
ಸುಮಾರು 500 ವರ್ಷಗಳ ಹಿಂದೆ ಶ್ರೀಶೈಲದ ಸಮೀಪ ಶರಣೆಯಾಗಿ ಜೀವಿಸಿದ್ದವಳು ಹೇಮರೆಡ್ಡಿ ಮಲ್ಲಮ್ಮ. ಜನಪದರು ಹೇಮರೆಡ್ಡಿ ಮಲ್ಲಮ್ಮನ ಬಗ್ಗೆಯೂ ಗೀತೆಯನ್ನು ಸೃಷ್ಟಿಸಿ ಹಾಡಿದ್ದಾರೆ.
ರಾಂಪುರದ ನಾಗರೆಡ್ಡಿ-ಗೌರಮ್ಮರ ಸುಪುತ್ರಿ
ಹೇಮರೆಡ್ಡಿ ಮಲ್ಲಮ್ಮ ಸಿದ್ದಾಪುರದ ಸೊಸಿ
ಶ್ರೀಶೈಲ ಮಲ್ಲಿಕಾರ್ಜುನನನ್ನು ಪೂಜಿಸಿ
ಅತ್ತೆ-ನೆಗೆಣ್ಣಿಯರ ಕಾಟ ಸಹಿಸಿ
ಮಬ್ಬು ಗಂಡನ ಮಹಾದೇವನೆಂದು ಮನ್ನಿಸಿ
ಮತಿಗೇಡಿ ಮೈದುನನ ಯೋಗಿ ವೇಮನನ ಮಾಡಿ
ಮಹಾಯೋಗಿಯ ಮಹಾತಾಯಿಯಾಗಿ
ಮಲ್ಲಮಾಂಬೆ ಬೆಳಗಿದಳು ರೆಡ್ಡಿಕುಲವ.
ಸಂತ ಶಿಶುನಾಳ ಶರೀಫರು ಹೇಮರೆಡ್ಡಿ ಮಲ್ಲಮ್ಮ ಬಗ್ಗೆ ಹೆಣೆದಿರುವ ವಿಶಿಷ್ಟ ಗೀತೆಯೆಂದರೆ-
ಹೇಮರೆಡ್ಡಿ ಮಲ್ಲಮ್ಮ ರೆಡ್ಡಿ ಕುಲಧರ್ಮ ಉದ್ಧಾರ ಮಾಡಿದೆಯಮ್ಮಾ
ನಿನ್ನ ಭಕ್ತಿಭಾಗ್ಯದ ನೇಮ
ಮಲ್ಲಯ್ಯನ ಕಟ್ಟಿದ ಪ್ರೇಮ
ಶ್ರೇಷ್ಟವಾಗಿ ತೋರುವದು ರೆಡ್ಡಿ ಕುಲಧರ್ಮ
ಶ್ರೀಶೈಲ ನಿನಗಾಗಿದೆ ಕಾಯಮ್ಮ
ನಿನ್ನ ಕಷ್ಟ ದುಃಖ ಹೇಳಲಾರೆನಮ್ಮ
ಗಂಡನ ಮೇಲೆ ಪ್ರೇಮ
ಹೊತ್ತಿಗಂಬಲಿ ಸಿಗಲಿಲ್ಲವಮ್ಮ
ಮಣ್ಣು ಪಾತ್ರೆ ಮಜ್ಜಿಗೆ ನೇಮ
ಮಲ್ಲಯ್ಯನು ಪಾಲುಗಾರನಮ್ಮ
ಉಂಡುಹೋದ ಉಳಿಯಲಿಲ್ಲವಮ್ಮ
ಹುಟ್ಟು, ಜೀವನ
ಬದಲಾಯಿಸಿ
ಶ್ರೀಶೈಲದ ದಕ್ಷಿಣಕ್ಕಿರುವ ವೆಲ್ಲಟೂರು ಜಿಲ್ಲೆಗೆ ಸೇರಿದ ರಾಮಪುರದ ರಾಮರೆಡ್ಡಿ-ಗೌರಮ್ಮ ದಂಪತಿಗಳಿಗೆ ಶ್ರೀಶೈಲ ಚನ್ನಮಲ್ಲಿಕಾರ್ಜುನನ ಕೃಪೆಯಿಂದ ಜನಿಸಿದ ಹೆಣ್ಣು ಮಗುವೇ ಹೇಮರೆಡ್ಡಿ ಮಲ್ಲಮ್ಮ. ಈಕೆ ಬಾಲ್ಯದಿಂದಲೂ ಶ್ರೀಶೈಲ ಚನ್ನಮಲ್ಲಿಕಾರ್ಜುನನನ್ನೇ ಆರಾಧ್ಯ ದೈವವೆಂದು ಪರಿಭಾವಿಸಿ, ಕಡೆಯಲ್ಲಿ ದೇವರನ್ನೇ ಸಾಕ್ಷಾತ್ಕರಿಸಿಕೊಂಡವಳು. “ಶಿವ ಕರೆದ ಕಾಲಕ್ಕೆ ಮ್ಯಾಲಕ ಹೋಗಾಗ, ನಾಕು ಮಂದಿ ಕಳುಸಾಕ ಬರುವಂಗ ಇರಬೇಕು” ಎನ್ನು ಈಕೆಯ ಬಾಳು ಪವಿತ್ರ ಮೌಲ್ಯಗಳ, ಆದರ್ಶದ, ಅತ್ಯಮೂಲ್ಯ ಕಣಜವಾಗಿದೆ.
ಮಲ್ಲಮ್ಮ ಬೆಳೆದಾಗ ಅವಳನ್ನು ಸಮೀಪದ ಸಿದ್ದಾಪುರದ ಕುಮಾರಗಿರಿ ವೇಮರೆಡ್ಡಿಯ ಮಗ ಭರಮರೆಡ್ಡಿಗೆ ಮದುವೆ ಮಾಡಿಕೊಡುತ್ತಾರೆ. ಊರ ಜನರೆಲ್ಲ ಭರಮರೆಡ್ಡಿಯನ್ನು ಹುಚ್ಚನೆಂದು ಪರಿಗಣಿಸಿರುತ್ತಾರೆ. ಹೇಮರೆಡ್ಡಿ ಮಲ್ಲಮ್ಮ ಗಂಡನಲ್ಲಿದ್ದ ಮುಗ್ಧ, ಸಾಧು ಸ್ವಭಾವವನ್ನು ಕಂಡು ಸಮಾಧಾನಗೊಳ್ಳುತ್ತಾಳೆ. ಪತಿಯನ್ನು ಮಹಾದೇವನಂತೆ ಉಪಚರಿಸುತ್ತಾಳೆ. ಜೀವನವಿಡಿ ಕಷ್ಟವನ್ನುಂಡರೂ, ಇತರರು ಕಷ್ಟದಲ್ಲಿರುವಾಗ, ತನ್ನ ನೋವನ್ನೆಲ್ಲ ಮರೆತು ಅವರನ್ನು ಜೋಪಾನ ಮಾಡುತ್ತಿದ್ದಳು.
ದಾನಚಿಂತಾಮಣಿಯ ಪವಾಡಗಳು
ಹೇಮರೆಡ್ಡಿ ಮಲ್ಲಮ್ಮಳ ಅತ್ತೆ ಆಕೆಗೆ ಉಣ್ಣುವುದಕ್ಕೆ, ಉಡುವುದಕ್ಕೆ ಸರಿಯಾಗಿ ಕೊಡದೆ, ಅವಳನ್ನು ಅಡವಿಗೆ ನೂಕಿ ಸಂಕಷ್ಟಗಳ ಸಂಕೋಲೆಗೆ ಸಿಗಿಸುವಳು. ಆದರೂ ಹೇಮರೆಡ್ಡಿ ಮಲ್ಲಮ್ಮ ನೊಂದುಕೊಳ್ಳದೆ ಕಾಡಿನಲ್ಲಿ ದನಗಳನ್ನು ಕಾಯುತ್ತಾ ಮಲ್ಲಿಕಾರ್ಜುನನ ಉಪಾಸನೆಯಲ್ಲಿ ಮಗ್ನಳಾಗಿರುತ್ತಿದ್ದಳು.
ದಾನಚಿಂತಾಮಣಿಯಾದ ಮಲ್ಲಮ್ಮನಿಗೆ ಬುದ್ಧಿ ಕಲಿಸಲು ಅವಳ ಅತ್ತೆ ಮನೆಯ ಮುಂದೆ ಭಿಕ್ಷುಕ ಬಂದಾಗ ಸಿಟ್ಟುಗೊಂಡು ಒಲೆಯಲ್ಲಿನ ನಿಗಿನಿಗಿ ಕೆಂಡವನ್ನು ಅವಳ ಬೊಗಸೆಗೆ ಹಾಕಿ, ಬಾಗಿಲಲ್ಲಿ ನಿಂತಿದ್ದ ಭಿಕ್ಷುಕನಿಗೆ ನೀಡಲು ಹೇಳಿದಾಗ, ಮಲ್ಲಮ್ಮ ಅತ್ತೆಕೊಟ್ಟ ಕೆಂಡವನ್ನು ಸ್ವೀಕರಿಸಿ ಮನದಲ್ಲಿ ಮಲ್ಲಿಕಾರ್ಜುನನನ್ನು ನೆನೆದು ಭಿಕ್ಷಾರ್ಥಿಯ ಜೋಳಿಗೆಗೆ ಅದನ್ನೇ ನೀಡಿದಾಗ ಅದು ಧಾನ್ಯವಾಗಿ ಮಾರ್ಪಡುತ್ತದೆ. ಅಂದಿನಿಂದ ಮಲ್ಲಮ್ಮನ ಹೆಸರು ಬೆಂಕಿದಾನದ ಮಲ್ಲಮ್ಮ ಎಂದಾಯಿತು.
ಮೈದುನನ ಮನಃಪರಿವರ್ತನೆ
ದುಶ್ಚಟಗಳ ದಾಸನಾದ ವೇಮನ ವೇಶ್ಯಾ ಸ್ತ್ರೀಯೊಬ್ಬಳ ಮನದಾಸೆ ಈಡೇರಿಸಲು, ಅತ್ತಿಗೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮನ ಮೂಗುತಿಯನ್ನು ಬೇಕೆಂದು ಕೇಳುತ್ತಾನೆ. ಹೇಮರೆಡ್ಡಿ ಮಲ್ಲಮ್ಮ ಮೈದುನನಾದ ವೇಮನನಿಗೆ ಮೂಗುತಿ ಕೊಡಲು ಒಪ್ಪಿ ಕರಾರೊಂದನ್ನು ವಿಧಿಸುತ್ತಾಳೆ.
ತಾಯಿಯ ಗರ್ಭದಿಂದ ತಾಂ ಬರುವ ಸಮಯದಿ
ಮೊದಲು ವಸ್ತ್ರಮಿಲ್ಲ, ತುದಿಗುಮಿಲ್ಲ
ನಡುವೆ ಬಟ್ಟೆಯುಡುವುದೇಕೆಂದು ತಿಳಿಯಿರಿ
ವಿಶ್ವತೋಭಿರಾಮ ಕೇಳುವೆ ಮಾ||
ಎಂದು ತತ್ವಜ್ಞಾನ ಹೇಳುತ್ತಾ, ತಾನು ನಗ್ನನಾಗಿ ವೈರಾಗಿಯಂತೆ ಕಾಲ್ತೆಗೆದು ಹೊರ ಹೊರಟು, ಮುಂದೆ ತನ್ನ ಸಾಧನೆಯಿಂದ ಮಹಾಯೋಗಿಯಾದನು.
ಮಲ್ಲಮ್ಮ ಇಹಲೋಕ ಯಾತ್ರೆ ಮುಗಿಸುವ ಮೊದಲು ಆಕೆಗೆ ಮಲ್ಲಿಕಾರ್ಜುನ, ಆಕೆಯ ನಿಷ್ಕಳಂಕ ಭಕ್ತಿಗೆ ಮನಸೋತು ಮಲ್ಲಮ್ಮನಿಗೆ ದರ್ಶನವಿತ್ತು ವರವೇನು ಬೇಕು ಕೇಳು ಎಂದಾಗ ಮಲ್ಲಮ್ಮ- ತನ್ನ ಬಳಗಕ್ಕೆಂದೂ ಬಡತನ ಬಾರದಿರಲಿ, ಅವರಿಗೆಂದೂ ಉಣ್ಣಲು-ಉಡಲು-ತೊಡಲು ಯಾವ ಕೊರತೆಯೂ ಆಗದಿರಲಿ, ಮಲ್ಲಿಕಾರ್ಜುನನ ಪೂಜೆ, ಜಾತ್ರೆ ಮತ್ತು ಉತ್ಸವಗಳು ನಿರಂತರ ನಡೆಯಬೇಕು ಎನ್ನುತ್ತಾಳೆ. ಮಲ್ಲಿಕಾರ್ಜುನ ಅವಳು ಬೇಡಿದಂತಹ ವರವನ್ನು ನೀಡುತ್ತಾನೆ.
ಭಾರತೀಯ ಮಹಿಳೆಯರಿಗೆ ಮಾತ್ರ ಮಲ್ಲಮ್ಮನವರ ಸಿದ್ಧಾಂತಗಳು, ತತ್ವಗಳು ಪ್ರೇರಣೆಯಾಗಲಿ ಎಲ್ಲರಿಗೂ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನ ಜಯಂತಿಯ ಹಾರ್ದಿಕ ಶುಭಾಶಯಗಳು.
ಲೇಖನ: ಜಿಲಾನಸಾಬ್ ಬಡಿಗೇರ್
