ಪ್ರತಿ ೧೪೪ ವರ್ಷಗಳಿಗೊಮ್ಮೆ ಅಂದರೆ ೧೨ ಪೂರ್ಣ ಕುಂಭಮೇಳದ ನಂತರ ಆಯೋಜಿಸಲಾಗುವ ಮಹಾಕುಂಭಮೇಳವು ಪ್ರಯಾಗ ರಾಜ್ ನ ಗಂಗಾ-ಯುಮುನಾ-ಸರಸ್ವತಿ ತ್ರಿವೇಣಿ ಸಂಗಮದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ. ೨೦೨೫ ರ ಮಹಾ ಕುಂಭಮೇಳವು ಈಗಾಗಲೇ ಜನವರಿ ೧೩ ರಂದು ಪ್ರಾರಂಭವಾಗಿದ್ದು, ಫೆಬ್ರವರಿ ೨೬ (ಶಿವರಾತ್ರಿ ಹಬ್ಬ) ರವರೆಗೆ ಜರುಗಲಿದೆ. ಮಹಾ ಕುಂಭ ಮೇಳವು ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವವಾಗಿದ್ದು, ಮನುಕುಲದ ಹಿಂದೂ ಆಚರಣೆಯ ಪರಾಕಾಷ್ಠೆಯಾಗಿದೆ. ಪ್ರಪಂಚಾದ್ಯಂತ ೪೦ ಕೋಟಿ ಭಕ್ತರು ಈ ಮಹಾಕುಂಭಮೇಳದಲ್ಲಿ ಭಾಗವಹಿಸುವ ಅಂದಾಜಿದ್ದು, ಈಗಾಗಲೇ ಸುಮಾರು ೩೦ ಕೋಟಿಗೂ ಹೆಚ್ಚು ಭಕ್ತರು ಈ ದೊಡ್ಡ ಧಾರ್ಮಿಕ ಜಾತ್ರೆಯಲ್ಲಿ ಭಕ್ತಿಯಿಂದ ಪಾಲ್ಗೊಂಡಿದ್ದಾರೆ. ಈ ಅವಧಿಯಲ್ಲಿ ಒಟ್ಟು ಆರು ಪವಿತ್ರ (ಶಾಹಿ) ಸ್ನಾನಗಳು ನಡೆಯಲಿದ್ದು, ಈಗಾಗಲೇ ನಾಲ್ಕು ಪವಿತ್ರ ಸ್ನಾನಗಳು ಮುಗಿದಿದೆ. ಇನ್ನುಳಿದ ಎರಡು ಪವಿತ್ರ ಸ್ನಾನಗಳು ಫೆಬ್ರವರಿ ೧೨ ( ಪೂರ್ಣ ಹುಣ್ಣಿಮೆ ) ೨೬ (ಶಿವರಾತ್ರಿ ಹಬ್ಬದಂದು) ನಡೆಯಬೇಕಾಗಿದೆ.
ಹಾಗಾದರೆ ಪೂರ್ಣ ಕುಂಭಮೇಳ ಮತ್ತು ಮಹಾಕುಂಭಮೇಳ ಎಂದರೇನು ಮತ್ತು ಇವು ಎಲ್ಲಿ ನಡೆಯುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಪೂರ್ಣ ಕುಂಭಮೇಳವು ಹನ್ನೆರಡು ವರ್ಷಗಳಿಗೊಮ್ಮೆ ನಡೆಯಲಿದ್ದು, ಈ ಮೇಳವು ಪ್ರಯಾಗ್ ರಾಜ್ , ನಾಸಿಕ್, ಹರಿದ್ವಾರ ಮತ್ತು ಉಜೈನಿಯಲ್ಲಿ ಜರುಗುತ್ತದೆ. ಮಹಾ ಕುಂಭಮೇಳವು ೧೪೪ ವರ್ಷಗಳಿಗೊಮ್ಮೆ (ಅಂದರೆ ೧೨ ಪೂರ್ಣ ಕುಂಭಗಳು ನಂತರ ) ನಡೆಯಲಿದ್ದು, ಇದು ಪ್ರತಿ ಬಾರಿಯೂ ಪ್ರಯಾಗ್ ರಾಜ್ ನಲ್ಲಿ ಮಾತ್ರ ಆಚರಿಸಲಾಗುವುದು. ಕೊನೆಯ ಮಹಾಕುಂಭ ಮೇಳವು ೧೮೮೦ ರಲ್ಲಿ ಜರುಗಿದ್ದು, ಮುಂದಿನ ಮಹಾ ಕುಂಭಮೇಳವು ಮುಂದಿನ ಶತಮಾನ ೨೧೬೯ ರಲ್ಲಿ ಜರುಗಲಿದೆ.
ಪೂರ್ಣ ಮತ್ತು ಮಹಾಕುಂಭಮೇಳವು ಈ ನಾಲ್ಕು ಶ್ರದ್ಧಾ ಮತ್ತು ಪವಿತ್ರ ಕ್ಷೇತ್ರದಲ್ಲಿ ಮಾತ್ರ ನಡೆಯುತ್ತದೆ ಎಂಬುದಕ್ಕೆ ಧಾರ್ಮಿಕ ಹಿನ್ನೆಲೆ ಇದೆ. ಸಮುದ್ರ ಮಂಥನ ಸಮಯದಲ್ಲಿ ಗರುಡ ಅಮೃತ ಕಲಶವನ್ನು ಒಯ್ಯುವಾಗ ಹರಿದ್ವಾರ, ಉಜ್ಜಯಿನಿ, ನಾಸಿಕ್ ಮತ್ತು ಪ್ರಯಾಗ್ ರಾಜ್ – ಈ ನಾಲ್ಕು ಸ್ಥಳಗಳಲ್ಲಿ ಅಮೃತದ ಹನಿಗಳು ಬಿದ್ದವು ಎನ್ನಲಾಗಿದೆ. ಆದ್ದರಿಂದ ಈ ಸ್ಥಳಗಳಲ್ಲಿ ಪ್ರತಿ ೧೨ ವರ್ಷಗಳಿಗೊಮ್ಮೆ ಕುಂಭಮೇಳವು ಜರುಗಲಿದೆ. ಈ ಕುಂಭಮೇಳವು ಎಂದು ಪ್ರಾರಂಭವಾಯಿತು ಎಂಬುದಕ್ಕೆ ಖಚಿತ ಮಾಹಿತಿಯಿಲ್ಲ. ಕುಂಭಮೇಳದ ಪ್ರಾಚೀನತೆಗೆ ಪುರಾವೆಯಾಗಿ ಅನೇಕರು ಸ್ಕಂದ ಪುರಾಣವನ್ನು ಉಲ್ಲೇಖಿಸುತ್ತಾರೆ. ಏಳನೇ ಶತಮಾನದಲ್ಲಿ ರಾಜ ಹರ್ಷವರ್ಧನ ಕಾಲದಲ್ಲಿ ಭಾರತಕ್ಕೆ ಬಂದ ಚೀನೀ ಯಾತ್ರಿಕ ಕ್ಸುವಾನ್‌ಜಾಂಗ್ (ಹ್ಯೂಯೆನ್ ತ್ಸಾಂಗ್) ಪ್ರಯಾಗದಲ್ಲಿ ನಡೆದ ಧಾರ್ಮಿಕ ಸಂಗಮದಲ್ಲಿ ಸುಮಾರು ಐವತ್ತು ಲಕ್ಷಕ್ಕೂ ಹೆಚ್ಚು ತೀರ್ಥಯಾತ್ರಿಗಳು ನದಿಯಲ್ಲಿ ಪವಿತ್ರ ಸ್ನಾನಮಾಡಿ ತಮ್ಮ ಪಾಪಗಳನ್ನು ತೊಳೆದುಕೊಂಡರು ಎಂದು ಬರೆದಿದ್ದಾನೆ.
ನಾಗು ಸಾಧುಗಳು- ಸಾಧುಗಳು -ಧರ್ಮ ಗುರುಗಳು-ಧಾರ್ಮಿಕ ಮುಖಂಡರು ಮತ್ತು ಭಕ್ತರ ಧಾರ್ಮಿಕ ಸಮಾಗಮ
ನಾಗಾ ಸಾಧುಗಳು ವಿವಿಧ ಹಿಂದೂ ಸನ್ಯಾಸಿಗಳ ವರ್ಗಗಳಿಗೆ ಸೇರಿದ ತಪಸ್ವಿ ಸಂತರು, ಪ್ರಧಾನವಾಗಿ ಶೈವ ಮತ್ತು ವೈಷ್ಣವ ಪಂಥಗಳು. ತಮ್ಮ ಜೀವನವನ್ನು ಆಧ್ಯಾತ್ಮಿಕ ಜ್ಞಾನೋದಯ ಮತ್ತು ಧರ್ಮ ರಕ್ಷಣೆಗಾಗಿ ಮುಡಿಪಾಗಿಡಲು ಎಲ್ಲಾ ಭೌತಿಕ ಸಂಪತ್ತನ್ನು ತ್ಯಜಿಸುತ್ತಾರೆ. ಅವರು ಬೂದಿ ಲೇಪಿತ ದೇಹಗಳಿಗೆ ಜಡೆ ಕೂದಲು ಮತ್ತು ಕನಿಷ್ಠ ಉಡುಪುಗಳನ್ನು ಧರಿಸುತ್ತಾರೆ. ಅವರಿಗೆ ಕುಂಭಮೇಳದಲ್ಲಿ ತಂಗಲು ವಿಶೇಷ ಸ್ಥಳವನ್ನು ಕಲ್ಪಿಸಿರುತ್ತಾರೆ ಮತ್ತು ಪ್ರತಿ ಪವಿತ್ರ ಸ್ನಾನಗಳಿಗೆ ಇವರಿಗೆ ಮೊದಲ ಅವಕಾಶ. ವಿಶ್ವದ ಎಲ್ಲಾ ಧರ್ಮ ಗುರುಗಳು ಮತ್ತು ಧಾರ್ಮಿಕ ಮುಖಂಡರು ಇಲ್ಲಿ ತಾತ್ಕಾಲಿಕ ಆಶ್ರಮಗಳನ್ನು ತೆರೆದು ತನ್ನ ಭಕ್ತರಿಗೆ ಉಳಿಯಲು ಅವಶ್ಯಕ ವ್ಯವಸ್ಥೆ ಮತ್ತು ಮಾರ್ಗದರ್ಶನವನ್ನು ನೀಡುತ್ತಾರೆ ಮತ್ತು ಇಲ್ಲಿ ದಿನದ ೨೪ ಗಂಟೆಗಳೂ ಹೋಮ, ಭಜನೆ ಮತ್ತು ಪ್ರವಚನಗಳು ನಡೆಯುತ್ತಿದ್ದು, ನೆರದ ಭಕ್ತರು ಈ ಧಾರ್ಮಿಕ ಆಚರಣೆಯಲ್ಲಿ ಭಾಗಿಯಾಗಿ ಪುನೀತರಾಗುತ್ತಾರೆ.
- ಎಂ. ವೆಂಕಟೇಶ ಶೇಷಾದ್ರಿ
