
ಅಮೆರಿಕಾದ ನ್ಯೂಯಾರ್ಕ್ ಬಂದರಿನಲ್ಲಿ ಕೈಯಲ್ಲಿ ದೊಡ್ಡ ದೀಪವನ್ನು ಹಿಡಿದು ನಿಂತಿರುವ ಸ್ವತಂತ್ರ ದೇವತೆಯ ಬೃಹತ್ತಾದ ಮೂರ್ತಿ ಭರವಸೆ ಸ್ವಾತಂತ್ರ ಮತ್ತು ಅಮೆರಿಕದ ಕನಸುಗಳ ಪ್ರತೀಕವಾಗಿ ನಿಂತಿದ್ದಾಳೆ. ಈ ಸ್ವತಂತ್ರ ದೇವತೆಯ ಮುಖವು ಓರ್ವ ನಿಜವಾದ ಸ್ಫೂರ್ತಿ ದೇವತೆಯಿಂದ ಎರವಲು ಪಡೆದದ್ದು ಎಂದರೆ ನೀವು ನಂಬುವಿರಾ? 19ನೇ ಶತಮಾನದಲ್ಲಿ ಬಾಳಿ ಬದುಕಿದ ಓರ್ವ ಅತ್ಯಂತ ಸಿರಿವಂತಳಾದ, ಮಹತ್ವಾಕಾಂಕ್ಷೆಯ ಅಂದಿನ ಕಾಲದ ಫ್ಯಾಷನ್ ನ ಐಕಾನ್ ಆಗಿದ್ದ ಹೆಣ್ಣು ಮಗಳು ಆಕೆಯೇ ಇಸಬೆಲ್ಲಾ ಬೋಯರ್.
ಪ್ಯಾರಿಸ್ ನಲ್ಲಿ ಹುಟ್ಟಿದ ಆಕೆಯ ತಂದೆ ಆಫ್ರಿಕಾ ಮೂಲದ ಪೇಸ್ತ್ರಿ ಶಾಪ್ ನ ಆಗಿದ್ದನು ಮತ್ತು ತಾಯಿ ಇಂಗ್ಲೆಂಡಿನಾಕೆ. ಸಬಲ ಬೋಯರ್ ಎಂಬ ಹೆಸರಿನ ಆಕೆ ಅತ್ಯುತ್ತಮವಾದ ಜೀವನವನ್ನು ಹೊಂದಿದ್ದಳು. ಆಕೆಯ ಅಸಾಧಾರಣ ಸೌಂದರ್ಯ ಮತ್ತು ಆತ್ಮವಿಶ್ವಾಸಗಳು ಆಕೆಯನ್ನು ಮಾಡೆಲಿಂಗ್ ಜಗತ್ತಿಗೆ ಕರೆತಂದವು. ಯುವತಿಯಾಗಿ ಆಕೆ ತನ್ನಲ್ಲಿರುವ ಆಕರ್ಷಣೆ ಮತ್ತು ಸಂಪರ್ಕಗಳ ಸಹಾಯದಿಂದ ಶೀಘ್ರವಾಗಿ ಮಾಡಲಿಂಗ್ ಜಗತ್ತಿನಲ್ಲಿ ಮುಂದೆ ಬಂದಳು.
ತನ್ನ ಇಪ್ಪತ್ತರ ಹರೆಯದಲ್ಲಿ ಐಸಾಕ್ ಸಿಂಗರ್ ಎಂಬ ಜಗತ್ಪ್ರಸಿದ್ಧ ಸಂಶೋಧಕನನ್ನು ಮದುವೆಯಾದಳು. ಐಸಾಕ್ ಸಿಂಗರ್ ಸುಪ್ರಸಿದ್ಧ ಸಿಂಗರ್ ಹೊಲಿಗೆ ಯಂತ್ರದ ಸಂಶೋಧಕನಾಗಿದ್ದನು. ತನ್ನ 50ನೇ ವಯಸ್ಸಿನಲ್ಲಿ ಐಸಾಕ್ ಸಿಂಗರ್ ತೀರಿ ಹೋದ ನಂತರ ಆತನ ಎಲ್ಲಾ ಆಸ್ತಿಗೆ ವಾರಸುದಾರಳಾದ ಇಸಾಬೆಲ್ಲ
ಅಮೆರಿಕಾದ ಅತ್ಯಂತ ಶ್ರೀಮಂತರಲ್ಲಿ ಒಬ್ಬಳಾದಳು.
ತನ್ನ ಪತಿ ಸತ್ತ ನಂತರ ಆಕೆ ಅಳುತ್ತಾ ಕೂರಲಿಲ್ಲ. ನಂತರ ಡಚ್ ವಯಲಿನಿಸ್ಟ್ ಮತ್ತು ಗಣ್ಯ ವ್ಯಕ್ತಿಯಾಗಿದ್ದ ವಿಕ್ಟರ ರೂಬ್ಸೆಟ್ ನನ್ನು ಮದುವೆಯಾದಳು. ಸಾಮಾಜಿಕವಾಗಿ ಗಣ್ಯ ವ್ಯಕ್ತಿಯಾದ ಆತನೊಂದಿಗೆ ಆಕೆ ತಾನು ಕೂಡಾ ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆತಳು. ಆಕೆಯ ಸೌಮ್ಯವಾದ ಸೊಬಗು ಮತ್ತು ಆಕರ್ಷಣೆಯ ಕಾರಣದಿಂದ ಆಕೆ ಎಲ್ಲರ ಮನ ಸೆಳೆಯುತ್ತಿದ್ದಳು. ಇಂತಹದ್ದೇ ಒಂದು ಸಾಮಾಜಿಕ ಸಮಾರಂಭದಲ್ಲಿ ಆಕೆ ಫ್ರೆಂಚ್ ಶಿಲ್ಪಕಾರ ಫ್ರೆಡರಿಕ್ ಅಗಸ್ಟ್ ಬಾರ್ತೋಲ್ಡಿಯನ್ನು ಭೇಟಿಯಾದಳು.
ಆಗ ತಾನೆ ಅಮೆರಿಕಾ ಪ್ರವಾಸದಿಂದ ಮರಳಿದ ಬಾರ್ತೋಲ್ದಿ ಅಮೆರಿಕಾದ ಅಗಾಧ ವಿಸ್ತಾರ, ಗಾತ್ರ ಶಕ್ತಿ ಮತ್ತು ಮಾದರಿಗಳಿಂದ ಪ್ರಭಾವಿತನಾಗಿದ್ದನು. ತನ್ನ ಮಹತ್ವಾಕಾಂಕ್ಷೆಯ ಕಾರ್ಯವಾಗಿದ್ದ ಸ್ವಾತಂತ್ರ್ಯ ದೇವತೆಯ ನಿರ್ಮಾಣ ಕಾರ್ಯದಲ್ಲಿ ಆತ ಶೀಘ್ರವೇ ತೊಡಗಿಕೊಳ್ಳಲಿದ್ದನು.
ಸ್ವತಂತ್ರದೇವತೆಯ ಮೂರ್ತಿ ನಿರ್ಮಾಣಕ್ಕಾಗಿ ಆತ ಈಗಾಗಲೇ ಶಾಸ್ತ್ರೀಯ ಮುಖವಾಗಿ ರೋಮನ್ ದೇವತೆ ಲಿಬರ್ಟಸ್ ಳ ಹಲವಾರು ಚಿತ್ರಗಳನ್ನು ರಚಿಸಿದ್ದನು, ಆದರೆ ಇಸಬೆಲ್ಲಾಳ ರಾಜ ಮನೆತನದ ಸೌಂದರ್ಯ ಮತ್ತು ಘನತೆಯನ್ನು ಹೊತ್ತ ಮುಖ ಆತನನ್ನು ಬಹುವಾಗಿ ಆಕರ್ಷಿಸಿತು. ಅಂತೆಯೇ ಆತ ನಿರ್ಮಾಣವಾಗುತ್ತಿದ್ದ ಸ್ವತಂತ್ರ ದೇವತೆಯ ಮೂರ್ತಿಗೆ ಸ್ಟಾಚು ಆಫ್ ಲಿಬರ್ಟಿ… ಎನಲೈಟನಿಂಗ್ ದ ವರ್ಲ್ಡ್
ಎಂದು ಸಂಪೂರ್ಣವಾದ ಹೆಸರಿಟ್ಟ.
ಬಾರ್ತೋಲ್ದಿಯ ಮೂರ್ತಿ ನಿರ್ಮಾಣ ಕಾರ್ಯ ವರ್ಷಾನುಗಟ್ಟಲೆ ನಡೆಯಿತು. ಆತನಿಗೆ ಜೊತೆಯಾಗಿ ಪ್ಯಾರಿಸ್ ನ ಐಫೆಲ್ ಟವರ್ ಖ್ಯಾತಿಯ ಇಂಜಿನಿಯರ್ ಐಫೆಲ್ ಸ್ವತಂತ್ರ ದೇವತೆಯ ಮೂರ್ತಿಯ ಕಬ್ಬಿಣದ ಪ್ರೇಮನ್ನು ತಯಾರಿಸಿದ. ಖ್ಯಾತ ಪತ್ರಕರ್ತ ಮತ್ತು ಸಂಪಾದಕರಾದ ಜೋಸೆಫ್ ಫುಲೆಟ್ ಅವರು ರಾಷ್ಟ್ರೀಯ ಪ್ರಚಾರ ಕ್ಯಾಂಪುಗಳನ್ನು ಮಾಡಿ ಮೂರ್ತಿ ನಿರ್ಮಾಣ ಕಾರ್ಯಕ್ಕೆ ಬಹುದೊಡ್ಡ ಪ್ರಮಾಣದಲ್ಲಿ ಅಮೆರಿಕಾದ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿದರು.
ಮೂರ್ತಿಯ ತಳಭಾಗದಲ್ಲಿರುವ ಪೀಠದಿಂದ ಹಿಡಿದು ಮೂರ್ತಿಯ ತಲೆಯವರೆಗೆ ಸುಮಾರು 93 ಮೀಟರ್ ಉದ್ದ, ಕೇವಲ ಮೂರ್ತಿಯೊಂದೇ 46 ಮೀಟರ್ ಉದ್ದ ವನ್ನು ಹೊಂದಿದ್ದು 31 ಟನ್ ತಾಮ್ರ 125 ಟನ್ ಕಬ್ಬಿಣ
ವನ್ನು ಮೂರ್ತಿ ನಿರ್ಮಾಣ ಕಾರ್ಯಕ್ಕೆ ಬಳಸಲಾಗಿದೆ. ಮೂರ್ತಿಯ ತಲೆಯ ಮೇಲೆ ಅಳವಡಿಸಲಾಗಿರುವ ಕಿರೀಟವನ್ನು ತಲುಪಲು 356 ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.
ಅಮೆರಿಕ ದೇಶಕ್ಕೆ ಫ್ರಾನ್ಸ್ನದೇಶವು ಸ್ವಾತಂತ್ರದ ಕೊಡುಗೆಯಾಗಿ ನೀಡಲ್ಪಟ್ಟಿರುವ ಈ ಸ್ವತಂತ್ರ ದೇವತೆಯ ಸ್ಮಾರಕವು ಕಳೆದ ನೂರು ವರ್ಷಗಳಿಂದ ಅಮೆರಿಕಾ ದೇಶದ ಹೆಮ್ಮೆಯ ಪ್ರತೀಕವಾಗಿ ನೆಲೆ ನಿಂತಿದೆ.
ಅಮೆರಿಕ ಸಂಯುಕ್ತ ಸಂಸ್ಥಾನವು ಜುಲೈ 4, 1776 ರಲ್ಲಿ ಸ್ವಾತಂತ್ರವನ್ನು ಗಳಿಸಿದ್ದು ಸ್ವತಂತ್ರ ದೇವತೆಯ ಮೂರ್ತಿಯ ಪೀಠದಲ್ಲಿ ಇದನ್ನು ದಾಖಲಿಸಲಾಗಿದೆ. ಅಮೆರಿಕಾ ದೇಶದ ಸ್ವಾತಂತ್ರ್ಯದ ಒಂದು ನೂರು ವರ್ಷಗಳ ನಂತರ ಇಸಬೆಲ್ಲಾಳ ಮುಖಚಹರೆಯನ್ನು ಹೊಂದಿರುವ ಈ ಮೂರ್ತಿಯು ನಿರ್ಮಾಣಗೊಂಡು ಅಮೆರಿಕಾದ ಸ್ವಾತಂತ್ರ್ಯದ ಕುರುಹಿನ ಗುರುತಾಗಿ ನ್ಯೂ ಯಾರ್ಕ್ ನ ಸಮುದ್ರ ತೀರದಲ್ಲಿ ನೆಲೆ ನಿಂತಿದೆ.
ತನ್ನ ಎರಡನೇ ಪತಿ ತೀರಿದ ನಂತರ ತನ್ನ 50ನೇ ವಯಸ್ಸಿನಲ್ಲಿ ವಸ್ತುಗಳನ್ನು ಸಂಗ್ರಹಿಸುತ್ತಿದ್ದ ಪಾಲ್ ಸೋಹೇಜ ನನ್ನು ಮದುವೆಯಾದ ಆಕೆ ತನ್ನ 62ನೇ ವಯಸ್ಸಿನಲ್ಲಿ 1904ರಲ್ಲಿ ಮರಣ ಹೊಂದಿದಳು. ದೈಹಿಕವಾಗಿ ಆಕೆ ಕಣ್ಮರೆಯಾದರೂ ತಾಮ್ರ ಮತ್ತು ಕಬ್ಬಿಣದ ಮಿಶ್ರಣದಿಂದ ನಿರ್ಮಿತವಾದ ಆಕೆಯ ಚಹರೆಯನ್ನು ಹೋಲುವ ಸ್ವತಂತ್ರ ದೇವತೆಯ ಮೂರ್ತಿಯಿಂದಾಗಿ ಆಕೆ ವಿಶ್ವದಾದ್ಯಂತ ತನ್ನ ಅದ್ಭುತ ಸೊಬಗು ಮತ್ತು ಧೈರ್ಯವನ್ನು ಬಿಂಬಿಸುವ ಆತ್ಮವಿಶ್ವಾಸದ ಖನಿಯಾಗಿ ಇಂದಿಗೂ ಪ್ರಚಲಿತವಾಗಿದ್ದಾಳೆ.
ಇಂದು ಸ್ಟ್ಯಾಚು ಆಫ್ ಲಿಬರ್ಟಿ ಕೇವಲ ಅಮೆರಿಕಾದ ಸ್ವಾತಂತ್ರದ ಕುರುಹಾಗಿ ಮಾತ್ರವಲ್ಲ ತನ್ನ ಸೌಂದರ್ಯ, ಅನುಗ್ರಹ ಮತ್ತು ಮಹತ್ವಾಕಾಂಕ್ಷೆಯ ಮಾನವೀಯ ಮುಖವನ್ನು ಹೊಂದಿರುವ ಚಹರೆಯಾಗಿದ್ದು ಜಗತ್ತಿನ ಅತಿ ದೊಡ್ಡ ಮಾನವ ನಿರ್ಮಿತ ವಿಗ್ರಹಗಳಲ್ಲಿ ಒಂದೆಂದು ಹೆಸರಾಗಿದೆ.
- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ
