ಬೀದರ : ಪ್ರಯಾಗ್ ರಾಜ್ ಕುಂಭಮೇಳಕ್ಕೆ ತೆರಳಿದ ವೇಳೆ ಉತ್ತರ ಪ್ರದೇಶದ ರುಪಾಪೂರ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ಜಿಲ್ಲೆಯ ಐವರು ಯಾತ್ರಿಕರು ದುರ್ಮರಣಕ್ಕೀಡಾಗಿರುವ ದುಃಖದ ಸುದ್ದಿ ಆಘಾತ ತಂದಿದೆ. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬದೊಂದಿಗೆ ಬೀದರ್ ಲೋಕ ಸಭಾ ಕ್ಷೇತ್ರದ ಸಂಸದರಾದ ಸನ್ಮಾನ್ಯ ಶ್ರೀ ಸಾಗರ್ ಖಂಡ್ರೆ ಅವರು ಆಳವಾದ ಸಂತಾಪ ವ್ಯಕ್ತಪಡಿಸಿದಾರೆ.
ಲಾಡಗೇರಿಯ 14 ಜನರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ ಲಾರಿಯೊಂದಿಗೆ ಡಿಕ್ಕಿಯಾಗಿ ಈ ಭೀಕರ ಅಪಘಾತ ಸಂಭವಿಸಿದ್ದು, 5 ಮಂದಿ ಸಾವನ್ನಪ್ಪಿದರೆ, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ತಕ್ಷಣವೇ ಸೂಕ್ತ ಚಿಕಿತ್ಸೆ ನೀಡಲು ಹಾಗೂ ಮೃತದೇಹಗಳನ್ನು ಬೀದರ್‌ಗೆ ತರಲು ಜಿಲ್ಲಾಡಳಿತಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ್ ಖಂಡ್ರೆ ಅವರು ಸೂಚಿಸಿದ್ದಾರೆ.
ಅಲ್ಲಿನ ಕರ್ನಾಟಕದ ಅಧಿಕಾರಿಯಾದ ಶ್ರೀ ಚನ್ನಪ್ಪ ಅವರೊಂದಿಗೆ ಸಂಪರ್ಕ ಹೊಂದಿ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಕುಟುಂಬಗಳಿಗೆ ನೆರವು ಒದಗಿಸಲು ಸಂಸದ ಸಾಗರ್ ಖಂಡ್ರೆ ಅವರು ತಿಳಿಸಿದ್ದಾರೆ. ಸರ್ಕಾರ ಈ ಸಂಕಷ್ಟದ ಸಮಯದಲ್ಲಿ ಅವರೊಂದಿಗೆ ನಿಲ್ಲುತ್ತದೆ.
ಮೃತರ ಕುಟುಂಬಗಳಿಗೆ ದೇವರು ದುಃಖ ಸಹಿಸುವ ಶಕ್ತಿಯನ್ನು ನೀಡಲಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇವೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ
