
ಮುಸ್ಲಿಮರಿಂದ ಮಾಂಸಹಾರ ಸೇವನೆ ಸ್ವಯಂ ನಿಷೇಧ, ಊರು ಕಾಯುವ ಜವಾಬ್ದಾರಿಯೂ ಮುಸ್ಲಿಮರದೆ
ವಿಜಯನಗರ/ ಕೂಡ್ಲಿಗಿ : ಪಟ್ಟಣದಲ್ಲಿ ಭಾವೈಕ್ಯತೆ ಸಾರುವ ಗುಳೆ ಲಕ್ಷ್ಮಮ್ಮನ ಜಾತ್ರೆ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು. ಜನ ಜಾನುವಾರುಗಳು ಕ್ಷೇಮ ಆರೋಗ್ಯಕ್ಕಾಗಿ ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಸಾವಿರಾರು ಭಕ್ತರ ಹರ್ಷೋದ್ಗಾರದಲ್ಲಿ ವೈಭವದಿಂದ ಸಂಪನ್ನವಾಯಿತು. ಬೆಳಗ್ಗಿನ ಜಾವದಿಂದಲೇ ಭಕ್ತರು ಗುಳೆ ಲಕ್ಷ್ಮಮ್ಮ ದೇವಿಗೆ ಪಟ್ಟಣದ ಪ್ರತಿ ಮನೆಯಿಂದ ಉಡಿ ಅಕ್ಕಿ , ಹೂವು , ಹಣ್ಣುಗಳನ್ನು ಅರ್ಪಿಸಿದರು ಬೆಳಿಗ್ಗೆ 8.30 ಕ್ಕೆ ಆಯಾಗಾರರು ಗುಳೆ ಲಕ್ಷ್ಮಮ್ಮನ ದೇವಿ ಮುಂಭಾಗದಲ್ಲಿ ಹುಂಡಿ ಹಣ ಎಣಿಕೆ ಮಾಡಿ ಸುಮಾರು 2 ಲಕ್ಷಕ್ಕೂ ಹೆಚ್ಚು ಹಣವನ್ನು ಪಟ್ಟಣದ ವೀರನಗೌಡ ಅವರಿಗೆ ನೀಡಿದರು. ನಂತರ ಹಿ. ಮು. ಚಿದಾನಂದಸ್ವಾಮಿ ನೇತೃತ್ವದಲ್ಲಿ ಮಹಾ ಮಂಗಳಾರತಿ ನಡೆಯಿತು. ನಂತರ ಅರ್ಚಕರಿಗೆ ದೇವಿಯನ್ನು ತಲೆ ಮೇಲೆ ಪ್ರತಿಷ್ಠಾಪನೆ ಮಾಡಿದರು. ಕೂಡಲೇ ದೇವಿ ಹೊತ್ತ ಅರ್ಚಕರು ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಗ್ರಾಮ ದೇವತೆ ಊರಮ್ಮ ದೇವಸ್ಥಾನದಲ್ಲಿ ಬಂದು ದರ್ಶನ ಮಾಡಿ ಒಂದು ಸುತ್ತು ದೇವಸ್ಥಾನ ಪ್ರದಕ್ಷಣೆ ಹಾಕಿ ಅಂಬೇಡ್ಕರ್ ಕಾಲೋನಿಗೆ ಹೋಯಿತು. ಅಂಬೇಡ್ಕರ್ ಕಾಲೋನಿಯ ನಿವಾಸಿಗಳು ತಮ್ಮ ಅಡುಗೆ ಸಾಮಾಗ್ರಿಗಳನ್ನು ಹೊತ್ತು ಸೀದಾ ಹೊಸಪೇಟೆ ರಸ್ತೆಯಲ್ಲಿ ಬಂದು ನಿಂತರು. ಲಕ್ಷ್ಮಮ್ಮದೇವಿ ಪಟ್ಟಣ ಖಾಲಿಯಾಗಿದೆ ಎಂದು ಖಾತ್ರಿ ಪಡೆಯಲು ಪಟ್ಟಣದ ವಿವಿಧ ಕಡೆ ಮೆರವಣಿಗೆ ಮೂಲಕ ತೆರಳಿ ಎಲ್ಲರೂ ಊರು ಬಿಟ್ಟು ಹೋದರೆಂದು ತಳವಾರ ಹೇಳಿದರು. ನಂತರ ಪಟ್ಟಣದ ಆಂಜನೇಯ ದೇವಸ್ಥಾನದ ಮೂಲಕ ಊರಿನ ದ್ವಾರ ಬಾಗಿಲಿಗೆ ಬಂದು ಅಲ್ಲಿಂದ ಸೀದಾ ಮೆರವಣಿಗೆ ಮೂಲಕ ಭಕ್ತರು ದೇವಿಯನ್ನು ವಾದ್ಯಗಳ ಮೂಲಕ ಕುಣಿಯುತ್ತ ನಡೆದರು.
ಮುಸ್ಲಿಂ ಸಮುದಾಯಕ್ಕೆ ಸೇರಿದ ಮಣೆಗಾರ ದೇವಿಪಟ್ಟಣ ಖಾಲಿಯಾದ ಸ್ವರದ ನಂತರ ದ್ವಾರ ಬಾಗಿಲಿಗೆ ಬೇಲಿ ಹಾಕಿ ಊರು ಕಾಯುವ ಜವಾಬ್ದಾರಿ ತೆಗೆದುಕೊಂಡನು. ಭಕ್ತರು ದಾರಿಯುದಕ್ಕೂ ದೇವಿಗೆ ಹೂವು, ಹಣ್ಣು , ಕಾಯಿ ಸಮರ್ಪಿಸಿದರು. ಗೋವಿಂದ ಗಿರಿ ಗ್ರಾಮದ ಬಳಿ ಇರುವ ಗೂಳಿ ಲಕ್ಷ್ಮಮ್ಮನ ಮರದ ಬಳಿ ಗುಳೆ ಲಕ್ಷ್ಮಮ್ಮನ ಹೊತ್ತ ಅರ್ಚಕ ಅಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿದರು. ಗೋವಿಂದ ಗಿರಿ ಗ್ರಾಮದ ಭಕ್ತರು ದೇವಿಗೆ ಹೂವು ಹಣ್ಣು ನೈವೇದ್ಯ ಅರ್ಪಿಸಿದರು. ದೇವಿ ಮರದ ಸುತ್ತಮುತ್ತಲಿನ ಬಿಡು ಬಿಟ್ಟಿದ್ದ ಭಕ್ತರು ಸಿಹಿ ಆಹಾರ, ಮಾಂಸದ ಅಡಿಗೆಯನ್ನು ದೇವಿಗೆ ನೈವೇದ್ಯ ಮಾಡಿ ಕುಟುಂಬ ಹಾಗೂ ಸ್ನೇಹಿತರ ಜೊತೆ ಸಾಮೂಹಿಕ ಭೋಧನೆ ಮಾಡಿ ಸಂಭ್ರಮಿಸಿದರು. ಸಂಜೆ 4:00 ಆಗುತ್ತಲೇ ಮತ್ತೆ ದೇವಿಯನ್ನು ಪಟ್ಟಣಕ್ಕೆ ಕರೆದೊಯ್ಯಲು ಅಣಿಯಾಗಿ ಅರ್ಚಕ ಮತ್ತೆ ದೇವಿ ಹೊತ್ತು ಭಕ್ತರ ಹರ್ಷೋದ್ಗಾರಗಳ ಮೂಲಕ ಮೆರವಣಿಗೆ ಮಾಡುತ್ತಾ ವಾಪಸ್ಸು ಪಟ್ಟಣಕ್ಕೆ ಬಂದರು ಈ ವೇಳೆ ಬೆಳಗ್ಗೆ ಪಟ್ಟಣ ಖಾಲಿಯಾಗುತ್ತಲೇ ಇಡೀ ಪಟ್ಟಣವನ್ನು ಕಾಯುವ ಜವಾಬ್ದಾರಿ ಹೊತ್ತ ಮುಸ್ಲಿಂ ಸಮುದಾಯದ ಮಣೆಗಾರ ಅಮಿರ್ ಊರದ್ವಾರ ಬಾಗಿಲಿನಲ್ಲಿ ಪಾರಿ ಬೇಲಿ ತೆಗೆದು ಬೆಂಕಿ ಕುಂಡವನ್ನು ಹಾಕಿದನು. ದೇವಿ ಮೂಲಸ್ಥಾನಕ್ಕೆ ಬಂದು ದೇವಸ್ಥಾನದಲ್ಲಿ ಕೂತ ನಂತರ ಭಕ್ತರು ಬೆಂಕಿಯನ್ನು ಸಗಣಿ ಕುಳ್ಳಿನ ಮೂಲಕ ತೆಗೆದುಕೊಂಡು ಹೋಗಿ ಮನೆಯ ಬಾಗಿಲು ತೆಗೆದು ಪೂಜೆ ಮಾಡಿ ಬಾಗಿಲಿಗೆ ಕಾಯಿ ಹೊಡೆದು ದೀಪ ಬೆಳಗಿ ಜಾತ್ರೆಯನ್ನು ಸಂಪನ್ನಗೊಳಿಸಿದರು.
ಪಟ್ಟಣವನ್ನು ಕಾಯುವ ಜವಾಬ್ದಾರಿ:
ಕಳೆದ ಆರು ತಲೆಮಾರುಗಳಿಂದ ಮುಸ್ಲಿಂ ಜನಾಂಗದ ನಾವು ಜಾತ್ರೆ ಸಂದರ್ಭದಲ್ಲಿ ಊರನ್ನು ಕಾಯುವ ಜವಾಬ್ದಾರಿಯನ್ನ ಹೊತ್ತಿದ್ದೇವೆ. ಈ ವೇಳೆ ನಾವು ಒಂದು ವಾರ ಮಾಂಸಹಾರ ಮಾಡುವುದಿಲ್ಲ ಜಾತ್ರೆಯ ದಿನ ನಾನು ಉಪವಾಸದಿಂದ ದೇವಿಗೆ ಉಡಿ ಹಾಕಿ, ಹೂವು, ಹಣ್ಣು ಅರ್ಪಿಸಿ ಸಂಜೆ ದೇವಿ ಪಟ್ಟಣ ಪ್ರವೇಶದ ನಂತರ ಭಕ್ತಿ ಸೇವಾ ಮನೋಭಾವದಿಂದ ಮನೆಗೆ ಹೋಗಿ ಊಟ ಮಾಡುವುದು ಮೊದಲಿಂದಲೂ ಸಂಪ್ರದಾಯವಾಗಿ ನಡೆದು ಬಂದಿದೆ, ಎಂದು ಮಣೆಗಾರ ಅಮಿರ್ ಹೇಳಿದರು.
ವರದಿ : ಜಿಲಾನಸಾಬ್ ಬಡಿಗೇರ್
