಣ್ಣ, ಒಬ್ಬರೇ ಇಬ್ಬರೇ ! ಹತ್ತಾರು ಶಿವಶರಣರು ಸಮಾಜದ ಅಂಧ ಮೂಢನಂಬಿಕೆಯ ಹೀನ ಪದ್ದತಿಯನ್ನು ಕಿತ್ತೊಗೆಯಲು ಪಣತೊಟ್ಟು ಸಮಾಜದ ಅಂತ: ಸತ್ವವನ್ನು ಬಡಿದೆಬ್ಬಿಸಿದ್ದರು. ವಚನ ಸಂಸ್ಕೃತಿಯು ಸಮಾಜಕ್ಕೆ ನೀಡಿದ ಕ್ರಿಯಾತ್ಮಕ ಬೆರಗು, ಒದಗಿಸಿದ ಆರೋಗ್ಯಕರ ಬೆಳವಣಿಗೆಗೆ ನಾಂದಿಯಾಯಿತು. ಆದ್ದರಿಂದಲೇ ಹನ್ನೆರಡನೇ ಶತಮಾನದ ವಚನ ಚಳವಳಿ ಸಮಾಜದ ಮೇಲೆ ಬೀರಿದ ಪ್ರಭಾವ ಅನನ್ಯವಾದರಿಂದ, ಸಮಾಜದ ನಾನಾ ಸ್ತರದವರು ಅನುಭವಮಂಟಪದ ಮೂಲಕ ತಮ್ಮೊಳಗಿನ ಬೆಳಕನ್ನು ಕಂಡುಕೊಂಡರು, ಜನಸಾಮಾನ್ಯರಿಗೂ ಬೆಳಕಾದರು. ಆ ಕಾಲದ ಶಿವಶರಣರು ಹಾಗೂ ವಚನಕಾರರಲ್ಲೊಬ್ಬರಾದ ಅಂಬಿಗರ ಚೌಡಯ್ಯನವರು ಪ್ರಮುಖವಾಗಿ ನಮಗೆಲ್ಲರಿಗೂ ಎದ್ದು ಕಾಣುತ್ತಾರೆ. ಪ್ರಯುಕ್ತ ಶಿವಶರಣ ಅಂಬಿಗರ ಚೌಡಯ್ಯನವರ ವಚನ ಸಾಹಿತ್ಯದ ಕುರಿತ ಹಾಗೂ ಅವರ ನಿಸ್ವಾರ್ಥ ಸೇವೆಯ ಬಗ್ಗೆ ಇಲ್ಲಿ ಬರೆಯುವ ಪ್ರಯತ್ನ ಮಾಡಿರುತ್ತೇವೆ ಆತ್ಮೀಯ ಬಂಧುಗಳೇ.
ಶಿವಶರಣ ಅಂಬಿಗರ ಚೌಡಯ್ಯನವರು 12ನೇ ಶತಮಾನದ ಬಸವಣ್ಣನವರ ಅನುಯಾಯಿ ಶರಣರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿರುವುದು ಗೋಚರಿಸುತ್ತದೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯ ಸಮಾತಾ ತತ್ವದಲ್ಲಿ ಸೇರಿಕೊಂಡವರು ಹಾಗಾಗಿ ಸಾವಿರಾರು ವರ್ಷಗಳಿಂದ ಧರ್ಮ-ದೇವರುಗಳ ಬಗೆಗೆ ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳನ್ನೆಲ್ಲಾ ಗುರು ಬಸವಣ್ಣನವರೊಂದಿಗೆ ಅಂಬಿಗರ ಚೌಡಯ್ಯ ಹೊಡೆದೋಡಿಸುತ್ತಲೇ ವಿಚಾರ ಪರ ವಾದ, ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮೂಡಿಸಿದರು. ಧರ್ಮ-ದೇವರು ಕೇವಲ ಶ್ರೀಮಂತರ ಸೋತ್ತಾಗಿದ್ದ ಅಂದಿನ ಸಂದರ್ಭದಲ್ಲಿ ಪೂಜೆ-ಮೋಕ್ಷ ಕೇವಲ ನೇಮವಂತರ, ವೈದಿಕರ ಗುತ್ತಿಗೆಯಾಗಿದ್ದ ಸಮಯದಲ್ಲಿ ಭಾಷ್ಯಕಾರರು ಹೇಳಿದ್ದೇ ಸರಿಯೆನ್ನುವ ವ್ಯವಸ್ಥೆಯಲ್ಲಿ ಚೌಡಯ್ಯನವರು ಈ ಮೂವರನ್ನು ಕ್ರೂರ ಕರ್ಮಿಗಳೆಂದು, ಸಂದೇಹಿಗಳೆಂದು ಕಟುವಾಗಿ ಟೀಕಿಸುವುದರ ಮೂಲಕ ಇವರು ಹೋದ ದಾರಿಯಲ್ಲಿ ಯಾರೂ ಹೋಗಬಾರದೆಂದು ತಮ್ಮ ವಚನಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ಇವರ ವಚನಗಳು ತುಂಬಾ ಖಾರವಾಗಿರುವುದು ಅವರ ಆತ್ಮ ಬಲವನ್ನು ಹಾಗೂ ಸತ್ಯವನ್ನು ಪ್ರತಿಪಾದಿಸುವಲ್ಲಿ ಹೊಂದಿದ್ದ ಧೈರ್ಯವನ್ನು ತೋರಿಸುತ್ತದೆ.
ಹಾಗೆ ಅಂಬಿಗರ ಚೌಡಯ್ಯ ವಚನಕಾರರೆಲ್ಲರಲ್ಲಿ ಇದ್ದ ಸುಶಿಕ್ಷವಾದ ಅಭಿವ್ಯಕ್ತಿ ಮಾರ್ಗವನ್ನು ತುಳಿಯಲಿಲ್ಲ. ತನ್ನ ಹತಾಶೆ, ನೋವು, ಬೇಗುದಿ ಎಲ್ಲವನ್ನೂ ಅವರು ತನ್ನದೇ ತೀಕ್ಷ್ಣಪದಗಳ ಆಡುನುಡಿಯ ಮೂಲಕ ನಿರ್ಭಿಡೆಯಿಂದ ಬೆತ್ತಲಾಗಿಸುತ್ತಾ ಹೋದರು. ಅಲ್ಲದೇ ಎಲ್ಲಾ ವಚನಕಾರರ ಹಾದಿಯಲ್ಲಿ ತಾನು ನಡೆಯದೇ ಇಷ್ಟ ದೈವದ ಬದಲಿಗೆ ತನ್ನದೇ ಹೆಸರನ್ನು ತನ್ನ ವಚನಗಳ ಅಂಕಿತವಾಗಿ ಬಳಸಿಕೊಂಡು ಸಮಾಜದ ಓರೆಕೋರೆಗಳನ್ನು ತಿದ್ದುವ ಯತ್ನ ಮಾಡಿದ ಧಿಮಂತ ಶರಣ. ಅಂಬಿಗರ ಚೌಡಯ್ಯ ನಿಜಾರ್ಥದಲ್ಲಿ ಬಂಡಾಯ ವಚನ ಸಂಸ್ಕೃತಿಯ ಹರಿಕಾರ. ವಚನ ಸಂಸ್ಕೃತಿಯ ಆ ತರ್ಕದ ಲೆಕ್ಕಾಚಾರಗಳಿಂದ ದೂರವುಳಿದು ಗಟ್ಟಿ ಮೌಲ್ಯಗಳ, ನಿರ್ಭಿಡೆಯ ನುಡಿಗಟ್ಟುಗಳ ಮೂಲಕ ಸಮಾಜದ ಓರೆಕೋರೆಗಳನ್ನು ಬೆತ್ತಲೆಯಾಗಿಸಿದ ಚೌಡಯ್ಯನ ಆಕ್ರೋಶದ ಅಭಿವ್ಯಕ್ತಿಯ ಹಾದಿ ಇಂದಿಗೂ ನಮ್ಮನ್ನು ಬೆಚ್ಚಿಸಿ ವಿಸ್ಮಯಗೊಳಿಸುತ್ತದೆ. ಚೌಡಯ್ಯ ಈಗ ಒಂದು ಜಾತಿಯ ಸ್ವತ್ತಾಗಿ ಸೊರಗಿದ್ದಾರೆ ಮತ್ತು ಅವರಷ್ಟೇ ಅಲ್ಲ, ಎಲ್ಲಾ ಶರಣರೂ ಒಂದೊಂದು ಜಾತಿಗೆ ಸೀಮಿತವಾಗಿಬಿಟ್ಟಿದ್ದಾರೆ. ಆಯಾ ಜಾತಿಯ ಇಂದಿನ ಜನಸಂಖ್ಯೆಯ ಪ್ರಾಬಲ್ಯದ ಮೇಲೆ ಆಯಾ ಶರಣರ ಸಂದೇಶಗಳು ಪ್ರಸ್ತುತತೆಯ ಪ್ರಚಾರದ ಕೀರ್ತಿಯನ್ನು ಗಳಿಸಿಕೊಳ್ಳುತ್ತಿರುವುದೂ ವಿಷಾದದ ಸಂಗತಿಯಾಗಿದೆ. ಇನ್ನು ಅಂಬಿಗರ ಚೌಡಯ್ಯ ಶರಣರ ವಿಷಯದಲ್ಲಿಯಂತೂ, ಶರಣನಾಗಲು ಅವರು ದೀಕ್ಷೆ ನೀಡಿದ ಲಿಂಗಾಯತ ಧರ್ಮ ಅವರನ್ನು ಒಂದೆಡೆಗೆ ಎಳೆಯುತ್ತಿದ್ದರೆ. ಅವರು ಜನಿಸಿದ ಮೂಲಜಾತಿಯ ಬಂಧುಗಳು ಅವರನ್ನು ತಮ್ಮ ಸಾಮಾಜಿಕ ಅಸ್ತಿತ್ವದ ಕುರುಹಾಗಿ ಸ್ವೀಕರಿಸಿ ತಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಎಲ್ಲೋ ಒಂದು ಕಡೆ ನೋವಿನ ಸಂಗತಿಯಾಗಿದೆ.
ಅದಕ್ಕಾಗಿಯೇ ಎಲ್ಲರ ಹತ್ತಿರ ಕೇಳಿಕೊಳ್ಳುವುದು ಇಷ್ಟೇ, ಚೌಡಯ್ಯ ಶಿವಶರಣರು ಸಾಗಿದ ದಾರಿಯಲ್ಲಿ ನಾವೆಲ್ಲರೂ ನಮ್ಮ – ನಮ್ಮ, ಭೇದ ಭಾವಗಳನ್ನು ಮರೆತು ಒಗ್ಗಟ್ಟಾಗಿ, ಜೊತೆಯಾಗಿ ಸಾಗಬೇಕು. ಅವರು ತೋರಿದ ವೈಚಾರಿಕ ದಿಟ್ಟತನವನ್ನು
ನಿರ್ಭಿಡೆಯಿಂದ ತೋರಬೇಕು. ಮೂಢನಂಬಿಕೆ ಹಾಗೂ ಕಂದಾಚಾರಗಳನ್ನು ಹೋಗಲಾಡಿಸಬೇಕು. ಅಂದಾಗಲೇ ಮಾತ್ರ ನಾವೆಲ್ಲರೂ ಬಸವಾದಿ ಶರಣರ ಹಾಗೂ ಅಂಬಿಗರ ಚೌಡಯ್ಯ ಶಿವಶರಣರ ನಿಜವಾದ ವಾರಸುದಾರರಾಗಲು ಸಾಧ್ಯ.
ವಿಶ್ವಮಾನವ ಸಂದೇಶ
ಶರಣ ಚೌಡಯ್ಯನವರ ವಚನಗಳಲ್ಲಿದ್ದ ಧರ್ಮ ನಿರ್ಭಿಡತೆಯ, ಜೀವನ ಪ್ರೀತಿಯ ಆಶಯ ಅವನತಿಯೆಡೆಗೆ ಮುಖ ಮಾಡಿ ನಿಲ್ಲುತ್ತಿದೆ ಎಂದರೆ ತಪ್ಪಾಗಲಾರದು. ಜಾತಿಯೆಂಬ ವಿಷಬೀಜದ ಹೀನ ಆಚರಣೆ ಸಂಸ್ಕೃತಿಯೆಂಬ ಜೀವನತತ್ವವನ್ನೇ ಬುಡಮೇಲು ಮಾಡಲು ನಿಂತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಬಂಧುಗಳೆ. ಇನ್ನು ಆಡಳಿತ ಚುಕ್ಕಾಣಿ ಹಿಡಿದ ಸರ್ಕಾರಗಳು ಚೌಡಯ್ಯನವರ ತಾತ್ವಿಕ ಸಂದೇಶಗಳನ್ನು, ಜಾತಿ-ಧರ್ಮಗಳ ಸಂಕೋಲೆಗಳಿಂದ ಮುಕ್ತಗೊಳಿಸಿ ಇಡೀ ಸಾಮಾಜಿಕ ವ್ಯವಸ್ಥೆಯೊಳಗೆ ಹರಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿವೆಯೇ? ಎಂದರೆ ಅಲ್ಲಿಯೂ ಇಲ್ಲಾ ಎಂಬ ನೋವಿನ ಸಂಗತಿ ಗೊತ್ತಾಗುತ್ತದೆ. ಈ ಜಾಡಿನಲ್ಲಿ ಸಿಗುವ ಕೆಲವು ಸತ್ಯಗಳು ಇಂದಿನ ಮಟ್ಟಿಗಂತೂ ನಿರಾಶೆಯನ್ನೇ ಮೂಡಿಸುತ್ತವೆ. ಅಂಬಿಗರ ಚೌಡಯ್ಯನಂಥಹ ಮಹಾ ನಿಜಶರಣರ ಆ ಅಪೂರ್ವ ಸಂದೇಶಗಳು ಶತಮಾನಗಳು ಕಳೆಯುತ್ತಾ ಹೋದಂತೆ ಸಾಮಾಜಿಕ ವ್ಯವಸ್ಥೆಯಲ್ಲಿ ಗಟ್ಟಿಯಾಗುತ್ತಾ ಸಾಗಬೇಕಿತ್ತು. ಶೋಷಣೆಗೆ ಒಳಗಾದ ಸಮಾಜ ವರ್ಗದ ಅಂತಃಶಕ್ತಿ ಸ್ವಾವಲಂಬನೆಯಿಂದ ಸುಭದ್ರವಾಗಬೇಕಿತ್ತು. ವ್ಯವಸ್ಥೆಯಲ್ಲಿ ರೂಪಿತವಾದ ಜನಪರ ಕಲ್ಯಾಣ ಕಾರ್ಯಕ್ರಮಗಳು ಆ ವರ್ಗಗಳ ಅಂತರಂಗದಲ್ಲಿದ್ದ ಬೇಗುದಿಯನ್ನು ಭಸ್ಮ ಮಾಡಬೇಕಿತ್ತು ಮತ್ತು ಇಡೀ ಸಮಾಜ, ಜಾತಿ-ವರ್ಗಗಳನ್ನು ಮೀರಿ ವಿಶ್ವಮಾನವ ಪ್ರಜ್ಞೆಯ ಉದಾರತೆಯನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರಬೇಕಿತ್ತು. ಆದರೆ, ಇಂದಿನ ಪರಿಸ್ಥಿತಿ ನೋಡಿದಾಗ ಇಡೀ ವಚನ ಸಂಸ್ಕೃತಿಯ ಪರಿಣಾಮಗಳ ಬಗ್ಗೆ ವಿಷಾದವೆನಿಸುವ ಸಿನಿಕತೆ ಮೂಡುತ್ತದೆ. ಅಂಬಿಗರ ಚೌಡಯ್ಯ ಶರಣರ ಬಂಡಾಯ ಮನೋಧರ್ಮದ ಕ್ರಾಂತಿ ಹಾದಿಯ ವೈಭವವನ್ನಲ್ಲ. ದುಷ್ಟ ಸಮಾಜದೆಡೆಗಿನ ಅವರ ತಾರ್ಕಿಕ ವಿಚಾರಣೆಯ ದಿಟ್ಟ ಧಾಟಿಯೂ ಅಲ್ಲ. ಮನೋದಾಸ್ಯದ ವಿರುದ್ಧ, ಜಾತಿ ವ್ಯವಸ್ಥೆಯ ವಿರುದ್ಧ ತನ್ನದೇ ಕಟು ನಿಃಸ್ವಾರ್ಥ ರೀತಿಯಲ್ಲಿ ಹೋರಾಡಿ ವಿಶ್ವಮಾನವ ಸಂದೇಶವನ್ನು ಬಿತ್ತಿ ಹೋದ ಛಡಿ ಏಟಿನ ಚೌಡಯ್ಯನವರು ಇಂದಿನ ವ್ಯವಸ್ಥೆಗೆ ಅಪ್ರಸ್ತುತನಾಗುತ್ತಿದ್ದಾರೇ? ಇಂದಿನ ಅಂಬಿಗರ ಚೌಡಯ್ಯನವರ, ಕಾಲಘಟ್ಟವೊಂದರ ಸಮಾಜವನ್ನು ಹೊಸಸ್ತರಕ್ಕೆ ಕರೆದೊಯ್ದಿದ್ದ ವಚನ ಸಂಸ್ಕೃತಿಯ ವೈಫಲ್ಯದ ಒಂದು ಪಾರ್ಶ್ವವನ್ನು ಬಿಂಬಿಸುತ್ತಿದ್ದಾರೇ? ಜಗತ್ತಿನ ಮುನ್ನಡೆಯೂ ಕಾಲದ ದೃಷ್ಟಿಯಿಂದ ಹಿನ್ನೆಡೆಯನ್ನು ಕಾಣುತ್ತದೆಯೇ? ಇಂತಹ ಹಲವಾರು ಪ್ರಶ್ನೆಗಳನ್ನು ಕೇಳಿಕೊಳ್ಳುವ ಕಾಲ ಈಗ ಬಂದಿದೆ ಎನ್ನಿಸುತ್ತದೆ ಅಲ್ಲವೆ? ಹೀಗಿರುವಾಗ ನಾವು ಕೇವಲ ವಿಶ್ವಮಾನವ ಶಿವಶರಣ ಚೌಡಯ್ಯನವರ ಬಗೆ ಮಾತನಾಡದೇ ಅವರು ಕೊಟ್ಟಿರುವ ವಚನ ಸಾಹಿತ್ಯದ ಬಗ್ಗೆ ಹೆಚ್ಚು ಮಾತನಾಡಬೇಕು. ಇದರಂತೆ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ ಶರಣರ ವಾಣಿಯಂತೆ ಸರ್ವರೂ ಸಾಗಬೇಕು.
ಗೌರವ ಮಾತು
ಬಸವಾದಿ ಪ್ರಮಥರ ವಚನಗಳಲ್ಲಿರುವಂತೆ ಇವರಲ್ಲಿಯೂ ಬಸವಾನುಭವಪರವಾದ ವಚನಗಳಿದ್ದರೂ ಅವುಗಳಲ್ಲಿ ಕಂಡುಬರುವ ಸಮಕಾಲೀನ ಸಮಾಜ ವಿಡಂಬನೆಯ ವ್ಯಗ್ರದೃಷ್ಟಿ ಬೇರೆಯವರಲ್ಲಿ ವಿರಳವೆಂದೇ ಹೇಳಬಹುದು. ತೀಕ್ಷ್ಣ ವಚನಗಳಿಂದ ಶರಣರ ವಚನಕ್ರಾಂತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಅಂಬಿಗರ ಚೌಡಯ್ಯ ಶರಣರು. ವೈಚಾರಿಕತೆಯ ಕಾಯಕ ತತ್ವದ ಹರಿಕಾರರಾಗಿ ಅವರ ಬದುಕು ಸಾಗಿತ್ತು, ಸತ್ಯದ ಸನ್ಮಾರ್ಗದಲ್ಲಿ ಸಾಗಿ ಲೋಕಕ್ಕೆ ಮಾದರಿಯಾಗಿದ್ದಾರೆ. ಸನ್ನಡತೆ, ಪ್ರಾಮಾಣಿಕತೆ, ಸ್ನೇಹಮಯ ಜೀವನ, ಸಮತಾವಾದದ ಮೌಲ್ಯಗಳನ್ನು ಜಾಗತಿಕ ಪ್ರಪಂಚಕ್ಕೆ ಸಾರಿ,ಬಸವಾದಿ ಶರಣರ ಆಶಯದಂತೆ ಬಾಳಿದವರು. ಬಸವ ಬಾನಂಗಳದಲ್ಲಿ ಶ್ರೇಷ್ಠ ಶಿವಶರಣರೆಂಬ ಅಮೂಲ್ಯ ನಕ್ಷತ್ರಗಳಲ್ಲಿ ಒಂದಾಗಿ ಮಿನುಗಿದವರು ನಮ್ಮ ಮಹಾನ್ ನಿಜ ಶಿವಶರಣ ಅಂಬಿಗರ ಚೌಡಯ್ಯ ಶಿವಶರಣರು.
ಕೊನೆಯ ಮಾತು
12ನೇ ಶತಮಾನದ ಪ್ರತಿಯೊಬ್ಬ ಶರಣರು ಯಾವುದೇ ಜಾತಿ ಜಾನಂಗಕ್ಕೆ ಸೀಮಿತ ಆದವರಲ್ಲ, ಇವರು ವಿಶ್ವದ ಆಸ್ತಿ, ಇವರು ವಿಶ್ವಮಾನವರು. ಇವರ ಸಿದ್ದಾಂತಗಳನ್ನು ಒಪ್ಪಿ – ಆಚರಣೆಗೆ ತರುವ ಕೆಲಸ ಸರ್ವರೂ ಮಾಡಬೇಕು. ಅಂದಾಗಲೇ ಇವರೆಲ್ಲರ ಸ್ಮರಣೆ ಮಾಡಿದಕ್ಕೂ ಸಾರ್ಥಕ ಆಗಲಿದೆ.
ಲೇಖಕರು:ಸಂಗಮೇಶ ಎನ್ ಜವಾದಿ,
ಬರಹಗಾರರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು. ಬೀದರ ಜಿಲ್ಲೆ.
