ಬಳ್ಳಾರಿ / ಕಂಪ್ಲಿ : ಅಕಾಲಿಕ ಆಲಿಕಲ್ಲು ಮಳೆ ಗಾಳಿಗೆ ನೂರಾರು ಎಕರೆಯಷ್ಟು ಭತ್ತ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿದ್ದು, ಕಂದಾಯ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಕೂಡಲೇ ಬೆಳೆ ಹಾನಿ ಸರ್ವೆ ಕಾರ್ಯ ಮಾಡಿ, ವರದಿ ನೀಡಿದರೆ, ಸರ್ಕಾರದ ಗಮನಕ್ಕೆ ತಂದು ನಷ್ಟ ಪರಿಹಾರ ಒದಗಿಸಲಾಗುವುದು ಎಂದು ಶಾಸಕ ಜೆ. ಎನ್. ಗಣೇಶ್ ಹೇಳಿದರು.
ತಾಲೂಕಿನ ದೇವಲಾಪುರ ಗ್ರಾ.ಪಂ ವ್ಯಾಪ್ತಿಯ ಸೋಮಲಾಪುರ ಪ್ರದೇಶದಲ್ಲಿ ಹಾನಿಯಾದ ರೈತರ ಭತ್ತದ ಹೊಲಗಳಿಗೆ ಭಾನುವಾರ ಭೇಟಿ ನೀಡಿ, ಪರಿಶೀಲಿಸಿದ ನಂತರ ಮಾತನಾಡಿ, ರೈತರು ನಾಲ್ಕು ತಿಂಗಳು ಶ್ರಮಪಟ್ಟು ಬೆಳೆದ ಭತ್ತದ ಬೆಳೆಗಳು ಈಗ ಅಕಾಲಿಕ ಮಳೆಗೆ ಹಾನಿಯಾಗಿರುವುದು ದುಃಖ ತರಿಸಿದೆ. ಇಲ್ಲಿನ ರೈತರನ್ನು ವಿಚಾರಿಸಿದಾಗ ಸುಮಾರು 200ಕ್ಕೂ ಅಧಿಕ ಎಕರೆಯಷ್ಟು ಭತ್ತದ ಬೆಳೆಗಳು ನೆಲಕಚ್ಚಿದ್ದು, ಕಾಳು ಭೂಮಿಗೆ ಬಿದ್ದಿರುವುದರಿಂದ ನಷ್ಟವಾಗಿದ್ದು, ಸೂಕ್ತ ಪರಿಹಾರ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಲಾಗುವುದು. ರೈತರು ಅತಾಸೆಯಾಗದೇ, ಕುಗ್ಗದೇ ಧೈರ್ಯದಿಂದ ಇರಬೇಕು. ಆದಷ್ಟು ಬೇಗ ಬೆಳೆ ಹಾನಿ ಸಮೀಕ್ಷೆ ನಡೆಸಿ, ಪರಿಹಾರ ಒದಗಿಸಲಾಗುವುದು ಎಂದರು.
ನಂತರ ತಹಶೀಲ್ದಾರ್ ಶಿವರಾಜ ಶಿವಪುರ ಮಾತನಾಡಿ, ಆಲಿಕಲ್ಲು ಮಳೆ ಗಾಳಿಗೆ ಭತ್ತದ ಬೆಳೆಗಳು ಹಾನಿಯಾಗಿದ್ದು, ಸರ್ವೆ ಮಾಡಿ, ಸರ್ಕಾರಕ್ಕೆ ನಷ್ಟ ಪರಿಹಾರಕ್ಕಾಗಿ ವರದಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸರಾವ್ ಸೇರಿದಂತೆ ಹಲವಾರು ರೈತರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
