” ಅಧಿಕಾರಿ ಎಂಬುವ ಭೂತ
ಅಂಜಿದವರನು ಮತ್ತಷ್ಟು ಅಂಜಿಸುತ
ಅಂಜದವನ ಮನೆಯ ಗಂಜಿ ತಿನ್ನುತ
ತಿರುಗುವ ನಂಜಗುಳಿ ನೋಡೆಂದ “
– ನೀಲಕಂಠಾ
” ಅಂದದಾ ಹೆಣ್ಣಿಹಳೆಂದು ಹಲ್ಲು ಕಿರಿಯಬೇಡ
ಕೈ , ಕಣ್ಣಸನ್ನೆ ಮಾಡಿ ಕರೆಯಬೇಡ
ಎಡಗಾಲ ಮೆಟ್ಟನವಳು ಹಿರಿದಾಗ ಓಡಬೇಡ
ಮಾನವೀಯತೆ ಮರೆಯಬೇಡವೆಂದ “
– ನೀಲಕಂಠಾ

ಬಾಗಲಕೋಟೆ ಜಿಲ್ಲೆಯ ಇಲಕಲ್ಲ ಪಟ್ಟಣದ ಶ್ರೀಯುತ ನೀಲಕಂಠ ಮ. ಕಾಳಗಿಯವರು ತಮ್ಮ ಸ್ವರಚಿತ ೩೦೦ ಆಧುನಿಕ ವಚನಗಳ ಮೂಲಕ ಸಮಾಜದಲ್ಲಿ ಪ್ರಸ್ತುತ ನಡೆಯುತ್ತಿರುವ ಅನ್ಯಾಯ, ಅನಾಚಾರ, ಭ್ರಷ್ಟಾಚಾರ, ಲಂಚಗುಳಿತನ ಸೇರಿದಂತೆ ಇನ್ನೂ ಹತ್ತು ಹಲವು ವಿಷಯಗಳ ಬಗ್ಗೆ ವಚನಗಳನ್ನು ರಚಿಸಿ “ನೀಲಕಂಠನ ವಚನಗಳು” ಎಂಬ ಶೀರ್ಷಿಕೆಯಡಿ ಪುಸ್ತಕ ಪ್ರಕಟಿಸುವ ಮೂಲಕ ಇಂದಿನ ಸಮಾಜಕ್ಕೆ ಕೆಟ್ಟ ವಿಚಾರಗಳಿಂದಾಗುವ ಪರಿಣಾಮ ಹಾಗೂ ಉತ್ತಮ ವಿಚಾರಗಳಿಂದ ಆಗುವ ಲಾಭವನ್ನು ತಮ್ಮದೇ ಆದ ಶೈಲಿಯಲ್ಲಿ ನೇರ, ನಿಷ್ಠುರವಾಗಿ ಎಚ್ಚರಿಕೆಯ ಸಂದೇಶಗಳ ಜೊತೆ ಜೊತೆಗೆ ಜೀವನಪಾಠಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ.

ಮನೆಯ ಹೆಸರೇ ” ಕನ್ನಡ ನಿಲಯ “
೩೭ ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸಾರ್ಥಕ ಸೇವೆ ಸಲ್ಲಿಸಿದ ಇವರು ಮೊದಲಿನಿಂದಲೂ ಇಲಕಲ್ಲ ಪಟ್ಟಣದ ಜೋಶಿಗಲ್ಲಿಯಲ್ಲಿರುವ ಇವರ ಮನೆಗೆ ” ಕನ್ನಡ ನಿಲಯ” ಎಂದು ನಾಮಕರಣ ಮಾಡಿಕೊಂಡು ಅದೇ ಕನ್ನಡ ನಿಲಯದ ಆವರಣದಲ್ಲಿ 21 ವರ್ಷಗಳ ಹಿಂದೆ ಶೃಂಗೇರಿ ಜಗದ್ಗುರುಗಳಿಂದ ಶಾರದಾ ಅಮ್ಮನವರ ವಿಗ್ರಹ ಪಡೆದು ಶಾರದಾ ಮಂದಿರವನ್ನು ಸ್ಥಾಪಿಸಿದ್ದಾರೆ ಇವರು ಇದುವರೆಗೆ ಎರಡು ವಿಶ್ವ ಕನ್ನಡ ಸಮ್ಮೇಳನ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸುವ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳನಗಳು ಪ್ರತಿಯೊಬ್ಬ ಕನ್ನಡಿಗರ ಹೆಮ್ಮೆಯ ಹಬ್ಬ ಎಲ್ಲರೂ ಪಾಲ್ಗೊಳ್ಳಬೇಕು ಎನ್ನುವ ಸಂದೇಶ ನೀಡುತ್ತಾರೆ.

ವಿಶ್ವ ಪತ್ರಿಕಾ ಸಂಗ್ರಹಕಾರ ಶ್ರೀ ಕೆ.ಎನ್. ಕಲ್ಯಾಣ್ ಕುಮಾರ್ ಅವರೊಂದಿಗೆ…
ಉಚಿತವಾಗಿ ನಡೆಯುವ ವಧು ವರರ ಅನ್ವೇಷಣೆ
ಯಾರಿಂದಲೂ ಯಾವುದೇ ರೀತಿಯ ಸಂಭಾವನೆಯನ್ನೂ ಪಡೆಯದೆ ತಮ್ಮದೇ ಮದುವೆ ಆಗುವದಕ್ಕಿಂತಲೂ ಮುಂಚೆಯಿಂದ ಇದುವರೆಗೂ ಸರ್ವಧರ್ಮದ ನೂರಾರು ವಧು-ವರ ಅನ್ವೇಷಣೆ ಮಾಡಿ ಕಲ್ಯಾಣ ಕಾರ್ಯಕ್ಕೆ ಕಾರಣವಾಗಿರುವ ಇವರು ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜಕ್ಕೆ ಇದೊಂದು ನನ್ನ ಚಿಕ್ಕ ಸೇವೆಯಾಗಿಯೇ ಇರಲಿ ಎನ್ನುತ್ತಾರೆ.
ರೈಲಿಗೋ, ನೇಣಿಗೋ ಶರಣಾಗೋ ಮುನ್ನ ಒಮ್ಮೆ ಬನ್ನಿ…

ಇತ್ತೀಚೆಗಂತೂ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದಿದೆ , ಗಂಡ ಹೆಂಡತಿ ಜಗಳ, ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಪೋಸ್ಟ್ ಗೆ ಲೈಕ್ ,ಕಾಮೆಂಟ್, ಶೇರ್ ಕಡಿಮೆ ಆಗಿದೆ ಎಂದೋ ಈ ರೀತಿಯ ಚಿಕ್ಕ ಪುಟ್ಟ ವಿಷಯಗಳಿಗೆ ತಲೆ ಕೆಡಿಸಿಕೊಂಡು ದುಶ್ಚಟಕ್ಕೆ ಬಲಿಯಾಗುವುದೋ ಅಥವಾ ರೈಲಿಗೋ, ನೇಣಿಗೋ ಶರಣಾಗೋ ಯೋಚನೆ ಮಾಡುವವರ ಸಂಖ್ಯೆ ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿ ನೀಲಕಂಠ ಕಾಳಗಿಯವರು ತಮ್ಮ ಮಾನಸಿಕ ದುಗುಡವನ್ನು ಹೊತ್ತು ಬಂದವರ ಮನಸನ್ನು ಹಗುರಾಗಿಸಿ ಬದುಕಿ ಬಾಳುವವರಿಗೆ ತಮ್ಮ ಅನುಭವ ಜನ್ಯ ಸಲಹೆ (ಕೌನ್ಸಿಲಿಂಗ್) ರೀತಿ ನೀತಿಯನ್ನು ಹೇಳುವ ಮೂಲಕ ಅದೆಷ್ಟೋ ಜನರ ಪಾಲಿಗೆ ಆಪ್ತರಕ್ಷಕ, ಆಪ್ತಮಿತ್ರ ಆಗಿದ್ದಾರೆ ನಾಡಿನ ಹಾಗೂ ದೇಶದ ಮೂಲೆ ಮೂಲೆಯಲ್ಲಿ ಇವರ ಸ್ನೇಹಲೋಕ ಇದೆ ಎಂದರೆ ಅತಿಶಯೋಕ್ತಿ ಎನಿಸದು.
ಅಂದ ಹಾಗೆ ಈ ಸೇವೆಯೂ ಕೂಡಾ ಉಚಿತ.
ಇಲಕಲ್ಲ ನಲ್ಲಿ ಶೃಂಗೇರಿ ಶಾರದಾ ಮಂದಿರ
ಪೂಜ್ಯ ಶ್ರೀ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಶೃಂಗೇರಿ ಇವರಿಂದ 2005ರಲ್ಲಿ ಶಾರದಾ ದೇವಿ ವಿಗ್ರಹ ಪಡೆದು ತಮ್ಮ ಸ್ವಂತ ಮನೆಯ ಆವರಣದಲ್ಲಿ ಮಂದಿರ ನಿರ್ಮಾಣ ಮಾಡಿ ವರ್ಷ ಪೂರ್ತಿ ನಿರಂತರವಾಗಿ ಪೂಜಾ ಕೈಂಕರ್ಯಗಳು, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಈವರೆಗೆ ಸಾವಿರಾರು ಮಕ್ಕಳಿಗೆ ಅಕ್ಷರಾಭ್ಯಾಸ ಪೂಜೆಯನ್ನು ಸಹ ನೆರವೇರಿಸಲಾಗಿದೆ.
ಸಾಹಿತ್ಯ ಕೃಷಿ
ಅಪರಾಧಿ ಯಾರು?, ಕುರುಬರ ಮುತ್ತ, ಮುಡಿ ಜಾರಿದ ಮಲ್ಲಿಗೆ, ಅಣ್ಣನ ಮಗಳು ಇತ್ಯಾದಿ ನಾಟಕಗಳ ರಚನೆಯೊಂದಿಗೆ ಕಾರ್ಮಿಕರ ರಕ್ತಗಾಲುವೆ, ಜಕ್ಕವಕ್ಕಿ ಎಂಬ ಪತ್ರಿಕಾ ಧಾರಾವಾಹಿಗಳು, ಮನದ ಹೂಗಳು (ಕವನ ಸಂಕಲನ), ಗೀತ ಚಿಗಿತ (ಸಂಪಾದಿತ ಕವನ ಸಂಕಲನ), ನೀಲಕಂಠನ ವಚನಗಳು (ಸ್ವರಚಿತ ೩೦೦ ಆಧುನಿಕ ವಚನಗಳ ಪುಸ್ತಕ), ಶಿಶುಗೀತೆಗಳು , ಮಹತ್ವದ ಘಟನೆಗಳು ಮತ್ತು ಇಸ್ವಿಗಳು ಎಂಬ ಪುಸ್ತಕವನ್ನು ಸಂಗ್ರಹಿಸಿ ಪ್ರಕಟಿಸಿ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ.
“ಹಂಪಿಯ ನುಡಿ” ಹಾಗೂ “ಸಿಂಧೂರ ಕೇಸರಿ” ಪತ್ರಿಕೆಗಳಲ್ಲಿ ಅಂಕಣ ಬರಹಗಳನ್ನು ಬರೆದಿದ್ದಾರೆ.

ಸಜ್ಜನರ ಸಂಗ ಹೆಜ್ಜೇನು ಸವಿದಂತೆ…
ಅಪಾರ ಜೀವನಪ್ರೀತಿ ಮತ್ತು ಕ್ರಿಯಾಶೀಲತೆಗೆ ಇನ್ನೊಂದು ಹೆಸರೇ ನೀಲಕಂಠ ಮ. ಕಾಳಗಿ ಗುರುಗಳು. ಅವರೊಂದಿಗಿನ 10 ವರ್ಷಗಳ ಒಡನಾಟದಲ್ಲಿ ಸಾಕಷ್ಟು ಕಲಿತಿದ್ದೇನೆ. ಅವರ ಸಾಹಿತ್ಯಿಕ ಒಲವು ಮತ್ತು ಧಾರ್ಮಿಕ ಚಿಂತನೆಗಳು ಅನುಕರಣೀಯವಾಗಿವೆ. ಬದುಕಿನಲ್ಲಿ ಏನೇ ಕಷ್ಟಗಳು ಎದುರಾದರೂ ಎದೆಗುಂದದೆ ಧೈರ್ಯದಿಂದ ಎದುರಿಸಿ ಗೆದ್ದಿದ್ದಾರೆ. ಅವರ ಕನ್ನಡ ಪ್ರೇಮ ಪ್ರಶ್ನಾತೀತವಾದುದು. ತಮ್ಮ ವಿಶ್ರಾಂತ ಜೀವನವನ್ನು ಅವರು ಪ್ರತಿಕ್ಷಣವೂ ಏನಾದರೊಂದು ಚಟುವಟಿಕೆಯೊಂದಿಗೆ ಮುನ್ನಡೆಸುತ್ತಿದ್ದಾರೆ. ಅವರ ಚಲನಶೀಲ ಗುಣ ನಮಗೆ ಮಾದರಿ. ಅವರಿಗೆ ದೇವರು ಉತ್ತಮ ಆರೋಗ್ಯ ದೀರ್ಘಾಯುಷ್ಯ ನೀಡಿ ಕಾಪಾಡಲಿ. ಅವರ ಸಾಮಿಪ್ಯ ಮತ್ತು ಮಾರ್ಗದರ್ಶನ ನಮಗೆ ಅನುಗಾಲ ಸಿಗುತ್ತಿರಲಿ ಎಂದು ಆಶಿಸುತ್ತೇನೆ.
- ಗೋಪಿಕೃಷ್ಣ ಎಂ. ಕಠಾರೆ
ಗಾಯಕ/ನಿರೂಪಕ, ಸ್ವರಸಿಂಧು ಮೆಲೊಡೀಸ್, ಇಳಕಲ್.

ಸಾಧಕರ ಮುಡಿಗೇರಿದ ಪ್ರಶಸ್ತಿ, ಸನ್ಮಾನಗಳು
ಹೀಗೆ ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಹಾಗೂ ನಿವೃತ್ತಿಯ ನಂತರವೂ ಸಾಹಿತ್ಯ ರಚನೆ, ಪುಸ್ತಕ ಪ್ರಕಟಣೆಯೊಂದಿಗೆ ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಾ ಹವ್ಯಾಸಿ ಪತ್ರಕರ್ತರಾಗಿ ವಿವಿಧ ಕ್ಷೇತ್ರಗಳಲ್ಲಿ ಕನ್ನಡ ನಾಡು ನುಡಿ ಸೇವೆಯನ್ನು ಸುಮಾರು ೪೦ ವರ್ಷಗಳಿಂದ ಮಾಡಿಕೊಂಡು ಬರುತ್ತಿರುವ ಶ್ರೀ ನೀಲಕಂಠ ಮ. ಕಾಳಗಿ ಇವರಿಗೆ ಕರ್ನಾಟಕ ಸುವರ್ಣ ಸಂಭ್ರಮ-೫೦,
ಕರ್ನಾಟಕ ಸರ್ಕಾರ-೨೦೨೪ ರ ಸುವರ್ಣ ಮಹೋತ್ಸವ ಪ್ರಶಸ್ತಿ,
ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಮೈಸೂರು ೨೦೧೦, ಬಾಗಲಕೋಟೆ ಜಿಲ್ಲಾ ರಾಜ್ಯೋತ್ಸವ-೨೦೧೨, ಬಾಗಲಕೋಟೆ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ೨೦೧೦, ಸಪ್ತಸಿರಿ ಸಾಹಿತ್ಯ ರತ್ನ ಪ್ರಶಸ್ತಿ ಹೊಸಪೇಟೆ ೨೦೨೧ ಸೇರಿದಂತೆ ಇನ್ನೂ ಹತ್ತು ಹಲವು ಸಂಘ ಸಂಸ್ಥೆಗಳು, ಮಠಾಧೀಶರು ,ಜನನಾಯಕರು ಪ್ರಶಸ್ತಿ, ಸತ್ಕಾರ, ಸನ್ಮಾನ ನೀಡಿ ಗೌರವಿಸಿದ್ದಾರೆ.

ರಜೆ ಯಾವಾಗ ಸಿಗುವುದೋ ,ನಿವೃತ್ತಿ ಯಾವಾಗ ಆಗುವುದೋ ನಿವೃತ್ತಿ ಜೀವನವೆಂದರೆ ವಿಶ್ರಾಂತಿಗಾಗಿಯೇ ಇರುವುದು ಅಂದುಕೊಳ್ಳುವವರ ಮಧ್ಯೆ ಸದಾ ಚಟುವಟಿಕೆಯಿಂದ ಇರುತ್ತಾ ತಾವಷ್ಟೇ ಅಲ್ಲದೆ ತಮ್ಮ ಸುತ್ತಮುತ್ತಲಿನವರಿಗೂ ಒಂದಿಲ್ಲೊಂದು ಸಾಧನೆಯ ದಾರಿ ತೋರಿಸುವ ಆದರ್ಶ ಗುರುಗಳು ಇಂದಿನ ಯುವ ಜನಾಂಗಕ್ಕೆ ದಿಕ್ಸೂಚಿಯಂತಿರುವ ಇವರಿಗೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಲಿ ಎನ್ನುವುದೇ ” ಕರುನಾಡ ಕಂದ ” ಮಾಧ್ಯಮ ಮಿತ್ರರ ಶುಭ ಹಾರೈಕೆ.
- ಕರುನಾಡ ಕಂದ




















