ಪ್ರತಿ ವರ್ಷದಲ್ಲಿ ನವರಾತ್ರಿ ಹಾಗೂ ಶಿವರಾತ್ರಿ ಹಬ್ಬದಂದು ಬಸವಕಲ್ಯಾಣ ನಗರದ ಗವಿಮಠದಲ್ಲಿ ಘನಲಿಂಗ ರುದ್ರಮುನಿ ದೇಗುಲದಲ್ಲಿ ಸೂರ್ಯೋದಯ ವೇಳೆ ವಿಸ್ಮಯವೊಂದು ನಡೆಯಿತು. ಸೂರ್ಯನ ಬೆಳಕು ನೇರವಾಗಿ ಶಿವಲಿಂಗ (ಘನಲಿಂಗ ರುದ್ರಮುನಿ ಮೂರ್ತಿಯ) ಮೇಲೆ ಬಿದ್ದಿತು. ಸೂರ್ಯ ದಕ್ಷಿಣ ಪಥದಿಂದ ಉತ್ತರಕ್ಕೆ ಪಥ ಸಂಚಲನ ಮಾಡುವ ವೇಳೆ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸಿತು.
ಮುಂಜಾನೆಯ ೬.೨೦ ರಿಂದ ೬.೪೦ ನಿಮಿಷದವರೆಗೆ ಸೂರ್ಯರಶ್ಮಿ ನಂದಿಕೊಂಬಿನ ಮೂಲಕ ಹಾದುಹೋಗಿ ಘನಲಿಂಗ ರುದ್ರಮುನಿ ದೇವರಿಗೆ ನಮಿಸಿತು. ನಮ್ಮ ಸಾಹಿತ್ಯದಲ್ಲಿ ಹೇಳುವದಾದರೆ ಬೆಂಕಿಯ ಪಕ್ಷಿ ವರ್ಷದಲ್ಲಿ ನವರಾತ್ರಿ ಹಾಗೂ ಶಿವರಾತ್ರಿ ಸಂದರ್ಭದಲ್ಲಿ ಮಾತ್ರ ಕಾಣುವ ಅದ್ಭುತ ದೃಶ್ಯ. ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಅವಳಿ ಗ್ರಾಮ ತ್ರಿಪೂರಾಂತದಲ್ಲಿ ೧೨ನೇ ಶತಮಾನದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಗವಿ ಮಠದಲ್ಲಿ ಈ ಅದ್ಭುತವನ್ನು ಕಾಣಬಹುದು.
ಗವಿಮಠದ ಸ್ವರೂಪ
ಗವಿ ಮಠದ ಮುಂಭಾಗದಲ್ಲಿ ವಿಶಾಲವಾದ ಸಭಾ ಭವನ ನಿರ್ಮಿಸಲಾಗಿದೆ. ಇದರ ಹಿಂಬದಿಗೆ ೧೩/೪೯ ಅಂಗುಲ ನವರಂಗ, ಮಧ್ಯದ ಗೋಡೆಗೆ ೨/೪ ಅಂಗುಲದ ಪೂರ್ವಾಭಿಮುಖವಾಗಿ ಗರ್ಭಗ್ರಹದ ಒಂದು ಚಿಕ್ಕ ದ್ವಾರವಿದೆ ಮೇಲ್ಭಾಗದಲ್ಲಿ ಶಿವಲಿಂಗದ ಕೆತ್ತನೆಯಿದೆ. ಅದರ ಮೇಲೆ ರುದ್ರಾಕ್ಷಿಯ ತೋರಣವಿದೆ ಗರ್ಭಗೃಹ ದ್ವಾರದಿಂದ ಒಳಗಡೆ ಪ್ರವೇಶಿಸಿದರೆ, ಕೆಂಪು ಬಂಡೆಗಲ್ಲಿನಲ್ಲಿ ಕೊರೆದಿರುವ ಸುಮಾರು ೫೦ ಅಡಿ ಉದ್ದದ ಸುರಂಗ ಮಾರ್ಗ ಇರುವದು. ಸಪ್ತ ಮೆಟ್ಟಿಲಗಳನಿಳಿದು ಮುಂದೆ ಹೋದಂತೆ ಅಗಲ ೬ ಅಡಿ, ಎತ್ತರ ೯ ಅಡಿ, ಅರ್ಧದಿಂದ ಮುಂದೆ ಹೋದರೆ ಎತ್ತರ ೬ ಅಡಿಗೆ ಇಳಿಯುತ್ತದೆ.ಇದುವೇ ಘನಲಿಂಗ ರುದ್ರಮುನಿಯವರ ಗವಿ ಎನ್ನುವರು. ಮುಂದೆ ಮಠ ಕಟ್ಟಿರುವದರಿಂದ ಗವಿಮಠವೆಂದು ಕರೆಯುತ್ತಾರೆ. ಗರ್ಭಗ್ರಹದ ದ್ವಾರದ ಎಡಭಾಗದ ಗೋಡೆಗೆ ಚಿಕ್ಕ ಗರುಡ ವಿಗ್ರಹವಿದೆ ಇದರಂತೆ ದೊಡ್ಡ ಶಿಲ್ಪ ನುಣುಪಾಗಿರುವ ಬಸವಕಲ್ಯಾಣದ ವಸ್ತುಸಂಗ್ರಹಾಲಯದಲ್ಲಿದೆ.
ಈ ಗವಿ ಅಷ್ಟೇನು ನುಣುಪು ಸುಂದರ ಕೆತ್ತನೆ ಇಲ್ಲದಿದ್ದರೂ ಅಂಕುಡೊಂಕು ಇರುವ ಈ ಗವಿ ಪ್ರಶಾಂತ ವಾತವರಣ. ಒಂದೇ ಕಡೆ ಕೇಂದ್ರಿಕರಿಸುವಂತಹ ರೋಮಾಂಚನ ಮೂಡಿಸುವ ಸ್ಥಳ. ಈ ಗವಿಯ ಕೊನೆಗೆ ಪಾಣಿ ಪೀಠವಿದ್ದು ಮೇಲೆ ಶಿವಲಿಂಗ ಪ್ರತಿಷ್ಠಾಪಿಸಿ ಅದರ ಮೇಲೆ ತಾಮ್ರಪಟದ ಘನಲಿಂಗ ರುದ್ರಮನಿಯ ಮೂರ್ತಿ ತಾಮ್ರಪಟದಿಂದ ಮಾಡಿ ಶಿವಲಿಂಗದ ಮೇಲೆ ಕೂಡಿಸಲಾಗಿದೆ. ಅರ್ಧ ಚಂದ್ರಾಕೃತಿಯ ಇರುವ ಈ ಸುರಂಗ ಮಾರ್ಗದ ಗವಿಯಲ್ಲಿದ್ದ ಮೂರ್ತಿಯ ಮೇಲೆ ಸೂರ್ಯೋದಯದ ಕಿರಣಗಳು ಬೀಳುವ ಹೊನಲು ಬೆಳಕಿನ ವಿಶೇಷತೆ ಇಲ್ಲಿ ಕಾಣಬಹುದು.
ಇಡೀ ಮಠದ ತುಂಬ ಚಿನ್ನ ಲೇಪನದಂತೆ ಗೋಚರಿಸಿಸುತ್ತದೆ. ಈ ದೃಶ್ಯ ನೋಡುವ ಭಾಗ್ಯ ಶಿವರಾತ್ರಿ ಮತ್ತು ನವರಾತ್ರಿ ಹಬ್ಬದಲ್ಲಿ ಮಾತ್ರ ಸಾಧ್ಯ.
ಈ ಸಮಯದಲ್ಲಿ ನೂರಾರು ಸದ್ಭಕ್ತರು ಬರುತ್ತಾರೆ. ತಮ್ಮ ಮನಃಪೂರ್ವಕವಾಗಿ ಏನು ಬೇಕಾದರೂ ಬೇಡಿಕೊಂಡರು ಫಲ ಪ್ರಾಪ್ತಿವಾಗುತ್ತದೆಂಬ ಅಚಲ ನಂಬಿಕೆ. ಗವಿಯ ಅರ್ಧಭಾಗದಲ್ಲಿ ಎರಡು ಬದಿಗೆ ಕುಳಿತುಕೊಳ್ಳಲು ಜಗುಲಿಗಳಿವೆ. ಒಳಗೆ ಬಂದು ನಮಸ್ಕರಿಸಿ ಈ ಜಗುಲಿಯೊಳಗೆ ಕುಳಿತು ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಕುಳಿತುಕೊಂಡು ಧ್ಯಾನಸ್ತರಾಗುತ್ತಾರೆ. ಹೀಗೆ ಮಾಡಿದರೆ ಮನಸ್ಸಿನೊಳಗೆ ಏನೋ ಒಂದು ಪರಿವರ್ತನೆ ಆಗುವದೆಂದು ನಂಬಿಕೆ. ಈ ಗವಿಯೊಳಗೆ ಮತ್ತೆ ಉತ್ತರ ದಕ್ಷಿಣಕ್ಕೆ ಎರಡು ಚಿಕ್ಕ ದ್ವಾರಗಳಿವೆ. ದಕ್ಷಿಣ ದ್ವಾರದ ಒಳಗಡೆ ಬಂದರೆ ಮತ್ತೆ ಪೂರ್ವಾಕ್ಕೆ ತೆರೆದ ಬಾಗಿಲು ಇದ್ದಂತೆ ಕಾಣುತ್ತದೆ. ಆದರೆ ಅದು ಮುಚ್ಚಲಾಗಿದೆ. ಇಲ್ಲಿಂದ ಗವಿಯ ಮುಂಭಾಗದಲ್ಲಿ ನಿರ್ಮಾಣವಾಗಿರುವ ಉತ್ತರ ದಕ್ಷಿಣಕ್ಕೆ ಎರಡು ಕೋಣೆಗಳಿವೆ. ದಕ್ಷಿಣದ ಕೋಣೆಯಲ್ಲಿ ಮರಿದೇವರ ಗದ್ದುಗೆ ಇದೆ. ಇದು ಬೆಟ್ಟದಲ್ಲಿ ಅಥವಾ ಗುಡ್ಡದಲ್ಲಿ ಕೊರೆದಿರುವದರಿಂದ ಈ ಮಠಕ್ಕೆ ಇಂದಿಗೂ ಕೂಡಾ ಮರಿದೇವರ ಗುಡ್ಡ ಎಂದು ಕರೆಯುವ ಕೆಲವರಲ್ಲಿ ರೂಢಿಯಲ್ಲಿದೆ. ಮಠದ ಮುಂಭಾಗದಲ್ಲಿ ಚಾಲುಕ್ಯರ ಕಾಲದ ಕಲ್ಲಿನ ಸ್ತಂಬವಿದೆ ಮೇಲ್ಭಾಗದ ಮಾತ್ರ ಉಳಿದದ್ದು ಅದರ ಮೂರು ಭಾಗದಲ್ಲಿ ಕನ್ಯೆಯರ ಶಿಲ್ಪ ಕೆತ್ತಲಾಗಿದೆ. ಕನ್ನಡಿ ಹಿಡಿದು. ಸಿಂಗರಿಸಿಕೊಳ್ಳುವುದು, ಡಮರು ಭಾರಿಸುವುದು, ಮತ್ತು ನಿಂತಿರುವ ಭಂಗಿಯಲ್ಲಿವೆ. ಈ ಸ್ತಂಬದ ಮೇಲೆ ಕಬ್ಬಿಣದ ಸ್ತಂಬ ಕೂಡಿಸಿ ಅದರ ಮೇಲೆ ಪಂಚಾಚಾರ್ಯರ ಪಂಚ ವರ್ಣದ ಧ್ವಜ ಸದಾ ಹಾರಾಡುತ್ತಲಿರುತ್ತದೆ.
ಚಿತ್ರ ಲೇಖನ- ವೀರಶೆಟ್ಟಿ ಎಂ.ಪಾಟೀಲ, ಬಸವಕಲ್ಯಾಣ.
ವರದಿ : ಶ್ರೀನಿವಾಸ ಬಿರಾದಾರ