ಬೀದರ್: ಭಾರತದ ಪ್ರಜಾಪ್ರಭುತ್ವದಲ್ಲಿ ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಪೀಠಿಕೆಯಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು ಎನ್ನುವ ಆಶಯವನ್ನು ಬರೆದಿದ್ದಾರೆ. ಅನುಷ್ಠಾನಕ್ಕಾಗಿ ಸಂವಿಧಾನದ 15.16ರ ಅನುಚ್ಛೇದದಲ್ಲಿ ಶೋಷಿತ ಸಮುದಾಯಗಳು ಸಮಾನವಾಗಿ ಬದುಕಲು ಮೀಸಲಾತಿ ಕಲ್ಪಿಸುವ ಮೂಲಭೂತ ಹಕ್ಕನ್ನು ನೀಡಿದ್ದಾರೆ. ಆದರೆ ಕರ್ನಾಟಕದಲ್ಲಿ ಚರ್ಮಗಾರಿಕೆಗೆ ಸಂಬಂಧಿಸಿದ ಮಾದಿಗ, ಸಮಗಾರ, ಡೋಹರ, ಮಚ್ಚಗಾರ ಮತ್ತು ಇತರೆ ಜಾತಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗದಿರುವ ಕಾರಣ ಇವರು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದಾರೆ. ಈ ಅಸಮಾನತೆಯ ಸಂತ್ರಸ್ತರಾದ ಮಾದಿಗರು, ದಲಿತರು ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ 30 ವರ್ಷಗಳ ತ್ಯಾಗ ಬಲಿದಾನದಿಂದ ಸಾವು ನೋವುಗಳನ್ನು ಅನುಭವಿಸಿ ನಿರಂತರವಾಗಿ ಹೋರಾಟ ಮಾಡಿದ ಪರಿಣಾಮದಿಂದಲೇ ಸರ್ವೋಚ್ಚ ನ್ಯಾಯಾಲಯವು ದಿನಾಂಕ 1.8.2024 ರಂದು 7 ಜನರ ನ್ಯಾಯಾಧೀಶರ ಸಂವಿಧಾನ ಪೀಠವು ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮಿಸಲಾತಿ ನೀಡುವುದು ಸಂವಿಧಾನ ಬದ್ಧವಾಗಿ ರಾಜ್ಯ ಸರ್ಕಾರಗಳೇ ಎಂಪರಿಕಲ್ ಡಾಟಾ ದತ್ತಾಂಶವನ್ನು ಪಡೆದು ಒಳಮಿಸಲಾತಿ ವರ್ಗೀಕರಣವನ್ನು ಜಾರಿ ಮಾಡಬಹುದೆಂದು ಆದೇಶಿಸಿದೆ. ಸುಪ್ರೀಂಕೋರ್ಟಿನ ಆದೇಶವನ್ನು ಮರು ಪರಿಶೀಲಿಸಲು ಸಲ್ಲಿಸಿದ ಎಲ್ಲಾ ಅರ್ಜಿಗಳನ್ನು ವಜಾ ಮಾಡಿದೆ.
ಒಳ ಮೀಸಲಾತಿ ವರ್ಗೀಕರಣದ ಚಳುವಳಿಯನ್ನು ಅಂತಿಮ ಘಟ್ಟಕ್ಕೆ ತಲುಪಿಸಬೇಕಾಗಿರುವುದು ನಮ್ಮ ತಲೆಮಾರಿನ ಕರ್ತವ್ಯವಾಗಿದೆ. ಮಾದಿಗರ ಓಟ್ ಬ್ಯಾಂಕಿನಿಂದ ಅಧಿಕಾರಕ್ಕೆ ಬಂದು, ಮಾದಿಗರನ್ನೇ ನಿರ್ಲಕ್ಷಿಸುತ್ತಿರುವ ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳು ತಮ್ಮ ಪ್ರಣಾಳಿಕೆಗಳಲ್ಲಿ ಒಳಮಿಸಲಾತಿ ಜಾರಿ ಮಾಡುತ್ತೇವೆ ಎಂದು ಘೋಷಿಸಿಕೊಂಡು ಅಧಿಕಾರಕ್ಕೆ ಬಂದಮೇಲೆ ವಿಳಂಬ ನೀತಿ ಅನುಸರಿಸುತ್ತಿರುವುದು ಎಷ್ಟು ಸರಿ? ನ್ಯಾಯದ ಅಸ್ಮಿತೆಯಾದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸದೆ ಅಥವಾ ತಿರಸ್ಕರಿಸದೆ ಅತಂತ್ರ ಸ್ಥಿತಿಯಲ್ಲಿ ಒಳಮಿಸಲಾತಿ ವರ್ಗೀಕರಣವನ್ನು ಉದ್ದೇಶ ಪೂರಕವಾಗಿ ವಿಳಂಬ ಮಾಡುತ್ತಿರುವುದನ್ನು ಒಕ್ಕೂಟದ ವತಿಯಿಂದ ಖಂಡಿಸುತ್ತೇವೆ. ಅಸ್ಪೃಶ್ಯರಲ್ಲಿ ಅಸ್ಪೃಶ್ಯರಾದ ಶೋಷಿತ ಸಮುದಾಯಗಳ ಸ್ಥಿತಿಗತಿಗೆ ಸಂಬಂಧಪಟ್ಟ ಮಾಹಿತಿಯ ದತ್ತಾಂಶಗಳನ್ನು ಮುಚ್ಚಿಡುವುದು ಈ ಸಮಾಜಕ್ಕೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ. ಸರ್ಕಾರವೇ 14 ಕೋಟಿ ಖರ್ಚು ಮಾಡಿ ದೇಶದಲ್ಲೇ ಮೊದಲ ಬಾರಿಗೆ ಸಂವಿಧಾನಾತ್ಮಕವಾಗಿ ಪರಿಶಿಷ್ಟ ಜಾತಿಗಳಲ್ಲಿ ಮೀಸಲಾತಿಯ ಸೌಲಭ್ಯಗಳ ಹಂಚಿಕೆಯಲ್ಲಾದ ತಾರತಮ್ಯವನ್ನು ವೈಜ್ಞಾನಿಕವಾಗಿ ಮನೆ ಮನೆಗೆ ಸಮೀಕ್ಷೆಯ ಮೂಲಕ ಪರಿಶೀಲಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ನ್ಯಾಯಮೂರ್ತಿ ಸದಾಶಿವರವರ ಆಯೋಗವು 2011ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ಸಾರ್ವಜನಿಕ ಸೇವೆಗಳಲ್ಲಿ ಎಂ.ಪಿ, ಎಮ್ಎಲ್ಎ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರ ಜಾತಿವಾರು ಜನಸಂಖ್ಯೆ ರಾಜಕೀಯ ಪ್ರಾಥಮಿಕದಲ್ಲಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಪ್ರವೇಶಾತಿಗಳಲ್ಲಿ ಪ್ರಾತಿನಿಧ್ಯದ ಕೊರತೆಯನ್ನು ದಾಖಲಿಸಿದ್ದಾರೆ, ಜೊತೆಗೆ ಪರಿಶಿಷ್ಟ ಜಾತಿಗಳಲ್ಲಿ ಎಷ್ಟೋ ಜನ ಗುಡಿಸಲು ವಾಸಿಗಳಾಗಿದ್ದಾರೆ, ಉನ್ನತ ಶಿಕ್ಷಣ ಪಡೆದಿದ್ದಾರೆ. ಶಿಕ್ಷಣವೇ ಪಡೆದುಕೊಳ್ಳಲಾಗದೆ ವಂಚಿತರಾಗಿದ್ದಾರೆ. ಭೂಮಿಯೇ ಇಲ್ಲದೇ ಕೂಲಿ ಕಾರ್ಮಿಕರಾಗಿದ್ದಾರೆ. ಅಕ್ರಮಗಳಿಗೆ ತುತ್ತಾಗಿ ಭೂಮಿ ಕಳೆದುಕೊಂಡಿದ್ದಾರೆ. ಎಷ್ಟು ಜನ ನಿವೇಶನಗಳೇ ಇಲ್ಲದೆ ವಸತಿ ಹೀನರಾಗಿದ್ದಾರೆ, ಜನಸಂಖ್ಯೆಗೆ ತಕ್ಕಂತೆ ಯಾವ ಸಮುದಾಯಗಳು ಎಷ್ಟು ನೌಕರಿ ಪಡೆದುಕೊಂಡಿದ್ದಾರೆ. ಸರ್ಕಾರದ ಯಾವ ಸೌಲಭ್ಯಗಳು ಸಿಗದೇ ವಂಚಿತರಾಗಿರುವವರನ್ನು ಸಮೀಕ್ಷೆಯ ಮೂಲಕ ಗುರುತಿಸಿ ವಿವಿಧ ಸಮುದಾಯಗಳ ಹಿಂದುಳಿದಿರುವಿಕೆಯನ್ನು ಮಾನದಂಡವಾಗಿಟ್ಟುಕೊಂಡು ಗುರುತಿಸಲಾದ ತರ್ಕಬದ್ಧ ದತ್ತಾಂಶಗಳ ಆಧಾರದ ಮೇಲೆ 101 ಪರಿಶಿಷ್ಟ ಜಾತಿಗಳನ್ನು ಗುಂಪುಗಳಾಗಿ ವಿಂಗಡಿಸಿ ಜಾತಿ ಉಪಜಾತಿಗಳಿಗೆ ಸೂಕ್ತವಾದ 4 ಒಳ ಮೀಸಲಾತಿಯನ್ನು ನೀಡಲು ಶಿಫಾರಸ್ಸು ಮಾಡಿದ್ದಾರೆ. ಗ್ರೂಪ್ 1 ರಲ್ಲಿ ಮಾದಿಗ ಮತ್ತು ಸಂಬಂಧಿತ ಸಮುದಾಯಗಳಿಗೆ ಶೇ.6 ರಷ್ಟು ಗ್ರೂಪ್ 2 ರಲ್ಲಿ ಹೊಲೆಯರು ಮತ್ತು ಸಂಬಂಧಿತ ಸಮುದಾಯಗಳಿಗೆ ಶೇ.5 ರಷ್ಟು, ಗ್ರೂಪ್ 3 ರಲ್ಲಿ ಭೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯಗಳಿಗೆ ಶೇ.3 ರಷ್ಟು ಹಾಗೂ ಅಸ್ಪೃಶ್ಯರಲ್ಲಿ ಅಸ್ಪೃಶ್ಯರಾದ ಅಲೆಮಾರಿಗಳಿಗೆ ಶೇ.1 ರಷ್ಟು ಒಳ ಮೀಸಲಾತಿ ವರ್ಗೀಕರಣಕ್ಕಾಗಿ ಶಿಫಾರಸ್ಸು ಮಾಡಿ ಸರ್ಕಾರಕ್ಕೆ ದಿನಾಂಕ: 06.06.2012 ರಂದು ವರದಿಯನ್ನು ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಸದಾಶಿವ ಆಯೋಗವು ಆದಿಕರ್ನಾಟಕ, ಆದಿದ್ರಾವಿಡ ಮತ್ತು ಆದಿಆಂಧ್ರ ಎಂಬ ಜಾತಿಗಳ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಎಡಗೈ ಮತ್ತು ಬಲಗೈ ಸಮುದಾಯದ ಸಂಬಂಧಿತ ಉಪ ಸಮುದಾಯಗಳನ್ನು ಸರಿಯಾಗಿ ಗುರುತಿಸಿ ಯಾವುದೇ ಸಂಶಯಗಳು ಮತ್ತು ಗೊಂದಲಗಳು ಇಲ್ಲದೆ ವರದಿಯನ್ನು ನೀಡಿದ್ದಾರೆ. ಆದರೆ ನೀವು ವಿಳಂಬ ಮಾಡಿದ ನಮಗೆ ಸರಿ ಅನಿಸ್ತಾ ಇಲ್ಲ ಮುಂದಿನ ದಿನಗಳಲ್ಲಿ ನಾವು ತುಂಬಾ ಉಗ್ರ ಹೋರಾಟ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ದಲಿತ ಸಂಘಟನೆ ಮುಖಂಡರು ಹಾಗೂ ಮಾದಿಗ ಸಂಘಟನೆ ಮುಖಂಡರು ಮತ್ತು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ದತ್ತು ಸೂರ್ಯವಂಶಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಕೋಟೆ, ರಾಜ್ಯ ಕಾರ್ಯದರ್ಶಿ ಜಿ.ಆಸ್ಕರ್ , ಸತ್ಯದೀಪ ರಾಜ್ಯ ಪ್ರಧಾನ ಕಾರ್ಯದರ್ಶಿಗಳು , ಜಿಲ್ಲಾಧ್ಯಕ್ಷರಾದ ಯೊಹಾನ್ ಡಿಸೋಜಾ ಚಿಲ್ಲರ್ಗಿ, ಗುಣವಂತ ಶಿಂಧೆ ಜಿಲ್ಲಾ ಉಪಾಧ್ಯಕ್ಷರು, ಶಿವರಾಜ್ ಮಾದಿಗ ಉಪಾಧ್ಯಕ್ಷರು, ದತ್ತು ಭಂಡಾರಿ ಜಿಲ್ಲಾ ಸಂಯೋಜಕರು, ಲಾಲಪ್ಪ ನಿರ್ಣ ಮಾದಿಗ ಅಧ್ಯಕ್ಷರು ಸೇರಿದಂತೆ ಹಾಗೂ ಇನ್ನಿತರು ಉಪಸ್ಥಿತರಿದ್ದರು.
ವರದಿ ರೋಹನ್ ವಾಘಮಾರೆ
