ಬೆಂಗಳೂರು (ಮೇ 27): ಬಿಜೆಪಿಯಿಂದ (BJP) ಗೆದ್ದು ವಿಧಾನಸಭೆ ಪ್ರವೇಶಿಸಿರುವ ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಹಾಗೂ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಆದ್ರೆ, ಅಂದಿನಿಂದಲೂ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಸಾಲದಕ್ಕೆ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಪರ ಬಹಿರಂಗ ಬ್ಯಾಟಿಂಗ್ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಅಂತಿಮವಾಗಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಇಬ್ಬರು ಶಾಸಕರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿ ಕೇಂದ್ರ ಶಿಸ್ತು ಸಮಿತಿ ಇಂದು (ಮೇ 27) ಆದೇಶ ಹೊರಡಿಸಿದೆ.
ಉಚ್ಚಾಟನೆಗೆ ಕಾರಣ ಏನು?
ಪದೇ ಪದೇ ಡಿಕೆಶಿ ನಿವಾಸದ ಕದ ತಟ್ಟುತ್ತಿದ್ದ ಇಬ್ಬರು ಶಾಸಕರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸಾರ್ವಜನಿಕ ಸಭೆಗಳಲ್ಲಿ ಹೊಗಳುತ್ತಿದ್ದರು. ಗ್ಯಾರಂಟಿ, ಸರ್ಕಾರದ ಯೋಜನೆಗಳಿಗೆ ಶಹಬ್ಬಾಸ್‌ಗಿರಿ ನೀಡುತ್ತಿದ್ದರು.
ಕಾಂಗ್ರೆಸ್ ಸರ್ಕಾರದ ವಿರುದ್ಧದ ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸದೇ ಡೋಂಟ್ ಕೇರ್ ಎನ್ನುತ್ತಿದ್ದರು. ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ, ಸಂಘಟನಾ ಸಭೆಗಳಿಂದ ದೂರ ಉಳಿದಿದ್ದರು. ಬಿಜೆಪಿಯೊಳಗಿನ ಭಿನ್ನಮತದ ಬಗ್ಗೆ ಬಹಿರಂಗ ವ್ಯಂಗ್ಯ, ಒಂದು ಗುಂಪಿನ ಬಗ್ಗೆ ನಿರಂತರ ವಾಗ್ದಾಳಿ ನಡೆಸುತ್ತಿದ್ದರು.
ಹೀಗೆ ಇಬ್ಬರೂ ನಾಯಕರು ಬಹಿರಂಗವಾಗಿ ಕಾಂಗ್ರೆಸ್ ಸಭೆಯಲ್ಲಿ ಭಾಗಿಯಾಗುತ್ತಿದ್ದರು. ಅಷ್ಟೇ ಅಲ್ಲದೇ ಪಕ್ಷದ ನಾಯಕರ ವಿರುದ್ಧವೇ ಹೇಳಿಕೆ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಇಬ್ಬರ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಂಡಿದೆ.
ಬಿಜೆಪಿ ಹೈಕಮಾಂಡ್ನ ಲೆಕ್ಕಾಚಾರವೇನು?
ರಾಜ್ಯ ಬಿಜೆಪಿ ವಿಷಯ ಅಂದ್ರೆ ಹೈಕಮಾಂಡ್ ಮೂಗು ಮುರಿಯುತ್ತಿತ್ತು. ರಾಜ್ಯ ನಾಯಕರು ದೂರು ನೀಡಲು ಹೋದರೂ ಡೋಂಡ್ ಕೇರ್ ಎನ್ನುತ್ತಿದ್ದ ಹೈಕಮಾಂಡ್ ಇದೀಗ ಏಕಾಏಕಿ ಎಚ್ಚೆತ್ತುಕೊಂಡಿದೆ. ಯಾವುದೇ ಸಂಘಟನೆ ಮಾಡುತ್ತಿಲ್ಲ. ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಹೈಕಮಾಂಡ್, ರಾಜ್ಯ ಬಿಜೆಪಿ ಮೇಲೆ ಗರಂ ಆಗಿದೆ. ಪ್ರಮುಖವಾಗಿ ಬಿಜೆಪಿ ನಂಬಿರುವುದೇ ಬೂತ್ ಮಟ್ಟದ ಸಂಘಟನೆ. ಈಗ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಮುಂದೆ ನಡೆಯಲಿದೆ, ಆದ್ರೆ, ರಾಜ್ಯ ಬಿಜೆಪಿಯಲ್ಲಿ ತಳಮಟ್ಟದ ಸಂಘಟನೆ ಅಷ್ಟಾಗಿ ಬಲಿಷ್ಠವಾಗಿಲ್ಲ. ಹೀಗಾಗಿ ಎಲ್ಲಾ ಗುಂಪುಗಾರಿಕೆ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮೇನ್ ಲೀಡರ್ ಗಳನ್ನೇ ಪಕ್ಷದಿಂದ ಹೊರಹಾಕಿದೆ. ಇದರೊಂದಿಗೆ ಹೈಕಮಾಂಡ್ ಇತರರಿಗೂ ಸಂದೇಶ ರವಾನಿಸಿದೆ.
ವರದಿ : ಜಿಲಾನಸಾಬ್ ಬಡಿಗೇರ್
