ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರೇಕ್ಷಕರ ಮನ ಗೆದ್ದ “ವೀರ ಚಂದ್ರಹಾಸ”

ಚಂದ್ರಹಾಸನ ಕಥೆಯನ್ನು ಅದೆಷ್ಟೋ ಬಾರಿ ನಾವು ಕೇಳಿದ್ದೇವೆ, ಯಕ್ಷಗಾನದಲ್ಲಿ ಹಲವು ಬಾರಿ ನೋಡಿದ್ದೇವೆ. ಲಕ್ಷ್ಮೀಶ ಕವಿ ಬರೆದ ಜೈಮಿನಿ ಭಾರತದಿಂದ ಈ ಕಥೆಯನ್ನು ಹೊರತೆಗೆದು ಕುವೆಂಪುರವರು‌ ಒಂದು ಅದ್ಭುತವಾದ ನಾಟಕವನ್ನೂ
ಬರೆದಿದ್ದಾರೆ.

ಹೀಗೆ ನಾಟಕವಾಗಿ ಕಂಡ, ಯಕ್ಷಗಾನ ರಂಗಭೂಮಿಯಲ್ಲಿ ಹಲವು ಶ್ರೇಷ್ಠ ಕಲಾವಿದರ ಪಾರಮ್ಯದಲ್ಲಿ ಮೆರೆದ ಈ ಕತೆ ಚಲನಚಿತ್ರವಾಗಿ ಹೇಗೆ ಮೂಡಿ ಬಂದೀತು ಎಂಬ ಕುತೂಹಲದೊಂದಿಗೆ ಕುಂದಾಪುರದ ಭಾರತ್ ಸಿನಿಮಾವನ್ನು ಹೊಕ್ಕವ ನಾನು.
ಯಕ್ಷಗಾನವೇ ಆದರೇ ಆ ರಂಗಭೂಮಿಯಲ್ಲಿ ಒಂದು ಮಿತಿಯಿದೆ. ಭಾಗವತನ ಪೂರ್ಣ ಕಂಟ್ರೋಲ್ ಇದೆ. ಅವನೇ ನಿರ್ದೇಶಕ.
ಪೌರಾಣಿಕ ನಾಟಕವಾದಲ್ಲಿ ಅದರದ್ದೇ ಆದ ವೇಷಭೂಷಣ , ಹಿನ್ನೆಲೆ ಸಂಗೀತ, ದೃಶ್ಯಗಳು ಸಾಗಿ ಹೋಗಲು ಒಂದು ರಂಗ ನಡೆಯಿದೆ.
ಇದು ನಾಟಕವಲ್ಲವಂತೆ, ಯಕ್ಷಗಾನವಂತೆ ,ಅದೂ ಸಿನಿಮಾವಾಗಿ ಯಕ್ಷಗಾನವಂತೆ ಎಂದೆಲ್ಲಾ ಹೇಳುವಾಗ ಕುತೂಹಲ ಸ್ವಾಭಾವಿಕವಾಗಿಯೇ ಗರಿಗೆದರಿತ್ತು.

ಹಾಗೇ ಯೋಚನೆ ಮಾಡುತ್ತಾ ಚಿತ್ರ ವೀಕ್ಷಣೆಯಲ್ಲಿ ತೊಡಗಿಸಿಕೊಂಡೆ.

ಚಿತ್ರದ ಆರಂಭವೇ ಖುಷಿ ಕೊಟ್ಟಿತು. ಆಧುನಿಕ ತಂತ್ರಜ್ಞಾನವನ್ನು ಬಳಸಿ ಕುಂತಳ ಎಂಬ ರಾಜ್ಯ ವನ್ನು ತೋರಿಸಿದ ರೀತಿಯೇ ಅದ್ಭುತವಾಗಿ ಮೂಡಿ ಬಂದಿತು. ಚಿತ್ರದ ಪ್ರಾರಂಭದಲ್ಲಿಯೇ ಹೊಸತನ್ನು ನಿಮಗೆ ತೋರಿಸುತ್ತಿದ್ದೇವೆ ಎಂಬ ಸಂದೇಶವನ್ನು ನಿರ್ದೇಶಕರು ಆ ಮೂಲಕ ರವಾನಿಸುತ್ತಾರೆ.

ನೇರ ಕಥೆಯನ್ನು ಪ್ರಾರಂಭಿಸದೇ, ಆಶ್ರಮದಲ್ಲಿ ಗುರುವೋರ್ವ ತನ್ನ ಶಿಷ್ಯರಿಗೆ ಪಾಠ ಮಾಡುತ್ತಾ ಚಂದ್ರಹಾಸನೆಂಬ ವೀರನ ಕಥೆಯನ್ನು ಗುರು ಶಿಷ್ಯರ ಸಂವಾದದ ಮೂಲಕ ಹೇಳಿಸಿಕೊಂಡು ಹೋಗುವ ಬಗೆ ಹಿತವೆನಿಸುತ್ತದೆ.

ಹೀಗೆ ಈ ಚಿತ್ರ ಮುಂದುವರಿಯುತ್ತಾ ಹೊಸ ಅನುಭವವನ್ನು ನೀಡುತ್ತಾ ಸಾಗುತ್ತದೆ.

ಇಲ್ಲಿ ಹಳೆಯ ಸಂಪ್ರದಾಯದ ಜೊತೆಗೆ ಹೊಸತನವಿದೆ.
ಇಲ್ಲಿ ಯಕ್ಷಗಾನದ ಆಹಾರ್ಯವಿದೆ (ವೇಷಭೂಷಣ) ಭಾಗವತರಿದ್ದಾರೆ, ಆದರೆ ನಿರ್ದೇಶಕರಾಗಿರುವುದಿಲ್ಲ, ಜೊತೆಗೆ ಚಿತ್ರದಲ್ಲಿ ಕಾಣಲಿಕ್ಕೂ ಸಿಗುವುದಿಲ್ಲ. ಆದರೆ ದೃಶ್ಯದಿಂದ ದೃಶ್ಯಗಳು ಸಾಗಿ ಹೋಗಲು ಇವರ ಪದ್ಯಗಳೇ ಬಳಕೆಯಾಗಿದೆ.

ಅಭಿನಯದ ಬಗ್ಗೆ ಹೇಳುವುದಿದ್ದರೆ ದುಷ್ಟ ಬುದ್ಧಿಯ ಪಾತ್ರಧಾರಿಯಾದ ಪ್ರಸನ್ನ ಶೆಟ್ಟಿಗಾರ್ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಓರ್ವ ಖಳನಾಯಕ ಹೇಗಿರಬೇಕು ಎಂಬುದನ್ನು ಪ್ರಸನ್ನ ಶೆಟ್ಟಿಗಾರ್ ತನ್ನ ಗಂಭೀರವಾದ ಸ್ವರ, ಹಾವಭಾವ, ನಟನೆಯಿಂದ ಚಿತ್ರ ಮುಗಿಸಿ ಹೊರಗೆ ಬಂದು ಬಳಿಕವೂ ಪ್ರೇಕ್ಷಕರ ಮನಸ್ಸಿನಲ್ಲಿ ಕೆಲಕಾಲ ಉಳಿದು ಬಿಡುತ್ತಾರೆ.

ಇನ್ನೂ ವೀರ ಸಿಂಹನ ಪಾತ್ರದಲ್ಲಿ ಕಾಣಿಸಿಕೊಂಡ ಹವ್ಯಾಸಿ ಯಕ್ಷಗಾನ ಕಲಾವಿದರಾದ ಸನ್ಮಿತ್ರ ನವೀನ್ ಶೆಟ್ಟಿ ಐರಬೈಲು ಅದ್ಭುತವಾಗಿ ನಟಿಸಿದ್ದಾರೆ. ಕೇವಲ ನಟಿಸಿದ್ದಲ್ಲ, ನಿಜಕ್ಕೂ ಅಬ್ಬರಿಸಿದ್ದಾರೆ. ಡೈಲಾಗ್ ಡೆಲಿವರಿಯಂತೂ ಟಾಪ್ ಕ್ಲಾಸ್. ಈ ಚಿತ್ರದ ಯಶಸ್ಸಿಗೆ ಇವರೂ ಕೂಡಾ ಕಾರಣೀಕರ್ತರು ಅಂತಾ ಹೇಳಬಹುದು.
ಇನ್ನೂ ಮದನನಾಗಿ ಉದಯ್ ಹೆಗಡೆ ಕಡಬಾಳ ತಮ್ಮ ಎಂದಿನ ಲವಲವಿಕೆಯಿಂದ ಗಮನ ಸೆಳೆಯುತ್ತಾರೆ.
ವಿಷಯೆಯಾಗಿ ನಾಗಶ್ರೀಯವರು ಗಮನ ಸೆಳೆದಿದ್ದಾರೆ. ಕೀರ್ತಿ ಶೇಷ ಕಾಳಿಂಗ ನಾವುಡರ ಪದ್ಯಕ್ಕೆ ನೃತ್ಯ, ಮತ್ತು ತಮ್ಮ ಸಹಜ ಅಭಿನಯದಿಂದ ಪ್ರೇಕ್ಷಕರ ಮನ ಸೆಳೆಯುತ್ತಾರೆ.
ಯಕ್ಷಗಾನವನ್ನು ಕಲಿತ ಮತ್ತು ಕಿರುತೆರೆಯ ನಟಿಯೂ ಆದ ಕಾರಣ ಚಲನಚಿತ್ರದ ಈ ಪಾತ್ರಕ್ಕೆ ಇವರೇ ಸೂಕ್ತ ಆಯ್ಕೆ ಎಂಬುದನ್ನು ತಮ್ಮ ಅಭಿನಯದಿಂದ ಶ್ರುತಪಡಿಸಿದ್ದಾರೆ.

ಇನ್ನೂ ಚಂದ್ರಹಾಸನ ಪಾತ್ರಧಾರಿಯಾದ ಶಿಥಿಲ್ ಇನ್ನೂ ಚೆಂದವಾಗಿ ಮಾಡುವ ಸಾಧ್ಯತೆಗಳು ಇತ್ತೂ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಾ, ಪ್ರಥಮ ಪ್ರಯತ್ನದಲ್ಲಿ ಗಮನ ಸೆಳೆಯುತ್ತಾರೆ.
ಇನ್ನೂ ಹಾಸ್ಯಗಾರರಾದ ರವೀಂದ್ರ ದೇವಾಡಿಗ (ಬ್ರಾಹ್ಮಣ) ಮತ್ತು ಶ್ರೀಧರ್ ಕಾಸರಕೋಡು(ಕಪ್ಪ ದೂತ) ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾರೆ.

ಇನ್ನೂ ಚಿತ್ರದ ಹೈಲೈಟ್ಸ್ ಪದ್ಯಗಳು. ಪದ್ಯಗಳು ಈ ಚಿತ್ರದ ಜೀವಾಳವೆಂದರೇ ತಪ್ಪಾಗಲಾರದು.
ಪದ್ಯ ಸಾಹಿತ್ಯ ಒದಗಿಸಿದ ಯಕ್ಷಕವಿ ಪ್ರಸಾದ್ ಮೊಗೆಬೆಟ್ಟರು ಈ ಚಿತ್ರದಿಂದ ಮತ್ತಷ್ಟು ಎತ್ತರಕ್ಕೆ ಏರಲಿದ್ದಾರೆ. ಮೂಲ ಚಂದ್ರಹಾಸ ಚರಿತ್ರೆಯ ಪದ್ಯಗಳನ್ನು ಬಳಸಿಕೊಳ್ಳದೇ ದೃಶ್ಯಗಳು ಚಿತ್ರೀಕರಣವಾದ ಬಳಿಕ ಅದಕ್ಕೆ ಅನುಗುಣವಾಗಿ ಮೂಲ ಕಥೆಗೆ ಲೋಪವಾಗದಂತೆ, ಕಾಲಮಿತಿಯನ್ನು ಗಮನದಲ್ಲಿರಿಸಿಕೊಂಡು ಪದ್ಯಗಳನ್ನು ರಚಿಸುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಅದರಲ್ಲಿ ಗೆದ್ದಿದ್ದಾರೆ ಪ್ರಸಾದ್ ಮೊಗೆಬೆಟ್ಟು. ಕತೆಯನ್ನು ಮುಂದುವರಿಸಿಕೊಂಡು ಹೋಗಲು ಬಳಸಲಾದ ಭಾಮಿನಿಗಳು, ಕೆಲವು ಕರುಣಾರಸದ ಪದ್ಯಗಳ ಸಾಹಿತ್ಯ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ.

ಹಾಗೇ ಪದ್ಯಗಳನ್ನು ಹಾಡಿದ ಭಾಗವತರಾದ ಪಟ್ಲ ಸತೀಶ ಶೆಟ್ಟಿ, ಜನ್ಸಾಲೆ ರಾಘವೇಂದ್ರ ಆಚಾರ್ಯ, ಚಿನ್ಮಯ ಕಲ್ಲಡ್ಕ, ಗಣೇಶ್ ಬಿಲ್ಲಾಡಿ, ಮೊಗೆಬೆಟ್ಟು ಎಲ್ಲರೂ ವಿಶಿಷ್ಟ ಮತ್ತು ವಿಭಿನ್ನ ರಾಗಗಳನ್ನು ಬಳಸಿ ಪದ್ಯ ಸಾಹಿತ್ಯಕ್ಕೆ ಹೊಸ ಮೆರುಗನ್ನು ನೀಡಿದ್ದಾರೆ. ಟೈಟಲ್ ಸಾಂಗ್ ಅಂತೂ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ.
ಇನ್ನೊಂದು ಖುಷಿಯ ಸಂಗತಿಯೆಂದರೆ ಯಕ್ಷಗಾನ ಲೋಕದ ಧ್ರುವತಾರೆ ಕಾಳಿಂಗ ನಾವುಡರ ಒಂದು ಪದ್ಯವನ್ನು ಚಿತ್ರದಲ್ಲಿ ಅಳವಡಿಸಿಕೊಂಡ ಬಗೆ, ಮತ್ತು ಆ ಸನ್ನಿವೇಶ ಚಿತ್ರದ ಯಶಸ್ಸಿಗೆ ಕಾರಣವಾಗಬಹುದು.

ಯಕ್ಷಗಾನವನ್ನು ಚಲನಚಿತ್ರ ಮಾಡುವುದು ತಪ್ಪೋ, ಸರಿಯೋ !!? ಹಾಗಿರಬೇಕಿತ್ತು, ಹೀಗಿರಬೇಕಿತ್ತು ಎಂಬ ಪೂರ್ವಾಗ್ರಹಗಳನ್ನೆಲ್ಲಾ ಬದಿಗಿರಿಸಿಕೊಂಡು ಈ ಚಲನಚಿತ್ರವನ್ನು ನೋಡಿ. ಒಂದು ವಿಶೇಷ ಅನುಭವವನ್ನು ಈ ಚಲನಚಿತ್ರ ನೀಡುತ್ತದೆ. ನೀವು ನೀಡಿದ ಹಣಕ್ಕೆ ಬೇಕಾಗುವಷ್ಟು ಮನರಂಜನೆಯನ್ನು ಈ ಚಿತ್ರ ಖಂಡಿತವಾಗಿಯೂ ನೀಡುತ್ತದೆ. ಹಾಗೇ ಯಕ್ಷಗಾನದ ಮೂಲ ಸತ್ವಕ್ಕೆ ದಕ್ಕೆ ತರುವ ಕೆಲಸವನ್ನು ಈ ಚಿತ್ರ ತಂಡ ಎಲ್ಲೂ ಮಾಡಿಲ್ಲ. ಚಲನಚಿತ್ರವಾದ ಕಾರಣ ಯುದ್ಧದ ಸನ್ನಿವೇಶಗಳಲ್ಲಿ ಒಂದಷ್ಟು ಗ್ರಾಫಿಕ್ಸ್ ಬಳಕೆ ಮಾಡಲಾಗಿದ್ದು, ರಂಗಸ್ಥಳದಲ್ಲಿರುವಾಗ ಕುದುರೆ ಏರಿ ಹೋಗುವ ಸನ್ನಿವೇಶದ ಕಲ್ಪನೆಯನ್ನು ನಾವು ಮಾಡಬೇಕು, ಇಲ್ಲಿ ಜೀವಂತ ಕುದುರೆಯನ್ನು ಏರಿ ಹೋಗುವ ಸನ್ನಿವೇಶಗಳಿವೆ. ಅದು ತಪ್ಪು ಅಂತ ಅನ್ನಿಸುವುದಿಲ್ಲ.

ಹೆಚ್ಚೇಕೆ ತಾನೋರ್ವ ಪ್ರಸಿದ್ಧ ಸಂಗೀತ ನಿರ್ದೇಶಕರಾಗಿದ್ದೂ ಕೊಂಡೂ ಈ ಚಲನಚಿತ್ರದಲ್ಲಿ ಹಿನ್ನೆಲೆ ಸಂಗೀತವಾಗಿ ಚೆಂಡೆ ಮತ್ತು ಮದ್ದಳೆಗಳನ್ನೇ ಬಹು ವಿಧವಾಗಿ ಬಳಸಿಕೊಂಡು ಯಕ್ಷಗಾನದ ಪಾವಿತ್ರ್ಯತೆಯನ್ನು ಕಾಪಾಡಿದ್ದಾರೆ ರವಿ ಬಸ್ರೂರು.

ಯಾವುದೇ ಪ್ರಾಕಾರದ ಕಲಾವಿದನಾದರೂ ಬೆಳ್ಳಿತೆರೆಯಲ್ಲಿ ಒಮ್ಮೆ ಕಾಣಿಸಿಕೊಳ್ಳಬೇಕು ಎಂಬ ಹಂಬಲ ಆತನಿಗೆ ಇದ್ದೇ ಇರುತ್ತದೆ. ಅದನ್ನು ರವಿ ಬಸ್ರೂರು ಈ ಚಿತ್ರದ ಮೂಲಕ ಈಡೇರಿಸಿದ್ದಾರೆ.
ಕೇವಲ ರಂಗಸ್ಥಳದಲ್ಲಿ ಮಾತ್ರ ಕಂಡ, ನಾವು ಪ್ರೀತಿಸುವ ನಮ್ಮದೇ ಮಣ್ಣಿನ ಈ ಯಕ್ಷಗಾನ ಕಲಾವಿದರುಗಳನ್ನು ಬೆಳ್ಳಿತೆರೆಯಲ್ಲಿ ಕಾಣುವಾಗ ನೀವೂ ಕೂಡಾ ಭಾವುಕರಾಗುತ್ತೀರಿ.

ಈ ಚಲನಚಿತ್ರದಿಂದ ಯಕ್ಷಗಾನ ತನ್ನ ಮೂಲ ಸತ್ವವನ್ನು ಕಳೆದುಕೊಳ್ಳುತ್ತದೆ, ಕಲಾವಿದರ ಭವಿಷ್ಯ ಹಾಳಾಗುತ್ತದೆ ಎಂದು ಅಲ್ಲಲ್ಲಿ ಅಪಸ್ವರಗಳು ಕೇಳಿ ಬರುತ್ತಿದೆ.ಖಂಡಿತಾ ಇಲ್ಲ. ಸಿನಿಮಾ ಆದಾಗ ನಾಟಕಗಳು ತಮ್ಮ ನೆಲೆ ಕಳೆದುಕೊಂಡವು,ನಾಟಕ ಕಲಾವಿದರ ಭವಿಷ್ಯ ಹಾಳಾಯಿತು ಎಂದು ಹೇಳಲಾಗಿತ್ತು. ಯತಾರ್ಥಕ್ಕೆ ನೋಡಿದರೆ ಅಂದಿನ ನಾಟಕದ ಕಲಾವಿದರೇ ಚಲನಚಿತ್ರದ ಹೆಸರಾಂತ ಕಲಾವಿದರುಗಳು. ಡಾ.ರಾಜಕುಮಾರ್ ರಿಂದ ತೊಡಗಿಸಿಕೊಂಡು ಇಂದಿನ ಹೊಸ ತಲೆಮಾರಿನ ಹೆಸರುವಾಸಿ ಕಲಾವಿದರೆಲ್ಲಾ ರಂಗಭೂಮಿಯ ಹಿನ್ನೆಲೆಯವರೇ. ನಾಟಕ ಅನ್ನ ನೀಡುತ್ತಿದ್ದರೇ, ಚಲನಚಿತ್ರಗಳು ಮೃಷ್ಟಾನ್ನವನ್ನೇ ಅವರಿಗೆ ನೀಡಿತು.ಆರ್ಥಿಕವಾಗಿ ಸದ್ರಢತೆಯನ್ನು ನೀಡಿದ್ದು ಇದೇ ಚಲನಚಿತ್ರರಂಗ.
ಕಲೆ ಉಳಿಯಬೇಕು ಅಂತಾದರೆ ಕಲಾವಿದ ಉಳಿಯಬೇಕು, ಅವನು ಆರ್ಥಿಕವಾಗಿ ಸಶಕ್ತನಾಗಿ ಉಳಿಯುವಂತಾದರೇ ಮಾತ್ರ ಈ ಕಲೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ, ಇಲ್ಲದಿದ್ದರೇ ಮಾಡಲು ಹಲವು ಉದ್ಯೋಗಗಳಿವೆ. ಇದೇ ಬೇಕೆಂದೇನೂ ಇಲ್ಲ.

ಈ ಚಲನಚಿತ್ರದಲ್ಲಿ ಭಾಗವಹಿಸಿದ ಕಲಾವಿದರೂ ಕೂಡಾ ಅತೀ ದೊಡ್ಡ ಸಂಭಾವನೆ ಪಡೆದಿದ್ದಾರೆ ಎಂಬ ಮಾಹಿತಿಯಿದೆ. ಈ ಚಲನಚಿತ್ರದ ಪ್ರಸಾಧನ ಕೆಲಸದಲ್ಲಿ ತೊಡಗಿಸಿಕೊಂಡವರು ಕೂಡ ಯಕ್ಷಗಾನ ಕ್ಷೇತ್ರದವರೇ ಎಂಬ ವರ್ತಮಾನವಿದೆ. ಇದಲ್ಲವೇ ಧನಾತ್ಮಕ ಬೆಳವಣಿಗೆ.
ತಮ್ಮ ಮೂಲ ರಂಗಸ್ಥಳದ ಕಾಯಕದೊಂದಿಗೆ ವರ್ಷಕ್ಕೆ ಒಂದೋ ಎರಡೋ ಇಂತಹ ಚಲನಚಿತ್ರಗಳ ಆಫರ್ ಗಳು ದೊರೆತರೇ ಆತನ ಆದಾಯಕ್ಕೂ ಒಂದು ಹೊಸ ಮೂಲ ದೊರೆತ ಹಾಗೆ, ಜೊತೆ ಜೊತೆಗೆ ಕೇವಲ ಒಂದೆರಡು ಜಿಲ್ಲೆಗೆ ಸೀಮಿತವಾದ ತನ್ನ ಪ್ರತಿಭೆ ಇನ್ನಿತರ ಕಡೆಯಲ್ಲಿ ಅನಾವರಣವಾಗುವುದು ಮತ್ತು ತಾನು ಮತ್ತಷ್ಟು ಬೆಳೆಯುವುದು ಇದು ಆ ಕಲಾವಿದನ ಪಾಲಿಗೆ ಹೆಗ್ಗಳಿಕೆಯಲ್ಲವೇ?

ಕಲೆ ನಿಂತ ನೀರಲ್ಲ..ಹರಿವ ತೊರೆ.
ನೀರು ಹರಿಯುವುದನ್ನು ತೊರೆದು ನಿಂತ ಉದಾಹರಣೆಯಿಲ್ಲ. ಅಂತೆಯೇ ಕಲೆ ಕೂಡ. ತನ್ನ ಮೂಲ ಸತ್ವವನ್ನು ಉಳಿಸಿಕೊಂಡು ಕಾಲ ಕಾಲಕ್ಕೆ ತಾನೇ ಪರಿಷ್ಕರಣೆಗೊಳ್ಳುತ್ತಾ ಕಲೆ ಬೆಳೆಯುತ್ತದೆ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಾ..

ಒಂದು ವಿಶಿಷ್ಟ ಮತ್ತು ವಿನೂತನವಾದ ಸಾಹಸಕ್ಕೆ ಕೈ ಹಾಕಿರುವ ರವಿ ಬಸ್ರೂರು ಮತ್ತವರ ತಂಡಕ್ಕೆ ಶುಭ ಹಾರೈಸುತ್ತಾ, ಅವರ ಮೊದಲ ಪ್ರಯತ್ನದಲ್ಲಿ ಏನಾದರೂ ಅಲ್ಪಸ್ವಲ್ಪ ಅವರು ಎಡವಿದ್ದರೂ ಅದನ್ನು ನಮ್ಮವರು ಎಂಬ ಭಾವದಿಂದ ಸ್ವೀಕರಿಸುವ ಮನಸ್ಸು ಮಾಡುವಾ.

ಚಿತ್ರವನ್ನು ಬೆಳ್ಳಿತೆರೆಯಲ್ಲಿ ಒಮ್ಮೆ ನೋಡಿ.
ನೋಡಿದ ಬಳಿಕ ನೀವೂ ಅನ್ನುತ್ತೀರಿ..
ಮೊದಲ ಪ್ರಯತ್ನದಲ್ಲಿ ರವಿ ಬಸ್ರೂರು ಮತ್ತವರ ತಂಡ ಗೆದ್ದಿದೆ ಎಂದು.

  • ಡಾ.ಜಗದೀಶ್ ಶೆಟ್ಟಿ, ಸಿದ್ದಾಪುರ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ