ಆ ಮನೆಯ ಹೆಣ್ಣು ಮಗಳು ಒಂದು ಕೈಯಲ್ಲಿ ಅಳುವ ಪುಟ್ಟ ಮಗುವನ್ನು ಸಂಭಾಳಿಸುತ್ತಲೇ ಮತ್ತೊಂದು ಕೈಯಲ್ಲಿ ಒಲೆಯ ಮೇಲಿಟ್ಟ ಚಹವನ್ನು ತನ್ನ ಬಲಗೈಯಿಂದ ಸೋಸಿ ನಿಧಾನವಾಗಿ ಅದೇ ಕೈಯಲ್ಲಿ ಹಿಡಿದು ತಂದು ಅತ್ತೆಯ ಕೈಗೆ ಕೊಟ್ಟಳು.
ಆಗ ತಾನೇ ಬಚ್ಚಲಿನಿಂದ ಹೊರಬಂದ ಅತ್ತೆ ಎಲ್ಲಾ ಕೆಲಸ ನಿನ್ನ ಮೇಲೆ ಬಿತ್ತು… ನನಗೆ ಸುಸ್ತಾಗದೆ ಇದ್ರೆ ನಿನಗೆ ಒಂಚೂರು ಸಹಾಯ ಮಾಡಬಹುದಿತ್ತು ಎಂದು ಅಲವತ್ತುಕೊಂಡರು..
ಪರವಾಗಿಲ್ಲ ಅತ್ತೆ ಒಂದೆರಡು ದಿನ ರೆಸ್ಟ್ ಮಾಡಿ ತಂತಾನೇ ಸರಿ ಹೋಗುತ್ತೆ ಎಂದು ಅತ್ತೆಗೆ ಸಮಾಧಾನ ಹೇಳಿದ ಆಕೆ ಅವರು ಚಹಾ ಕುಡಿಯುವವರೆಗೂ ಅಲ್ಲಿಯೇ ಇದ್ದು ನಂತರ ಮಗುವನ್ನು ಅವರ ಹಾಸಿಗೆಯ ಮೇಲೆ ಮಲಗಿಸಿ ಆಡಲು ಬಿಟ್ಟಳು.
ಅತ್ತೆ, ನೀವು ಸ್ವಲ್ಪ ಹೊತ್ತು ಮಗೂನ ನೋಡ್ಕೊಳ್ಳಿ… ನಾನು ಪುಟ್ಟನ್ನ ಎಬ್ಬಿಸಿ ರೆಡಿ ಮಾಡಿ ಶಾಲೆಗೆ ಕಳಿಸಿ ಬರ್ತೇನೆ ಎಂದು ಹೇಳಿದಾಗ ಆಯ್ತು ಎಂದು ಹೇಳಿದ ಅತ್ತೆ ‘ನಿಮ್ಮ ಮಾವ ಎದ್ದಿದ್ದಾರೆಯೇ?: ಎಂದು ಕೇಳಿದರು.
“ಹೂಂ ಅತ್ತೆ, ಬಿಸಿ ನೀರು ಕುಡಿದು ವಾಕಿಂಗ್ ಹೋಗಿದ್ದಾರೆ. ಅಲ್ಲೇ ಬರುವಾಗ ಹಾಲು ತರೋಕೆ ಹೇಳಿದೀನಿ ಇನ್ನೇನು ಬರೋ ಹೊತ್ತು “ಎಂದು ಹೇಳಿದಳು.
“ಆಯ್ತು. ನೀನು ಹೋಗಮ್ಮ ನಿನ್ನ ಕೆಲಸ ಮಾಡ್ಕೋ…. ಮಗುವನ್ನು ನನ್ನ ಮುಂದೆ ಮಲಗಿಸು ಎಂದು ಅತ್ತೆ ಹೇಳಲು ಆಯ್ತು ಅತ್ತೆ ಎಂದು ಹೇಳುತ್ತಾ
ಕೋಣೆಯಿಂದ ಹೊರಬಂದಳು.
ಸೀದಾ ತನ್ನ ಕೋಣೆಗೆ ತೆರಳಿದವಳೇ ಆರಾಮಾಗಿ ಮಲಗಿದ್ದ ಪುಟ್ಟ ಮಗುವನ್ನು ಕಂಡು ತೃಪ್ತಿಯಿಂದ ನೋಡಿ ಆತನ ಹಣೆಗೆ ಮುದ್ದಿಟ್ಟು ನಿಧಾನವಾಗಿ ತಟ್ಟಿ ಏಳು ಪುಟ್ಟ, ಶಾಲೆಗೆ ಹೊತ್ತಾಗುತ್ತೆ ಎಂದು ಎಬ್ಬಿಸಿದಳು.
ಸ್ವಲ್ಪ ಕೂಸುಗರೆಯುತ್ತಲೇ ಎದ್ದ ಮಗು ತಾಯಿಯ ಕೊರಳಿಗೆ ಜೋತು ಬಿದ್ದಿತ್ತು. ಹಾಗೆ ಜೋತು ಬಿದ್ದ ಮಗುವನ್ನು ಮುದ್ದಿಸುತ್ತಾ ಸೀದಾ ಬಚ್ಚಲು ಮನೆಗೆ ಕರೆ ತಂದು ಹಲ್ಲುಜ್ಜಿಸಿ, ಟಾಯ್ಲೆಟ್ ಗೆ ಕಳಿಸಿದಳು. ನಂತರ ಅಡುಗೆ ಮನೆಗೆ ಹೋಗಿ ಮಗ ಹೊರಗೆ ಬರುವವರೆಗೆ ತಿಂಡಿಗೆ ತಯಾರಿ ಮಾಡಿದಳು. ಟಾಯ್ಲೆಟ್ ಮುಗಿಸಿ ಬಂದ ಮಗನಿಗೆ ಸ್ನಾನ ಮಾಡಿಸಿ ಬಟ್ಟೆ ಹಾಕಿ ಶಾಲೆಗೆ ತಯಾರು ಮಾಡಿ ಅಡುಗೆ ಮನೆಗೆ ಕರೆತಂದು ಹಾಲಿನ ಗ್ಲಾಸನ್ನು ಆತನ ಕೈಯಲ್ಲಿಟ್ಟು ಬೇಗನೆ ತಿಂಡಿಯನ್ನು ತಯಾರಿಸಿ ಆತನ ಡಬ್ಬಕ್ಕೆ ತುಂಬಿ ಮರಳಿ ಬಂದು ಆತನಿಗೆ ತಿಂಡಿಯನ್ನು ತಿನ್ನಿಸಿ ನೀರು ಕುಡಿಸಿ ಶೂ ಮತ್ತು ಸಾಕ್ಸ್ ಗಳನ್ನು ಹಾಕಿ ತುಸು ಎಳೆದಂತೆಯೇ ಕರೆದೊಯ್ದು ಸ್ಕೂಲಿನ ಬಸ್ ಬರುವಲ್ಲಿ ನಿಂತು ಆತನನ್ನು ಬಸ್ ಹತ್ತಿಸಿ ಮನೆಗೆ ಬಂದಾಗ ಮನೆಯಲ್ಲಿ ಅತ್ತೆ ಮಾವ ತಿಂಡಿಗಾಗಿ ಕಾಯುತ್ತಿದ್ದರು. ಬೇಗ ಬೇಗನೇ ಅವರಿಬ್ಬರಿಗೂ ತಿಂಡಿ ಕೊಟ್ಟು, ಮಗುವಿಗೆ ಹಾಲುಣಿಸಿ ಮಲಗಿಸಿ ಉಳಿದ ಅಡುಗೆ ಮನೆ ಕೆಲಸಗಳನ್ನು ಪೂರೈಸಿ ಸ್ನಾನ, ಪೂಜೆ,ತಿಂಡಿ ಮುಗಿಸಿ ಮತ್ತೆ ಅತ್ತೆಯ ಬಳಿ ಮಲಗಿದ್ದ ಮಗುವಿನ ಬಳಿ ಬಂದಳು. ಅಜ್ಜಿ ತಾತನ ಮಾತಿಗೆ ಹೂಂಗುಡುತ್ತಿದ್ದ 5 ತಿಂಗಳ ಪುಟ್ಟ ಬಾಲೆ ತಾಯಿಯ ಧ್ವನಿಯನ್ನು ಕೇಳಿ ಕಣ್ಣರಳಿಸಿ ಎತ್ತಿಕೋ ಎಂಬಂತೆ ಎರಡು ಕೈಗಳನ್ನು ಮೇಲೆ ಚಾಚಿದಳು.
ತಾಯಿ ತನ್ನೆರಡು ಮಕ್ಕಳೊಂದಿಗೆ ಅತ್ತೆ ಮಾವನ ಜೊತೆ ವಾಸವಾಗಿದ್ದಾಳೆ. ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿದೆ. ಎಲ್ಲರೂ ತಂತಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಹಾಗಾದರೆ ಎಲ್ಲಿದ್ದಾನೆ ಆ ಮನೆಯ ಯಜಮಾನ?. ತನ್ನ ಅಪ್ಪ ಅಮ್ಮ ಮತ್ತು ಮಕ್ಕಳ ಜವಾಬ್ದಾರಿಯನ್ನು ಪತ್ನಿಯ ಮೇಲೆ ಹೊರಿಸಿ ಎಲ್ಲಿ ಹೋಗಿರಬಹುದು ಆತ? ಅವರಾರು ಆತನ ಜವಾಬ್ದಾರಿಯ ಕುರಿತು ಮಾತನಾಡುವುದಿಲ್ಲ ಏಕೆ?
ಕಾರಣ ಅವರಿಗೆ ಸ್ಪಷ್ಟವಾಗಿ ಗೊತ್ತಿದೆ… ಆತ ಭಾರತ ಮಾತೆಯ ಸೇವೆಯಲ್ಲಿ ಸಾವಿರಾರು ಕಿಲೋಮೀಟರ್ ದೂರದ ಹಿಮಾಲಯದ ತಪ್ಪಲಿನಲ್ಲಿ ನಡುಗುವ ಚಳಿಯಲ್ಲಿ ಯಾವುದೇ ಕ್ಷಣದಲ್ಲಿಯೂ ಸಂಭವಿಸಬಹುದಾದ ಆಕಸ್ಮಿಕಗಳನ್ನು ಎದುರಿಸುವ ನಿಟ್ಟಿನಲ್ಲಿ ಸದಾ ಸನ್ನದ್ಧನಾಗಿ ನಿಂತಿದ್ದಾನೆಂದು.
ಆತನ ತಾಯಿ.. ಮಗ ಯಾವುದೇ ಅಪಾಯಗಳಿಗೆ ಸಿಲುಕದಿರಲಿ ಎಂದು ದೇವರಲ್ಲಿ ಮೊರೆ ಇಟ್ಟರೆ ತಂದೆ ಮೌನವಾಗಿ ನಿಟ್ಟುಸಿರಿಡುತ್ತಾರೆ. ಪತಿಯ ಗೈರುಹಾಜರಿಯ ನೋವಿನಲ್ಲಿ ಮನೆಯ, ಅತ್ತೆ ಮಾವನ ಮತ್ತು ಮಕ್ಕಳ ಜವಾಬ್ದಾರಿಯನ್ನು ನೀಗಿಸಿಕೊಂಡು ಹೋಗುವ ಪತ್ನಿ ರಾತ್ರಿಯ ನೀರವ ಮೌನದಲ್ಲಿ ಕಣ್ಣೀರಿಟ್ಟರೂ ಮರುದಿನ ಮುಂಜಾನೆ ಏನೂ ನಡೆದೇ ಇಲ್ಲ ಎನ್ನುವಂತೆ ಅತ್ತೆ ಮಾವನ ಮುಂದೆ ನಗುನಗುತ್ತಾ ನಿಲ್ಲುತ್ತಾಳೆ. ಆಕೆಯ ಹುಸಿ ನಗು ಅತ್ತೆ ಮಾವನಿಗೂ ಗೊತ್ತು ಆದರೂ ಏನೂ ಅರಿಯದವರಂತೆ ಮುಗ್ಧ ನಗುವನ್ನು ಸೂಸುತ್ತಾರೆ. ಇನ್ನು ಪುಟ್ಟ ಮಗ ಆಗಾಗ ತಂದೆ ಮಾಡುವ ಫೋನ್ ಕರೆಗೆ ಕಾಯುತ್ತಾನೆ…. ಆತನ ಫೋನ್ ಬಂದಾಗ ಮನೆಮಂದಿಯಲ್ಲ ಸಂಭ್ರಮದಿಂದ ಮಾತನಾಡಿ ಎಲ್ಲವೂ ಸರಿಯಾಗಿದೆ ತಾನೇ? ಎಂದು ಕೇಳಿ ನೆಮ್ಮದಿಯ ನಿಟ್ಟುಸಿರಿಡುತ್ತಾರೆ. ವರ್ಷದ ಯಾವುದೋ ಒಂದು ತಿಂಗಳು ಬಂದು ಹೋಗುವ ತಂದೆ ಸುರಿಸುವ ಅಪಾರ ಪ್ರೀತಿಯ ಧಾರೆಯನ್ನು ನೆನೆದು “ಅಮ್ಮ, ಅಪ್ಪ ಯಾವಾಗ ಬರುತ್ತಾರೆ?” ಎಂದು ತಾಯಿಯನ್ನು ಕೇಳುತ್ತಾನೆ. ಆಕೆಗೆ ಉತ್ತರ ಗೊತ್ತಿಲ್ಲವೆಂದಲ್ಲ.ಅನಿಶ್ಚಿತತೆಯೇ ಅವರ ಬದುಕು.
ಇದು ಒಂದು ಮನೆಯ ಕಥೆಯಲ್ಲ… ತುಸು ಹೆಚ್ಚು ಕಮ್ಮಿ ಎಲ್ಲಾ ಸೈನಿಕರ ಮನೆಯ ಕಥೆ.
ನಿಜ! ಸೈನಿಕರ ಜೀವನ ಸುಲಭ ಅಲ್ಲ… ಶತ್ರುಗಳು ಯಾವಾಗ ಬೇಕಾದರೂ ದಾಳಿ ಮಾಡಬಹುದು ಮೈಯೆಲ್ಲಾ ಕಣ್ಣಾಗಿ ಗಡಿಯನ್ನು ಕಾಯುವ ಸೈನಿಕರು ಯಾವುದೇ ರೀತಿಯ ತುರ್ತು ಪರಿಸ್ಥಿತಿಯಲ್ಲಿ ಸದಾ ಸನ್ನದ್ಧರಾಗಿ ಇರುವವರು. ತಮ್ಮ ಕುಟುಂಬದವರಿಂದ ದೂರ ಇರುವ ಅವರಿಗೆ ತಾಯಿ ಭಾರತಿಯ ಸೇವೆಯೇ ಮೊದಲ ಆದ್ಯತೆಯಾಗಿರುತ್ತದೆ. ಅದರಲ್ಲೂ ಭಾರತೀಯ ಮಿಲಿಟರಿ ಪಡೆ ತನ್ನ ದೇಶಪ್ರೇಮಕ್ಕೆ ಹೆಸರಾಗಿದೆ. ದೇಶದ ಮಾನ ಕಾಪಾಡಲು ತನ್ನ ಪ್ರಾಣವನ್ನು ಕೊಡಲು ಹಿಂಜರಿಯದ ಬಿಸಿ ರಕ್ತದ ಸೈನಿಕರ ಪಡೆಯೇ ನಮ್ಮಲ್ಲಿದೆ.
ಬಿರು ಬಿಸಿಲಿನ ಮರುಭೂಮಿಯಿರಲಿ, ಕೊರೆಯುವ ಹಿಮಾಲಯದ ಚಳಿ ಇರಲಿ, ಅದೆಷ್ಟೇ ಏರಿಳಿತಗಳ ಕೊರಕಲು ಹಾದಿಯಿರಲಿ ಭಾರತೀಯ ಸೈನಿಕ ಮೈಯೆಲ್ಲ ಕಣ್ಣಾಗಿಸಿಕೊಂಡು ನಮ್ಮ ದೇಶದ ಗಡಿಯನ್ನು ಕಾಯುತ್ತಿರುತ್ತಾನೆ. ದೇಶದಲ್ಲಿ ಆಂತರಿಕವಾಗಿ ಯಾವುದೇ ದೊಂಬಿ, ಗಲಾಟೆಗಳು ನಡೆದಾಗಲೂ ಕೂಡ ಸೈನಿಕ ತನ್ನ ತಂಡದೊಂದಿಗೆ ಅಲ್ಲಿ ಹಾಜರಾಗಬೇಕು. ಪ್ರವಾಹ ಸುನಾಮಿ ನೆರೆ ಕಾಲ್ಗೆಚ್ಚು ಎಂದು ಯಾವುದೇ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಅಲ್ಲಿಯೂ ಆತನ ಹಾಜರಾತಿ ಕಡ್ಡಾಯ.
ಯೋಧನೇನು ಭಾವನೆಗಳಿಲ್ಲದ ಬರಡು ವ್ಯಕ್ತಿಯಲ್ಲ. ತಂದೆ ತಾಯಿಗಳನ್ನು ಗೌರವಿಸುವ ಪತ್ನಿ ಮತ್ತು ಮಕ್ಕಳನ್ನು ಪ್ರೀತಿಸುವ ತನ್ನ ಕೌಟುಂಬಿಕ ಜವಾಬ್ದಾರಿಗಳನ್ನು ಆತ ಅರಿತಿದ್ದಾನೆ ಆದರೆ ಕುಟುಂಬ ಮತ್ತು ದೇಶ ಸೇವೆ ಎಂಬ ಆಯ್ಕೆಗಳು ಬಂದಾಗ ಆತನ ಮೊದಲ ಆಯ್ಕೆ ದೇಶ ಸೇವೆಯೇ ಆಗಿರುತ್ತದೆ.
ತನ್ನ ಕರ್ತವ್ಯದ ಕರೆಗೆ ಸೈನಿಕ ಓಗೊಟ್ಟರೆ
ಅಪಾಯದ ಅಂಚಿನಲ್ಲಿ ಕಾರ್ಯನಿರ್ವಹಿಸುವ ಸೈನಿಕರಷ್ಟೇ ಧೈರ್ಯ, ಆತ್ಮವಿಶ್ವಾಸ ಮತ್ತು ದೃಢತೆಗಳು ಅವರ ಕುಟುಂಬದ ಸದಸ್ಯರಲ್ಲಿ ಕೂಡ ಇರುತ್ತವೆ. ಮನದಲ್ಲಿ ಆತಂಕ ಮಡುಗಟ್ಟಿದ್ದರೂ ಮುಖದಲ್ಲಿ ಹುಸಿನಗೆಯನ್ನು ಮೂಡಿಸಿಕೊಂಡು ಎಲ್ಲರೊಂದಿಗೆ ವ್ಯವಹರಿಸಬೇಕಾಗುತ್ತದೆ. ಇನ್ನು ಯುದ್ಧ, ಸಂಘರ್ಷಗಳ ಸಮಯದಲ್ಲಂತೂ ಅವರ ಎದೆಯಲ್ಲಿ ಭತ್ತ ಕುಟ್ಟಿದಂತಹ ಅನುಭವ.
ತಮ್ಮ ಬದುಕಿನ ಬಹು ಮುಖ್ಯ ಭಾಗವನ್ನು ಸೈನಿಕ ಮಿಲಿಟರಿ ನೆಲೆಯಲ್ಲಿ ಕಳೆದರೆ ಆತನ ಪತ್ನಿ ಎಲ್ಲ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಾಳೆ. ಆಕೆಯ ಪತಿ ಒಬ್ಬನೇ ಮಗನಾಗಿದ್ದರೆ ಅತ್ತೆ ಮಾವನ ಜವಾಬ್ದಾರಿ, ಮಕ್ಕಳ ಊಟ ತಿಂಡಿ, ದಿನಸಿ ತರಕಾರಿ ತರುವುದು ಕರೆಂಟ್ ಬಿಲ್ ಕಟ್ಟುವುದು ಹೀಗೆ ಹತ್ತು ಹಲವು ಮನೆಯ ಒಳ ಹೊರಗಿನ ಕೆಲಸಗಳಿಗೆ ಆಕೆಯೇ ತಲೆ ಕೊಡಬೇಕು. ಕೊಂಚಮಟ್ಟಿಗೆ ಇದೆಲ್ಲವೂ ಓಕೆ!
ಆದರೆ ಒಮ್ಮೊಮ್ಮೆ ಹೊತ್ತಲ್ಲದ ಹೊತ್ತಿನಲ್ಲಿ ಮಕ್ಕಳಿಗೆ, ಹಿರಿಯರಿಗೆ ಅನಾರೋಗ್ಯವಾದಾಗ ದೈಹಿಕ ಸ್ವಾಸ್ಥ್ಯದಲ್ಲಿ ವ್ಯತ್ಯಾಸವಾದಾಗ ಶೀಘ್ರವೇ ವೈದ್ಯರನ್ನು ಕಾಣುವ ಸಂದರ್ಭಗಳು ಆಕೆಯನ್ನು ಧೃತಿಗೆಡಿಸುತ್ತವೆ. ಮತ್ತೆ ಕೆಲ ಬಾರಿ ಬ್ಯಾಂಕಿನ ವ್ಯವಹಾರಗಳು ಕೂಡಾ ಆಕೆಯಲ್ಲಿ ಭಯವನ್ನು ಆತಂಕವನ್ನು ಹುಟ್ಟಿಸುತ್ತವೆ. ಕೂಡಲೇ ಗಂಡನಿಗೆ ಕರೆ ಮಾಡಿ ಕೇಳಿ ನಿರ್ಧರಿಸೋಣ ಎಂದರೆ ನೆಟ್ವರ್ಕ್ ಕೂಡಾ ಸಿಗದ ಜಾಗದಲ್ಲಿ ಗಂಡ ಕರ್ತವ್ಯ ನಿರತನಾಗಿರುತ್ತಾನೆ.
ಆದ್ದರಿಂದಲೇ ಸೈನಿಕರಷ್ಟೇ ಅವರ ಪತ್ನಿಯರು ಕೂಡಾ ಧೈರ್ಯಶಾಲಿಗಳು ಎಂದರೆ ತಪ್ಪಿಲ್ಲ. ಅವರ ಧೈರ್ಯವನ್ನು ಮೆಡಲುಗಳಿಂದ ಪೆರೇಡ್ ಗಳಿಂದ
ಅಳೆಯಲಾಗುವುದಿಲ್ಲ ಎಂಬುದೇನೋ ನಿಜ ಆದರೆ ಗಟ್ಟಿಯಾದ ಹೃದಯ ಮತ್ತು ಭರವಸೆಯ ಬಲದಿಂದ ಮೌನವಾಗಿ ಆಕೆಯು ಕೂಡ ಅಗೋಚರ ಯುದ್ಧದಲ್ಲಿ ಭಾಗಿಯಾಗಿರುತ್ತಾಳೆ.
ಯಾವುದೇ ರೀತಿಯ ರಾಜಿಗೂ ಒಳಗಾಗದೆ ತಮ್ಮ ಅಪ್ಪಟ ದೇಶ ಭಕ್ತಿಯ ಕಾರಣಕ್ಕಾಗಿ ಸೈನಿಕರು ಹೆಸರಾಗಿರಲು ಕಾರಣ ಮನೆಯಲ್ಲಿ ಅವರ ಪತ್ನಿಯರು ಕುಟುಂಬದ ಸದಸ್ಯರು ಅವರಿಗೆ ನೀಡಿರುವ ಬೆಂಬಲ ದಿಂದ ಮಾತ್ರ… ಸೈನಿಕನಿಗೂ ಅಚಲವಾದ ಪ್ರೀತಿಯ ಬುನಾದಿ ಬೇಕೇ ಬೇಕು ಅಲ್ಲವೇ?
ತನ್ನ ಗೈರು ಹಾಜರಿಯಲ್ಲಿ ಎಲ್ಲವೂ ಸುಗಮವಾಗಿ ನಡೆದು ಹೋಗುತ್ತದೆ ಎಂಬ ನಂಬಿಕೆಯ ಬಲದಿಂದಲೇ ಆತ ಯುದ್ಧ ರಂಗದಲ್ಲಿ ಗಟ್ಟಿಯಾಗಿ ಕಾಲೂರಿ ಕಾರ್ಯನಿರ್ವಹಿಸುತ್ತಾನೆ.
ಯೋಧರ ಕುಟುಂಬದ ಸದಸ್ಯರು ನಮ್ಮಂತೆ ಸಾಮಾನ್ಯ ಜೀವನ ನಡೆಸುವುದಿಲ್ಲ. ಪಡುವಣದಲ್ಲಿ ಮುಳುಗಿದ ರವಿ ಮತ್ತೆ ಮೂಡಣದಲ್ಲಿ ಮೂಡಿ ಬರುವ ಎಂಬ ಭರವಸೆ ನಮಗೆ ಖಂಡಿತವಾಗಿಯೂ ಇದೆ. ಮುಂಜಾನೆ ಕಚೇರಿಗೆ ಹೋದವರು ಸಂಜೆ ಮನೆಗೆ ಬರಬಹುದು ಆದರೆ ಇದೇ ಭರವಸೆಯನ್ನು ಸೈನಿಕರ ಪತ್ನಿಯರು ಹೊಂದಿರಲು ಸಾಧ್ಯವಿಲ್ಲ.
ಇಂತಹ ವೀರಯೋಧರ ಕುರಿತು ನಮಗೆ ಹೆಮ್ಮೆಯಿರಲಿ, ಅವರ ಕುಟುಂಬದೆಡೆ ಸಹಾನುಭೂತಿಯಿರಲಿ, ಅವಶ್ಯಕತೆ ಬಿದ್ದಾಗ ಸಹಾಯ ಮಾಡುವ ಮನಸ್ಥಿತಿ ಇರಲಿ.
ಕಣ್ಣಿವೆ ಮುಚ್ಚದೆ ನಮ್ಮ ದೇಶದ ಗಡಿಯನ್ನು ಕಾಯುತ್ತಿರುವ ಅವರಿಂದಲೇ ನಾವು ನಿಶ್ಚಿಂತೆಯಿಂದ ಕಣ್ತುಂಬ ನಿದ್ರಿಸಲು ಸಾಧ್ಯ ಎಂಬ ಅರಿವಿರಲಿ ಎಂಬ ಆಶಯದೊಂದಿಗೆ…
- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ. ಗದಗ ಜಿಲ್ಲೆ
