ಕೇರಳ : ಪತ್ತನಂತಿಟ್ಟ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿರುವ ಶಬರಿಮಲೆ ದೇವಸ್ಥಾನವು ಅಯ್ಯಪ್ಪ ಸ್ವಾಮಿಗೆ ಮೀಸಲಾಗಿದೆ. ಪ್ರತಿ ವರ್ಷ ನಡೆಯುವ ಶಬರಿಮಲೆ ಯಾತ್ರೆಗೆ 41 ದಿನಗಳ ಕಠಿಣ ವ್ರತಾಚರಣೆ ಅಗತ್ಯವಿದೆ. ಸಾವಿರಾರು ಭಕ್ತರು ಈ ವ್ರತವನ್ನು ಆಚರಿಸಿ ಅಯ್ಯಪ್ಪನ ಕೃಪೆಗೆ ಪಾತ್ರರಾಗುತ್ತಾರೆ. ಹಾಗಾದರೆ ಶಬರಿಮಲೆ ತೀರ್ಥಯಾತ್ರೆ ಪ್ರಾರಂಭ ಹಾಗೂ ಅಂತ್ಯವಾಗುವುದು ಯಾವಾಗ? ಎಂಬುದನ್ನು ತಿಳಿಯೋಣ ಬನ್ನಿ…
ಕೇರಳ ರಾಜ್ಯದ ಪತ್ತನಂತಿಟ್ಟ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಈ ಶಬರಿಮಲೆ ದೇವಸ್ಥಾನವು ಅಯ್ಯಪ್ಪ ಸ್ವಾಮಿಗೆ ಸಮರ್ಪಿತವಾಗಿದೆ. ಈ ಸುಂದರವಾದ ಆಲಯವು ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದಲ್ಲಿದ್ದು, ಸಮುದ್ರಮಟ್ಟದಿಂದ ಸುಮಾರು 3000 ಅಡಿ ಎತ್ತರದಲ್ಲಿದೆ. ಇದು ಒಟ್ಟು 18 ಬೆಟ್ಟಗಳಿಂದ ಸುತ್ತುವರೆದಿದೆ.
ಶಿವ ಮತ್ತು ವಿಷ್ಣುವಿನ ಮಿಲನದಿಂದ ಜನಿಸಿದ ಮಗುವೇ ಈ ಅಯ್ಯಪ್ಪ ಸ್ವಾಮಿ. ಈ ಸ್ವಾಮಿಯು ಬ್ರಹ್ಮಚಾರಿ ಮತ್ತು ತಪಸ್ವಿಯಾಗಿದ್ದಾರೆ. ಶಬರಿಮಲೆ ಯಾತ್ರೆ ಪ್ರತಿ ವರ್ಷ ನಡೆಯುತ್ತದೆ. ಈ ಯಾತ್ರೆಯು ಕಠಿಣವಾದ ವ್ರತಾಚರಣೆಯನ್ನು ಹೊಂದಿದ್ದು, ಭಕ್ತಿಯ ದೃಢತೆಯನ್ನು ಹೊಂದಿರುವುದು ಬಹಳ ಮುಖ್ಯವಾಗಿದೆ. ಸಾವಿರಾರು ಮಂದಿ 41 ದಿನಗಳ ಕಾಲ ಕಠಿಣವಾದ ದೀಕ್ಷೆ ತೆಗೆದುಕೊಂಡು ಅಯ್ಯಪ್ಪನ ಕೃಪೆಗೆ ಪಾತ್ರರಾಗುತ್ತಾರೆ.
ಅಯ್ಯಪ್ಪನ ಭಕ್ತರು ಕಾತುರದಿಂದ ಕಾಯುತ್ತಿರುವ ಶಬರಿಮಲೆ ತೀರ್ಥಯಾತ್ರೆ ಪ್ರಾರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಹೌದು ನವೆಂಬರ್ 16 ರಂದು ಮಕರ ಜ್ಯೋತಿ ಯಾತ್ರೆ ಪ್ರಾರಂಭವಾಗಲಿದೆ. ಈ ಯಾತ್ರೆಗೆ ದಕ್ಷಿಣ ಭಾರತದ ರಾಜ್ಯಗಳಿಂದಲೇ ಅಲ್ಲದೆ, ಉತ್ತರ ಭಾರತದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ.
ಅಯ್ಯಪ್ಪನನ್ನು ದರ್ಶಿಸಲು ಆನ್ಲೈನ್ ಬುಕ್ಕಿಂಗ್ ಬಹಳ ಮುಖ್ಯವಾಗಿದೆ ಎಂಬುದನ್ನು ನಾವು ನಿಮಗೆ ಹೇಳುತ್ತೇವೆ. ಇದಕ್ಕಾಗಿ ಭಕ್ತರು ಪ್ರತಿನಿತ್ಯ ವೆಬ್ ಸೈಟ್ ಬುಕ್ಕಿಂಗ್ ಗಾಗಿ ಕಾಯುತ್ತಿದ್ದಾರೆ. ಅಂದಹಾಗೆ, ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಾರ, ಸ್ವಾಮಿಯ ದರ್ಶನಕ್ಕೆ ಅಕ್ಟೋಬರ್ 27 ರಿಂದಲೇ ಬುಕ್ಕಿಂಗ್ ಪ್ರಾರಂಭಿಸಲಾಗಿದೆ. ಅಯ್ಯಪ್ಪ ಸ್ವಾಮಿ ದೇವಸ್ಥಾನ ಮಂಡಳಿಯು ಪ್ರತಿನಿತ್ಯ 70 ಸಾವಿರ ಭಕ್ತರಿಗೆ ಮಾತ್ರ ದರ್ಶನ ನೀಡಲು ಅವಕಾಶ ಮಾಡಿಕೊಟ್ಟಿದೆ.
ವರದಿ ಜೆ. ಪ್ರದೀಪ್




















