ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪಾರ್ವತಿ ( ಒಬ್ಬ ಕರುಣಾಮಯಿ ತಾಯಿ ಕಥೆ )

ಪಾರ್ವತಿ ಈ ಲೋಕದ ಋಣಮುಗಿಸಿ ಇಂದಿಗೆ ನಾಲ್ಕು ದಿನಗಳಾಗಿವೆ. ಮಗ ವಿದೇಶದಿಂದ ಬಂದು ಅಂತ್ಯಕ್ರಿಯೆ ಮಾಡುತ್ತಾನೆಂದು ಅವಳ ಮೃತ ಶರೀರವನ್ನು ಶವಾಗಾರದಲ್ಲಿರಿಸಿದ ಅಳಿಯ. ಅವಳು ಸತ್ತಳೆಂದು ಅಳುವವರು ಯಾರೂ ಇಲ್ಲ. ಈ ಜೀವನವೇ ಸಾಕೆಂದು ಅನಿಸಿತ್ತು ಅವಳಿಗೆ. ೩ ವರ್ಷಗಳ ಹಿಂದೆ ಗಂಡ ಸತ್ತಾಗ ಅವಳಿಗೆ ಜೀವನವೇ ಶೂನ್ಯ ಎನಿಸಿತ್ತು. ತಡೆಯಲಾರದ ದುಃಖ, ತನಗೆ ಜೀವನದಲ್ಲಿ ಆಧಾರ ಎಂದು ಇದ್ದದ್ದು ಗಂಡ ಮಾತ್ರ. ಇದ್ದ ೩ ಮಕ್ಕಳು ಗಂಡನ ಮೊದಲ ಹೆಂಡತಿ ಮಕ್ಕಳು. ಪಾರ್ವತಿ ಎಂದಿಗೂ ಮನಸ್ಸಲ್ಲಿ ಅವರು ತನ್ನ ಮಕ್ಕಳು ಅಲ್ಲ ಎಂದು ಅಂದುಕೊಂಡವಳೇ ಅಲ್ಲ, ಮದುವೆಗೆ ಮೊದಲು ತಾನು ಜವಾಬ್ಧಾರಿ ವಹಿಸಿಕೊಂಡು ವಿದ್ಯೆ ಕಲಿಸಿದ ತನ್ನ ೩ ಜನ ತಮ್ಮ- ತಂಗಿಯರೇ ತನ್ನ ಮಕ್ಕಳು. ಮದುವೆ ನಂತರ ತನ್ನ ಗಂಡನ ೩ ಮಕ್ಕಳೇ ತನ್ನ ಮಕ್ಕಳು, ಹೀಗೆ ತನಗೆ ೬ ಜನ ಮಕ್ಕಳು ಎಂದು ಹೇಳುವವಳು ಪಾರ್ವತಿ. ತನ್ನ ಗಂಡ ಇದ್ದಾಗ ತನ್ನ ಸಣ್ಣ ಮಗಳು ಯಾವಾಗಲೂ ಬರುವವಳು, “ ಅಪ್ಪಾ” ಎಂದು ಬಾಯಿ ತುಂಬಾ ಕರೆವಳು. ಹತ್ತಿರದಲ್ಲೇ ಇದ್ದ ಸಣ್ಣ ಮಗಳ ಮಕ್ಕಳು ಯಾವಾಗಲೂ ಅಜ್ಜನ ಮನೆಗೆ ಬರುವವರು. ಬಾಯಿ ತುಂಬಾ ತನ್ನನ್ನು ಅಜ್ಜಿ ಎಂದು ಕರೆಯುತ್ತಿದ್ದರು. ತಾನು ಮಾಡುತ್ತಿದ್ದ ತಿಂಡಿ ತಿನಿಸು ಎಲ್ಲಾ ತನ್ನ ಮಕ್ಕಳಿಗೆ ಇಷ್ಟ ಎಂದು ಕೊಂಡೊಯ್ಯುತ್ತಿದ್ದ ಸಣ್ಣ ಮಗಳು ಅಪ್ಪನಿಗೆ ಬೇಸರವಾಗಬಾರದು ಎಂದು ಬಾಯ್ತುಂಬಾ ಅಮ್ಮಾ ಎಂದು ಕರೆಯುತ್ತಿದ್ದಳು. ಆಕೆಗೆ ಚಿಕ್ಕಮ್ಮನ ಬಗ್ಗೆ ಎಷ್ಟು ತಾತ್ಸಾರ ಇತ್ತು ಎಂದು ಪಾರ್ವತಿಗೆ ತಿಳಿದಿದ್ದೇ ತನ್ನ ಗಂಡ ಸತ್ತು ವರ್ಷದ ದಿನಕ್ಕೆ. ೩ ಜನ ಮಕ್ಕಳೂ ಆಕೆಯನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು, ಇನ್ನು ನೀನು ನಿನ್ನ ಮನೆಯಲ್ಲೇ ಇರಬೇಕು, ನಾವು ಹೇಳಿ ಕೇಳಿ ವೈದ್ಯ ವೃತ್ತಿ ಆರಿಸಿಕೊಂಡವರು ನಮಗೆ ನಿನ್ನ ಬೇಕು-ಬೇಡ ಪೂರೈಸಲು ಸಮಯವಿಲ್ಲ. ನಿನ್ನ ತಮ್ಮಂದಿರಲ್ಲೋ, ವಠಾರದ ಸುತ್ತಮುತ್ತಲಿನ ಮನೆಯವರಲ್ಲೋ ಕೇಳಿ ನಿನಗೆ ಏನು ಬೇಕೋ ಅದನ್ನೆಲ್ಲಾ ಅವರಲ್ಲಿ ಕೇಳಿ ತರಿಸಿಕೋ, ಅಪ್ಪನ ಠೇವಣಿ ಹಣ ಎಲ್ಲಾ ನಿನಗೇ, ನಮಗೆ ಏನೂ ಬೇಡ, ನಿನ್ನ ಒಡವೆ ನಮಗೆ ಬೇಡ, ಅಪ್ಪನ ಆಸ್ತಿ ಎಲ್ಲಾ ನಿನಗೇ, ನೀನು ಸರ್ವ ತಂತ್ರ ಸ್ವತಂತ್ರಳು ನಮ್ಮನ್ನು ಯಾವುದೇ ಸಹಾಯಕ್ಕೆ ಕರೆಯಬೇಡ ಎಂದು ಹೇಳಿ ಮೂರು ಮಕ್ಕಳು ತಮ್ಮ ಸ್ವಸ್ಥಾನ ಸೇರಿದವರು.
ತನ್ನ ೩೮ನೇ ವಯಸ್ಸಿಗೆ ೨ನೇ ಹೆಂಡತಿಯಾಗಿ ಗಂಡನ ಮನೆ ಸೇರಿದ ಪಾರ್ವತಿಗೆ, ಗಂಡನ ಮನೆಯ ಸುಖ ಜೀವನದಲ್ಲಿ ತನ್ನ ಹಿಂದಿನ ತವರಿನ ಬಡತನದ ಜೀವನವನ್ನು ಮರೆತವಳಲ್ಲ, ಮನೆಯಲ್ಲಿ ಕೆಲಸಕ್ಕೆ ಆಳುಗಳು, ದೊಡ್ಡ ಹುದ್ದೆಯಲ್ಲಿರುವ ಗಂಡ, ಮೇಲ್ದರ್ಜೆ ಅಧಿಕಾರಿಗಳ ಕುಟುಂಬದ ಸ್ನೇಹ, ಇದೆಲ್ಲಾ ಪಾರ್ವತಿಗೆ ಹೊಸದು. ಮನೆಯಲ್ಲಿ ತಾರುಣ್ಯಕ್ಕೆ ಕಾಲಿಟ್ಟ ಮಕ್ಕಳ ತಾಯಿಯಾಗಿ ತನ್ನ ಕರ್ತವ್ಯ ನಿರ್ವಹಿಸುವ ಜವಾಬ್ಧಾರಿ. ಒಮ್ಮೆಲೇ ದೊಡ್ಡ ಮಕ್ಕಳ ತಾಯಿಯಾಗಿ ಜವಾಬ್ದಾರಿ ವಹಿಸಿಕೊಂಡ ಪಾರ್ವತಿಗೆ ಅದನ್ನು ನಿಭಾಯಿಸುವುದು ದುಸ್ತರ ಅನಿಸಿದ್ದುಂಟು. ಆದರೂ ತಾನು ಮದುವೆಗೆ ಮೊದಲು ಪಟ್ಟ ಪಾಡು ನೆನೆಸಿಕೊಂಡಾಗ ಇದೇನೂ ಅಲ್ಲ ಅನಿಸಿದ್ದೂ ಇದೆ. ಮದುವೆಗೆ ಮೊದಲು ಹಿರಿಯ ಅಣ್ಣಂದಿರಿಬ್ಬರು ಇದ್ದೂ ಮನೆಯ ಜವಾಬ್ದಾರಿ ಪಾರ್ವತಿಯ ಹೆಗಲೇರಿತ್ತು. ದೊಡ್ಡಣ್ಣನೋ ಊರು ಬಿಟ್ಟು ಹೊರ ರಾಜ್ಯದಲ್ಲೇ ಕೆಲಸ ಸಿಕ್ಕಿ ಊರಿಗೆ ಬರುವುದೇ ವರ್ಷಕ್ಕೊಮ್ಮೆ. ಸಣ್ಣ ಅಣ್ಣನೋ ವಿದೇಶಕ್ಕೆ ಹೋದವ ಸ್ವದೇಶಕ್ಕೆ ಮರುಳುವುದೇ ೬-೮ ವರ್ಷಕ್ಕೊಮ್ಮೆ. ಕಾರಣ, ಪಾರ್ವತಿಯ ಅಮ್ಮನಿಗೆ ತನ್ನ ಕಷ್ಟ ಹೇಳಿಕೊಳ್ಳಲು ಪಾರ್ವತಿ ಬಿಟ್ಟರೆ ಬೇರೆ ಯಾರೂ ಇಲ್ಲ. ತನ್ನ ೮ ಜನ ಮಕ್ಕಳಲ್ಲಿ ಮನೆ ಜವಾಬ್ಧಾರಿ ನಿಭಾಯಿಸಲು ಹೊರಟಿರುವ ಪಾರ್ವತಿಯೇ ಅವಳಮ್ಮನಿಗೆ ಗಂಡುಮಗ. ಎಲ್ಲಾ ಜವಾಬ್ಧಾರಿಯನ್ನೂ ಪಾರ್ವತಿಯೇ ನಿಭಾಯಿಸುತ್ತಾಳೆಂದು ಅವಳಮ್ಮನ ನಂಬಿಕೆ. ಗಂಡುಮಕ್ಕಳು ಇದ್ದೂ ತಾನೇ ಮನೆ ಜವಾಬ್ದಾರಿ ಹೊರಬೇಕಲ್ಲ ಎಂಬ ಯಾವುದೇ ದುಗುಡ ಪಾರ್ವತಿಗೆ ಇರಲಿಲ್ಲ, ಆಕೆ ಜವಾಬ್ಧಾರಿಗೆ ಎಂದೂ ಬೆನ್ನು ತಿರುಗಿಸಿ ನಿಂತವಳೇ ಅಲ್ಲ. ತನ್ನ ಇಬ್ಬರು ಕೊನೆಯ ತಮ್ಮಂದಿರ ವಿದ್ಯಾಭ್ಯಾಸದ ಜವಾಬ್ಧಾರಿಯನ್ನು ತಾನೇ ವಹಿಸಿಕೊಂಡು, ಅವರ ಜೀವನಕ್ಕೆ ದಾರಿ ಮಾಡಿಕೊಟ್ಟವಳು ಪಾರ್ವತಿ. ತಾನು ಕನ್ಯೆಯಾಗಿಯೇ ಉಳಿದೆನಲ್ಲಾ ಎಂಬ ಕೊರಗು ಎಂದೂ ಪಾರ್ವತಿಯ ಮನಸ್ಸಿಗೆ ಬರಲೇ ಇಲ್ಲ. ತನ್ನ ತಂಗಿಯಂದಿರು ಮದುವೆಯಾಗಿ ಗಂಡನ ಮನೆ ಸೇರಿದರೂ ತಾನು ಇನ್ನೂ ಕನ್ಯೆಯಾಗಿ ಉಳಿದು, ತನ್ನ ಮನೆಯ ಜವಾಬ್ಧಾರಿಯನ್ನು ಅಪ್ಪಿಕೊಂಡವಳು, ಒಪ್ಪಿಕೊಂಡವಳು ಪಾರ್ವತಿ.
ಅವಳ ಅಪ್ಪ, ಅಮ್ಮ, ತಮ್ಮ, ತಂಗಿಯಂದಿರಷ್ಟೇ ಅವಳ ಪ್ರಪಂಚ. ಅದು ಬಿಟ್ಟು ತನ್ನ ಮುಂದಿನ ಜೀವನದ ಬಗ್ಗೆ ಎಂದೂ ಯೋಚಿಸಿದವಳೇ ಅಲ್ಲ.
ಪಾರ್ವತಿಯ ಜೀವನದ ಹಾದಿ ಬದಲಾಗಿದ್ದೇ ಅವಳ ಜೀವನದ ೩೮ ವಸಂತ ಕಳೆದ ನಂತರ. ತಾನು ಬಾಡಿಗೆಗೆ ಇದ್ದ ಮನೆಯ ಮಾಲಕರ ತಮ್ಮ ಮತ್ತು ಅವನ ಕುಟುಂಬ ದೂರದ ರಾಜ್ಯದಲ್ಲಿ ಯಾವುದೋ ಪ್ರವಾಸಕ್ಕೆ ಹೋಗಿದ್ದಾಗ ಅಪಘಾತವಾಗಿ ಮಾಲಕರ ತಮ್ಮನ ಹೆಂಡತಿ ಸ್ಥಳದಲ್ಲೇ ಮೃತಪಟ್ಟಾಗ, ಮಾಲಕರ ತಮ್ಮ ಮತ್ತು ಮಕ್ಕಳು ದಿಕ್ಕೆಟ್ಟಂತಾದಾಗ, ಮನೆಯ ಮಾಲಕರು ತಮ್ಮ ದೊಡ್ಡ ಮಗಳನ್ನು ತಮ್ಮನ ಮನೆಗೆ ಕಳುಹಿಸಿಕೊಟ್ಟವರು, ತಮ್ಮನಿಗೆ ಇನ್ನೊಂದು ಮದುವೆ ಮಾಡುವುದೇ ಇದಕ್ಕೆ ಸೂಕ್ತ ಪರಿಹಾರ ಎಂದು ಮನಸ್ಸಿಗೆ ಬಂದ ಕೂಡಲೇ ತಮ್ಮನ ೨ನೇ ಮದುವೆಗೆ ಕನ್ಯಾನ್ವೇಷಣೆಗೆ ಹೊರಟವರಿಗೆ ಮನಸ್ಸಿಗೆ ಮೊದಲಿಗೆ ಬಂದ ಕನ್ಯೆಯೇ ಪಾರ್ವತಿ.
ರೇಷನ್ ಅಂಗಡಿಯಲ್ಲಿ ಕೆಲಸಕ್ಕಿದ್ದು ತನ್ನ ಮನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿರುವ ಪಾರ್ವತಿ ತನ್ನ ತಮ್ಮನ ಮನೆಯ ಜವಾಬ್ದಾರಿಯನ್ನು ಹೊರಬಲ್ಲಳು, ಮುರಿದು ಹೋದ ಸಂಸಾರವನ್ನು ಪುನಃ ಕಟ್ಟಬಲ್ಲಳು ಎಂಬ ವಿಶ್ವಾಸದಿಂದ ಪಾರ್ವತಿಯನ್ನು ತನ್ನ ತಮ್ಮನಿಗೆ ೨ನೇ ಮದುವೆಗೆ ಶಿಫಾರಸ್ಸು ಮಾಡಿ, ತಮ್ಮನನ್ನು ಒಪ್ಪಿಸಿ ಮದುವೆ ಮಾಡಿಸಿಯೇ ಬಿಟ್ಟರು.
೧೦-೧೨ ವರ್ಷದ ೩ ದೊಡ್ಡ ಮಕ್ಕಳ ತಾಯಿಯಾಗಿ, ತನ್ನ ಗಂಡನಿಗೆ ೨ನೇ ಹೆಂಡತಿಯಾಗಿ ತನ್ನ ಗಂಡನ ಮನೆಗೆ ಕಾಲಿಟ್ಟವಳು ಪಾರ್ವತಿ. ನಂತರ ತನ್ನ ಗಂಡ ಕೆಲಸದಲ್ಲಿದ್ದ ದೂರದ ರಾಜ್ಯಕ್ಕೆ ತನ್ನ ಗಂಡ ಮತ್ತು ಮಕ್ಕಳೊಂದಿಗೆ ಪಯಣ ಬೆಳೆಸಿದಳು. ಪಾರ್ವತಿಗೆ ತನ್ನ ತವರಿನಲ್ಲಿ ಎಲ್ಲಾ ಜವಾಬ್ಧಾರಿ ತಾನೇ ಹೊತ್ತು, ರೇಷನ್ ಅಂಗಡಿಯ ಕೆಲಸದಿಂದ ಬರುವ ಸಂಬಳದಿಂದ ಮನೆ ಜವಾಬ್ಧಾರಿ ನಿಭಾಯಿಸಿದ ಪಾರ್ವತಿಗೆ ತನ್ನ ಗಂಡನ ಮನೆಯ ಜವಾಬ್ದಾರಿ, ಮಕ್ಕಳ ಜವಾಬ್ಧಾರಿ ಯಾವುದೂ ಹೊರೆ ಅನಿಸಲೇ ಇಲ್ಲ. ಎಲ್ಲವನ್ನೂ ಸುಲಲಿತವಾಗಿ ನಿಭಾಯಿಸಿದಳು. ಆದರೆ ಮಲಮಕ್ಕಳಲ್ಲಿ ಅವಳ ಬಗ್ಗೆ ಉಪೇಕ್ಷೆ ಇದ್ದ ಬಗ್ಗೆ ಅವಳಿಗೆ ಅರಿವಿಗೆ ಬರಲೇ ಇಲ್ಲ. ಮಕ್ಕಳೇ ಅಪ್ಪನಿಗೆ ಬೇಸರವಾಗಬಾರದೆಂದು, ತಮಗೆ ಮಲತಾಯಿಯಲ್ಲಿ ಇದ್ದ ಉಪೇಕ್ಷೆಯನ್ನು ಅಪ್ಪನ ಮುಂದೆ ತೋರ್ಪಡಿಸಲೇ ಇಲ್ಲ. ಇದರಲ್ಲಿ ಪಾರ್ವತಿಯ ಯಜಮಾನರ ಸಹನೆ, ತಾಳ್ಮೆಯ ಪಾಲೂ ಇದೆ ಎನ್ನುವುದನ್ನು ಒಪ್ಪಲೇ ಬೇಕು. ಆತ ತುಂಬಾ ಸಮಾಧಾನಿ, ಎಂದೂ ತನ್ನ ಮಕ್ಕಳ ಬಗ್ಗೆಯಾಗಲೀ, ತನ್ನ ೨ನೇ ಹೆಂಡತಿಯ ಬಗ್ಗೆ ಮಕ್ಕಳಿಗೆ ಇದ್ದ ಅಭಿಪ್ರಾಯವನ್ನಾಗಲೀ ಹೊರಪ್ರಪಂಚಕ್ಕೆ ತೆರೆದಿಡಲೇ ಇಲ್ಲ. ಹೆಚ್ಚೇಕೆ ಪಾರ್ವತಿಗೇ ಈ ಬಗ್ಗೆ ಆತ ತನ್ನ ಜೀವನದ ಕೊನೆವರೆಗೂ ತಿಳಿಸಲೇ ಇಲ್ಲ. ಪಾರ್ವತಿಗೆ ಇದೆಲ್ಲಾ ಮನವರಿಕೆಯಾದದ್ದು ಗಂಡ ಸತ್ತ ವರ್ಷಕ್ಕೆ ತನ್ನ ಗಂಡನ ವರ್ಷದ ತಿಥಿಯ ದಿನದಂದು ಮಕ್ಕಳು ಆಕೆಯನ್ನು ಒಬ್ಬಳನ್ನೇ ಅವಳ ಗಂಡನ ಮನೆಯಲ್ಲಿ ಬಿಟ್ಟು ಹೊರಟು ನಿಂತಾಗ. ಮಗ ಅನಿಸಿಕೊಂಡವನು “ನಮಗೆ ನೀವು ಮೊದಲಿನಿಂದ ಸರಿ ಬರಲೇ ಇಲ್ಲ, ಅಪ್ಪನಿಗೆ ಇದು ಗೊತ್ತಿತ್ತು, ಇನ್ನು ನೀವು ಸ್ವತಂತ್ರರು, ನೀವು ನಿಮ್ಮ ಗಂಡ ಕಟ್ಟಿದ ಮನೆಯಲ್ಲೇ ಇರಿ” ಅಂದಾಗ ಪಾರ್ವತಿಗೆ ದಿಕ್ಕೇ ತೋಚದಂತಾಗಿತ್ತು.
ಮಕ್ಕಳು ಈ ರೀತಿ ತನ್ನನ್ನೇಕೆ ಒಂಟಿಯಾಗಿ ಬಿಟ್ಟು ಬಿಟ್ಟರು?. ತಾನು ತಾಯಿಯಂತೆ ಎಲ್ಲಾ ಜವಾಬ್ಧಾರಿ ಹೊರಲಿಲ್ಲವೇ? ಮಕ್ಕಳ ಮದುವೆಯನ್ನು ತಾನೇ ಮುಂದೆ ನಿಂತು ಮಾಡಿರಲಿಲ್ಲವೇ? ಇಬ್ಬರೂ ಹೆಣ್ಣು ಮಕ್ಕಳ ಎರಡೆರಡು ಬಾಣಂತನವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದವಳು ಪಾರ್ವತಿ, ಬಾಣಂತನದ ಸಮಯ ತನ್ನ ಹೆಣ್ಮಕ್ಕಳು ಬಾಣಂತಿ ಸ್ನಾನ ನೀವೇ ಮಾಡಿಸಬೇಕು, ಕೆಲಸದ ಆಳುಗಳು ಯಾರೂ ನಮ್ಮನ್ನು ಸ್ನಾನ ಮಾಡಿಸಕೂಡದು ಎಂದು ಹೇಳಿದಾಗ ತಾನೇ ಸಂತೋಷದಿಂದ ಎಲ್ಲವನ್ನೂ ಒಪ್ಪಿ, ಅಪ್ಪಿ ತನ್ನ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಳು. ಬಾಣಂತನದ ಜವಾಬ್ಧಾರಿ, ಮಗು ನೋಡಲು ಬರುವವರಿಗೆ ಹೊತ್ತು ಹೊತ್ತಿನ ಊಟ- ಉಪಚಾರವನ್ನು ನಿಭಾಯಿಸಿದ್ದಳು. ಅದಾವುದೂ ತನ್ನ ಹೆಣ್ಣು ಮಕ್ಕಳಿಗೆ ನೆನಪಿಗೆ ಬರಲಿಲ್ಲವೇ? ಎಂದು ಪಾರ್ವತಿಗೆ ಎಷ್ಟೋ ಬಾರಿ ಅನಿಸಿದ್ದುಂಟು. ಅದನ್ನು ತನ್ನ ಮನೆಗೆ ಬಂದವರಲ್ಲಿ ಎಲ್ಲರಲ್ಲಿಯೂ ಕೇಳಿದವಳೇ ಪಾರ್ವತಿ. ನಾನೇನು ತಪ್ಪು ಮಾಡಿದೆ? ಮಕ್ಕಳ ಮದುವೆ, ಬಾಣಂತನದ ಜವಾಬ್ಧಾರಿ ನಿಭಾಯಿಸಿಲ್ಲವೇ? ಮೊಮ್ಮಕ್ಕಳು ಮನೆಗೆ ರಜೆಗೆ ಮನೆಗೆ ಬಂದಾಗ ಅವರ ಊಟ ಉಪಚಾರವನ್ನು ತುಂಬಾ ಅಕ್ಕರೆಯಿಂದ ನೋಡಿಕೊಂಡಿಲ್ಲವೇ? ಆದರೆ, ಅದನ್ನೆಲ್ಲಾ ನೆನಪಿಸಿಕೊಳ್ಳದೇ ಈಗ ಹೀಗೇಕೆ ತನ್ನನ್ನು ಇಲ್ಲಿ ಒಂಟಿಯಾಗಿ ಬಿಟ್ಟು, ತಮ್ಮ ಜವಾಬ್ಧಾರಿಯಿಂದ ನುಣುಚಿಕೊಂಡಿರುವುದು ಪಾರ್ವತಿಗೆ ಬಿಡಿಸಲಾಗದ ಕಗ್ಗಂಟಾಗಿ ಉಳಿದಿದೆ. ಎಲ್ಲಾ ಮಕ್ಕಳು ತಮ್ಮ ಜವಾಬ್ಧಾರಿಗೆ ಬೆನ್ನು ತಿರುಗಿಸಿದರೂ, ಸಣ್ಣ ಅಳಿಯ ಒಬ್ಬ ಮಾತ್ರ ಮೊದಲಿಗೆ ವಾರಕ್ಕೊಮ್ಮೆ     ಬರುತ್ತಿದ್ದವನು ನಂತರ ಹದಿನೈದು ದಿನಕ್ಕೊಂದು ಬಾರಿ ಬಂದು ನೋಡಿಕೊಂಡು ಹೋಗುತ್ತಿದ್ದ. ಬರುವಾಗ ಚೀಲ ತುಂಬಾ ಹಣ್ಣು, ತಿಂಡಿ, ತಿನಿಸು ತರುವುದನ್ನು ತಪ್ಪಿಸುತ್ತಿರಲಿಲ್ಲ. ಬಂದವನೇ ತನ್ನ ಕ್ಷೇಮ ಸಮಾಚಾರ ಕೇಳುತ್ತಿದ್ದ, ಉಪಚಾರಕ್ಕೆ ಇದ್ದ ದಾದಿಯರಲ್ಲಿ ತನ್ನ ಔಷಧದ ಬಗ್ಗೆ ತಿಳಿಸಿ ಹೇಳುತ್ತಿದ್ದ. ೧೫ ದಿನಕ್ಕೊಮ್ಮೆ ಬರುವುದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಆತ ಬರುವ ದಿನದಂದು ಪಾರ್ವತಿಯ ಕಾತುರ ಹೇಳಲಾಗದು. ದೂರದ ದೇಶದಲ್ಲಿ ಇದ್ದ ಮಗ ಫೋನಿನಲ್ಲಿ ಮಾತ್ರ ಮಾತನಾಡಲು ಸಿಗುತ್ತಿದ್ದ. ಬಾಯಿ ತುಂಬಾ ಮಾತನಾಡುವ ಪಾರ್ವತಿಗೆ ಮಗನ “ಹೂಂ” ಗುಟ್ಟುವಿಕೆಯಿಂದ ಆಕೆಯ ಮಾತುಗಳು ಹೊರಬಾರದೇ ಗಂಟಲಲ್ಲೇ ಉಳಿಯುತ್ತಿತ್ತು.
ಮಕ್ಕಳು ತನ್ನೊಬ್ಬಳನ್ನೇ ಮನೆಯಲ್ಲಿ ಬಿಟ್ಟು ಹೋದ ಹದಿನೈದೇ ದಿನಕ್ಕೆ ಪಾರ್ವತಿ ಅಸೌಖ್ಯದಿಂದ ಆಸ್ಪತ್ರೆ ಸೇರಿದವಳು, ಒಂದೂವರೆ ತಿಂಗಳು ಜೀವನ್ಮರಣದ ಹೋರಾಟ ನಡೆಸಿ, ನಂತರ ಗುಣಮುಖಳಾಗಿ ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿ ಒಬ್ಬ ನರ್ಸ್ ಜೊತೆ ಮನೆಗೆ ಪಯಣ ಬೆಳೆಸಿದಳು. ಆನಂತರ, ಅವಳ ಒಡೆನಾಟ ಶುರುವಾಗಿದ್ದು ಹತ್ತು ಹಲವಾರು ನರ್ಸ್ಗಳ ಜೊತೆ. ಒಬ್ಬ ನರ್ಸ್ ರಜೆಗೆ ಹೋದಾಗ ಪಾಳಿಯಲ್ಲಿ ಇನ್ನೊಬ್ಬ ನರ್ಸ್ ಅವಳ ಉಪಚಾರಕ್ಕೆ ಬರುತ್ತಿದ್ದರು. ಎಲ್ಲರೂ ಜೀವನದಲ್ಲಿ ನೊಂದು ಬೆಂದವರೇ. ಒಬ್ಬಾಕೆ ನರ್ಸ್ ತುಂಬಾ ಅಚ್ಚುಮೆಚ್ಚು. ಎಷ್ಟು ಅಚ್ಚುಮೆಚ್ಚು ಎಂದರೆ ಆಕೆಯೇ ತನಗೆ ಕೊನೆವರೆಗೂ ಇದ್ದರೆ ಸಾಕೆಂಬ ಮಟ್ಟಿಗೆ. ಆದರೆ ವಿಧಿ ಇದನ್ನು ಸಹಿಸಲಿಲ್ಲ ಅನ್ನಬೇಕು. ಆಕೆ ಬಂದು ಆರು ತಿಂಗಳಿಗೆ ಆಕೆಯ ಗಂಡ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ತೀರಿಹೋದ ಕಾರಣ ಆಕೆಗೆ ತನ್ನ ಊರಿಗೆ ಹೋಗದೆ ಬೇರೆ ವಿಧಿಯಿರಲಿಲ್ಲ. ಸಣ್ಣ ಮಕ್ಕಳು, ವಯಸ್ಸಾದ ತಾಯಿಯನ್ನು ಬಿಟ್ಟು ಆಕೆ ಹಿಂದಿರುಗಿ ಬರಲೇ ಇಲ್ಲ. ಪ್ರತಿ ತಿಂಗಳು ಒಬ್ಬರಾದ ನಂತರ ಒಬ್ಬ ನರ್ಸ್ಗಳು ಪಾಳಿಯಲ್ಲಿ ಬಂದು ಹೋಗುತ್ತಾರೆ. ಒಬ್ಬೊಬ್ಬ ನರ್ಸ್ಗಳ ಗುಣ ಒಂದೊಂದು ರೀತಿ- ವಾಚಾಳಿಗಳು, ಸಮಾಧಾನಿಗಳು, ಮಿತಭಾಷಿಗಳು, ಘಟವಾಣಿಗಳು. ಇವರ ನಡುವೆ ಒಗ್ಗಿಕೊಳ್ಳುವುದೇ ಪಾರ್ವತಿಗೆ ಬಲುದುಸ್ತರ. ಎಲ್ಲರೂ ಅವರ ಜೊತೆ ಅವರವರ ಮನೆ ತೊಂದರೆ, ತಾಪತ್ರಯಗಳನ್ನು ಹೊತ್ತು ಬಂದವರೇ… ಹೀಗೆ ನರ್ಸ್ಗಳ ಜೊತೆ ಆರಂಭಗೊಂಡ ಪಾರ್ವತಿಯ ದಿನಚರಿ ಮುಗಿದಿದ್ದು ಆಸ್ಪತ್ರೆಯಲ್ಲಿ. ನೆಪಕ್ಕೆ ಕೆಳಕ್ಕೆ ಬಿದ್ದ ಪಾರ್ವತಿಯ ತೊಡೆ ಮೂಳೆ ಮುರಿದು, ಆಸ್ಪತ್ರೆ ಸೇರಿದ ೧೦ ದಿನಕ್ಕೇ ತನ್ನ ಇಹದ ಪಯಣ ಮುಗಿಸಿದಳು.
ತನ್ನನ್ನು ಮಕ್ಕಳು ಒಂಟಿಯಾಗಿ ಮನೆಯಲ್ಲಿ ಬಿಟ್ಟಂದಿನಿಂದ ಪಾರ್ವತಿ “ತನಗೇಕೆ ಇನ್ನೂ ಸಾವು ಬಂದಿಲ್ಲ, ಸಾಯುವುದು ಹೇಗೆ?” ಎಂದು ಎಲ್ಲರಲ್ಲೂ ಕೇಳುತ್ತಿದ್ದಳು. ದಿನವೂ ವರ್ತಮಾನ ಪತ್ರಿಕೆ ಓದುವುದು ಪಾರ್ವತಿಯ ದಿನಚರಿಗಳಲ್ಲಿ ಒಂದು. ಆಕೆ ಮೊದಲು ಓದುತ್ತಿದ್ದುದೇ ಶ್ರದ್ಧಾಂಜಲಿ ಅಂಕಣ. ಎಲ್ಲರೂ ಎಷ್ಟು ಸುಲಭದಲ್ಲಿ ಸಾಯುತ್ತಾರೆ. ನನಗೇಕೆ ಇನ್ನೂ ಸಾವು ಬಂದಿಲ್ಲ? ನಾನು ಹೇಗೆ ಸಾಯುವುದು? ನನ್ನನ್ನು ದೇವರು ಇನ್ನೂ ಏಕೆ ಇಟ್ಟಿದ್ದಾನೆ? ಎಂದು ಎಲ್ಲರಲ್ಲೂ ಕೇಳುವವಳು. ತನ್ನ ಮಕ್ಕಳಲ್ಲಿ ತನಗೇಕೆ ದಯಾಮರಣ ನೀಡಬಾರದು ಎಂದೂ ಕೇಳಿದ್ದುಂಟು. ಅವಳ ಮೊರೆ ಆ ದೇವರು ಕೇಳಿಸಿಕೊಂಡನೋ ಏನೋ? ತೊಡೆ ಮೂಳೆ ಮುರಿದಿದೆ ಎಂದು ಆಸ್ಪತ್ರೆ ಸೇರಿದ ಪಾರ್ವತಿ ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದಳು. ತನ್ನ ಗಂಡನ ಹಣ, ತನ್ನಲ್ಲಿದ್ದ ಒಡವೆ, ತನ್ನ ಗಂಡನ ಆಸ್ತಿ ಎಲ್ಲವನ್ನೂ ತನ್ನ ಮಕ್ಕಳಿಗೆ ಬಿಟ್ಟು ಹೋದ ಪಾರ್ವತಿ ಇಂದು ನೆನಪು ಮಾತ್ರ.
ಅವಳ ನೆನಪು ಮಕ್ಕಳಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಅವಳ ನಿಷ್ಕಾಮ ಪ್ರೇಮ, ಅಪಾರ ಪ್ರೀತಿ, ವಾತ್ಸಲ್ಯ ಎಲ್ಲಾ ನೆನಪು. ಪಾರ್ವತಿ ಈ ಲೋಕ ಬಿಟ್ಟು ಹೋದರೂ ತನ್ನ ನೆನಪನ್ನು ಮಾತ್ರ ಬಿಟ್ಟು ಹೋಗಿದ್ದಾಳೆ.

– ಎಸ್. ಎಸ್. ವಿ. ರಾವ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ