-ಪಾಕಿಸ್ತಾನದ ಶೇಕಡಾ 80% ರಷ್ಟು ನೀರಿನ ಅವಶ್ಯಕತೆಯನ್ನು ಸಿಂಧೂ ನದಿಯು ಪೂರೈಸುತ್ತದೆ.
-ಪಾಕಿಸ್ತಾನದ 80% ರಷ್ಟು ಕೃಷಿ ಭೂಮಿಗೆ ಸಿಂಧೂ ನದಿಯೇ ಆಧಾರ (ಸುಮಾರು 16 ಮಿಲಿಯನ್ ಹೆಕ್ಟೇರ್ ).
-ಪಾಕಿಸ್ತಾನದ 50% ರಷ್ಟು ಆಹಾರ ಉತ್ಪನ್ನಕ್ಕೆ ಸಿಂಧೂ ನದಿ ಬೆಂಬಲಿಸುತ್ತದೆ.
-ಸಿಂಧೂ ನದಿ ವ್ಯವಸ್ಥೆಯು ಪಾಕಿಸ್ತಾನದ ಒಟ್ಟು ದೇಶೀಯ ಉತ್ಪನಕ್ಕೆ [GDP] ಸುಮಾರು 25% ರಷ್ಟು ಕೊಡುಗೆ ನೀಡುತ್ತದೆ.
-ಸಿಂಧೂ ನದಿ ಒಪ್ಪಂದದ ರದ್ಧತಿಯಿಂದ ಪಾಕಿಸ್ತಾನದ ಶೇಕಡಾ 70% ರಷ್ಟು ಕೃಷಿ ಭೂಮಿ ಬರಡಾಗುವ ಸಂಭವವಿದೆ.
-ಒಪ್ಪಂದದ ರದ್ಧತಿಯಿಂದ ಭಾರತವು ಪ್ರವಾಹ ನಿರ್ವಹಣಾ ದತ್ತಾಂಶವನ್ನು ಪಾಕಿಸ್ತಾನದೊಂದಿಗೆ ಹಂಚಿಕೊಳ್ಳುವುದಕ್ಕೆ ನಿರಾಕರಿಸಬಹುದು. ಪ್ರವಾಹ ನಿರ್ವಹಣಾ ದತ್ತಾಂಶದ ಅಲಭ್ಯತೆಯಿಂದ ಮಳೆಗಾಲದಲ್ಲಿ ಆಗುವ ಅತಿವೃಷ್ಟಿಯನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಇದರಿಂದ ಸಾಕಷ್ಟು ಪ್ರಾಣ, ಬೆಳೆ ಹಾನಿ ಆಗಬಹುದು.
ಪಹಲ್ಗಾಮ್ ಉಗ್ರ ದಾಳಿಯ ಬೆನ್ನಲ್ಲೇ, ಪಾಕಿಸ್ತಾನದೊಂದಿಗೆ ಇದ್ದ ಸಿಂಧೂ ನದಿ ಒಪ್ಪಂದ (ಇಂಡಸ್ ವಾಟರ್ ಟ್ರೀಟಿ) ಗೆ ಭಾರತ ತಕ್ಷಣಕ್ಕೆ ಜಾರಿಗೆ ಬರುವಂತೆ ರದ್ದುಗೊಳಿಸಿದೆ. 65 ವರ್ಷದ ಒಪ್ಪಂದಕ್ಕೆ ಭಾರತ ತಿಲಾಂಜಲಿ ಹಾಡಿದೆ. ಪಾಕಿಸ್ತಾನದ ಜಲ ವಿದ್ಯುತ್ ಹಾಗೂ ಕೃಷಿಗೆ ದೊಡ್ಡ ಆಘಾತ ನೀಡುವ ಮೂಲಕ ರಾಜತಾಂತ್ರಿಕ ಗೆಲುವು ಸಾಧಿಸಿದೆ. ಅಂದ ಹಾಗೆ, ಭಾರತದ ಹಿತಾಸಕ್ತಿಯನ್ನು ಬಲಿಕೊಟ್ಟು ಪಾಕಿಸ್ತಾನದೊಂದಿಗೆ ಈ ಒಪ್ಪಂದಕ್ಕೆ ಸಹಿ ಹಾಕಿದ್ದು ಭಾರತದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಎಂದು ಮರೆಯುವಂತಿಲ್ಲ.
ಏನಿದು ಸಿಂಧೂ ನದಿ ಒಪ್ಪಂದ ?
ಸಿಂಧೂ ಜಲಾನಯನ ಪ್ರದೇಶದಲ್ಲಿರುವ 6 ನದಿಗಳ ನೀರನ್ನು ಭಾರತ ಹಾಗೂ ಪಾಕಿಸ್ತಾನ ಹಂಚಿಕೊಳ್ಳುವುದಕ್ಕೆ ಸೆಪ್ಟೆಂಬರ್ 19, 1960 ರಲ್ಲಿ ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಪಾಕಿಸ್ತಾನದ ಅಂದಿನ ಅಧ್ಯಕ್ಷರಾಗಿದ್ದ ಜನರಲ್ ಅಯೂಬ್ ಖಾನ್ ಹಾಗೂ ವಿಶ್ವ ಬ್ಯಾಂಕ್ ನ ವಿಲಿಯಂ ಇಲಿಫ್ ಅವರ ಮಧ್ಯಸ್ಥಿಕೆಯಲ್ಲಿ ಸಹಿ ಹಾಕಲಾಯಿತು.
ಅವೈಜ್ಞಾನಿಕ ಒಪ್ಪಂದ
ಸಿಂಧೂ ನದಿಯ ನೀರನ್ನು ನ್ಯಾಯಯುತವಾಗಿ ಹಂಚಿಕೆ ಮಾಡಲು ಈ ಒಪ್ಪಂದದ ಧ್ಯೇಯವಾಗಿತ್ತು. ಈ ಒಪ್ಪಂದಿಂದ ಭಾರತಕ್ಕೆ ಸಿಂಧೂ ನದಿಯ 10-15% ರಷ್ಟು ನೀರು ಸಿಕ್ಕರೆ, ಪಾಕಿಸ್ತಾನ 80-85% ರಷ್ಟು ನೀರು ಸಿಗುತ್ತಿತ್ತು. ಇದಲ್ಲದೆ, ಈ ಒಪ್ಪಂದವು ಬೆಳೆಯುತ್ತಿರುವ ಭಾರತದ ಜನಸಂಖ್ಯೆ ಹಾಗೂ ಹವಾಮಾನ ಬದಲಾವಣೆಯನ್ನು ಪರಿಗಣೆಗೆ ತೆಗೆದುಕೊಂಡಿರಲಿಲ್ಲ.
ಯುದ್ಧ ನಡೆಯುವಾಗಲೂ ರದ್ದಾಗದ ಒಪ್ಪಂದ
ಭಾರತ ಹಾಗೂ ಪಾಕಿಸ್ತಾನದೊಂದಿಗೆ ಯುದ್ಧ ನಡೆದಾಗಲೂ ಈ ಒಪ್ಪಂದವನ್ನು ರದ್ದುಗೊಳಿಸಿರಲಿಲ್ಲ. ಆದರೆ, ಪೆಹಲ್ಗಾವ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರ ದಾಳಿಯ ನಂತರ ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸುವ ಮೂಲಕ ರಕ್ತ ಹಾಗೂ ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಭಾರತ ಉಗ್ರ ಪೋಷಕ ಪಾಕಿಸ್ತಾನಕ್ಕೆ ರವಾನಿಸುವಲ್ಲಿ ಯಶಸ್ವಿಯಾಗಿದೆ.
ನೀರು ಹಂಚಿಕೆಯ ವಿವರ
ಸದರಿ ಒಪ್ಪಂದದ ಅನ್ವಯ ಪೂರ್ವದಲ್ಲಿರುವ ನದಿಗಳಾದ ಸತ್ಲೆಜ್, ಬೀಸ್ ಹಾಗೂ ರವಿ ನದಿಗಳ ಮೇಲೆ ಭಾರತದ ಹಕ್ಕಿದೆ, ಹಾಗೂ, ಪಶ್ಚಿಮ ಭಾಗದ ನದಿಗಳಾದ: ಇಂಡಸ್ (ಸಿಂಧು), ಝೇಲಂ ಹಾಗೂ ಚೆನಾಬ್ ಮೇಲೆ ಪಾಕಿಸ್ತಾನದ ಹಕ್ಕಿದೆ. ಸಿಂಧೂ, ಝೇಲಂ, ಚೆನಾಬ್ ನದಿಗಳು ಪಾಕಿಸ್ತಾನದ ಶೇಕಡಾ 80% ರಷ್ಟು ನೀರಿನ ಅವಶ್ಯಕತೆಯನ್ನು ಪೂರೈಸುತ್ತದೆ.
ಈಗಾಗಲೇ ತೀವ್ರ ಆರ್ಥಿಕ ಮುಗ್ಗಟ್ಟಲ್ಲಿರುವ ಪಾಕಿಸ್ತಾನ ಅಗತ್ಯ ಆಹಾರ ಸಾಮಗ್ರಿಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಈಗ ನೀರು ಸಿಗದಿದ್ದರೆ ಅಕ್ಷರಶಃ ಕೃಷಿ ಸಂಬಂಧಿತ ಚಟುವಟಿಕೆ ಸ್ತಬ್ಧವಾಗುತ್ತದೆ.
ಆರ್ಥಿಕ ಮುಗ್ಗಟ್ಟು, ಜನಸಂಖ್ಯಾ ಸ್ಫೋಟ, ಬೆಲೆ ಏರಿಕೆ ಸೇರಿದಂತೆ ಸಾಲು ಸಾಲು ಸಮಸ್ಯೆಗಳಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ಸಿಂಧೂ ನದಿ ಒಪ್ಪಂದದ ರದ್ದತಿ ಬೆಂಕಿಯಿಂದ ಬಾಣಲೆಗೆ ಬೀಳುವ ಪರಿಸ್ಥಿತಿ ಎದುರಾಗುತ್ತದೆ.
ಕುಡಿಯುವ ನೀರಿಗೆ ತತ್ವಾರ
ಪಾಕಿಸ್ತಾನದ ಪ್ರಮುಖ ನಗರಗಳಾದ ಮುಲ್ತಾನ್, ಲಾಹೋರ್ ಹಾಗೂ ಕರಾಚಿ ನಗರಗಳು ತನ್ನ ಕುಡಿಯುವ ನೀರಿನ ಅವಶ್ಯಕತೆಗಾಗಿ ಸಿಂಧೂ ನದಿಯ ನೀರಿನ ಮೇಲೆ ಅವಲಂಬಿತವಾಗಿದೆ.
ಜಲವಿದ್ಯುತ್ ಯೋಜನೆಗಳು ಸ್ಥಗಿತ
ಪಾಕಿಸ್ತಾನದ ತರ್ಬೆಲ ಹಾಗೂ ಮಂಗ್ಲಾ ಜಲವಿದ್ಯುತ್ ಸ್ಥಾವರಗಳು ಸಿಂಧೂ ನದಿಯ ಮೇಲೆ ಅವಲಂಬಿತವಾಗಿದೆ; ಒಂದು ವೇಳೆ, ನೀರಿನ ಹರಿವು ಕಡಿಮೆಯಾದರೆ ವಿದ್ಯುತ್ ಕೊರತೆಯಿಂದ ಪಾಕಿಸ್ತಾನದ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ತಲುಪುತ್ತದೆ.
ಆರ್ಥಿಕ ಕುಸಿತ
ಸಿಂಧೂ ಒಪ್ಪಂದ ರದ್ಧತಿಯಿಂದ ಪಾಕಿಸ್ತಾನದ ಕೃಷಿ ಕೇಂದ್ರಿತ ಪ್ರದೇಶಗಳಾದ ಪಂಜಾಬ್ ಹಾಗೂ ಸಿಂಧ್ ಪ್ರದೇಶದಲ್ಲಿ ಕೃಷಿಗೆ ನೀರಿನ ಅಭಾವ ಸೃಷ್ಟಿಯಾಗಲಿದೆ. ಇದರಿಂದ ತೀವ್ರ ಆರ್ಥಿಕ ಮುಗ್ಗಟ್ಟು, ಆಹಾರದ ಅಭದ್ರತೆ ಹಾಗೂ ಬೆಲೆ ಇಳುವರಿಯಲ್ಲಿ ಕುಸಿತ ಆಗಲಿದೆ. ಸಿಂಧೂ ನದಿ ವ್ಯವಸ್ಥೆಯು ಪಾಕಿಸ್ತಾನದ ಒಟ್ಟು ದೇಶೀಯ ಉತ್ಪನಕ್ಕೆ ಸುಮಾರು 25% ರಷ್ಟು ಕೊಡುಗೆ ನೀಡುತ್ತದೆ. ಪಾಕಿಸ್ತಾನಕ್ಕೆ, ಸಿಂಧೂ ವ್ಯವಸ್ಥೆಯು ಕೇವಲ ಅತ್ಯಗತ್ಯವಲ್ಲ ಬದಲಾಗಿ ದೇಶದ ಅಸ್ತಿತ್ವದ ಪ್ರಶ್ನೆ.
- ಪವನ್.ಎಸ್ ,ಬೆಂಗಳೂರು
