ಶ್ರೀನಗರ: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಶುಕ್ರವಾರ ಶ್ರೀನಗರಕ್ಕೆ ಆಗಮಿಸಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಎಪ್ರಿಲ್ 22ರಂದು ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿಯಾದರು.
ಈ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದರು. ಈ ಪೈಕಿ ಬಹುತೇಕರು ಪ್ರವಾಸಿಗರಾಗಿದ್ದಾರೆ.
ಬಳಿಕ ಕಾಂಗ್ರೆಸ್ ಪಕ್ಷದ ನಿಯೋಗ ಸೇರಿದಂತೆ ವಿವಿಧ ನಿಯೋಗಗಳನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರನ್ನೂ ಭೇಟಿಯಾಗಿ ಚರ್ಚಿಸಿದರು. ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿ ಸಂಬಂಧ ಗುರುವಾರ ಹೊಸದಿಲ್ಲಿಯಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ತಮ್ಮ ಅಮೆರಿಕ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದ ರಾಹುಲ್ ಗಾಂಧಿ, ಬುಧವಾರ ರಾತ್ರಿಯೇ ಸ್ವದೇಶಕ್ಕೆ ಮರಳಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
