
ರಾಯಚೂರು/ಸಿಂಧನೂರು :
ಇಂದಿನ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹಾಸುಹೊಕ್ಕಾಗಿರುವ ಕೃತಕ ಬುದ್ಧಿಮತ್ತೆ (ಎ.ಐ) ಯನ್ನು ಸೀಮಿತವಾಗಿ ಬಳಸಿಕೊಂಡು ನಾವುಗಳು ಅಭಿವೃದ್ಧಿ ಹೊಂದಬೇಕು ಎಂದು ಕಲಮಂಗಿ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕ ವೀರೇಶ ಗೋನವಾರ ಹೇಳಿದರು.
ಅವರು ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಯಚೂರು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಶಾಲಾ ಶಿಕ್ಷಣ ಇವರ ಸಹಯೋಗದಲ್ಲಿ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ‘ಕೃತಕ ಬುದ್ಧಿಮತ್ತೆ ವಿಷಯದ’ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ನೀಡುತ್ತಾ, ಮನುಷ್ಯ ದೈಹಿಕ ಅಥವಾ ಬೌದ್ಧಿಕವಾಗಿ ನಿರ್ವಹಿಸಬಹುದಾದ ಕೆಲಸವನ್ನು ತಂತ್ರಜ್ಞಾನ ಆಧಾರಿತವಾದ ಸಾಧನಗಳ ಮೂಲಕ ಮಾಡುವಂತಹ ಅಥವಾ ಮಾಡಿಸುವಂತಹ ಆವಿಷ್ಕಾರವನ್ನು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಎಂದು ಕರೆಯಲಾಗುತ್ತದೆ. ಅಮೆರಿಕಾದ ಕಂಪ್ಯೂಟರ್ ವಿಜ್ಞಾನಿ ಜಾನ್ ಮೆಕಾರ್ತಿಯವರು 1956ರಲ್ಲಿ ಮೊದಲ ಬಾರಿಗೆ ಎ.ಐ ಪದವನ್ನು ಬಳಕೆ ಮಾಡುತ್ತಾರೆ. ಆದ್ದರಿಂದ ಇವರನ್ನು ಕೃತಕ ಬುದ್ಧಿಮತ್ತೆಯ ಪಿತಾಮಹ ಎಂದು ಕರೆಯಲಾಗುತ್ತದೆ. ಇಂದು ವೈದ್ಯಕೀಯ ತಪಾಸಣೆ, ಷೇರು ವ್ಯವಹಾರ, ಯಂತ್ರ ಮಾನವನ ನಿಯಂತ್ರಣ, ಕಾನೂನು, ವೈಜ್ಞಾನಿಕ ಅನ್ವೇಷಣೆ, ವಿಡಿಯೊ ಆಟಗಳು, ಆಟಿಕೆ ಸಾಮಾಗ್ರಿಗಳು, ವೆಬ್ ಶೋಧ ಯಂತ್ರಗಳು, ಮುದ್ರಣ ಮತ್ತು ದೃಶ್ಯ ಮಾಧ್ಯಮ, ಕೃಷಿ, ಇಂಜಿನೀಯರಿಂಗ್, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಕೃತಕ ಬುದ್ಧಿಮತ್ತೆಯಿಂದ ಮಾನವ ಮಾಡುವ ತಪ್ಪುಗಳ ನಿವಾರಣೆ, ಅಪಾಯಗಳಿಂದ ಪಾರು ಮಾಡುವ ಸಾಧನವಾಗಿ, ದಿನದ 24 ಗಂಟೆಗಳ ಕಾಲ ಲಭ್ಯತೆ, ಹೊಸ ಆವಿಷ್ಕಾರಗಳು, ಪಕ್ಷಪಾತವಿಲ್ಲದ ನಿರ್ಧಾರಗಳು, ದೈನಂದಿನ ಅಪ್ಲಿಕೇಶನ್ ಗಳು, ಅಪಾಯಕಾರಿ ಕೆಲಸಗಳಲ್ಲಿ ಎಐಗಳ ಬಳಕೆ, ವೈದ್ಯಕೀಯ ಅಪ್ಲಿಕೇಶನ್ಗಳು, ಮಾನವನ ಪ್ರವೃತ್ತಿಗಳನ್ನು ಗುರುತಿಸುವಿಕೆ ಹೀಗೆ ಇದರಿಂದ ಸಾಕಷ್ಟು ಅನಕೂಲಗಳು ಇದ್ದರೂ ಸಹ ಭವಿಷ್ಯದಲ್ಲಿ ನಿರುದ್ಯೋಗ ಸೃಷ್ಠಿಸುವುದರೊಂದಿಗೆ, ಯಾವುದೇ ಸೃಜನಶೀಲತೆ ಮತ್ತು ಭಾವನೆಗಳು ಇಲ್ಲದೆ ಇದು ಕಾರ್ಯನಿರ್ವಹಿಸುತ್ತಿದೆ. ಇದರ ಅತಿಯಾದ ಬಳಕೆಯಿಂದ ಮಾನವನ ಬೌಧ್ಧಿಕ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಇಂದು ನಾವು ಪ್ರತಿಯೊಂದಕ್ಕೂ ಎ.ಐ ಗೆ ಅವಲಂಬಿತರಾಗಿದ್ದೇವೆ. ಆದ್ದರಿಂದ ನಾವುಗಳು ಕೃತಕ ಬುದ್ಧಿಮತ್ತೆಗೆ ಹೆಚ್ಚು ಅವಲಂಭಿತರಾಗದೇ ಮಾನವನಿಗೆ ಲಭಿಸಿರುವ ಅಗಾಧವಾದ ಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿಹೊಂದಬೇಕು ಎಂದು ಹೇಳುತ್ತಾ ಕೃತಕ ಬುದ್ಧಿಮತ್ತೆಯ ವಿಧಗಳು, ಮಹತ್ವ ಮತ್ತು ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆಯ ಕುರಿತು ಉಪನ್ಯಾಸವನ್ನು ನೀಡಿದರು.
ಶಾಲಾ ಮುಖ್ಯಗುರುಗಳಾದ ಮಲ್ಲಪ್ಪ ಬಾದರ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಸರ್ಕಾರ, ನಮ್ಮ ಇಲಾಖೆ ಹಾಗೂ ವಿವಿಧ ಇಲಾಖೆಗಳು ಜಾರಿಗೆ ತರುತ್ತಿರುವ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳುತ್ತಾ, ಶಾಲೆಯ ವಿದ್ಯಾರ್ಥಿಗಳು ತಾಜ್ಯ ವಸ್ತುಗಳಿಂದ ಅತ್ಯಂತ ಆಕರ್ಷಕ ಮಾದರಿಗಳನ್ನು ಮಾಡಿದ್ದಾರೆ. ಈ ದಿನ ಕೃತಕ ಬುದ್ಧಿಮತ್ತೆಯ ಕುರಿತು ಶಿಕ್ಷಕರಾದ ವೀರೇಶ ಗೋನವಾರ ಅವರು ಮನಮುಟ್ಟುವಂತೆ ಉಪನ್ಯಾಸ ನೀಡಿದರು ಎಂದರು.
ವೇದಿಕೆಯ ಮೇಲೆ ಶಾಲಾ ಶಿಕ್ಷಕರಾದ ಸುಭಾಷಚಂದ್ರ ಪತ್ತಾರ, ರವಿಚಂದ್ರ, ಎಂ.ಮಾರುತಿ. ಬಸವರಾಜ, ವಿಜ್ಞಾನ ಶಿಕ್ಷಕರಾದ ರೂಪಾ ಪ್ರಸ್ತಾವಿಕವಾಗಿ ಮಾತನಾಡಿದರು.
ಪ್ರದರ್ಶನ :
ಶಾಲೆಯ 8,9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ತಾಜ್ಯ ವಸ್ತುಗಳಿಂದ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಆಕರ್ಷಕ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು. ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಾದರಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಬಹುಮಾನ ವಿತರಣೆ:
ಮಾದರಿಗಳಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದ ಶಾಂತಮ್ಮ, ಕೌಶಲ್ಯ, ಮನು ಇವರಿಗೆ ಪ್ರಶಸ್ತಿಪತ್ರ ಮತ್ತು ನಗದು ಬಹುಮಾನಗಳನ್ನು ವಿತರಿಸಲಾಯಿತು.
