
ಶಿವಮೊಗ್ಗ : ಶುಂಠಿ ಬೆಲೆ ಕುಸಿತದ ಹಿನ್ನೆಲೆ 2024-25 ನೇ ಸಾಲಿನ ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಪ್ರತಿ ಕ್ವಿಂಟಾಲ್‌ಗೆ ರೂ.2445 ರಂತೆ ರೈತರಿಂದ ಹಸಿಶುಂಠಿ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಹಸಿಶುಂಠಿ ಖರೀದಿಸಲು ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯುವ ಕುರಿತು ಚರ್ಚಿಸಲು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಸೊರಬ, ಸಾಗರ, ಶಿಕಾರಿಪುರ, ಹೊಸನಗರ ತೀರ್ಥಹಳ್ಳಿಯಲ್ಲಿ ಶುಂಠಿ ಬೆಳೆಯಲಾಗಿದ್ದು, ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ರೈತರಿಗೆ ಅನುಕೂಲವಾಗುವಂತಹ ಸ್ಥಳಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈ ಯೋಜನೆಯ ಮಾರ್ಗಸೂಚಿಯನ್ವಯ ಮೈಸೂರು, ಹಾಸನ, ಹಾವೇರಿ, ಶಿವಮೊಗ್ಗ, ಬೀದರ್, ಚಿಕ್ಕಮಗಳೂರು, ಮಂಡ್ಯ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ರೈತರಿಂದ ಗರಿಷ್ಟ 59,948 ಮೆಟ್ರಿಕ್ ಟನ್ ಎಫ್‌ಎಕ್ಯು ಗುಣಮಟ್ಟದ ಹಸಿಶುಂಠಿ ಖರೀದಿಸಲಾಗುವುದು, ರಾಜ್ಯ ಸರ್ಕಾರದ ವತಿಯಿಂದ ಹಸಿಶುಂಠಿ ಖರೀದಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವನ್ನು ಖರೀದಿ ಸಂಸ್ಥೆಯನ್ನಾಗಿ ನೇಮಕ ಮಾಡಲಾಗಿದೆ ರೈತರ ನೋಂದಣಿ ಕಾರ್ಯದ ಜೊತೆ ಖರೀದಿ ಪ್ರಕ್ರಿಯೆಯನ್ನೂ ಪ್ರಾರಂಭಿಸಲಾಗುವುದು ಎಕರೆಗೆ 30 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಟ 60 ಕ್ವಿಂಟಾಲ್ ಪ್ರಮಾಣದ ಎಫ್.ಎಕ್ಯೂ ಗುಣಮಟ್ಟದ ಹಸಿಶುಂಠಿ ಖರೀದಿಸಲಾಗುವುದು. ಈ ಕೂಡಲೇ ರೈತರು ನೋಂದಣಿ ಪ್ರಕ್ರಿಯೆ ಆರಂಭಿಸಬೇಕು ಎಂದರು.
ಕೇಂದ್ರ ಸರ್ಕಾರ ಕ್ವಿಂಟಾಲ್‌ಗೆ ಗರಿಷ್ಟ ರೂ.611.25 ನ್ನು ನಿರ್ವಹಣಾ ವೆಚ್ಚ ನಿಗದಿಪಡಿಸಿದ್ದು, ಈ ಮಿತಿಗೊಳಪಟ್ಟು ನಿರ್ವಹಣಾ ವೆಚ್ಚದಲ್ಲಿಯೇ ಕೈಗೊಳ್ಳಬೇಕು. ಖರೀದಿ ಸಂಸ್ಥೆಯು ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ಮಾರುಕಟ್ಟೆ ಮಧ್ಯಪ್ರವೇಶ ಮಾರ್ಗಸೂಚಿಯನ್ವಯ ಹಾಗೂ ತಾಂತ್ರಿಕ ಮತ್ತು ವೈಜ್ಞಾನಿಕ ಸೌಲಭ್ಯದಿಂದ ಕೂಡಿರುವ ಗೋದಾಮುಗಳನ್ನು ಹೊಂದಿರುವ ಸದೃಢ ಪಿಎಸಿಎಸ್/ವಿಎಸ್‌ಎಸ್‌ಎನ್/ಎಫ್‌ಪಿಓ/ಎಪಿಸಿಎಂಎಸ್ ಸಂಸ್ಥೆಗಳ ಮುಖಾಂತರ ಒಡಂಬಡಿಕೆ ಮಾಡಿಕೊಂಡು ಅಗತ್ಯಕ್ಕನುಗುಣವಾಗಿ ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮ ವಹಿಸುವಂತೆ ಸೂಚನೆ ನೀಡಿದ ಅವರು ಗ್ರಾ.ಪಂ ಗಳ ಮೂಲಕ ಹಾಗೂ ಇತರೆ ಮಾಧ್ಯಮಗಳ ಮೂಲಕ ರೈತರಿಗೆ ಈ ಕುರಿತು ಪ್ರಚಾರ ನೀಡಬೇಕು ಎಂದರು.
ಹಸಿಶುಂಠಿ ಶೇಖರಣೆ ಮಾಡಲು ಆಯಾ ತಾಲ್ಲೂಕು ಅಥವಾ ಜಿಲ್ಲೆಯಲ್ಲಿ ಲಭ್ಯವಿರುವ ಶೀತಲಗೃಹವನ್ನು ಪರಿಶೀಲಿಸಿ ಖರೀದಿ ಪೂರ್ವದಲ್ಲಿಯದೇ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಎಫ್.ಎಕ್ಯೂ ಗುಣಮಟ್ಟ ಖಾತ್ರಿಪಡಿಸಲು ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸಾಂಬಾರ ಪದಾರ್ಥಗಳ ಮಂಡಳಿಯ ಪರಿಣಿತ ಅಧಿಕಾರಿಗಳನ್ನು ನಿಯೋಜಿಸಿ ಎಫ್‌ಎಕ್ಯು ಗುಣಮಟ್ಟವನ್ನು ದೃಢೀಕರಿಸಿಕೊಳ್ಳಬೇಕು,
ಹಸಿಶುಂಠಿ ಖರೀದಿ ಪೂರ್ವದಲ್ಲಿ ರೈತರ ನೋಂದಣಿಯನ್ನು ನಿಯಮಾನುಸಾರ ಕೈಗೊಂಡು ಪಹಣಿಯಲ್ಲಿ 2024-25 ನೇ ಸಾಲಿಗೆ ಬೆಳೆ ಸಮೀಕ್ಷೆ ದೃಢೀಕರಿಸಿ ರೈತರ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಕೈಗೊಳ್ಳಬೇಕು ಹಾಗೂ ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಉತ್ಪನ್ನದ ಮೌಲ್ಯವು ಡಿಬಿಟಿ/ಎನ್‌ಇಎಫ್‌ಟಿ/ಆರ್‌ಟಿಜಿಎಸ್ ಮೂಲಕ ಜಮಾ ಆಗುವಂತೆ ಪಾವತಿ ಮಾಡಬೇಕು ಎಂದು ತಿಳಿಸಿದರು.
ಎಪಿಎಂಸಿ ಹೆಚ್ಚುವರಿ ನಿರ್ದೇಶಕರಾದ ಹೆಚ್ ವೈ ಸತೀಶ್, ತೋಟಗಾರಿಕೆ ಉಪ ನಿರ್ದೇಶಕಿ ಸವಿತಾ, ಕೃಷಿ ಇಲಾಖೆ, ಸಹಕಾರ ಇಲಾಖೆ, ಸಹಕಾರ ಮಾರಾಟ ಮಹಾಮಂಡಳದ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
