ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ರೀತಿಯಲ್ಲಿ ಪ್ರಮುಖ ಪಾತ್ರ ನಿರ್ವಹಣೆ ಮಾಡಿದವರು. ಇವರು ಈ ದೇಶದ ಅಗ್ರ ಪಂಕ್ತಿಯಲ್ಲಿ ಅಗ್ರ ಶ್ರೇಯಾಂಕಿತ ನಾಯಕರೆನ್ನುವುದು ದೇಶವಾಸಿಗಳಿಗೆ ಹೆಮ್ಮೆಯ ವಿಷಯ.
ದೇಶಪ್ರೇಮಿಗಳಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದರೆ ಪಂಚಪ್ರಾಣ, ಮೈನವಿರೇಳುವಂತಹ ರಾಷ್ಟ್ರಪ್ರೇಮದ ಕಿಚ್ಚು ಹೃದಯ ತುಂಬಿ ಬರುತ್ತದೆ.
ನೇತಾಜಿ ಸುಭಾಷ್ ಚಂದ್ರ ಭೋಸರು 1897ರ ಜನವರಿ 23ರಂದು ಜನಿಸಿದರು. ಸುಭಾಷ್ ಚಂದ್ರಬೋಸರು ಭಾರತೀಯ ಇತಿಹಾಸದಲ್ಲಿ ಹಲವು ರೀತಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದು, ಈ ರಾಷ್ಟ್ರದಲ್ಲಿ ಬಿರುಗಾಳಿಯನ್ನೆ ಬೀಸಿದ ರಾಷ್ಟ್ರ ಪ್ರೇಮಿ, ದೇಶದ ಸ್ವಾತಂತ್ರ್ಯಕ್ಕಾಗಿ ನಿರಂತರವಾಗಿ ಹೋರಾಟ ಮಾಡಿದವರಲ್ಲಿ ಮೊದಲಿಗರು. ತನ್ನ ಪ್ರಾಣವನ್ನೇ ತ್ಯಾಗ ಮಾಡಿ, ರಾಷ್ಟ್ರಕ್ಕೆ ಸ್ವಾತಂತ್ರ್ಯ ಬರಲು ಕಾರಣರಾದರು ತ್ಯಾಗ ಜೀವಿ ನಮ್ಮ ನೇತಾಜಿಯವರು.
ಆದರೆ ಕಡೆಗೆ ಅವರು ಏನಾದರೂ ಎಂಬ ಬಗ್ಗೆ ಕೂಡಾ ಹಲವು ಸುದ್ದಿಗಳು ನಿರಂತರವಾಗಿ ಗಾಳಿಯಲ್ಲೇ ಉಳಿಯುವ ಹಾಗೆ ಕಣ್ಮರೆಯಾಗಿದ್ದು ನೋವಿನ ಸಂಗತಿಯಾಗಿದೆ.
ನೇತಾಜಿ ಸುಭಾಷ್ ಚಂದ್ರ ಬೋಸರ ಬಗ್ಗೆ ಹಲವು ಕುತೂಹಲಗಳಿವೆ. ಭಾರತೀಯರಿಗೆ ದೇಶಾಭಿಮಾನ ಕಡಿಮೆ ಎಂಬ ಮಾತು ಪರದೇಶದಲ್ಲಿ ಕೇಳಿ ಬಂದಾಗ ತೀವ್ರವಾಗಿ ವಿರೋಧಿಸಿ, ಹೋರಾಟ ಮಾಡಿದವರು. ಒಮ್ಮೆ ಬ್ರಿಟಿಷ್ ಅಧ್ಯಾಪಕ ಭಾರತೀಯರನ್ನು ಅವಮಾನಿಸಿ ಮಾತನಾಡಿದ ಎಂದು ಅವನನ್ನು ನೇತಾಜಿರವರು ತಳಿಸಿದ ಉದಾಹರಣೆ ಸಹ ನಮಗೆ ದೊರೆಯುತ್ತದೆ.
ದೇಶ ಪ್ರೇಮ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದಂತ ಅಪ್ಪಟ ದೇಶಭಕ್ತ ನಮ್ಮ ನೇತಾಜಿಯವರು ಎಂಬುದು ನಮಗೆ ಹೆಮ್ಮೆ ಎನಿಸುತ್ತದೆ.
ನೇತಾಜಿಯವರು ಮಹಾನ್ ಬುದ್ಧಿವಂತರಾಗಿ ಇಂಡಿಯನ್ ಸಿವಿಲ್ ಸರ್ವೀಸಸ್ ಸೇವೆ ತಲುಪಿದ್ದಂತೂ ನಿಜ. ಅದನ್ನು ಕಿತ್ತೊಗೆದು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಳಿದು ಇನ್ನಿಲ್ಲದಂತೆ ಸೇವೆ ಸಲ್ಲಿಸಿದ್ದೂ ನಿಜ. ಅದೆಷ್ಟೋ ಬಾರಿ ಗಡಿ ಪಾರಾಗಿ ಪುನಃ ಪುನಃ ಭಾರತಕ್ಕೆ ಬಂದು ಬಂಧನಕ್ಕೆ ಒಳಗಾಗುತ್ತಿದ್ದುದೂ ನಿಜ. ಭಾರತದ ಸ್ವಾತಂತ್ರಕ್ಕೆ ಕಂಕಣ ಕಟ್ಟಿ ದುಡಿದದ್ದು ಅಪ್ಪಟ ನಿಜ.
ಗಾಂಧೀಜಿ ಮತ್ತು ನೇತಾಜಿ ಇಬ್ಬರೂ ವಿಭಿನ್ನ ಮನೋಧರ್ಮದವರು. ಗಾಂಧೀಜಿ ಆಶಯಕ್ಕೆ ವಿರುದ್ಧವಾಗಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ನಾಯಕತ್ವಕ್ಕೆ ಆಯ್ಕೆ ಆಗಿದ್ದು ಕೊನೆಗೆ ಅದನ್ನು ಬಿಟ್ಟುಕೊಟ್ಟು ಹೊರಗೂ ನಡೆದು ಬಿಟ್ಟರು. ಸತ್ಯಕ್ಕಾಗಿ ಹೋರಾಟ ಮಾಡುವುದೇ ಇವರ ಮೂಲ ಗುರಿಯಾಗಿತ್ತು.
ಸುಭಾಷರು ನಾಜೀಗಳ ಜೊತೆ, ಜಪಾನಿನವರ ಜೊತೆ, ಹೀಗೆ ಬ್ರಿಟಿಷರ ವಿರೋಧಿಗಳ ಜೊತೆ ಯಾರೆಂದರೂ ಸರಿ, ಸಲ್ಲಾಪ ನಡೆಸಿ ಸಿಂಗಾಪುರ ಸೇರಿದಂತೆ ಮುಂತಾದೆಡೆಗಳಲ್ಲಿ ಇದ್ದ ಯುದ್ಧ ಖೈದಿಗಳು, ಪ್ಲಾಂಟೇಶನ್ ಕೆಲಸಗಾರರನ್ನು ಒಟ್ಟುಗೂಡಿಸಿ ಆಜಾದ್ ಹಿಂದ್ ಅಥವಾ ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಒಗ್ಗೂಡಿಸಿದ ಶಕ್ತಿವಂತ. ನಾವು ‘ಜೈ ಹಿಂದ್’ ಎಂದು ಕೇಳಿದಾಗ ಮೊದಲು ಕಣ್ಣಿಗೆ ಬೀಳುವ ವ್ಯಕ್ತಿತ್ವವೇ ಧೀರ ಸುಭಾಷರದ್ದು. ಹೀಗೆ ಹಲವು ವಿಚಾರಗಳಲ್ಲಿ ದೇಶದ ಬಗ್ಗೆ ಮಹಾನ್ ಅಭಿಮಾನ ಇಟ್ಟುಕೊಂಡು, ದೇಶದ ಉದ್ದಕ್ಕೂ ದೇಶ ಅಭಿಮಾನ ಬಿತ್ತಿದ ಅಮರ ಸ್ವಾತಂತ್ರ್ಯ ಪ್ರೇಮಿ ನಮ್ಮ ನೇತಾಜಿ.
ಸ್ವಾಮಿ ವಿವೇಕಾನಂದರ ನಿಷ್ಠ ಭಕ್ತರಾದ ನೇತಾಜಿ, ವಿಶ್ವದೆಲ್ಲೆಡೆ ಭಾರತದ ಸ್ವಾತಂತ್ರ್ಯದ ಕಹಳೆಯನ್ನು ಕೂಗಿ ಜನಮನವನ್ನು ಬಡಿದೆಬ್ಬಿಸಿ ಬ್ರಿಟಿಷರನ್ನು ದಿಗ್ಭ್ರಾಂತರನ್ನಾಗಿ ಮಾಡಿದ್ದು ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ದಾಖಲಾಗಿದೆ .
ನೇತಾಜಿ, ನಮ್ಮ ದೇಶಕ್ಕಾಗಿ ನಿರಂತರ ಯೋಚಿಸಿ, ಹೋರಾಡಿದ ಧೀಮಂತ. ತನ್ನ ಬುದ್ಧಿವಂತಿಕೆ, ಸಾಧ್ಯವಿದ್ದ ಶ್ರೀಮಂತಿಕೆಯ ಬದುಕನ್ನು ಬದಿಗೊತ್ತಿ, ಮತ್ತೊಂದು ಹೌದಪ್ಪ ಆಗಿರದೆ, ಭವಿಷ್ಯದ ರಾಜಕಾರಣಿಯ ಹಿರಿತನದ ಬದುಕು ಮುಂತಾದ ಸಣ್ಣತನದ ಚಿಂತನೆಗಳನ್ನೆಲ್ಲಾ ಕಳೆದುಕೊಂಡು, ಯಾವುದನ್ನೂ ಸ್ವಾರ್ಥದಿಂದ ಯೋಚಿಸದೆ ಜೀವಮಾನವಿಡೀ ಕಷ್ಟಗಳನ್ನು ಎದುರಿಸಿ ಹೋರಾಟಮಯ ಬದುಕನ್ನು ಬಾಳಿದ ಈ ಧೀಮಂತ ನಾಯಕರ ಕುರಿತು ಎಷ್ಟು ಹೇಳಿದರೂ ಕಡಿಮೆಯೇ.
ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷ್‌ರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು. ಈ ಮಾತಿನಂತೆ ಆತ್ಮಾಭಿಮಾನದ ಸ್ವರಾಜ್ಯ ಹೋರಾಟಕ್ಕೆ ಬಲತುಂಬಿದವರು ಸುಭಾಷರು.
ತಾನು ಕಷ್ಟಪಟ್ಟುಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಬೋಸ್‌ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿ ಮಾಡಿದವರಲ್ಲ.
ಬೋಸರು ಆಗಾಗ ಹೇಳುತ್ತಿದ್ದರು “ನೀವು ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ. ಸ್ವಾತಂತ್ರ್ಯವೆಂಬುದು ಯಾರೂ ಕೊಡುವಂಥ ಸರಕಲ್ಲ ಅದು ನಾವು ಪಡೆದುಕೊಳ್ಳಬೇಕಾದದ್ದು”
ಎನ್ನುತ್ತಿದ್ದರು. ಇದರಂತೆ ಬಾಳಿ ಬದುಕಿದವರು.
ನೇತಾಜಿ ಅವರು ಈ ಲೋಕವನ್ನು ಬಿಟ್ಟು ಹೋದರು ಎಂಬ ಬಗ್ಗೆ ಇರುವ ಊಹೆಯ ದಿನ ಆಗಸ್ಟ್ 18, 1945.
ಇದು ಎಷ್ಟರಮಟ್ಟಿಗೆ ಸಮರ್ಪಕವಾಗಿದೆ ಎಂದು ಹೇಳಲು ನಮಗೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆ ಆದರೆ ಮಾತ್ರ ಈ ವಿಷಯದಲ್ಲಿ ಸತ್ಯ ಹೇಳಲು ಸಾಧ್ಯವಾಗಬಹುದು.
ಅದು ಈಗ ಏನೇ ಇರಲಿ
ಈ ಸ್ವಾತಂತ್ರ್ಯ ಅರಮ ಪ್ರೇಮಿಯ ಅಡಿದಾವರೆಗಳಿಗೆ ಭಕ್ತಿಯಿಂದ ನಮನಗಳು ಸಲ್ಲಿಸುತ್ತೇವೆ.
- ಸಂಗಮೇಶ ಎನ್ ಜವಾದಿ ,ಬರಹಗಾರರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ
