ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಚಿರಂಜೀವಿ ರೋಡಕರ್ ಅವರ ಕೊಡಲಿ ಕಾವು ಕೃತಿ ವಿಮರ್ಶೆ

“ಇಲ್ಲಿರುವ ಕತೆಗಳು ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳ ವಿರುದ್ಧ ಬಾಣಗಳಂತಿವೆ”

ಕಾವು ಕೊಡಲಿಯೊಡಗೂಡಿದರೆ ಕಾಡು ಕಟಾವು, ಬರಿ ಕಾವು ಮನವ ಸೇರಿದರೆ ಮನಸ್ಸಿನ ಅಂತರಾಳದಲಿ ಅಡಗಿ ಕುಳಿತಿರುವ ವಾಂಛೆಗಳ ಬಟಾಬಯಲು. ಲೇಖಕ ಚಿರಂಜೀವಿ ಇಲ್ಲಿ ‘ಕಾವು’ ಎಂಬ ಪದದ ಅರ್ಥ ಗ್ರಹಿಕೆಯನ್ನು ಓದುಗನಿಗೆ ಬಿಟ್ಟು, ತನ್ನ ಮನದಾಳದ ಕಾವನ್ನು ಉಣಬಡಿಸುತ್ತಾ ಸಾಗುತ್ತಾರೆ. ಒಟ್ಟು ಏಳು ಕತೆಗಳು ಈ ಕತಾ ಸಂಕಲನದಲ್ಲಿದ್ದು ,ಸಮಾಜದ ಅಂತರಾಳದಲ್ಲಿ ಅಡಗಿರುವ ಅನಿಷ್ಟ ಪದ್ಧತಿಗಳ ವಿರುದ್ಧ ದನಿ ಎತ್ತಬಲ್ಲ ಬತ್ತಳಿಕೆಯ ಬಾಣಗಳಂತೆ ಇವು ಎಂದರೆ ತಪ್ಪಾಗಲಾರದು; ಕುಸುಮ ಎಂಬ ಕತೆಯಿಂದ ಪ್ರಾರಂಭವಾಗುವ ಕತಾ ಸಂಕಲನದ ಓದು, ಸಂಜೆ ಸಿಂಧೂರದವರೆಗೂ ಸರಾಗವಾಗಿ ಓದಿಸಿಕೊಂಡು ಹೋಗಬಲ್ಲ, ಚುಂಬಕ ಬರಹ ಚಿರಂಜೀವಿಯವರಗೆ ಸಿದ್ಧಿಸಿದೆ. ಸಾಹಿತ್ಯದ ಸಹವಾಸವೇ ಬೇಡ ಎಂದು ಸಾಪ್ಟವೇರ್ ಜಗತ್ತಿಗೆ ಒಲಿಯುತ್ತಿರುವ ಯುವ ಜನಾಂಗದ ಮಧ್ಯ, ಅದರಲ್ಲೂ ಒಂದು ಸಣ್ಣ ಹಳ್ಳಿಯಲ್ಲಿದ್ದುಕೊಂಡು ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಶಿಕ್ಷಕ ಚಿರಂಜೀವಿಯವರ ಅಕ್ಷರ ಸೇವೆಯನ್ನು ಮೆಚ್ಚಲೇಬೇಕು.

ಕುಸುಮಳ ಅನಿರೀಕ್ಷಿತ ಸಾವು ದೇವದಾಸಿ ಪದ್ಧತಿಯ ಘೋರಮುಖ ದರ್ಶನ ಮಾಡಿಸುವುದರೊಂದಿಗೆ ಇಂತಹ ತಂತ್ರಜ್ಞಾನ ಯುಗದಲ್ಲೂ ಇಂತಹ ಅನಿಷ್ಟ ರೂಢಿಗಳು ಅಲ್ಲಲ್ಲಿ ಜರುಗುತ್ತಿರುವುದಕ್ಕೆ ನಿಶಾನೆಯಾಗಿ ನಿಲ್ಲುತ್ತವೆ. ‘ರೋಜ ಕಹಾನಿ ‘ ಹೆಸರೇ ಹೇಳುವಂತೆ ವಿದ್ಯಾರ್ಥಿ ಜೀವನದ ಒಂದು ಲವ್ ಕಹಾನಿ.
ಅಪ್ಪ ಬರ್ತಾನಾ? ಬರದೆ ಇರುವಂತಹ ತಪ್ಪನು ಅಪ್ಪ ಮಾಡಿದ್ದಾದರೂ ಏನು? ಎಂಬ ಪ್ರಶ್ನೆ ಕತೆಯುದ್ದಕ್ಕೂ ಓದುಗನನ್ನು ಕಾಡುತ್ತದೆ. ಸಾರಾಯಿ ಕುಡಿದು; ಸಾರಾಯಿ ಅಂಗಡಿಯ ಮುಂದೆ ಜನಗಳ ಜೊತೆ ಜಗಳವಾಡಿ ; ಕಾನೂನಿನ ಅರಿವು ಇಲ್ಲದೆ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಓಡಿಹೋಗುವ ಬೇಜವಾಬ್ದಾರಿ ತಂದೆಯ ಚಿತ್ರಣ ಇಲ್ಲಿ ಮೂಡಿಬಂದಿದೆ.

‘ಹುಲಿಹೈದ’ ಎಂಬ ಕತೆ, “ನಮ್ಮೊಳಗೊಬ್ಬ ನಾಜೂಕಯ್ಯ” ಎಂಬಂತೆ, ಬಡಾಯಿ ತೋರುವ ಬಾಜಿಗಾರರ ಸಂಖ್ಯೆಯೇನು ನಮ್ಮಲ್ಲಿ ಕಡಿಮೆಯಿಲ್ಲ ನಮ್ಮ ಸಮಾಜದಲ್ಲಿ. ಜನಗಳ ಮಧ್ಯ ವೀರಾಧಿವೀರ, ಕಾರ್ಯರೂಪಕ್ಕೆ ಬರುವಾಗ ಉತ್ತರಕುಮಾರ. ಇಂತಹ ಬಡಾಯಿಗಾರರ ಬಂಡವಾಳ ಬಯಲು ಮಾಡುವ ಕತೆ ಇದು. ಅದರಲ್ಲೂ ಮಂಡ್ಯ ಸುತ್ತಲಿನ ಭಾಷೆಯನ್ನು ಪರಿಚಯಿಸಲು ಲೇಖಕರು ಇಲ್ಲಿ ಪ್ರಯತ್ನ ಪಟ್ಟಿದ್ದಾರೆ. ‘ಕೊಡಲಿಕಾವು’ ಕತೆ ಮೇಲ್ವರ್ಗ ಮತ್ತು ಕೆಳವರ್ಗದ ತಾರತಮ್ಯದ ರೂಪವಾಗಿ ನಿಂತರೆ; ‘ಕೋಟೆ ಹೇಳಿದ ಕತೆ’ ಯಲ್ಲಿ ಲೇಖಕರು ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಕತೆಯನ್ನು ತಮ್ಮ ಕಲ್ಪನಾ ಮೂಸೆಯಲ್ಲಿ ಹೊಸತನದ ಸ್ಪರ್ಶ ನೀಡುತ್ತಾ ಸಾಗುತ್ತಾರೆ.
ಈ ಇಡೀ ಕಥಾ ಸಂಕಲನದಲ್ಲಿ ಕಾಡುವ ಕತೆ ಎಂದರೆ ‘ಸಂಜೆ ಸಿಂಧೂರ’ ಒಂದು ಬೃಹತ್ ಕಾದಂಬರಿಗೆ ಕಥಾವಸ್ತುವಾಗಬಲ್ಲ ತಿರುಳನ್ನು ಕೇವಲ ಒಂದು ನೀಳ್ಗತೆಯ ಮಟ್ಟಕ್ಕೆ ಇಳಿಸಿ ಸಂಪೂರ್ಣ ವಿಷಯ ಹಂದರವನ್ನು ಕಟ್ಟಿಕೊಡುವ ಕೆಲಸ ಇಲ್ಲಿ ತಕ್ಕ ಮಟ್ಟಿಗೆ ನೆರವೇರಿದೆ. ಮಲ್ಲಾಪುರ ಗೌಡನ ಸೊಸೆ ಗಂಗಮ್ಮ ಗೌಡಶಾಣಿಯ ಕತೆ ನಿಜಕ್ಕೂ, ಅಂದಿನ ಮತ್ತು ಇಂದಿನ ದಿನಮಾನದಲ್ಲಿ, ತಾನು ಮಾಡದ ತಪ್ಪಿಗೆ ಹೆಣ್ಣು ಅನುಭವಿಸುತ್ತಿರುವ ಮೂಕಯಾತನೆಯ ಪ್ರತಿಬಿಂಬದಂತಿದೆ. ತನ್ನ ವಾಂಛೆಯನ್ನು ತೀರಿಸಿಕೊಳ್ಳಲು ಯಾವ ಹೆಣ್ಣಾದರೇನೆಂದು ಹೆಂಡತಿಗೆ ಎರಡು ಮಕ್ಕಳನ್ನು ಭಿಕ್ಷೆ ನೀಡಿ ಹಾದರಕ್ಕಿಳಿಯುವ ಗಂಡ ದೇವನಗೌಡ ಅವಳತ್ತ ಮೂಸಿಯೂ ನೋಡದೆ, ಅವಳ ಆಸೆ-ಆಕಾಂಕ್ಷೆಯನ್ನು ಕೇಳದೆ, ಗುಂಡು-ತುಂಡು, ಮೋಜು –ಜೂಜು ,ಹೆಣ್ಣು –ಹೊನ್ನು ಎಂದು ಗಂಗಮ್ಮನನ್ನು ಎಳೆಯ ವಯಸ್ಸಿನಲ್ಲಿ ಕೈ ಬಿಟ್ಟು ಮಸಣ ಸೇರುತ್ತಾನೆ. ಗಂಗಮ್ಮ ಗಟ್ಟಿಗಿತ್ತಿ ತನ್ನ ಎರಡು ಗಂಡು ಮಕ್ಕಳ ಮುಖ ನೋಡಿಕೊಂಡು,ಮನೆಯ ಜವಾಬ್ದಾರಿ ವಹಿಸಿ, ತಾನೇ ತನ್ನ ಮಾವ ಬಸನಗೌಡನಿಗೆ ಹೆಗಲಿಗೆ ಹೇಗಲಾಗಿ ನಿಂತು ಏನು ನಡೆದೆಯಿಲ್ಲ; ಎಂಬಂತೆ ಅಕ್ಷರಶಃ ಸನ್ಯಾಸಿಯ ಜೀವನ ಸಾಗಿಸುತ್ತಾಳೆ.ಮನದ ಬಯಕೆ , ನೈಸರ್ಗಿಕ ಆಸೆ ಅದುಮಿದಷ್ಟು ಎತ್ತರಕ್ಕೆ ಜಿಗಿಯುವ ಶಕ್ತಿ ಸಂಪಾದಿಸುತ್ತವೆ ಎಂಬುದಕ್ಕೆ ಗಂಗಮ್ಮಳು ಇಲ್ಲಿ ಸೋತು ನಿಲ್ಲುತಾಳೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕ್ಷೌರಕ್ಕೆ ಬಂದ ಶಾಣಪ್ಪನ ಮುಗ್ದತೆ, ಅಂಗಸೌಷ್ಠ್ಯಕ್ಕೆ ಮಾರುಹೋದ ಗೌಡಶಾಣಿ ಅವನ ಭೀಮ ಬಲದ ಮುಂದೆ ಕರಗಿ ನೀರಾಗಿ ಊರ ಬಿಟ್ಟು ನಗರ ಸೇರಿ ಕೊನೆಗೆ ಉದಯಕಾಲಕ್ಕೆ ಶಾಣಪ್ಪನಿಂದ ತಾಳಿ ಕಟ್ಟಿಸಿಕೊಂಡು ಸೂರ್ಯಾಸ್ತದ ಹೊತ್ತಿಗೆ ವಿಧಿಯ ಕರಾಳದೃಷ್ಟಿಗೆ ಬಲಿಯಾಗಿ; ಮತ್ತೊಮ್ಮೆ ತನ್ನ ಸಿಂಧೂರ ಕಳೆದುಕೊಂಡು ಅನಾಥ ಪ್ರಜ್ಞೆಯಲ್ಲಿ ಬೆಂದು ಹೋಗುವ ಅವಳ ನೋವು ಯಾರಿಗೂ ಬೇಡ. ಇಲ್ಲಿ ಮೇಲ್ನೋಟಕ್ಕೆ ಗೌಡಶಾಣಿಯ ಕಾಮೋತ್ಕಟತೆಯ ಕಟ್ಟೆಯೊಡೆದು ಕಾಮದ ಗಂಧಗಾಳಿಯನ್ನು ಅರಿಯದ, ಮದುವೆಯಾಗದೆ ಹಾಗೆ ಜೀವನ ತಳ್ಳುತ್ತಿದ್ದ ಶಾಣಪ್ಪನ ಆಕರ್ಷಣೆಗೆ ಒಳಗಾದಂತೆ ಕಂಡು ಬಂದರು; ವಾಸ್ತವ ಬೇರೆಯದೆ ಇದೆ ಹಿಂದೆ ಹತ್ತಿರದ ಸಂಬಂಧಗಳೆಂದು, ಆಸ್ತಿ ಕೈ ಬಿಟ್ಟು ಹೊಗುತ್ತದೆ ಎಂದು ಹತ್ತು ಹಲವಾರು ಆಸೆಗೆ ಬಲಿಯಾಗಿ ಕೇವಲ 12-13ನೇ ವಯಸ್ಸಿಗೆ ಹೆಣ್ಣು ಮಕ್ಕಳನ್ನು ಕುಡುಕ,ಚಟಗಾರ, ಬುದ್ಧಿಹೀನ, ಬೇಜವಾಬ್ದಾರಿ ಮನುಷ್ಯ, ವಿಷಯ ಲಂಪಟನಾಗಿದ್ದರೂ ಅಂತವನಿಗೆ ಮುಗ್ದ ಬಾಲೆಯರನ್ನು ಮದುವೆ ಮಾಡಿಕೊಟ್ಟ ಕೊಟ್ಯಾಂತರ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಎಷ್ಟೊ ವಿವಾಹ ಸಂಬಂಧಗಳಲ್ಲಿ ಹೆಣ್ಣು ಗಂಡಿನ ವಯಸ್ಸು ಅಜಗಜಾಂತರವಿದ್ದರು ಇದು ಅವರ ಲೆಕ್ಕಕ್ಕೆ ಬರುತ್ತಲೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಈ ತರಹದ ಘಟನೆಗಳು ಇತಿಹಾಸದ ಕಾಲಗರ್ಭ ಸೇರಿ ಮರೆಯಾಗಿ ಹೋಗಿದ್ದು ಸುಳ್ಳಲ್ಲ. ಅದರ ಪ್ರತಿರೂಪವೆ ಈ ಸಂಜೆ ಸಿಂಧೂರ ಆದರೆ ಇಲ್ಲಿ ತಾಯಿಯ ಬೆಂಬಲಕ್ಕೆ ನಿಲ್ಲುವ ಬೈರೇಗೌಡನ ನಿಲುವು ಮೇಲ್ನೋಟಕ್ಕೆ ತಾಯಿಯ ಬಗೆಗಿನ ಅಂತಃಕರಣದ ಮಾತು ಎಂದೇನಿಸಿದರು; ಒಬ್ಬ ಸಮಾಜ ಚಿಕಿತ್ಸಕನ ಅವತಾರದಂತೆ ಬೈರೇಗೌಡ ಭಾಸವಾಗುತ್ತಾನೆ. ಕೇವಲ ಕಟ್ಟಲೆಗಳು ಹೆಣ್ಣಿಗೆ ಮಾತ್ರವೇ? ಎಂದು ಪ್ರಶ್ನಿಸುವ ಅವನ ಎದೆಗಾರಿಕೆ ಸಮಾಜದ ಮೌಢ್ಯಗಳನ್ನು ಕೇವಲ ಹೆಣ್ಣಿನ ತಲೆಗೆ ಕಟ್ಟುವ ಈ ತಾರತಮ್ಯವ ಎತ್ತಿ ತೋರಿಸುವ ನಿಟ್ಟಿನಲ್ಲಿ ನಿಲ್ಲುತ್ತವೆ. ಒಬ್ಬ ಮನಸುಳ್ಳ ಮನುಷ್ಯ ಹೇಗಿರಬೇಕೆಂಬುದಕ್ಕೆ ಇಲ್ಲಿ ಭೈರೇಗೌಡ ಸಾಕ್ಷಿಯಾಗಿ ನಿಲ್ಲುತ್ತಾನೆ. ಕೊನೆಗೆ ಎಲ್ಲದರಿಂದ, ಎಲ್ಲರಿಂದ, ವಿಮುಕ್ತರಾಗಿ ಹೊಸ ದಾರಿಯರಸಿ ನಡೆಯುವ ಈ ನಿದರ್ಶನ ಉತ್ತಮವಾಗಿ ಮೂಡಿ ಬಂದಿದೆ. ನಿಜಕ್ಕೂ ಇದೊಂದು ಬೃಹತ್ ಕಾದಂಬರಿಯಾಗಬಲ್ಲ ಕತೆ.

ವಿಮರ್ಶೆ :
ಮೂಕಪ್ಪ ಕಲ್ಲಪ್ಪ ತೇಲಿ ಸಹೃದಯಿ ಶಿಕ್ಷಕರು – ಓದುಗರು.
 ಹೊಸೂರ
ಪ್ರತಿಗಳಿಗೆ ಸಂಪರ್ಕಿಸಿ : 9845484624
ಬೆಲೆ :- 180/-
ಅಂಚೆ ವೆಚ್ಚ ಉಚಿತ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ