ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಕ್ಕಳನ್ನು ಕೆಣಕದೆ ಪೋಷಿಸುವುದು ಹೇಗೆ?

ಅದೊಂದು ಪುಟ್ಟ ಸಂಸಾರ. ಗಂಡ ಹೆಂಡತಿ ಕೇವಲ ಎರಡು ಮಕ್ಕಳಿರುವ ಆ ಮನೆಯಲ್ಲಿ ಮಕ್ಕಳ ಹಾರಾಟ, ಪಾಲಕರ ಕಿರುಚಾಟ ಸರ್ವೇ ಸಾಮಾನ್ಯವಾಗಿತ್ತು. ಕಾರಣಗಳು ಹಲವಾರು.

ತಂದೆ ಮನೆಗೆ ಬಂದೊಡನೆ ಮನೆ ವಾತಾವರಣವನ್ನು ಇನ್ನಿಲ್ಲದಂತೆ ಪರಿಶೀಲಿಸುತ್ತಿದ್ದನು. ಸುಕ್ಕಾಗದ ಬೆಡ್ ಶೀಟ್, ಓರೆ ಕೋರೆಯಾಗದ ಪುಸ್ತಕಗಳು, ಎಲ್ಲೆಂದರಲ್ಲಿ ಬೀಳದೆ ತಮ್ಮ ಸ್ವಸ್ಥಾನವನ್ನು ಅಲಂಕರಿಸಿರುವ ಆಟದ ಸಾಮಾನುಗಳು, ತಲೆ ಬಾಚಿ ಮುಖ ತೊಳೆದು ಮನೆಯುಡುಗೆಯಲ್ಲಿ ಶಿಸ್ತಾಗಿ ಓದಲು ಕುಳಿತ ಮಕ್ಕಳು, ಒಪ್ಪ ಓರಣದಿಂದಿರುವ ಪತ್ನಿ ಹೀಗೆ ಸಂಜೆ ತಾನು ಮನೆಗೆ ಬಂದಾಗ ಇರಬೇಕು ಎಂಬುದು ಆತನ ಬಯಕೆಯಾಗಿತ್ತು. ಆದರೆ ಇಲ್ಲೋ ತದ್ವಿರುದ್ಧ!! ತಾಯಿಯ ಮಾತಿಗೆ ಮಣೆ ಹಾಕದ ಮಕ್ಕಳು, ಎಲ್ಲೆಂದರಲ್ಲಿ ಎಸೆದಿರುವ ಶಾಲೆಯ ಬ್ಯಾಗ್ ಮತ್ತು ಮಕ್ಕಳ ಶೂಗಳು, ಮನೆಯ ಸಾಮಾನುಗಳು ಚೆಲ್ಲಾಪಿಲ್ಲಿ. ಹಾಸಿಗೆಯ ಮೇಲಿರಬೇಕಾದ ದಿಂಬುಗಳು ನೆಲದ ಮೇಲೆ ಹಾರಾಡುತ್ತಿರುವ ಮಕ್ಕಳನ್ನು ಹಿಡಿಯಲಾಗದೆ ಬಸವಳಿದ ತಾಯಿ ಅವರನ್ನು ಸುಧಾರಿಸುವಲ್ಲಿ ಆಕೆಯ ಪರಿಸ್ಥಿತಿ ದೇವರೇ ಬಲ್ಲ. ಅದನ್ನು ಕಂಡು ಗಂಡನ ಕೋಪ ತಾರಕಕ್ಕೇರಿ ಆತನ ಕೂಗಾಟ, ಈಗಾಗಲೇ ಬೇಸತ್ತಿರುವ ಪತ್ನಿಯ ಪ್ರತ್ಯುತ್ತರ, ಮಕ್ಕಳಿಗೆ ಒಂದೆರಡು ಏಟು ಕೆಲ ನಿಮಿಷಗಳವರೆಗೆ ಮನೆಯಲ್ಲಿ ನೀರವ ವಾತಾವರಣ ಏರ್ಪಡುತ್ತದೆ. ಆದರೆ ಅಸಹನೆಯ ಗಂಡ ಮನೆಯ ಬಾಲ್ಕನಿಯಲ್ಲಿ ಸಿಗರೇಟ್ ಸೇದುತ್ತಾ ತನ್ನ ಕೋಪವನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದರೆ ಪತ್ನಿ ಅಡುಗೆ ಮನೆಯ ಮೂಲೆಯಲ್ಲಿ ಬಿಕ್ಕಳಿಸುತ್ತಾ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಾಳೆ. ಇನ್ನು ಮಕ್ಕಳು ಕೆಲ ನಿಮಿಷಗಳವರೆಗೆ ಒಬ್ಬರ ಮುಖ ಒಬ್ಬರು ನೋಡುತ್ತಾ ಸುಮ್ಮನೆ ಕುಳಿತಿರುತ್ತಾರೆ ಅಷ್ಟೇ ನಂತರ ಮತ್ತದೇ ಹಾರಾಟ… ಇದು ವಾರದಲ್ಲಿ ಹಲವಾರು ಬಾರಿ ಮರುಕಳಿಸುವ ವಿದ್ಯಮಾನ, ಹಲವಾರು ಮನೆಗಳಲ್ಲಿ ಕಂಡು ಬರುವ ಚಿತ್ರಣ. ಆದರೆ ಇದರ ಪರಿಣಾಮ ಮಾತ್ರ ಭೀಕರ.

ಬಹುತೇಕ ಮನೆಗಳಲ್ಲಿ ಮುಖ್ಯವಾಗಿ ಮನೆಯ ಗಂಡಸರು ಹೆಣ್ಣು ಮಕ್ಕಳನ್ನು ಹೀನಾಯವಾಗಿ ಕಾಣುತ್ತಾರೆ. ಹೆಂಡತಿ ಮಾಡುವ ಪ್ರತಿ ಕೆಲಸವನ್ನು
ಹೀಗಳೆಯುತ್ತಾ ಆಕೆಯನ್ನು ನಿಕೃಷ್ಟವಾಗಿ ಕಾಣುತ್ತಾರೆ. ಇದನ್ನು ನೋಡುತ್ತಾ ಬೆಳೆಯುವ ಮಕ್ಕಳ ಮನಸ್ಸಿನ ಆಳದಲ್ಲಿ ಹೀಗೆ ಮಾಡುವುದು ತಪ್ಪಲ್ಲ ಎಂಬ ಭಾವ ಬೇರೂರಿ ಮುಂದೆ ಅವರು ಕೂಡ ತಾಯಿಯನ್ನು ಆಕೆ ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಮಾಡುತ್ತಾ ತಮ್ಮನ್ನು ಪೋಷಿಸುತ್ತಿದ್ದರೂ ಕೂಡ ಕೇವಲವಾಗಿ ಭಾವಿಸುತ್ತಾ ನಡೆದುಕೊಳ್ಳುತ್ತಾರೆ. ಅಂತಹ ಸಮಯದಲ್ಲಿ ತಾಳ್ಮೆಗೆಡುವ ಹೆಣ್ಣುಮಗಳು ಕೊಂಚ ಕೂಗಾಡಿ, ಇನ್ನೂ ಹೆಚ್ಚು ಸಿಟ್ಟಿದ್ದರೆ ಮಕ್ಕಳ ಮೇಲೆ ಒಂದೆರಡು ಏಟು ಹಾಕಿ ಮಕ್ಕಳು ಅಳುವುದನ್ನು ನೋಡಿ ತಾನು ಅಳುತ್ತಾ ಅಯ್ಯೋ ನನ್ನ ಹಣೆಬರಹವೇ ಇಷ್ಟು ಎಂದು ನೊಂದುಕೊಳ್ಳುತ್ತಾಳೆ. ಇನ್ನು ಮನೆಯಲ್ಲಿ ಹಿರಿಯರಿದ್ದರಂತೂ ಮಗನ ತಪ್ಪನ್ನು ತಿದ್ದಲಾಗದೆ, ಸೊಸೆಗೆ ಸಾಂತ್ವನ ಹೇಳದೆ… ಮಕ್ಕಳೆಂದರೆ ಹೀಗೆಯೇ ಸ್ವಲ್ಪ ಸಹಿಸಿಕೊಳ್ಳಬೇಕು ಎಂದು ಹೇಳುತ್ತಾರೆ. ಇದು ಗಾಯದ ಮೇಲೆ ಉಪ್ಪು ಸುರಿದಂತೆ ಹೆಣ್ಣು ಮಕ್ಕಳ ಪಾಲಿಗೆ ತೋರಿದರೆ ಆಶ್ಚರ್ಯವಿಲ್ಲ ಅಲ್ಲವೇ!?

ನಾವು ಬಯಸಿ ಬಯಸಿ ಪಡೆದ ಮಕ್ಕಳು ನಮ್ಮ ಮುಂದೆ ಬೃಹದಾಕಾರದ ಸಮಸ್ಯೆಯಾಗಿ ನಿಂತಾಗ ಏನು ಮಾಡಬೇಕು? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ಉತ್ತರ ಬಲು ಸರಳ ಆದರೆ ಪಾಲನೆ ಬಹಳ ಮುಖ್ಯ.
ಮನೆಯ ವಾತಾವರಣ ಕೆಡದಿರಲು ಮಕ್ಕಳನ್ನು ಕೆಣಕದೆ ಹೇಗೆ ಬೆಳೆಸಬೇಕು ಎಂಬುದನ್ನು ಕೊಂಚ ಅರಿಯೋಣ.

ಮೊತ್ತ ಮೊದಲನೆಯದಾಗಿ ಪಾಲಕರು ಮಕ್ಕಳ ಮುಂದೆ ಯಾವುದೇ ರೀತಿಯ ಮನಸ್ತಾಪಕ್ಕೆ ಎಡೆ ಮಾಡಿಕೊಡಬಾರದು. ಪಾಲಕರ ನಡುವಿನ ಭಿನ್ನಾಭಿಪ್ರಾಯಗಳು ಮುಚ್ಚಿದ ಕೋಣೆಯ ಒಳಗೆ ಬಗೆಹರಿಯಬೇಕೆ ಹೊರತು ಮಕ್ಕಳ ಮುಂದೆ ಬಹಿರಂಗವಾಗಿ ಅಲ್ಲ. ಮಕ್ಕಳ ಮುಂದೆ ಪಾಲಕರ ನಿರ್ಧಾರ ಒಂದೇ ಆಗಿರಬೇಕು ಈ ನಿಟ್ಟಿನಲ್ಲಿ ಪಾಲಕರು ಯಾವತ್ತಿಗೂ ನಮ್ಮಿಬ್ಬರ ಅಭಿಪ್ರಾಯ ಒಂದೇ ಎಂಬುದನ್ನು ಮಕ್ಕಳಿಗೆ ಮನವರಿಕೆಯಾಗುವಂತೆ ನಡೆದುಕೊಳ್ಳಬೇಕು.
ಅಪ್ಪ ಅಮ್ಮನ ಅಭಿಪ್ರಾಯಗಳಲ್ಲಿ ಭಿನ್ನತೆ ಇದ್ದಾಗ ಮಕ್ಕಳು ತಮಗೆ ಅನುಕೂಲವಾಗುವ ಅಭಿಪ್ರಾಯದವರೊಡನೆ ಒಂದಾಗಿ ಇನ್ನೊಬ್ಬರನ್ನು ದೂಷಿಸುವಲ್ಲಿ ಅವರ ಜೊತೆಗೂಡುತ್ತಾರೆ.
ಮಕ್ಕಳ ಯಾವುದೇ ಸಮಸ್ಯೆಗಳನ್ನು ಬಗೆಹರಿಸುವಾಗ ಅಪ್ಪ-ಅಮ್ಮನ ಮಾತುಗಳು ಒಂದೇ ಆಗಿದ್ದರೆ ಮಕ್ಕಳು ಅನಿವಾರ್ಯವಾಗಿ ಪಾಲಕರ ಮಾತಿಗೆ ಒಡಂಬಡಬೇಕಾಗುತ್ತದೆ.

ಆದಷ್ಟು ಮಕ್ಕಳು ಮುಕ್ತವಾಗಿ ತಮ್ಮೊಂದಿಗೆ ಮಾತನಾಡುವಂತೆ ಪ್ರೋತ್ಸಾಹಿಸಿ, ಮಕ್ಕಳು ತಮ್ಮ ಅಭಿಪ್ರಾಯಗಳನ್ನು ಸ್ವತಂತ್ರವಾಗಿ ಬೆಳಸಿಕೊಳ್ಳಲಿ ಮತ್ತು ಧೈರ್ಯದಿಂದ ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳಲಿ. ಆಗ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟು ಅವರ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಮಾಡಿಕೊಡಿ. ನಮ್ಮ ಮಕ್ಕಳು ನಮ್ಮ ಮುಂದೆ ಮಾತನಾಡದೆ ಇದ್ದರೆ ಮುಂದೆ ಬೇರಾರ ಮುಂದೆಯೂ ಮಾತನಾಡಲಾರದು ಎಂಬ ಅರಿವು ನಮಗಿರಬೇಕು.

ಮಕ್ಕಳ ತಪ್ಪುಗಳಿಗಾಗಿ ಅವರನ್ನು ಹೀಗಳೆಯದೇ, ಸಮಾಧಾನವಾಗಿ ತಿಳಿ ಹೇಳಿ. ಪದೇ ಪದೇ ಅವರ ತಪ್ಪುಗಳನ್ನು ಎತ್ತಿ ತೋರಿಸಿ ಹೀಯಾಳಿಸದಿರಿ,
ಹೀಯಾಳಿಕೆ ಮಕ್ಕಳ ಮನಸ್ಸನ್ನು ಘಾಸಿಗೊಳಿಸುತ್ತದೆ. ಮಕ್ಕಳು ಮಾಡಿರುವ ಒಂದೆರಡು ಒಳ್ಳೆಯ ಕೆಲಸಗಳನ್ನು ಮುಕ್ತ ಮನಸ್ಸಿನಿಂದ ಪ್ರಶಂಸಿಸಿ ನಂತರ ನಯವಾಗಿ ಅವರ ತಪ್ಪನ್ನು ಎತ್ತಿ ತೋರಿಸಿದರೆ ಅವರಿಗೆ ಬೇಸರವಾಗುವುದಿಲ್ಲ ಎಂಬ ಸತ್ಯದ ಅರಿವನ್ನು ಹೊಂದಿದ್ದರೆ ಒಳ್ಳೆಯದು. ಪ್ರಶಂಸೆ ಮಾಡು ವುದರಿಂದ ಸೊಕ್ಕಿಗೆ ಬರುತ್ತಾರೆ ಎಂಬುದು ತಪ್ಪು.

ಮಕ್ಕಳಿಗೆ ಹೀಗೆಯೇ ಮಾಡಬೇಕು, ಹೀಗೆಯೇ ಇರಬೇಕು ಎಂಬ ಒತ್ತಾಯ ಮತ್ತು ಆಜ್ಞಾಭಾವ ಸಲ್ಲದು. ಮಕ್ಕಳು ಆಟವಾಡುವ ಕೀಲುಗೊಂಬೆಗಳಲ್ಲ… ನಮಗೆ ಬೇಕಾದಂತೆ ಕೀಲಿ ಕೊಟ್ಟು ಕುಣಿಸಲು. ಒತ್ತಾಯದ ಕಲಿಕೆಯಲ್ಲಿ ಒಂದು ಹಂತದವರೆಗೆ ಅವರು ನಮ್ಮನ್ನು ಪಾಲಿಸುತ್ತಾರೆ ನಂತರ ನಮ್ಮ ಮಾತುಗಳನ್ನು ಅವಗಣಿಸುತ್ತಾರೆ. ಆದ್ದರಿಂದ ಮಕ್ಕಳಿಗೆ ಹೆಚ್ಚೆಚ್ಚು ಅವಕಾಶಗಳ ಸಾಧ್ಯತೆಗಳನ್ನು ತೋರಿಸಿ ಅದರಲ್ಲಿ ಯಾವುದು ಉಪಯುಕ್ತವೋ ಅದನ್ನು ಆಯ್ದುಕೊಳ್ಳಿ ಎಂದು ಸೂಚಿಸಿ. ಅವರ ಆಯ್ಕೆಯ ಉಚಿತ ಮತ್ತು ಅನುಚಿತತೆಗಳ ಕುರಿತು ತಿಳುವಳಿಕೆ ಕೊಡಿ ಆದರೆ ನಿರ್ಧಾರವನ್ನು ಮಾತ್ರ ಅವರಿಗೆ ಬಿಡಿ.
ಮಕ್ಕಳು ಚಿಕ್ಕವರಿದ್ದಾಗ ಅವರ ಎಲ್ಲಾ ಕೆಲಸಗಳನ್ನು ನೀವೇ ಮಾಡಿಕೊಡುತ್ತಿದ್ದಿರಿ ಎಂಬುದೇನೋ ಸರಿ, ಆದರೆ ನಿಧಾನವಾಗಿ ಅವರವರ ಕೆಲಸಗಳನ್ನು ಅವರೇ ಮಾಡಿಕೊಳ್ಳಲು ಪ್ರೋತ್ಸಾಹಿಸಿ. ಅವರ ಸಣ್ಣ ಪುಟ್ಟ ಸ್ವಾವಲಂಬಿತನವನ್ನು ಮುಕ್ತವಾಗಿ ಪ್ರಶಂಸಿಸಿ, ಆದರೆ ಅದರಲ್ಲಿ ತಪ್ಪುಗಳಿದ್ದರೆ ಮತ್ತೆ ನಯವಾಗಿ ತಿದ್ದಿ ಹೇಳಿ. ನಿಧಾನವಾಗಿ ಅವರಿಗೆ ಆಯ್ಕೆ, ಸೌಲಭ್ಯ, ಕರ್ತವ್ಯ, ಜವಾಬ್ದಾರಿ ಮತ್ತು ಮನೆಯ ಪರಿಸ್ಥಿತಿಗಳ ಅರಿವನ್ನು ಮೂಡಿಸಿ.ಪಾಲಕರ ಆರ್ಥಿಕ, ಸಾಮಾಜಿಕ ಸ್ಥಿತಿಗಳನ್ನು ಅರಿಯದ ಮಕ್ಕಳು ತಮ್ಮ ಸುತ್ತಣ ಜಗತ್ತಿನ ವಸ್ತುಗಳನ್ನು ಬಯಸಿ ಅದನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಹೋದಾಗ ನಿರಾಶರಾಗಬಹುದು. ನಮ್ಮ ಮಿತಿಗಳನ್ನು ಅರಿತುಕೊಳ್ಳುವ ಅವಕಾಶಗಳನ್ನು ಮಕ್ಕಳು ಬಳಸಿಕೊಳ್ಳಲಿ. ತಮ್ಮ ಪಾಲಕರ ಶ್ರಮದ ಸಾರ್ಥಕತೆಯ ಅರಿವನ್ನು ಅವರು ಹೊಂದಿರಲಿ.

ಮಕ್ಕಳನ್ನು ಸಕಾರಾತ್ಮಕವಾಗಿ ಬೆಳೆಸಿ.
ಅಯ್ಯೋ ನೀನು ಓದಿ ಉದ್ದಾರ ಆದ ಹಾಗೆ!
ನಿನ್ ಹಣೆ ಬರಹನೆ ಎಷ್ಟು!
ಅವರನ್ನು ನೋಡಿ ಕಲಿ!
ಆ ಮನೆ ಮಗು ಅಷ್ಟ ಮಾರ್ಕ್ಸ್ ತಗೊಂಡೈತಿ ನಿನಗೇನಾಗಿದೆ ದಾಡಿ!!
ಎಂಬ ನಕಾರಾತ್ಮಕ ಮಾತುಗಳಿಂದ ಮಕ್ಕಳ ಮನಸ್ಸು ಮುದುಡುತ್ತದೆ. ಬೇರೆಯವರೊಂದಿಗೆ ಯಾವತ್ತೂ ಮಕ್ಕಳನ್ನು ಹೋಲಿಸಬಾರದು. ಯಾವ ರೀತಿ ನಮ್ಮ ಕೈಯ ಐದು ಬೆರಳುಗಳು ಸಮನಾಗಿಲ್ಲವೋ ಅಂತೇಯೇ ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಮಗುವು ವಿಭಿನ್ನ ಮತ್ತು ವಿಶಿಷ್ಟ. ಮಗುವಿನ ಆ ವೈಶಿಷ್ಟತೆಯನ್ನು ಗುರುತಿಸಿ ಕಲಿಕೆಯ ಆಸಕ್ತಿಯನ್ನು ಪ್ರೋತ್ಸಾಹಿಸಿ. ಅವರು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಡಿ. ನೀವು ಮಗುವನ್ನು ಪ್ರೋತ್ಸಾಹಿಸದಿದ್ದರೂ ಪರವಾಗಿಲ್ಲ ನಕಾರಾತ್ಮಕವಾಗಿ ಮಾತನಾಡಿದಾಗ ಮಗು ಮೊದಮೊದಲು ನೊಂದುಕೊಳ್ಳುತ್ತದೆ, ನಂತರ ನಾನು ಹೇಗಿದ್ದರೂ ಅವರು ಬಯ್ಯುತ್ತಾರೆ ಆದ್ದರಿಂದ ಹೀಗೆ ಇದ್ದುಬಿಡುತ್ತೇನೆ ಎಂಬ ಭಾವ ಮಗುವಿನ ಸುಪ್ತ ಮನಸ್ಸಿನಲ್ಲಿ ಬೇರೂರಿದರೆ ಮಗು ಮೊಂಡುತನಕ್ಕೆ ಬೀಳುತ್ತದೆ. ಮುಂದೆಂದೂ ಮಗು ಪಾಲಕರ ಮಾತನ್ನು ಗೌರವಿಸುವುದಿಲ್ಲ ತನ್ನ ಮೂಗಿನ ನೇರಕ್ಕೆ ನಡೆದುಕೊಳ್ಳುತ್ತದೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಉಕ್ತಿಯಂತೆ ಚಿಕ್ಕವರಿದ್ದಾಗ ಪ್ರೀತಿ ವಿಶ್ವಾಸದಿಂದ ತಿಳಿ ಹೇಳದೆ ಕೇವಲ ಅಸಹನೆ, ಅಸಡ್ಡೆ ಮತ್ತು ನಿಂದನೆಗಳನ್ನು ಮಾಡುವ ಮೂಲಕ ಮಕ್ಕಳನ್ನು ಬೆಳೆಸಿದರೆ ಆ ಮಕ್ಕಳು ವೈಪರೀತ್ಯಕ್ಕೆ ಒಳಗಾಗಿ ಸಮಾಜಘಾತಕ ಶಕ್ತಿಗಳಾಗಿಯೂ ಬೆಳೆಯಬಹುದು ಇಲ್ಲವೇ ಅತ್ಯಂತ ಕೀಳರಿಮೆಯಿಂದಲೂ ಬಳಲಬಹುದು. ಮಗುವಿನ ಮಾನಸಿಕ ಆರೋಗ್ಯಕ್ಕೆ ಈ ಎರಡು ಹಂತಗಳೂ ಹಾನಿಕಾರಕವೇ.

ಯಾವ ರೀತಿ ಪುಟ್ಟ ಸಸಿಯೊಂದಕ್ಕೆ ಸೂಕ್ತ ರೀತಿಯ ನೀರು, ಗೊಬ್ಬರ ಮತ್ತು ಆರೈಕೆಯ ಅವಶ್ಯಕತೆ ಇರುತ್ತದೆಯೋ ಅಂತೆಯೇ ಮಗುವಿನ ಬೆಳವಣಿಗೆಗೆ ಪ್ರೀತಿ, ಹದ ಬೆರೆತ ಶಿಸ್ತು, ಒಳ್ಳೆಯ ಕ್ರಮಬದ್ಧ ಶಿಕ್ಷಣ ಅವಶ್ಯಕವಾಗಿರುತ್ತದೆ. ಆದ್ದರಿಂದ ಪಾಲಕರು ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಒತ್ತಟ್ಟಿಗೆ ಇಟ್ಟು ಮಗುವಿನ ಬೆಳವಣಿಗೆಗೆ ಸಂಘಟಿತರಾಗಿ ಒಳ್ಳೆಯ ನಾಗರಿಕರನ್ನು ಈ ಸಮಾಜಕ್ಕೆ ಕಾಣಿಕೆಯಾಗಿ ನೀಡುವ ನಿಟ್ಟಿನಲ್ಲಿ ನಿಮ್ಮ ಗುರುತರ ಜವಾಬ್ದಾರಿಯನ್ನು ನಿರ್ವಹಿಸಿ.

  • ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ