ಶಿವಮೊಗ್ಗ : ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜೆಜೆಎಂ ಯೋಜನೆಯಡಿ ಜಿಲ್ಲೆಯಲ್ಲಿ ಅಧ್ಯಯನ ಕೈಗೊಂಡು ಯೋಜನೆಯನ್ನು ಎಲ್ಲ ಅರ್ಹರಿಗೆ ತಲುಪಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಸಂಸದರಾದ ಬಿ. ವೈ. ರಾಘವೇಂದ್ರ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೆಜೆಎಂ ಅಡಿಯಲ್ಲಿ ಅಂದಾಜು ರೂ.10.75 ಕೋಟಿ ಮೊತ್ತದಲ್ಲಿ ಒಟ್ಟು 2528 ಕಾಮಗಾರಿ ಮಂಜೂರಾಗಿದ್ದು 2507 ಕಾಮಗಾರಿ ಪ್ರಾರಂಭಗೊಂಡಿವೆ. 699 ಪ್ರಗತಿಯಲ್ಲಿದ್ದು 1808 ಪೂರ್ಣಗೊಂಡಿವೆ. ಯಾವುದೇ ಹೊಸ ಕಾಮಗಾರಿ ಕೈಗೊಳ್ಳುವ ಮುನ್ನ ಅಧಿಕಾರಿಗಳು ಯೋಜನಾ ಪೂರ್ವ ಪರಿಶೀಲನೆ ಕೈಗೊಳ್ಳಬೇಕು ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳ ಅಭಿಪ್ರಾಯ ಪಡೆದು ಮುನ್ನಡೆಯಬೇಕು ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಕಟ್ಟಲು ರೂ.1.20 ಲಕ್ಷ ಘಟಕ ವೆಚ್ಚ ನೀಡಲಾಗುತ್ತಿದ್ದು, ಕೆಲ ಫಲಾನುಭವಿಗಳು ಘಟಕ ವೆಚ್ಚ ಸಾಲುತ್ತಿಲ್ಲವೆಂದು ಈ ಹಣವನ್ನು ಹಿಂದಿರುಗಿಸಿದ್ದಾರೆ. ಕೆಲವೆಡೆ ಹಕ್ಕುಪತ್ರ ಇದ್ದವರಿಗೆ ಮಾತ್ರ ನೀಡಲಾಗುತ್ತಿದೆ. ಅನಧಿಕೃತ ಜಾಗಗಳನ್ನು ಸಕ್ರಮಗೊಳಿಸುವ ಹಾಗೂ ಅರ್ಹರಿಗೆ ಈ ಯೋಜನೆಯನ್ನು ತಲುಪಿಸಬೇಕೆಂದು ಸಂಸದರು ತಿಳಿಸಿದರು.
ಅಮೃತ್ -1 ಯೋಜನೆಯಡಿ ಕುಡಿಯುವ ನೀರು ಯೋಜನೆ ಪೂರ್ಣಗೊಂಡಿದೆ. ಅಮೃತ್ 2 ಯೋಜನೆಯಡಿ 7 ಪಟ್ಟಣಗಳಲ್ಲಿ ಟೆಂಡರ್ ಆಗಿದ್ದು ಸರ್ವೇ ಕಾರ್ಯ ನಡೆಯುತ್ತಿದೆ ಎಂದು ಕರ್ನಾಟಕ ನಗರ ಕುಡಿಯುವ ನೀರು ಸರಬರಾಜು ಮಂಡಳಿ ಎಇಇ ತಿಳಿಸಿದರು. ಈ ವೇಳೆ ಭದ್ರಾವತಿ ತಾಲ್ಲೂಕು ದಿಶಾ ಸಮಿತಿ ಸದಸ್ಯರು, ಭದ್ರಾವತಿಯಲ್ಲಿ ಹೊಸದಾಗಿ ನೀಡಿರುವ ಕುಡಿಯುವ ನೀರಿನ ಸಂಪರ್ಕದಲ್ಲಿ ನೀರು ಬರುತ್ತಿಲ್ಲ ಬದಲಾಗಿ ಹಳೆಯ ಪೈಪ್‌ನಲ್ಲೇ ನೀರು ಬರುತ್ತಿದ್ದು ಇದನ್ನು ಪರಿಶೀಲಿಸಬೇಕೆಂದರು.
ದಿಶಾ ಸಮಿತಿ ಸದಸ್ಯರಾದ ಗುರುಮೂರ್ತಿ ಮಾತನಾಡಿ, ಜಿಲ್ಲೆಯ ಮೊರಾರ್ಜಿ ಶಾಲೆಗಳ ರಿಪೇರಿಗೆ 2024 ರಲ್ಲೇ ರೂ.3.96 ಕೋಟಿ ಹಣ ಶಿವಮೊಗ್ಗ ಜಿಲ್ಲೆಯ ಲ್ಯಾಂಡ್ ಆರ್ಮಿಗೆ ಮಂಜೂರಾಗಿದ್ದು ಈವೆರೆಗೆ ಜಿಲ್ಲೆಗೆ ಹಣ ಬಿಡುಗಡೆಯಾಗಿಲ್ಲ. ಕೇಂದ್ರ ಕಚೇರಿಯಲ್ಲೇ ಇಟ್ಟುಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದರು.
ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ ಮಾತನಾಡಿ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಪ್ರಗತಿ ಕಡಿಮೆ ಇದ್ದಂತಿದೆ. ಶಿವಮೊಗ್ಗ ನಗರದಲ್ಲೇ 12 ಸಾವಿರ ಹೆರಿಗೆ ಆಗುತ್ತದೆ. ಆದರೆ ಜಿಲ್ಲಾ ಯೋಜನೆ ಗುರಿ ಕೇವಲ 8524 ಇದ್ದು 2024 ರ ಏಪ್ರಿಲ್ ನಿಂದ 2025 ರ ಮಾರ್ಚ್ವರೆಗೆ 7395 ಫಲಾನುಭವಿ ಶೇ.87 ಪ್ರಗತಿ ಸಾಧಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆ ಹೆಚ್ಚಾಗಿ ಆಗುತ್ತಿಲ್ಲ. ಈ ಬಗ್ಗೆ ಗಮನ ಹರಿಸಬೇಕು ಎಂದರು.
ಶಾಸಕರಾದ ಆರಗ ಜ್ಞಾನೇಂದ್ರ ಮಾತನಾಡಿ, ಮಲೆನಾಡು ಭಾಗದಲ್ಲಿ ಇಂಗ್ಲಿಷ್ ಮಾಧ್ಯಮವನ್ನು ನೀಡದ ಕಾರಣ ಮಕ್ಕಳನ್ನು ನಗರಕ್ಕೆ ಕಳುಹಿಸಲಾಗುತ್ತಿದೆ. ಎಸ್‌ಸಿ/ಎಸ್‌ಟಿ, ಬಡವರ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಇಂತಹ ಗ್ರಾಮೀಣ ಭಾಗ ಶಾಲೆಗಳಿಗೆ ಇಂಗ್ಲಿಷ್ ಮಾಧ್ಯಮ ನೀಡಿದರೆ ಬದುಕುತ್ತವೆ. ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷ 11 ಶಾಲೆಗಳು ಬಂದ್ ಆಗಿವೆ. ಇಂಗ್ಲಿಷ್ ಮಾಧ್ಯಮಗಳ ಆರಂಭಕ್ಕೆ ನೀಡಿದ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಕಳುಹಿಸುವಂತೆ ಕೋರಿದರು.
ಡಿಡಿಪಿಐ ಮಂಜುನಾಥ್ ಜಿಲ್ಲೆಯಿಂದ ಇಂಗ್ಲಿಷ್/ಕನ್ನಡ ಮಾಧ್ಯಮ-ದ್ವಿಭಾಷೆ ಮಾಧ್ಯಮಕ್ಕಾಗಿ 32 ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಪ್ರತಿ ತರಗತಿಗೆ ಕನಿಷ್ಟ 25 ವಿದ್ಯಾರ್ಥಿಗಳಿರಬೇಕೆಂಬ ನಿಯಮವಿದ್ದರೂ ತಾಲ್ಲೂಕುಗಳಿಂದ ಬಂದಂತಹ ಎಲ್ಲಾ 32 ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಜಿಲ್ಲೆಯಲ್ಲಿ 10 ಕೆಪಿಎಸ್ ಶಾಲೆಗಳು ಚಾಲ್ತಿಯಲ್ಲಿದ್ದು 19 ಕೆಪಿಎಸ್ ಶಾಲೆ ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸಂಸದರು, ಶಾಸಕರು ಹಾಗೂ ದಿಶಾ ಸಮಿತಿ ಸದಸ್ಯರು, ಮಲೆನಾಡು ಭಾಗದಲ್ಲಿ ಪ್ರತಿ ತರಗತಿಯಲ್ಲಿ 25 ವಿದ್ಯಾರ್ಥಿಗಳು ದಾಖಲಾಗುವುದು ಕಷ್ಟ. ಆದ್ದರಿಂದ ಮಲೆನಾಡು ಭಾಗವನ್ನು ವಿಶೇಷವಾಗಿ ಪರಿಗಣಿಸಬೇಕೆಂದು ದಿಶಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಿದರು.
ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಶಾಲೆಗಳಿಗೆ ಅಡುಗೆ ಸಿಲಿಂಡರ್ ವಿತರಣೆ ವೇಳೆ 6 ಕಿ.ಮೀ ನಂತರ ಪ್ರತಿ ಕಿ.ಮೀ ಗೆ ರೂ.1.60 ಪೈಸೆ ಯನ್ನು ಏಜೆನ್ಸಿಗಳು ವಸೂಲಿ ಮಾಡುತ್ತಿದ್ದಾರೆ ಮತ್ತು ಗೃಹಬಳಕೆಯ ಸಿಲಿಂಡರ್‌ಗೆ ರೂ. 40 ರಿಂದ 60 ವಸೂಲಿ ಮಾಡುತ್ತಿದ್ದು ಈ ವಸೂಲಾತಿಗೆ ರಶೀದಿ ನೀಡುವಂತೆ ತಿಳಿಸಿದ ಅವರು ಸೂಕ್ತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಶಾಸಕ ಆರಗ ಜ್ಞಾನೇಂದ್ರ ಸರ್ಕಾರದ ಆದೇಶದಂತೆ ವಿತರಣೆ ಸಂಪೂರ್ಣ ಉಚಿತವಾಗಿದ್ದರೂ ವಿತರಕರು ಮನಸೋ ಇಚ್ಚೆ ಹಣ ವಸೂಲು ಮಾಡುತ್ತಿದ್ದು ಈವರೆಗೆ ವಸೂಲು ಮಾಡಲಾದ ಹಣವನ್ನು ಹಿಂಪಡೆಯಬೇಕು ಆಗ್ರಹಿಸಿದ ಅವರು ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕೆಂದರು.
ಸಂಸದರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾಮಗಾರಿಗಳನ್ನು ನಿಗದಿತ ವೇಳೆಯಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ಕೈಗೊಳ್ಳಬೇಕು ಹೊಳೆಹೊನ್ನೂರು ಬೈಪಾಸ್ ರಸ್ತೆಯನ್ನು ಒಂದು ವಾರದೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆಗೆ ಅನುವು ಮಾಡಿಕೊಡಬೇಕು ಹಾಗೂ ಸಿಗಂದೂರು ಸೇತುವೆಯನ್ನು ಜೂನ್ ಅಂತ್ಯದೊಳಗೆ ಮುಗಿಸಬೇಕೆಂದು ಸೂಚನೆ ನೀಡಿದರು. ಬಹು ಗ್ರಾಮ ನೀರಿನ ಯೋಜನೆ ಸೇರಿದಂತೆ ಕುಡಿಯುವ ನೀರಿನ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಕಾಮಗಾರಿಗಳನ್ನು ಕ್ಷಿಪ್ರಗೊಳಿಸಬೇಕು ಎಂದರು.
ದಿಶಾ ಸಮಿತಿ ಸದಸ್ಯರಾದ ಗಿರೀಶ್ ಭದ್ರಾಪುರ, ಬುಳ್ಳಾಪುರ-ಹೊಳೆಬೆನವಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ರೂ.40 ಕೋಟಿಯಲ್ಲಿ ಕೈಗೊಂಡಿದ್ದು ಕಾಮಗಾರಿ ಪೂರ್ಣಗೊಂಡಿದ್ದರೂ ನೀರು ಬಂದಿಲ್ಲ. ಚರಂಡಿ ಮತ್ತು ವಿಷಪೂರಿತ ನೀರು ನದಿಗೆ ಸೇರುತ್ತಿರುವ ಕಾರಣ ಫಲಾನುಭವಿಗಳು ಬಳಸಲು ನಿರಾಕರಿಸುತ್ತಿದ್ದಾರೆ ಎಂದು ಇಲಾಖೆಯವರು ತಿಳಿಸಿದ್ದಾರೆ. ಯಾವುದೇ ಹೊಸ ಯೋಜನೆ ಕೈಗೊಳ್ಳುವ ಮೊದಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಅಭಿಪ್ರಾಯ ಪಡೆಯಬೇಕು. ಆಗ ಈ ರೀತಿ ಸಮಸ್ಯೆ ಬರುವುದಿಲ್ಲವೆಂದರು. ಹಾಗೂ ಬಿ.ಬೀರನಹಳ್ಳಿ ಕ್ರಾಸ್‌ನಿಂದ ರಸ್ತೆ ನಿರ್ವಹಣೆಯಾಗುತ್ತಿಲ್ಲವೆಂದು ದೂರಿದರು.
ಸಂಧ್ಯಾ ಸುರಕ್ಷಾ ಯೋಜನೆಯಡಿ ಸೌಲಭ್ಯ ನೀಡಲು ಅರ್ಜಿ ಸಲ್ಲಿಸಿದಾಗ ಅರ್ಜಿದಾರರಿಗೆ ತಮಗೆ ಗಂಡು ಮಕ್ಕಳಿದ್ದಾರೆ ಈ ಯೋಜನೆ ಸೌಲಭ್ಯ ಸಿಗವುದಿಲ್ಲವೆಂದು ಅರ್ಜಿ ತಿರಸ್ಕರಿಸಲಾಗುತ್ತಿದೆ. ಈ ಕುರಿತು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕೆಂದೆಂದರು
ದಿಶಾ ಸಮಿತಿ ಸದಸ್ಯರು, ವಿಧವಾ ವೇತನ ಪಡೆಯಲು ಅರ್ಜಿ ಸಲ್ಲಿಸಿದ ವೇಳೆ ಮಕ್ಕಳಿಗೆ 18 ವರ್ಷ ತುಂಬಿದರೆ ಈ ಸೌಲಭ್ಯ ಬರುವುದಿಲ್ಲವೆಂದು ಹೇಳಲಾಗುತ್ತಿದೆ ಈ ಬಗ್ಗೆ ಪರಿಶೀಲಿಸಬೇಕೆಂದರು.
ಸದಸ್ಯರಾದ ಮಲ್ಲಿಕಾರ್ಜುನ ಹಕ್ರೆ ನರೇಗಾ ಯೋಜನೆಯಡಿ ಗ್ರಾ. ಪಂ ಗಳಿಗೆ ರೂ.3.70 ಕೋಟಿ ಕಾಮಗಾರಿಯನ್ನು ಕಾನೂನುಬದ್ದವಾಗಿ ಕ್ರಿಯಾ ಯೋಜನೆ ಮೂಲಕ ಅನುಮೋದಿಸುವ ಅವಕಾಶವಿದ್ದು ಅನೇಕ ಗ್ರಾ. ಪಂ. ಗಳಲ್ಲಿ ಕೇವಲ 30 ರಿಂದ 40 ಲಕ್ಷಕ್ಕೆ ಮಿತಗೊಳಿಸುತ್ತಿರುವುದು ಕಂಡು ಬಂದಿದ್ದು ಈ ರೀತಿ ಮಿತಿಗೊಳಿಸದೇ ಅನುಮೋದನೆ ನೀಡಬೇಕೆಂದರು. ಹಾಗೂ ಫಾರಂ 16 ನೀಡಿದ 15 ದಿಗನಳ ಒಳಗೆ ನರೇಗಾ ಅಡಿಯಲ್ಲಿ ಕೆಲಸ ನೀಡಬೇಕು. ನರೇಗಾ ಕೆಲಸಕ್ಕೆ ಬೇಡಿಕೆ ಇದೆ.
ಸಂಸದರು, ನರೇಗಾದಡಿ ಆಸ್ತಿ ಸೃಷ್ಟಿಯಾಗುವಂತಹ ಕಾಮಗಾರಿಗಳನ್ನು ಕೈಗೊಳ್ಳಬೇಕು. ಬೇಡಿಕೆಗನುಗುಣವಾಗಿ ಜಾಬ್ ಕಾರ್ಡ್ಗಳನ್ನು ಹೆಚ್ಚಿಸಿರಿ ಎಂದ ಅವರು ಯಾವುದೇ ಕಾಮಗಾರಿ ದುರುಪಯೋಗವಾಗದಂತೆ ಆನ್‌ಲೈನ್ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದರು.
ಶಾಸಕರಾದ ಎಸ್. ಎನ್. ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ, ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಡಾ. ಧನಂಜಯ ಸರ್ಜಿ, ಜನ ಪ್ರತಿನಿಧಿಗಳು, ದಿಶಾ ಸಮಿತಿ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
