ಬಳ್ಳಾರಿ / ಕಂಪ್ಲಿ : ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ನವೋದಯ ಶಾಲೆ ಆರಂಭಿಸುವ ಕನಸಾಗಿದ್ದು, ಆದಷ್ಟು ಬೇಗ ನವೋದಯ ಶಾಲೆ ತರಲು ಶತಸಿದ್ಧ ಎಂದು ಶಾಸಕ ಜೆ. ಎನ್. ಗಣೇಶ ಹೇಳಿದರು.
ತಾಲೂಕಿನ ನಂ.10 ಮುದ್ದಾಪುರ ಗ್ರಾಪಂಯ ಕಣವಿ ತಿಮ್ಮಲಾಪುರ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರನದಲ್ಲಿ 2024-25ನೇ ಸಾಲಿನ ರಾಜ್ಯ ಹಣಕಾಸು ಆಯೋಗ ಮತ್ತು ಶಿಕ್ಷಣ ಇಲಾಖೆ ಅನುದಾನದ ಸುಮಾರು 29 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ 2 ಶಾಲಾ ಕೊಠಡಿ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಕ್ಷೇತ್ರದ ಬೈಲೂರಿನಲ್ಲಿ 15 ಎಕರೆ ಜಾಗ ಗುರುತಿಸಿದ್ದು, ನವೋದಯ ಮಾಡುವ ಮೂಲಕ ಈ ಭಾಗದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಈಗಾಗಲೇ ಕಂಪ್ಲಿ ತಾಲೂಕಿನ ಸಣಾಪುರ ಗ್ರಾ.ಪಂ. ಯ ಅರಳಿಹಳ್ಳಿ ತಾಂಡದಲ್ಲಿ ಮೀಸಲಿಟ್ಟಿರುವ 10 ಎಕರೆ ಜಮೀನಿನಲ್ಲಿ ಸುಮಾರು 80 ಕೋಟಿ ವೆಚ್ಚದ ಜಿಟಿಟಿಸಿ ಕಾಲೇಜು ಅಭಿವೃದ್ಧಿ ಕಾರ್ಯ, ಸುಮಾರು 44 ಕೋಟಿ ವೆಚ್ಚದ ಕಾರ್ಮಿಕರ ಮುರಾರ್ಜಿ ದೇಸಾಯಿ ಶಾಲೆ, ಸುಮಾರು 22 ಕೋಟಿ ವೆಚ್ಚದಲ್ಲಿ ಗಾಂಧಿತತ್ವ, ಕಂಪ್ಲಿ ಮತ್ತು ಬೈಲೂರಿನಲ್ಲಿ ಸುಮಾರು ತಲಾ 16 ಕೋಟಿ ವೆಚ್ಚದಲ್ಲಿ ಮುರಾರ್ಜಿ ದೇಸಾಯಿ ಶಾಲೆ, ಹೀಗೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಿದೆ. ಕಂಪ್ಲಿ ಪಟ್ಟಣದ ಸೋಮಪ್ಪ ಕೆರೆ ಅಂಗಳದಲ್ಲಿ ಈಗಾಗಲೇ ಹೈಟೆಕ್ ಗ್ರಂಥಾಲಯ ನಿರ್ಮಾಣವಾಗಿದ್ದು, ಇನ್ನೂ ಕೋಟ್ಯಾಂತರ ಅನುದಾನದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಗೊಳ್ಳುತ್ತಿದ್ದು, ಈ ಕಾಮಗಾರಿಗಳು ಪೂರ್ಣಗೊಂಡ ತಕ್ಷಣ ಗ್ರಂಥಾಲಯ ಸೇರಿದಂತೆ ಇನ್ನಿತರ ಸೌಲಭ್ಯಗಳು ಸಾರ್ವಜನಿಕರ ಬಳಕೆಗೆ ಅನುಕೂಲವಾಗಲಿವೆ. ಆರು ತಿಂಗಳೊಳಗಾಗಿ ಹಿರೇ ಕೆರೆ ಅಭಿವೃದ್ಧಿಗೆ ಚಾಲನೆ ನೀಡುವ ಮೂಲಕ ನೀರು ತುಂಬಿಸಲಾಗುವುದು. ಇದರಿಂದ ಕುಡಿಯುವ ನೀರು, ನೀರಾವರಿ, ಅಂತರ್ಜಲ ಉತ್ತೇಜವಾಗಲಿದೆ. ನಾಗೇಂದ್ರ, ರಾಜಣ್ಣ ಅವರ ಎರಡು ಸಚಿವ ಸ್ಥಾನಗಳು ಖಾಲಿ ಇವೆ. ಆದ್ದರಿಂದ ಕಾಂಗ್ರೆಸ್ ಪಕ್ಷವು ನಮಗೆ ಸಚಿವ ಸ್ಥಾನದ ಅವಕಾಶ ಮಾಡಿಕೊಟ್ಟರೆ, ಅಭಿವೃದ್ಧಿಯೊಂದಿಗೆ ಹೊಸ ಇತಿಹಾಸ ನಿರ್ಮಾಣವಾಗಲಿದೆ, ಸಾಮಾನ್ಯ ವ್ಯಕ್ತಿಯನ್ನು ಎರಡು ಬಾರಿ ಶಾಸಕರನ್ನಾಗಿ ಮಾಡಿದ್ದು, ಅವರ ಋಣ ತೀರಿಸಲಾಗುವುದು. ಕ್ಷೇತ್ರದ ಜನರ ಅಭಿವೃದ್ಧಿ ಹೊರತುಪಡಿಸಿದರೆ, ಮತ್ಯಾವ ಆಸೆಗಳಿಲ್ಲ. ಕಣತಿಮ್ಮಲಾಪುರ ಗ್ರಾಮದಲ್ಲಿ 1ಎಕರೆ 30 ಸೆಂಟ್ಸ್ ಜಾಗ ಮೀಸಲಿಟ್ಟಿದ್ದು, ಪ್ರೌಢಶಾಲೆ ನಿರ್ಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ತಿಮ್ಮಪ್ಪ, ಮುಖ್ಯಗುರು ವಿಶ್ವನಾಥ, ಗುತ್ತಿಗೆದಾರ ವೈ.ಶಂಕ್ರಪ್ಪ ಮುಖಂಡರಾದ ಎನ್.ರಾಮಯ್ಯ, ಯು.ಪಕ್ಕೀರಪ್ಪ, ಟಿ.ರಾಮಲಿಸ್ವಾಮಿ, ರೇಣುಕಪ್ಪ, ಪೂಜಾರಿ ದೇವೇಂದ್ರಪ್ಪ, ವಿರೇಶ, ಅಕ್ಕಿ ಸುರೇಶ, ಬುಡ್ಡೆಪ್ಪ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















