ಲೇಖನ ವಿಮರ್ಶೆ : ಡಾ. ಆನಂದ ಎಸ್ ಎನ್
“ಬದುಕು ಎಷ್ಟೇ ನೋಯಿಸಿದರೂ ಬದುಕಬೇಕಿದೆ, ಎಷ್ಟೇ ನೋವಿದ್ದರೂ ನಗಬೇಕಿದೆ, ಕೆಲವು ನೋವುಗಳು ಮರೆಯಲಾಗದಿದ್ದರೂ ನಗಬೇಕಿದೆ. ಅಂದುಕೊಂಡದ್ದು ಆಗದೇ ಇದ್ದಾಗ ಹೊಂದಿಕೊಂಡು ಹೋಗುವುದ ಕಲಿಯಬೇಕಿದೆ ಇದೇ ಜೀವನ”. (ಪಂಜಾ ಸವಾರಿ ಪುಟ ೮೯)
ʻಪಂಜಾ ಸವಾರಿʼ ಡಾ. ಮಿರಾಜ ಪಾಶಾ ಅವರ ಆತ್ಮಕಥನವಾಗಿದೆ. ತೊಂಬತ್ತೊಂದು ಪುಟಗಳ ಈ ಕಿರು ಕೃತಿ ಇಪ್ಪತ್ತು ಅಧ್ಯಾಯಗಳಲ್ಲಿ ವಿಸ್ತಾರಗೊಂಡಿದ್ದು, ಉತ್ತರ ಕರ್ನಾಟಕದ ಗ್ರಾಮೀಣ ಬದುಕಿನ ಸಾಂಸ್ಕೃತಿಕ ಲೋಕವೊಂದು ವ್ಯಕ್ತಿಯೊಬ್ಬನ ಬದುಕಿನ ಚಿತ್ರಣದೊಂದಿಗೆ ಅನಾವರಣಗೊಂಡಿದೆ. ಚಿಕ್ಕ ವಯಸ್ಸಿನಲ್ಲಿಯೇ ತನ್ನ ಬದುಕನ್ನು ಕುರಿತು ಬರೆಯಬೇಕೆನ್ನುವ ತುಡಿತ ಲೇಖಕರಲ್ಲಿ ಮೂಡಿದ್ದು ಅವರ ದಟ್ಟ ಜೀವನಾನುಭವದ ತೀವ್ರತೆಯ ಪರಿಣಾಮವಿರಬಹುದು ಎನಿಸುತ್ತದೆ. ಹುಟ್ಟಿನಿಂದಲೂ ಬದುಕನ್ನು ಹಸಿವು, ಬಡತನ, ಹೋರಾಟಗಳ ಒರೆಗಲ್ಲಿಗೆ ಒಡ್ಡಿಕೊಂಡು ಪ್ರತಿ ಹಂತದಲ್ಲೂ ತನ್ನ ಬದುಕನ್ನು ಚಿನ್ನವಾಗಿಸಿಕೊಂಡು ಗೆದ್ದು ಬಂದ ಅನುಭವ ಕಥನವಾಗಿ ಹೊರಹೊಮ್ಮಿರುವುದು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ʻಬದುಕು ಬದುಕುವುದರಲ್ಲಿಯೇ ಇದೆ, ಬೇರೆ ಎಲ್ಲಿಯೂ ಇಲ್ಲʼ ಎಂಬುದನ್ನು ತಮ್ಮ ಬರಹದ ಪ್ರತಿ ಹಂತದಲ್ಲೂ ಮಿರಾಜ ಅವರು ಹೇಳುತ್ತಾ ಸಾಗುತ್ತಾರೆ. ಜೀವನದಲ್ಲಿ ಅಡೆ-ತಡೆಯಾಗುವ ಎಲ್ಲಾ ಕಷ್ಟಗಳ ಒಡ್ಡುಗಳನ್ನು ದಾಟಿಕೊಂಡು ತನ್ನ ಗುರಿಯತ್ತ ಸಾಗುವ ಸಾಧಕನ ಕಥನವೇ ʻಪಂಜಾ ಸವಾರಿʼ.
ʻಜೀವನದಲ್ಲಿ ಯಾವುದೂ ಸುಲಭವಾಗಿ ಸಿಗುವುದಿಲ್ಲʼ ಎಂಬ ಸಂದೇಶವನ್ನು ಓದುಗ ಮನಸ್ಸುಗಳಿಗೆ ಮತ್ತೆ ಮತ್ತೆ ಕೊಡುತ್ತಾ ಸಾಗುವ ಕಥನವು ಸೋಲಿನಲ್ಲಿ ಸಹನೆ, ಗೆಲುವಿಗಾಗಿ ನಿರಂತರ ಪ್ರಯತ್ನ ಸದಾ ಇರಬೇಕು ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ. ಇಲ್ಲಿ ಲೇಖಕರು ಜಾತಿ, ಧರ್ಮ, ಪಂಥ, ಪಂಗಡಗಳನ್ನು ಮೀರಿದ ಮನುಷ್ಯನಾಗಿ ಎಲ್ಲರೊಳಗೆ ಒಂದಾಗುವ ಸ್ನೇಹಜೀವಿಯಾಗಿ ಕಂಡುಬರುತ್ತಾರೆ. ಎಲ್ಲರನ್ನೂ ದಯೆಯ ಕಣ್ಣುಗಳಿಂದ ಪ್ರೀತಿಯ ಆಪ್ತತೆಯಲ್ಲಿ ತನ್ನ ಸ್ನೇಹ ಬಳಗದೊಳಗಿನ ಒಬ್ಬರನ್ನಾಗಿಸಿಕೊಂಡು ಬಿಡುತ್ತಾರೆ. ಬಾಲ್ಯದಿಂದಲೂ ಅವರ ಸ್ನೇಹ ಬಳಗ ದೊಡ್ಡದಾಗಿದ್ದು ಅವರು ಬೆಳೆದಂತೆ ಗೆಳೆಯರ ಬಳಗವೂ ಬೆಳೆಯುತ್ತಲೇ ಸಾಗಿರುವುದು ಕಂಡುಬರುತ್ತದೆ. ಈ ಮಾನವೀಯ ತುಡಿತವೇ ಅವರ ಬದುಕಿನ ಎಲ್ಲಾ ಕಷ್ಟ, ನೋವುಗಳನ್ನು ಮೆಟ್ಟಿ ನಿಲ್ಲಲು, ಗೆದ್ದು ಬದುಕಲು ಮೂಲ ದ್ರವ್ಯವಾಗಿದೆ. ಶರಣರ ನಾಡಿನಲ್ಲಿರುವ ಇವರು ತನ್ನೊಳಗಿನ ಬದುಕನ್ನು ಹೊರಗಿನ ಬದುಕಿನೊಂದಿಗೆ ಒಂದಾಗಿಸಿಕೊಂಡು ನಡೆ-ನುಡಿಯಲ್ಲಿ ಕೂಡಲಸಂಗಮದೇವನ ಒಲಿಸುವ ಪರಿಯನ್ನು ತಮ್ಮ ಆತ್ಮಕಥನದಲ್ಲಿ ಅನಾವರಣಗೊಳಿಸಿದ್ದಾರೆ ಎಂದರೆ ತಪ್ಪಾಗಲಾರದು.
ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ತಾಜಲಾಪುರ ಎಂಬ ಪುಟ್ಟ ಗ್ರಾಮದಲ್ಲಿ ಶತಶತಮಾನಗಳಿಂದ ಬದುಕಿ ಬಂದ ಜನರ ಜೀವನದ ರಸಪಾಕವೆ ʻಪಂಜಾ ಸವಾರಿʼ ಆತ್ಮಕಥನ.
ಅಲ್ಲಿಯ ಬದುಕಿನ ಚಿತ್ರಣ ಧರ್ಮ, ಜಾತಿ, ಪಂಥಗಳಿಗೆ ಮೀರಿದ ಯಾವುದೋ ಒಂದು ಬಗೆಯ ಆಪ್ತ ಸಂಬಂಧ ಮನುಷ್ಯರ ನಡುವೆ ಜೀವಂತವಾಗಿದ್ದುದ್ದನ್ನು ಕಟ್ಟಿಕೊಡುತ್ತದೆ. ಏಕೆಂದರೆ ಮನುಷ್ಯ ಮನುಷ್ಯರ ನಡುವೆ ಯಾವಾಗಲೂ ಅಂತರವನ್ನು, ಗೋಡೆಯನ್ನು ಎಬ್ಬಿಸುವ ಧರ್ಮ, ಜಾತಿ, ವರ್ಗಗಳಿಂದ ದೂರವಿರುವ ಈ ಊರು ʻನಿಜಭಾರತʼದ ಧ್ಯೂತಕವಾಗಿರುವುದನ್ನು ಲೇಖಕರು ತಮ್ಮ ಆತ್ಮಕಥನದಲ್ಲಿ ತೆರೆದಿಟ್ಟಿದ್ದಾರೆ. ಇಲ್ಲಿಯ ಜನರು ಧರ್ಮವನ್ನು ಧರ್ಮತೀತವಾಗಿ ಭಾವಿಸಿ ಬದುಕುವ ಪರಿ ಅಚ್ಚರಿ ಮೂಡಿಸುತ್ತದೆ. ಇಂತಹ ಸೂಕ್ಷ್ಮಗಳನ್ನು ಗ್ರಹಿಸಿ ಅಕ್ಷರಕ್ಕೆ ತಂದಿರುವ ಮಿರಾಜ್ ಉದಯೋನ್ಮುಖ ಬರಹಗಾರರಾಗಿ ಕಂಡು ಬರುತ್ತಾರೆ.
ʻಕಷ್ಟ ಯಾರಿಗಿಲ್ಲʼ ಎಂಬುದನ್ನು ಒಪ್ಪಿಕೊಳ್ಳುತ್ತಲೇ ಅವರು ಧೈರ್ಯದಿಂದ ಎಲ್ಲವನ್ನೂ ಎದುರಿಸಿ ಗೆಲ್ಲುವ ಛಲದೊಂದಿಗೆ ಮುನ್ನುಗ್ಗುವುದು ಓದುಗರಿಗೆ ಅಚ್ಚರಿಯೂ, ಆದರ್ಶವೂ ಎನಿಸುತ್ತದೆ. ತನ್ನ ಮನೆಯ ತಂದೆ, ತಾಯಿ, ಸಹೋದರ, ಸಹೋದರಿಯರು, ಹೆಂಡತಿ, ಸಂಬಂಧಿಗಳು, ಸ್ನೇಹಿತರು ಹೀಗೆ ಎಲ್ಲರಿಗೂ ತಾನೆ ಧೈರ್ಯ ಹೇಳುತ್ತಾ, ಸಮಸ್ಯೆಯನ್ನು ಹತ್ತಾರು ನುರಿತ ಜನರೊಂದಿಗೆ ಪರಾಮರ್ಶಿಸಿ ಬಗೆಹರಿಸಿಕೊಳ್ಳುವ ಅವರ ಜಾಣ್ಮೆ, ಸಂದಿಗ್ಧ ಸಮಯದಲ್ಲೂ ವಹಿಸುವ ತಾಳ್ಮೆ, ಎಂತಹ ಪರಿಸ್ಥಿತಿಯಲ್ಲೂ ಕಳೆದುಕೊಳ್ಳದ ಧೈರ್ಯ ಮೆಚ್ಚುವಂಥದ್ದು. ವಯಸ್ಸಾದ ಮೇಲೆ ಜೀವನದ ಕೊನೆ ಘಟ್ಟದಲ್ಲಿ ಆತ್ಮಚರಿತ್ರೆ ಬರೆಯಬೇಕು ಎಂಬ ಸಾಂಪ್ರದಾಯಿಕ ನಂಬಿಕೆಗೆ ಪೂರ್ಣವಿರಾಮವಿಟ್ಟು ಪ್ರೌಢ ವಯಸ್ಸಿನಲ್ಲಿಯೇ ತನ್ನ ಬದುಕನ್ನು ಅನಾವರಣಗೊಳಿಸುವ ಆತ್ಮಕಥನ ಬರಹಕ್ಕೆ ತೊಡಗಿದ್ದು ಅವರ ದಿಟ್ಟ ಹೆಜ್ಜೆಗೆ ಸಾಕ್ಷಿ. ಈ ಶ್ಲಾಘನೀಯ ಕಾರ್ಯವನ್ನು ಅವರು ಯಶಸ್ವಿಯಾಗಿ ಮಾಡಿದ್ದಲ್ಲದೆ ಮಾದರಿಯೂ ಆಗಿರುವುದು ಪ್ರಶಂಸನೀಯ.
ಬಾಲ್ಯದಲ್ಲಿ ಗೆಳೆಯರೊಂದಿಗೆ ಹಾಡಿದ್ದು, ಕುಣಿದದ್ದು, ಶಿಕ್ಷಕರಿಂದ ಒದೆ ತಿಂದದ್ದು, ಓದು ನಿಲ್ಲಿಸಿ ಹೈದ್ರಾಬಾದನಲ್ಲಿ ಚಹಾ ಮಾರಿದ್ದು, ಶಿಕ್ಷಕಿಯ ಸಲಹೆಯಿಂದ ಮತ್ತೆ ಊರಿಗೆ ಮರಳಿ ಓದು ಮುಂದುವರಿಸಿ ಛಲ ಬಿಡದೆ ಗೆಲುವು ಸಾಧಿಸಿದ್ದು, ಹೊಟ್ಟೆನೋವಿನ ಅನಾರೋಗ್ಯದ ಕಾಲದಲ್ಲಿ ಅನುಭವಿಸಿದ ಯಾತನೆ, ಆಗಲೂ ಧೈರ್ಯ ಕಳೆದುಕೊಳ್ಳದೆ ಅಪಾಯದಿಂದ ಪಾರಾದದ್ದು ಈ ಎಲ್ಲವೂ ಮನುಷ್ಯನಾದವನು ಬದುಕಿನಲ್ಲಿ ಎದುರಿಸಿ ಗೆಲ್ಲಲೇ ಬೇಕಾದಂತಹವು ಎಂಬುದನ್ನು ಸಹಜವಾಗಿ ಅರ್ಥ ಮಾಡಿಸುವ ಕಥನವು ಅಲ್ಲಲ್ಲಿ ನಿಟ್ಟುಸಿರು ತರಿಸುತ್ತದೆ. ಕಷ್ಟದ, ನೋವಿನ ಕುಲುಮೆಯಲ್ಲಿ ಬೆಂದು ಹದಗೊಂಡ ಜೀವ ಆಡುವ ಒಂದೊಂದು ಮಾತು ಶರಣರ ವಚನದಂತೆ ಅನುಭಾವದ ನುಡಿಗಳಾಗಿ ವ್ಯಕ್ತವಾಗಿರುವುದುಂಟು. ಅಂತಹ ಕೆಲವೊಂದು ನುಡಿಗಳನ್ನು ಕೊಡಬಯಸುತ್ತೇನೆ; ʻಯಶಸ್ವೀ ಎನ್ನುವುದು ಸಂತೆಯಲ್ಲಿ ಸಿಗುವ ತರಕಾರಿಯಲ್ಲ, ಅದು ಮನಸ್ಸು ಪ್ರಯತ್ನದ ಜೊತೆಗೆ ಏಕಾಂತದ ಗುರಿಯಾಗಿದೆʼ. ʻನಗುತ್ತೇವೆ ಎಂಬ ಮಾತ್ರಕ್ಕೆ ಕಷ್ಟಗಳೇ ಇಲ್ಲವೆಂದಲ್ಲ. ನಗುವಿನ ಮೂಲಕ ಕಷ್ಟಗಳನ್ನು ಸೋಲಿಸುತ್ತೇವೆ ಎಂದರ್ಥʼ. ʻಬದುಕಿನ ಕೊನೆಯವರೆಗೂ ನಮ್ಮನ್ನು ಕರೆದೊಯ್ಯುವುದು ಧೈರ್ಯವೇ ವಿನಹ ಅದೃಷ್ಟವಲ್ಲʼ. ಸಹಿಷ್ಣತೆ, ಸಹನೆ, ಸ್ವಯಂ ತಾಳ್ಮೆಯನ್ನು ಸೂಕ್ತ ಸಮಯದಲ್ಲಿ ಬೆಳೆಸಿಕೊಳ್ಳದಿದ್ದರೆ ಸಮಯವೇ ಸಮಸ್ಯೆಯನ್ನು ಸೃಷ್ಟಿಸುತ್ತದೆʼ. ʻತಂದೆ ತಾಯಿಯೇ ನಿಜವಾದ ದೇವರು, ಅವರ ಪಾದದ ಕೆಳಗೆ ಮೋಕ್ಷವಿದೆʼ. ʻಕೆಲವು ತಿಳುವಳಿಕೆಗಿಂತ ನಡವಳಿಕೆ ಶ್ರೇಷ್ಠವಾಗಿರಬೇಕುʼ. ʻಸ್ವಂತಕ್ಕಾಗಿ ಬೀಗದೆ, ಪರಹಿತಕ್ಕಾಗಿ ಬಾಗಿ ನಡೆದರೆ ಬಾಳು ಬಂಗಾರವಾಗುತ್ತದೆʼ. ʻಸಹಜವಾದ ನಮ್ಮ ನಡವಳಿಕೆಯಲ್ಲಿ ಎಂದು ʻನಾʼ ಎಂಬ ʻಅಹಂʼ ಬಂದರೆ ಇದು ಸಹಜವಾಗುವುದಿಲ್ಲ. ಸಹಜತೆಯಲ್ಲಿಯೇ ಪ್ರೀತಿಯ ಗೋಪುರವಿದೆʼ. ʻನಮ್ಮ ನಡೆ ನಮಗೆ ಭಾಗ್ಯ ತರುವುದು. ವೈರತ್ವದಿಂದ ಹೋದರೆ ನಮಗೆ ದುಃಖ ಶಾಪವಾಗಿ ನಮ್ಮಲ್ಲಿ ಉಳಿಯುವುದು. ಈ ನಿಟ್ಟಿನಲ್ಲಿ ನಿಜ ಸಾಕ್ಷಾತ್ಕಾರ ಮಾಡಿಕೊಂಡರೆ ನಮ್ಮ ಬದುಕಿನಲ್ಲಿ ಸಂತೋಷ ಮನೆ ಮಾಡುವುದುʼ. ʻಕೋಪದಲ್ಲಿ ಎಂದಿಗೂ ಕೆಟ್ಟ ನುಡಿಗಳನ್ನಾಡಬೇಡಿ, ನಿಮ್ಮ ಕೋಪ ಕರಗಿ ಬಿಡಬಹುದು. ಆದರೆ ಆಡಿದ ನುಡಿಗಳು ಹಾಗೆ ಉಳಿದುಬಿಡುವುದುʼ. ಲೇಖಕರು ಬದುಕಿನಲ್ಲಿ ಕಲಿತ ವಾಸ್ತವ ಪಾಠಗಳು ಅನುಭವದ ನುಡಿಗಳಾಗಿ ಇಲ್ಲಿ ಮೂರ್ತಗೊಂಡಿವೆ. ಬದುಕನ್ನು ಗಾಢವಾಗಿ ಅನುಭವಿಸಿ ಅಲ್ಲಿ ಹೆಕ್ಕಿ ತೆಗೆದ ಹರಳಿನಂತೆ ಹೊಳೆಯುತ್ತಿವೆ.
ಗ್ರಾಮೀಣ ಪ್ರತಿಭೆಗಳು ಅಕ್ಷರಲೋಕಕ್ಕೆ ತೆರೆದುಕೊಂಡಷ್ಟು ಕನ್ನಡ ಸಾಹಿತ್ಯ ಸಮೃದ್ಧವಾಗುತ್ತಾ ಸಾಗುತ್ತದೆ. ಏಕೆಂದರೆ ಪ್ರತಿಯೊಂದು ಪ್ರಾಂತ್ಯದ ಗ್ರಾಮೀಣ ಬದುಕು ಒಂದು ಹೊಸ ಲೋಕವೇ ಆಗಿರುತ್ತದೆ. ಇದುವರೆಗೂ ಅಕ್ಷರ ಲೋಕವನ್ನೇ ಪ್ರವೇಶಿಸದ ಅದೆಷ್ಟು ಸಮುದಾಯಗಳಿವೆ. ಆ ಒಂದೊಂದು ಸಮುದಾಯದಿಂದಲೂ ಪ್ರಾತಿನಿಧಿಕವಾಗಿ ಒಬ್ಬೊಬ್ಬನಾದರೂ ತನ್ನ ಬದುಕಿನೊಂದಿಗೆ ತನ್ನ ಸಮುದಾಯದ ಲೋಕವನ್ನು ಬರಹದೊಳಗೆ ತಂದರೆ ಅದು ಸಾಹಿತ್ಯದ ಸಮೃದ್ಧಿಗೆ ಸಲ್ಲುವ ಗರಿಯೇ ಸರಿ. ಅಂತಹ ಬೆಳಕಿನ ಪಂಜನ್ನು ಕನ್ನಡ ಸಾಹಿತ್ಯದ ಮುಡಿಗೇರಿಸಿದ ಅಪರೂಪದ ಬರಹಗಾರ ಡಾ. ಮಿರಾಜ್ ಹೋರಾಟದ ಪಂಜನ್ನು ಗಟ್ಟಿಯಾಗಿ ಹಿಡಿದು ಬದುಕಿನ ಕುದುರೆಯ ಮೇಲೆ ಸವಾರಿ ನಡೆಸಿದ ಕಥನವೇ “ಪಂಜಾ ಸವಾರಿ” ಆತ್ಮಕಥನ. ಇದರಲ್ಲಿ ಯಶಸ್ವಿಯಾಗಿರುವ ಇವರು ತಮ್ಮ ಬರಹವನ್ನು ಮುಂದುವರಿಸಲಿ ಎಂಬ ಆಶಯ ನಮ್ಮದು.
- ಡಾ.ಆನಂದ ಎಸ್ ಎನ್
ಕನ್ನಡ ಸಹಾಯಕ ಪ್ರಾಧ್ಯಾಪಕ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಅಜ್ಜಂಪುರ, ಚಿಕ್ಕಮಗಳೂರು ಜಿಲ್ಲೆ.
ಫೋ- ೯೯೬೪೭೧೧೨೮೨.
