ಐನ್ ಸ್ಟೀನ್ ಕೇವಲ ವಿಜ್ಞಾನಿ ಮಾತ್ರವಲ್ಲ ತತ್ವಜ್ಞಾನಿ ಕೂಡಾ ಆಗಿದ್ದರು ಅವರ ಮಾತುಗಳು ಅವರ ಉನ್ನತ ವಿಚಾರಧಾರೆಯ ಮೂಸೆಯಿಂದ ಹೊರ ಬಂದಿದ್ದು ಪ್ರಾಜ್ಞರು ಕೂಡ ತಲೆದೂಗುವಂತೆ ಇದ್ದವು. ಪ್ರಾಜ್ಞರ ಪ್ರಕಾರ ವಿಜ್ಞಾನ ಮತ್ತು ತತ್ವಜ್ಞಾನಗಳು ಭಿನ್ನವೇನಲ್ಲ ಅವೆರಡೂ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಅಂತೆಯೇ ವಿಜ್ಞಾನಿ ಐನ್ ಸ್ಟೀನ್ ತತ್ವಜ್ಞಾನಿಯಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ವೈಜ್ಞಾನಿಕ ಆವಿಷ್ಕಾರಗಳ ಮಹತ್ವದ ಜೊತೆ ಜೊತೆಗೆ ಅವುಗಳಿಂದ ಸಂಭವಿಸಬಹುದಾದ ವಿಪರೀತ ಪರಿಣಾಮಗಳ ಅರಿವು ಐಸ್ ಸ್ಟೀನ್ ಗಲ್ಲದೆ ಮತ್ತಾರಿಗೆ ಗೊತ್ತು ಮಾನವನ ಬದುಕಿನ ಔನ್ನತ್ಯಕ್ಕೆ ಮಾತ್ರ ವಿಜ್ಞಾನದ ಬಳಕೆಯಾಗಬೇಕು ಎಂಬುದು ಐನ್ ಸ್ಟೀನ್ ಅಭಿಪ್ರಾಯವಾಗಿತ್ತು.
ದುರ್ಬಲರು ತಮಗೆ ಅಪಮಾನ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಬಯಸಿದರೆ ಗಟ್ಟಿ ವ್ಯಕ್ತಿತ್ವದ ಜನರು ಕ್ಷಮೆಯನ್ನು ನೀಡುತ್ತಾರೆ ಜಾಣರು ತಮಗೆ ಮೋಸ ಮಾಡಿದ, ನೋವುಂಟು ಮಾಡಿದ ವ್ಯಕ್ತಿಗಳನ್ನು ಕಡೆಗಣಿಸಿ ಮುನ್ನಡೆಯುತ್ತಾರೆ ಎಂದು ಅವರು ಹೇಳಿದ್ದಾರೆ.
ಯಾರಾದರೂ ನಮ್ಮ ವ್ಯಕ್ತಿತ್ವವನ್ನು ಹೀಗಳೆದು ಅವಮಾನ ಮಾಡಿದಾಗ ಆ ಗಳಿಗೆಗೆ ತುಸು ನೋವಾಗುತ್ತದೆ ಅವರು ಎಸೆದ ಮಾತಿನ ಕಲ್ಲುಗಳು ತಾಗಿದ ಕಾರಣ ನೋವು ಖಂಡಿತವಾಗಿಯೂ ಆಗುತ್ತದೆ ಇಲ್ಲವೆಂದಲ್ಲ ಆದರೆ ಕೆಲವೇ ದಿನಗಳಲ್ಲಿ ಆ ನೋವು ಮಾಯವಾಗಬಹುದು. ಈ ಜಗತ್ತಿನಲ್ಲಿ ಯಾವ ರೀತಿ ಸುಖ,ನೆಮ್ಮದಿಗಳು ಶಾಶ್ವತವಲ್ಲವೋ ಹಾಗೆಯೇ ನೋವು ಸಂಕಟಗಳು ಕೂಡ ಅಶಾಶ್ವತ… ಆದ್ದರಿಂದ ಮನುಷ್ಯ ದುರ್ಬಲನಾಗದೆ ತನಗೆ ಕೇಡುಂಟು ಮಾಡಿದವರನ್ನು ಕಡೆಗಣಿಸಿ ಮಹತ್ತರವಾದದನ್ನು ಸಾಧಿಸುವ ನಿಟ್ಟಿನಲ್ಲಿ ಬದುಕಿನಲ್ಲಿ ಮುನ್ನಡೆಯಬೇಕು ಎಂಬುದು ಐನ್ ಸ್ಟೀನ್ ಅವರ ಈ ಮಾತುಗಳಿಂದ ವ್ಯಕ್ತವಾಗುತ್ತದೆ.
ಐನ್ ಸ್ಟೀನ್ ಹೇಳಿರುವ ಈ ರೀತಿಯ ಹತ್ತು ಹಲವಾರು ವಿಷಯಗಳು ನಮ್ಮ ಬದುಕಿನ ಕವಲು ದಾರಿಯಲ್ಲಿ ಹೊಸ ಹೊಳವುಗಳನ್ನು ಸೂಚಿಸಿ ದಾರಿ ದೀಪವಾಗಿ ತೋರುತ್ತವೆ.
ಕೆಲವರು ನಿನ್ನೆಗಳಲ್ಲಿ ಬದುಕಿದರೆ ಮತ್ತೆ ಕೆಲವರು ನಾಳೆಗಳ ಚಿಂತೆಯಲ್ಲಿ ತಮ್ಮ ವರ್ತಮಾನವನ್ನು ಮರೆತು ಬದುಕಿನ ಬಹುಪಾಲು ಸಮಯವನ್ನು ಆತಂಕ, ಭಯಗಳಲ್ಲಿಯೇ ಕಾಲ ಕಳೆಯುತ್ತಾರೆ.
ಐನ್ ಸ್ಟೀನ್ ಅತಿಯಾಗಿ ಯೋಚಿಸುವ ಜನರ ಮರುಳುತನಕ್ಕೆ “ಭವಿಷ್ಯದ ಕುರಿತು ಹೆಚ್ಚು ಚಿಂತಿಸುವ ಅವಶ್ಯಕತೆ ಇಲ್ಲ… ಅದು ಬಹುಬೇಗನೆ ನಮ್ಮ ಕಣ್ಣ ಮುಂದೆ ವರ್ತಮಾನವಾಗಿ ಬರುತ್ತದೆ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ನಾವು ಕಂಡರಿಯದ ಭವಿಷ್ಯದ ಕುರಿತಾದ ಅತಿಯಾದ ದುಗುಡ ನಮ್ಮ ಇಂದಿನ ಸಂತಸವನ್ನು ಕಿತ್ತುಕೊಳ್ಳುತ್ತದೆ. ಆದ್ದರಿಂದ ಈಗ ಏನಿದೆಯೋ ಅದನ್ನು ಅನುಭವಿಸಿ ಬದುಕಿನಲ್ಲಿ ಮುನ್ನಡೆಯಿರಿ ಎನ್ನುವುದು ಅವರ ವಾದ.
ಮಹತ್ತರವಾದದನ್ನು ಸಾಧಿಸಲು ಬೇಕಾಗಿರುವುದು ಗಟ್ಟಿಯಾದ ನಿಲುವು ಮತ್ತು ಧೈರ್ಯ. ಗಟ್ಟಿಯಾದ ನಿರ್ಧಾರಗಳು ನಮ್ಮನ್ನು ಬಲು ಎತ್ತರಕ್ಕೆ ಕೊಂಡೊಯ್ಯುತ್ತವೆ. ಗಟ್ಟಿಯಾದ ನಮ್ಮ ಇಂದಿನ ನಿರ್ಧಾರಗಳು ನಮ್ಮ ಭವಿಷ್ಯಕ್ಕೆ ಉನ್ನತ ಹಾದಿಯನ್ನು ರೂಪಿಸುತ್ತವೆ. ಕೇವಲ ಸುರಕ್ಷತೆಯನ್ನು ಮನದಲ್ಲಿ ಇಟ್ಟುಕೊಂಡು ಕಾರ್ಯಪ್ರವೃತ್ತರಾಗುವವರು ಮುಂದೆ ಹೋಗುವುದೇ ಇಲ್ಲ. ಅತಿಯಾದ ಸುರಕ್ಷತಾ ನಿರ್ಣಯಗಳಿಗಿಂತ ದಿಟ್ಟತನದ ನಿರ್ಧಾರಗಳು ಈ ಜಗತ್ತಿನ ಪರಿವರ್ತನೆಗೆ ಕಾರಣವಾಗಿವೆ ಎಂಬುದು ಅವರ ನಿಲುವಾಗಿದೆ.
ಜೀವನ ಎನ್ನುವುದು ದ್ವಿಚಕ್ರ ವಾಹನದ ಮೇಲಿನ ಪಯಣದಂತೆ… ಇಲ್ಲಿ ಸಮತೋಲನವನ್ನು ಸಾಧಿಸಲು ನಾವು ಸದಾ ಮುನ್ನಡೆಯುತ್ತಿರಲೇಬೇಕು ಎಂಬುದು ಅವರ ಮತ್ತೊಂದು ಘೋಷವಾಗಿತ್ತು.
ಅದೆಷ್ಟೇ ಸಣ್ಣ ಕೆಲಸವಾಗಿರಲಿ ಜೀವನದಲ್ಲಿ ಸದಾ ಪ್ರಗತಿಯಡೆ ಮುನ್ನಡೆಯಬೇಕು ಪ್ರಗತಿ ಕೇವಲ ನಮ್ಮ ಕಾರ್ಯ ಕೌಶಲವಷ್ಟೇ ಅಲ್ಲ ನಮ್ಮ ಸಮಯದ ಸದುಪಯೋಗ ಮಾಡಿಕೊಳ್ಳುವಲ್ಲಿ ಕೂಡಾ ಇರಬೇಕು ಎಂಬುದನ್ನು ಅವರು ಪ್ರತಿಪಾದಿಸುತ್ತಿದ್ದರು.
ರಾಜಕೀಯವು ಭೌತಶಾಸ್ತ್ರಕ್ಕಿಂತ ಕಠಿಣವಾದದ್ದು ಎಂಬುದು ಅವರು ತಮಾಷೆಯಾಗಿ ಹೇಳುತ್ತಿದ್ದ ಮಾತಲ್ಲ, ಬದಲಾಗಿ ಪರಿಸ್ಥಿತಿಯ ವಿಡಂಬನೆಯನ್ನು ಮಾಡುತ್ತಾ ಹೇಳಿದ ಮಾತಿದು. ಜಾಣ ಮೆದುಳುಗಳು ಭಾವನೆಗಳು, ಶಕ್ತಿ ಮತ್ತು ಅಹಮಿಕೆಯ ಹೋರಾಟದಲ್ಲಿ ಸೋತು ಹೋಗುತ್ತವೆ.
ಸರಳತೆಯನ್ನು ಒಪ್ಪಿಕೊಳ್ಳಿ… ಐನ್ ಸ್ಟೀನ್ ಅವರು ತಮ್ಮ ಐನ್ ಸ್ಟೀನ್ ರೇಜರ್ ನ ಮೇಲೆ ಅಪಾರ ನಂಬಿಕೆಯನ್ನು ಹೊಂದಿದ್ದು, ಅನಾವಶ್ಯಕ ವಿಷಯಗಳನ್ನು ಮನಸ್ಸು ಮತ್ತು ಬದುಕಿನಿಂದ ಹೊರಹಾಕಿ ಅವಶ್ಯಕವಾದುದನ್ನು ಮಾತ್ರ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.
ಸರಳತೆಯ ಶಕ್ತಿ ಅಪಾರ, ಅತಿಯಾದ ಸರಳತೆ ಬೇಡ… ಆದರೆ ಅವಶ್ಯವಿದ್ದಷ್ಟು ಸರಳತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಅಡ್ಡಿಯೇನಿಲ್ಲ ಅಲ್ಲವೇ?
ಶಿಕ್ಷಣದ ಕುರಿತು ಮಾತನಾಡುತ್ತಾ ಐನ್ ಸ್ಟೀನ್ ಹೇಳಿದ್ದು ಹೀಗೆ ಶಿಕ್ಷಣದ ಮುಖ್ಯ ಗುರಿ ನಮ್ಮ ಮೆದುಳನ್ನು ಚಿಂತನಶೀಲತೆಗೊಳಪಡಿಸುವುದೇ ಹೊರತು ವಿಷಯಗಳನ್ನು ನೆನಪು ಮಾಡಿಕೊಳ್ಳುವುದಲ್ಲ. ಹೆಚ್ಚು ಹೆಚ್ಚು ಓದುವಿಕೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ನಿಮ್ಮ ಆಲೋಚನೆಗಳ ಪ್ರತಿಫಲನ ನೀವಾಗಿ… ನಿಮ್ಮ ಕುತೂಹಲವೇ ನಿಮ್ಮ ಅತ್ಯುತ್ತಮ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಅವರು ಹೇಳಿದ್ದು ಈ ಕಾರಣಕ್ಕೆ.
ವಿಶ್ವ ಭ್ರಾತೃತ್ವವನ್ನು, ಮಾನವ ಬಂಧುತ್ವವನ್ನು ಪ್ರತಿಪಾದಿಸುತ್ತಿದ್ದ ಐನ್ ಸ್ಟೀನ್ ನಾವೆಲ್ಲರೂ ಒಂದು ದೊಡ್ಡ ಆಲದ ಮರಕ್ಕೆ ಸಂಬಂಧಪಟ್ಟವರಾಗಿದ್ದು ಹಲವಾರು ರೆಂಬೆ ಕೊಂಬೆಗಳಲ್ಲಿ ಹರಡಿ ಹೋಗಿದ್ದೇವೆ. ಧರ್ಮ,ಕಲೆ,ಸಂಸ್ಕೃತಿ, ವಿಜ್ಞಾನ ಹೀಗೆ ಹತ್ತು ಹಲವು ವಿಧಗಳಲ್ಲಿ ಹಂಚಿ ಹೋಗಿರುವ ನಾವುಗಳು ಒಂದಾಗಿದ್ದಾಗ ಮಾನವೀಯತೆ ನಮ್ಮಲ್ಲಿ ನೆಲೆಸುತ್ತದೆ. ಧರ್ಮ, ಸಂಸ್ಕೃತಿ,ವಿಜ್ಞಾನಗಳು ಜೊತೆಯಾಗಿದ್ದರೆ ನಮ್ಮಲ್ಲಿ ಸೌಹಾರ್ದತೆ ನಾವು ಅರಿತುಕೊಂಡದ್ದಕ್ಕಿಂತ ಹೆಚ್ಚು ನಮ್ಮಲ್ಲಿ ಬೆರೆತಿವೆ. ನಾವು ಬೇರೆಯಾದರೆ ಮಾನವೀಯತೆ ನೆಲೆಯಾಗುವುದು ಕಷ್ಟ ಸಾಧ್ಯ.
ನಿಮ್ಮ ಮನದ ಮಾತಿಗೆ ಕಿವಿಗೊಡಿ. ನಿಮ್ಮ ಆತ್ಮ ಸಾಕ್ಷಿಗೆ ವಿರುದ್ಧವಾಗಿ ಏನನ್ನೂ ಮಾಡಬೇಡಿ. ಜೀವನದ ಅತ್ಯಂತ ಕಠಿಣ ಹಾದಿಯಲ್ಲಿ ನಿಮ್ಮ ಆದರ್ಶಗಳು ನಿಮಗೆ ದಾರಿ ತೋರಲಿ ಎಂದು ವಿಶ್ವ ಮಾನವ ಪ್ರಜ್ಞೆಯನ್ನು ಸಾರಿದ್ದು ಐನ್ ಸ್ಟೀನ್.
ಕೇವಲ ಆದರ್ಶಗಳು ಮಾತ್ರವಲ್ಲ ತಮಾಷೆಯ ಮೂಲಕವೂ ವಿಷಯಗಳನ್ನು ಸರಳವಾಗಿ ತಿಳಿಸಿ ಕೊಡುವ ಸ್ವಭಾವ ಐನ ಸ್ಟೀನ್ ಅವರದಾಗಿತ್ತು.
ಸುಂದರವಾದ ಓರ್ವ ಯುವತಿಯ ಜೊತೆ ಎರಡು ಗಂಟೆಗಳ ಕಾಲ ನೀವು ಕುಳಿತುಕೊಂಡರೂ ನಿಮಗೆ ಕೇವಲ ಎರಡು ನಿಮಿಷ ಮಾತ್ರ ಕಳೆದಂತೆ ಭಾಸವಾಗುತ್ತದೆ. ಅದೇ ಬಿಸಿಯಾದ ಒಲೆಯ ಮೇಲೆ ಕೇವಲ ಎರಡು ನಿಮಿಷ ಕುಳಿತುಕೊಂಡರೂ ಅದೆಷ್ಟೋ ಸಮಯ ಒಲೆಯ ಮೇಲೆ ಕುಳಿತಂತೆ ತೋರುತ್ತದೆ… ಇದನ್ನೇ ರಿಲೇಟಿವಿಟಿ ಎಂದು ಹೇಳಬಹುದು ಎಂದು ತಮ್ಮ ಸಾಪೇಕ್ಷತ ಸಿದ್ಧಾಂತವನ್ನು ಕುರಿತು ಅವರು ತಮಾಷೆಯಾಗಿ ಹೇಳುತ್ತಿದ್ದರು.
ಒಟ್ಟಿನಲ್ಲಿ ಐನ್ ಸ್ಟೀನ್ ವಿಜ್ಞಾನ, ತಂತ್ರಜ್ಞಾನದ ಅರಿವಿನ ಜೊತೆ ಜೊತೆಗೆ ಮಾನವೀಯ ಗುಣಗಳಾದ ಶಾಂತಿ, ಸಹನೆ, ಸಹಬಾಳ್ವೆ ಮತ್ತು ಹಾಸ್ಯಪ್ರಜ್ಞೆಯನ್ನು ಒಳಗೊಂಡ ಪರಿಪೂರ್ಣ ವ್ಯಕ್ತಿತ್ವವನ್ನು ಹೊಂದಿದ್ದರು.
- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ
