
ಧರ್ಮ ಭೂಮಿಯಾದ ನಮ್ಮ ಭಾರತ ದೇಶವು ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಪ್ರದಾಯಗಳ ತವರೂರು. ಹೆಜ್ಜೆ ಹೆಜ್ಜೆಗೂ ತೀರ್ಥಕ್ಷೇತ್ರಗಳನ್ನು ಹೊಂದಿರುವ ಭರತ ಭೂಮಿಯಲ್ಲಿ ನೂರಾರು, ಸಾವಿರಾರು ದೇವತೆಗಳು ಪುಣ್ಯ ಪುರುಷರು, ಸಂತರು ಆಗಿ ಹೋಗಿದ್ದು ಪುಣ್ಯ ಭರತ ಭೂಮಿಯ ಮಣ್ಣಿನ ಪ್ರತಿ ಕಣವು ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಸುಗಂಧವನ್ನು ಎಲ್ಲೆಡೆ ಪಸರಿಸಿದೆ.
ಧರ್ಮ,ನ್ಯಾಯ, ಪುಣ್ಯ ಮುಂತಾದ ಮಾನವೀಯ ಮೌಲ್ಯಗಳನ್ನು ಧರ್ಮ ಕ್ಷೇತ್ರಗಳ ಮೂಲಕ ಬೋಧಿಸುತ್ತಿರುವ ನಮ್ಮ ಭಾರತೀಯ ದೇವಾಲಯ ಸಂಸ್ಕೃತಿಯಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರು ಗ್ರಾಮದ ವೀರಭದ್ರೇಶ್ವರ ದೇವಸ್ಥಾನವು ಈ ಭಾಗದ ಜಾಗೃತ ಕ್ಷೇತ್ರ ಎಂದೇ ಹೆಸರಾಗಿದೆ.
ಸಿಂಗಟಾಲೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನವು ಪೂರ್ವಾಭಿಮುಖವಾಗಿ ಹರಿಯುತ್ತಿರುವ ತುಂಗಾಭದ್ರ ನದಿಯ ತೀರದ ಕಪೋತಗಿರಿ ಬೆಟ್ಟದ ಮೇಲೆ ನದಿಗೆ ಅಭಿಮುಖವಾಗಿ ಹಲವಾರು ದಶಕಗಳ ಹಿಂದೆಯೇ ಸ್ಥಾಪಿಸಲ್ಪಟ್ಟಿದ್ದು ಇತ್ತೀಚೆಗೆ ದೇವಸ್ಥಾನದ ಜೀರ್ಣೋದ್ಧಾರವಾಗಿ ನವೀನ ಶಿಲಾ ಮಂಟಪದಲ್ಲಿ ವೀರಭದ್ರೇಶ್ವರ ದೇವರು ಲಕ್ಷಾಂತರ ಭಕ್ತರ ಭಕ್ತಿಯ ದ್ಯೋತಕವಾಗಿ ಭಕ್ತ ರಕ್ಷಕನಾಗಿ ನೆಲೆ ನಿಂತಿದ್ದಾನೆ. ನಂಬಿದವರ ನಂಬಿಕೆಗೆ ಇಂಬು ಕೊಡುವಂತೆ ಶ್ರೀ ವೀರಭದ್ರೇಶ್ವರ ದೇಗುಲವು ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದಿದ್ದು, ಧರ್ಮಶ್ರದ್ದೆ ಆಸ್ತಿಕತೆಗಳು ಕಡಿಮೆಯಾಗಿರುವ ಇಂದಿನ ದಿನಗಳಲ್ಲಿ
ತನ್ನ ಹಿಂದಿನ ಗತವೈಭವವನ್ನು ಉಳಿಸಿಕೊಂಡು ಕನ್ನಡ ನಾಡಿನ ಧಾರ್ಮಿಕ ಪರಂಪರೆಯ ಸಾರವನ್ನು ಉಣ ಬಡಿಸುತ್ತಿದೆ.
ವೀರಭದ್ರೇಶ್ವರನ ಅವತಾರ… ಪ್ರಜಾಪತಿ ಬ್ರಹ್ಮ ಎಂದು ಹೆಸರಾದ ದಕ್ಷನು ತನ್ನ 24 ಪುತ್ರಿಯರಲ್ಲಿ ಒಬ್ಬಳಾದ ಸತಿ ದೇವಿಯನ್ನು ಲಯಕರ್ತನಾದ ಶಿವನಿಗೆ ಕೊಟ್ಟು ವಿವಾಹ ಮಾಡಿದ್ದನು.
ಒಂದು ಬಾರಿ ಕೈಲಾಸದಲ್ಲಿ ಶಿವನ ಒಡ್ಡೋಲಗದಲ್ಲಿ ವಿಪರೀತ ಸಂಭ್ರಮ, ಉತ್ಸವಗಳು ನಡೆಯುತ್ತಿರುವಾಗ ಶಿವನ ಮಾವನಾದ ದಕ್ಷ ಪ್ರಜಾಪತಿಯು ಅಲ್ಲಿಗೆ ಭೇಟಿ ಕೊಟ್ಟನು. ಆ ಸಮಯದಲ್ಲಿ ಅಲ್ಲಿ ಹಾಜರಿದ್ದ ಯಕ್ಷ, ಗಂಧರ್ವ, ದೇವತೆಗಳು,ಕಿನ್ನರ ಕಿಂಪುರುಷರು ದಕ್ಷನನ್ನು ನೋಡಿ ಎದ್ದು ಆತನಿಗೆ ಗೌರವದಿಂದ ನಮಿಸಿದರು. ಆದರೆ ಬ್ರಹ್ಮನೊಂದಿಗೆ ಆಪ್ತ ಸಮಾಲೋಚನೆಯಲ್ಲಿ ತೊಡಗಿದ್ದ ಪರಶಿವನು ಆತನನ್ನು ಗಮನಿಸದೆ ಹೋದನು. ಇದನ್ನು ತಪ್ಪಾಗಿ ಭಾವಿಸಿದ ದಕ್ಷಬ್ರಹ್ಮನು ತನಗೆ ಅವಮಾನ ಮಾಡಲೆಂದೇ ಶಿವನು ತನ್ನನ್ನು ಕಡೆಗಣಿಸಿರುವುದಾಗಿ ಭಾವಿಸಿ ಶಿವನನ್ನು ಶಪಿಸಿ ಅಲ್ಲಿಂದ ಹೊರಟುಬಿಟ್ಟನು.
ಶಿವನ ವ್ಯಸ್ತತೆ ಮತ್ತು ದಕ್ಷಬ್ರಹ್ಮನ ಅಹಮಿಕೆಗಳನ್ನು ಕಂಡುಕೊಂಡ ನಂದಿಯು ಆತನನ್ನು ಬೆಂಬತ್ತಿ ಹೋಗಿ ಆಕಸ್ಮಿಕ ಅಚಾತುರ್ಯದಿಂದ ಹೀಗಾಗಿದ್ದು ಉದ್ದೇಶಪೂರ್ವಕವಾಗಿ ಶಿವನು ಹೀಗೆ ಮಾಡಿಲ್ಲ ಎಂಬುದನ್ನು ತಿಳಿಸಲು ಪ್ರಯತ್ನಿಸಿದರೂ ಕೂಡಾ ಅದು ನಿಷ್ಫಲವಾಯಿತು. ಇದರಿಂದ ಬೇಸರಗೊಂಡ ನಂದಿಯು ಕುರಿಯಂತೆ ನೀನು ಮಾಡಿದ್ದೇ ಸರಿ ಎಂದು ಗೋಣು ಅಲ್ಲಾಡಿಸುವ ನೀನು ಹೋತದ ಮುಖವನ್ನೇ ಹೊತ್ತು ತಿರುಗು ಎಂದು ಶಪಿಸಿದನು.
ಕೆಲ ವರ್ಷಗಳ ನಂತರ ದಕ್ಷನು ಮಹಾಯಾಗವೊಂದನ್ನು ಮಾಡಲು ಶಿವ ಮತ್ತು ಸತಿ ದೇವಿಯರನ್ನು ಹೊರತುಪಡಿಸಿ ತನ್ನೆಲ್ಲಾ ಹೆಣ್ಣು ಮಕ್ಕಳು, ಅಳಿಯಂದಿರನ್ನು ಬಂಧು ಬಾಂಧವರನ್ನು, ಋಷಿಗಳನ್ನು, ದೇವಾನುದೇವತೆಗಳು, ಕಿನ್ನರ ಕಿಂಪುರುಷರನ್ನು ಆ ಯಾಗಕ್ಕೆ ಆಹ್ವಾನಿಸಿದ್ದನು.
ದಕ್ಷನು ಮಾಡುತ್ತಿರುವ ಮಹಾ ಯಜ್ಞದ ಸಂಭ್ರಮದ ವರ್ಣನೆಗಳನ್ನು ಅವರಿವರಿಂದ ಕೇಳಿದ ಸತಿ ದೇವಿಯು ತಾವು ಕೂಡಾ ಅಲ್ಲಿಗೆ ಮಹಾ ಯಜ್ಞದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಹೋಗೋಣ ಎಂದು ಪತಿಯನ್ನು ಕೇಳಿಕೊಂಡಳು. ಆಹ್ವಾನವಿಲ್ಲದೆ ಹೋದರೆ ಅದು ತಂದೆಯ ಮನೆಯಾದರೂ ಹೋಗಬಾರದಷ್ಟೇ ಎಂದು ಶಿವನು ಅದೆಷ್ಟೇ ತಿಳಿಹೇಳಲು ಪ್ರಯತ್ನಿಸಿದರೂ ಕೇಳದ ಸತಿದೇವಿ ತನ್ನ ಪತಿಯ ಮಾತನ್ನು ಮೀರಿ ತನ್ನ ತಂದೆ ದಕ್ಷನು ಮಾಡುತ್ತಿರುವ ಯಜ್ಞ ಸ್ಥಳಕ್ಕೆ ಹೋದಳು.
ಯಜ್ಞ ಕಾರ್ಯದಲ್ಲಿ ನಿರತನಾಗಿದ್ದ ದಕ್ಷಬ್ರಹ್ಮನನ್ನು ಹವಿಸ್ಸನ್ನು ಸ್ವೀಕರಿಸಲು ಶಿವನೇ ಆಹ್ವಾನಿತನಾಗಿಲ್ಲ ಎಂದರೆ ಯಜ್ಞ ನಿಷ್ಫಲವಾಗುವುದಿಲ್ಲವೇ ಎಂದು ಪ್ರಶ್ನಿಸಿದ ಮಹರ್ಷಿಗಳನ್ನು ದಕ್ಷಬ್ರಹ್ಮನು ಗದರಿ ಸುಮ್ಮನಾಗಿಸಿದನು.
ಅದೇ ಸಮಯದಲ್ಲಿ ಅಲ್ಲಿಗೆ ಬಂದ ಮಗಳು ಸತಿ ದೇವಿಯನ್ನು ಕಂಡು ಮತ್ತಷ್ಟು ಕ್ರೋಧದಿಂದ ಆಕೆಯ ಪತಿಯನ್ನು ಮತ್ತು ಆಕೆಯನ್ನು ನಿಂದಿಸಿದ ದಕ್ಷಬ್ರಹ್ಮನು ಯಜ್ಞ ನಡೆಯುವ ಸ್ಥಳದಿಂದ ಹೊರಟು ಹೋಗು ಎಂದು ಅವಮಾನಿಸಿದನು.
ಅವಮಾನದಿಂದ ತಪ್ತಳಾದ ಸತಿದೇವಿಯು ಪತಿಯ ಮಾತನ್ನು ಮೀರಿ ಬಂದ ತನಗೆ ತಕ್ಕ ಶಾಸ್ತಿಯಾಯಿತು, ಇಂತಹ ಮುಖವನ್ನು ಹೊತ್ತು ಹೇಗೆ ಮರಳಿ ಹೋಗಬೇಕು ಎಂದು ನೋವಿನಿಂದ ತಂದೆ ಮಾಡುತ್ತಿರುವ ಯಜ್ಞದ ಕುಂಡದಲ್ಲಿ ಹಾರಿ ತನ್ನ ಪ್ರಾಣವನ್ನು ಅರ್ಪಿಸಿದಳು. ಸತಿ ದೇವಿಯ ಆತ್ಮಹತ್ಯೆಯ ವಾರ್ತೆಯನ್ನು ನಾರದರಿಂದ ಕೇಳಿ ತಿಳಿದ ಶಿವನ ಇಡೀ ದೇಹ ಕ್ರೋಧದಿಂದ ನಡುಗತೊಡಗಿತು.. ಕೈಯಲ್ಲಿ ಡಮರವನ್ನು ಹಿಡಿದು ದೇಹದ ನರ ನಾಡಿಗಳಲ್ಲಿ ಕ್ರೋಧಭರಿತನಾದ ಶಿವನು ರುದ್ರನರ್ತನಗೈದನು. ತಲೆಯ ಮೇಲೆ ಕಟ್ಟಿದ ಆತನ ಜಟೆ ಬಿಚ್ಚಿ ಹೋಯಿತು. ಆತ ತನ್ನ ಮೂರನೆಯ ಕಣ್ಣನ್ನು ತೆರೆದಾಗ ಹೊರಟ ಕ್ರೋಧದ ಕಿಡಿಗಳಿಂದ ಪ್ರಕಾಶಮಾನವಾದ ವೀರಭದ್ರ ದೇವರ ಅವತಾರ ಮೂಡಿ ಬಂತು. (ಇದನ್ನು ಹಂಪಿಯ ಹರಿಹರ ದೇವ ರಚಿಸಿರುವ ವೀರಭದ್ರ ದೇವರ ರಗಳೆಯಲ್ಲಿ ಕಾಣಬಹುದು ). ಆದರೆ ನಮ್ಮ ಜನಪದರು ಶಿವನ ಜಟೆಯಿಂದಲೇ ವೀರಭದ್ರ ದೇವರ ಅವತಾರವಾಯಿತು ಎಂದು ಹೇಳುತ್ತಾರೆ.
ಹೀಗೆ ಉದ್ಭವವಾದ ವೀರಭದ್ರನು ಕರ್ಣಕುಂಡಲ, ಸೂರ್ಯನನ್ನೇ ನಾಚಿಸುವ ಕಣ್ಣುಗಳ ಏಕ ಜಡೆ ಲಿಂಗ, ಶಿರೋಮಾಲೆ, ಕುಡಿ ಮೀಸೆ, ಕೋರೆಹಲ್ಲು, ವೀರ ಪದಕ ಮೊದಲಾದವುಗಳಿಂದ ಕಂಗೊಳಿಸುತ್ತಿದ್ದ.
ತನ್ನ ಜನನಕ್ಕೆ ಕಾರಣವಾದ ಶಿವನಿಗೆ ವಂದಿಸಿದ ವೀರಭದ್ರ ದೇವನು ನಾನೇನು ಮಾಡಬೇಕು ಅಪ್ಪಣೆ ನೀಡು ಎಂದು ಕೇಳಿದಾಗ ಶಿವನು ಕ್ರೋಧದಿಂದ ತನ್ನ ಪತ್ನಿ ಸತಿದೇವಿಯ ಮರಣಕ್ಕೆ ಕಾರಣನಾದ ದಕ್ಷಬ್ರಹ್ಮನನ್ನು ಧ್ವಂಸ ಮಾಡು ಎಂದು ಆದೇಶಿಸಿದನು. ಶಿವನ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ ವೀರಭದ್ರನು ಕಾಳಿಕಾದೇವಿ ಮತ್ತು ತನ್ನ ಗಣದೊಂದಿಗೆ ಯಜ್ಞ ಶಾಲೆಯನ್ನು ಹೊಕ್ಕು ಎಲ್ಲರ ದಿಕ್ಕು ತಪ್ಪುವಂತೆ ಹೊಡೆದಟ್ಟಿ ಯಜ್ಞ ಕುಂಡವನ್ನು ನಾಶ ಮಾಡಿ ದಕ್ಷಬ್ರಹ್ಮನನ್ನು ಕೊಂದು ಶಿವನ ಬಳಿ ಮರಳಿದನು.
ಹೀಗೆ ಶಿವನ ಅಂಶದಿಂದ ಜನಿಸಿದ ವೀರಭದ್ರನನ್ನು ದೇಶದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಹೆಸರಿನಿಂದ ಪೂಜಿಸುತ್ತಾರೆ.
ಹತ್ತು ಹಲವಾರು ಸ್ಥಳ ಪುರಾಣಗಳನ್ನು ಹೊಂದಿರುವ ಸಿಂಗಟಾಲೂರಿನ ವೀರಭದ್ರೇಶ್ವರ ದೇವಸ್ಥಾನವು “ದುಷ್ಟ ಶಿಕ್ಷಣ ಶಿಷ್ಟ ರಕ್ಷಣಕ್ಕೆ ವೀರಭದ್ರ ಸ್ವಾಮಿ ಇಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆಯನ್ನು ಹೊಂದಿದ್ದಾರೆ. ಕಪೋತಗಿರಿಯ ಕೊನೆಯ ಭಾಗವಾದ ನಂದಿ ಬೆಟ್ಟದಲ್ಲಿ ವೀರಭದ್ರ ದೇವರ ದೇವಸ್ಥಾನವಿದ್ದು ಪಕ್ಕದಲ್ಲಿಯೇ ಮಹಾಕಾಳಿಯ ದೇವಸ್ಥಾನವು ಇದೆ. ಅಲ್ಲಿಯ ಬೆಟ್ಟದ ನಿರ್ದಿಷ್ಟ ಭಾಗದಲ್ಲಿ ಅಗೆದಾಗ ದೊರೆತ ವೀರಭದ್ರೇಶ್ವರ ಮೂರ್ತಿಯನ್ನು ಹಲವಾರು ದಶಕಗಳ ಹಿಂದೆಯೇ ಶಿಂಗಟಾಲೂರಿನ ಜನರು ಶಾಸ್ತ್ರೋಕ್ತ ವಿಧಿ ವಿಧಾನಗಳಿಂದ ಪೂಜಿಸಿ ಪ್ರತಿಷ್ಠಾಪಿಸಿದ್ದು ಹತ್ತು ಹಲವು ಪವಾಡಗಳನ್ನು ಕಣ್ಣಾರೆ ಕಂಡಿರುವ ಜನರು ಇಲ್ಲಿರುವ ವೀರಭದ್ರ ದೇವರನ್ನು ಜಾಗೃತ ದೇವರೆಂದು ಆತನ ಗುಡಿ ಇರುವ ಭಾಗವನ್ನು ಜಾಗೃತ ಕ್ಷೇತ್ರವೆಂದು ಕರೆದಿದ್ದಾರೆ.
ಶ್ರಾವಣ ಮತ್ತು ಕಾರ್ತಿಕ ಮಾಸಗಳ ಕೊನೆಯ ಸೋಮವಾರ ಬೃಹತ್ ಪಲ್ಲಕ್ಕಿ ಉತ್ಸವ ಮತ್ತು ಪ್ರತಿ ಸೋಮವಾರಗಳಂದು ಕಿರು ಪಲ್ಲಕ್ಕಿ ಉತ್ಸವಗಳು, ಪ್ರತಿ ವರ್ಷ ಯುಗಾದಿಯ ನಂತರ ನಡೆಯುವ ವೀರಭದ್ರೇಶ್ವರ ರಥೋತ್ಸವ, ತಮ್ಮ ಇಷ್ಟಾರ್ಥಗಳನ್ನು ಸಿದ್ದಿಗಾಗಿ ವೀರಭದ್ರೇಶ್ವರ ದೇವರ ಮುಂದೆ ಅಗ್ನಿಯನ್ನು ಪ್ರಜ್ವಲಿಸಿ ಕೊಂಡದ ತಯಾರಿ ಮಾಡಿಕೊಂಡು ಕೊಂಡ ಹಾಯುವರು. ಪುರವಂತರಿಂದ ವೀರಭದ್ರೇಶ್ವರನ ಕಾರ್ಣಿಕವು ಕೂಡ ನಡೆಯುತ್ತದೆ. ವೀರಭದ್ರೇಶ್ವರ ದೇವರಿಗೆ ಕಾಣಿಕೆಯನ್ನು ಸಮರ್ಪಿಸುವುದು, ಜಾತ್ರೆಯ ನಂತರ ನಡೆಯುವ ಧರ್ಮಸಭೆ, ಸಂಕ್ರಾಂತಿ ಹಬ್ಬದ ಆಚರಣೆಗಳು ಹೀಗೆ ಹತ್ತು ಹಲವು ಕಾರಣಗಳಿಂದ ಶಿಂಗಟಾಲೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನವು ಭಕ್ತರ ಮನದ ಇಚ್ಛೆಗಳನ್ನು ಪೂರೈಸುವ ಅವರ ನಂಬಿಕೆಯನ್ನು ಹೆಚ್ಚಿಸಿದ ಕ್ಷೇತ್ರವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಬೆಟ್ಟದ ಮೇಲೆ ನಿಂತು ನೋಡಿದರೆ ಸುತ್ತ ಹಸಿರು ವನ ರಾಶಿ, ಮುಂದೆ ಹರಿಯುವ ತುಂಗಭದ್ರೆಯ ನೀರು, ಕಣ್ಮನ ಸೆಳೆಯುವ ಪ್ರಕೃತಿ ಸೌಂದರ್ಯದ ಬೀಡು ನಮ್ಮ ವೀರಭದ್ರೇಶ್ವರನ ನೆಲೆವೀಡು ಶಿಂಗಟಾಲೂರು.
ಬನ್ನಿ ಎಲ್ಲರೂ ಶ್ರೀ ಶಿಂಗಟಾಲೂರು ವೀರಭದ್ರೇಶ್ವರನ ದರ್ಶನ ಮಾಡಿ ದೇವರ ಕೃಪೆಗೆ ಪಾತ್ರರಾಗೋಣ.
- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ
