ಉತ್ತರ ಕನ್ನಡ/ ಶಿರಸಿ: ಶಾಂತ ಸ್ಥಿತಿಯಿಂದ, ಉದ್ವಿಗ್ನವಿಲ್ಲದೆ ವೇದಗಳನ್ನು ಅರಿಯುವುದು ಮುಖ್ಯ, ವೇದ ಮಂತ್ರಗಳ ಅರ್ಥ ತಿಳಿಯದೆ ಕೇವಲ ಪಠಣದಿಂದ ಬಹಳ ಪ್ರಯೋಜನವಾಗದು ; ಗಾಯತ್ರಿ ಮಂತ್ರದ ನಂತರ ಅತಿ ಮುಖ್ಯವಾದ ಎಲ್ಲಾ ವೇದಗಳ ಅಂಶಗಳನ್ನು ಹೊಂದಿರುವ ಪುರುಷ ಸೂಕ್ತ ಬಹಳ ಮಹತ್ವದ್ದು ಎಂದು ಖ್ಯಾತ ವೈದ್ಯ ಡಾ. ಕೃಷ್ಣಮೂರ್ತಿ ರಾಯ್ಸದ ಅವರು ಶಿರಸಿಯ ಗಾಯತ್ರಿ ಬಳಗದಲ್ಲಿ ಜಸ್ಟಿಸ್ ಜಿ ಎನ್ ಸಭಾಹಿತ, ಜಸ್ಟಿಸ್ ವಿ ಜಿ ಸಭಾಹಿತ ಸ್ಮರಣೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಿಳಿಸಿದರು.
ಅವರು ಮುಂದುವರೆದು, ಪುರುಷ ಸೂಕ್ತದ ಮಂತ್ರಗಳನ್ನು , ವಿಶೇಷವಾಗಿ ಅತ್ಯತಿಷ್ಠದ್ಧಶಾಂಗುಲಂ, ಯದ್ಭೂತಂ ಯಚ್ಚ ಭವ್ಯಂ, ಮುಖಂ ಕಿಮಸ್ಯ ಕೌಬಾಹೂ, ಬ್ರಾಹ್ಮಣೋಸ್ಯ ಮುಖಮಾಸೀತ, ಪದ್ಭ್ಯಾಗು ಶೂದ್ರೋ ಅಜಾಯತ: ಇತ್ಯಾದಿ ಎಲ್ಲಾ ಮಂತ್ರಗಳನ್ನು ಡಿವಿಜಿಯವರ ವ್ಯಾಖ್ಯಾನ ದೊಂದಿಗೆ ಮನಮುಟ್ಟುವಂತೆ ತಿಳಿಸಿದರು. ಉಪನ್ಯಾಸದುದ್ದಕ್ಕೂ ಅನುಬಂಧ ಚತುಷ್ಟಯ, ಪರಬ್ರಹ್ಮ ವಸ್ತುವಿನ ವಿವರಣೆ, ಸೃಷ್ಟಿ -ವ್ಯಷ್ಠಿ- ಸಮಷ್ಠಿ, ಕ್ವಾಂಟಮ್ ಫಿಸಿಕ್ಸ್ , ಥಿಯರಿ ಆಫ್ ರಿಲೇಟಿವಿಟಿ, ಹರಿ ಓಂ ವಿವರಣೆ, ಅರ್ಥಾನು ಸಂಧಾನ, ಹದಿನಾಲ್ಕು ಲೋಕಗಳ, ಯಜ್ಞದ, ನಾಲ್ಕು ವರ್ಣಗಳ ಕುರಿತು ತಿಳಿಸಿದ ಅವರ ಉಪನ್ಯಾಸ ಬಹಳ ಚೇತೋಹಾರಿಯಾಗಿತ್ತು. ಬ್ರಾಹ್ಮಣರೆಂದರೆ ಹೆಗಡೆ, ಭಟ್ಟ ,ಗಾಯತ್ರಿ ಅಲ್ಲ; ಹೇಗೆ ಅರ್ಥೈಸಬೇಕೆಂಬುದನ್ನು ಹೇಳಿ, ಮನುಷ್ಯ ರೂಪವನ್ನು ಕೊಟ್ಟು ಪುರುಷ ಸೂಕ್ತದ ಮೂಲಕ ಪರಬ್ರಹ್ಮ ವಸ್ತುವಿನ ವಿವರಣೆ ನೀಡಿರುವುದನ್ನು ವಿವರಿಸಿದರು. ಅವರ ಪಾಂಡಿತ್ಯಪೂರ್ಣ ಉಪನ್ಯಾಸ, ಸಭಿಕರನ್ನು ತಲೆದೂಗುವಂತೆ ಮಾಡಿತು.
ಇನ್ನೊಂದು ಉಪನ್ಯಾಸದಲ್ಲಿ, ನಗರದ ಕಾನೂನು ವಿದ್ಯಾಲಯದ ಪ್ರಾಧ್ಯಾಪಕ ಪ್ರಶಾಂತ ಅಡಿಗ ಅವರು, ವೈವಾಹಿಕ ಮತ್ತು ಮಾನವೀಯ ಸಂಬಂಧಿತ ಕಾನೂನುಗಳ ಕ್ರೌರ್ಯ ಪರಿಕಲ್ಪನೆ ಕುರಿತು ಒಂದು ಪುಟ್ಟ ಒಳನೋಟವನ್ನು ತಿಳಿಸುತ್ತಾ, ಕಾನೂನಿನ ಚೌಕಟ್ಟಿನಲ್ಲಿ ಕ್ರೌರ್ಯ ಎಂದರೇನು?, ಕಿರುಕುಳ, ವೈವಾಹಿಕ ಸಂಬಂಧ, ಅದಕ್ಕೆ ಕಾನೂನಿನ ರಕ್ಷಣೆ, ನ್ಯಾಯಾಲಯದಿಂದ ಜೀವನಾಂಶ ಹೊಸ ಕಾನೂನಿನ ಕಲಂ ಸಂಖ್ಯೆ 80ರ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಉದಾಹರಣೆ ಸಹಿತ ತಿಳಿಸಿದರು. ಮುಂದುವರಿದು ಡೈವೋರ್ಸ್ ಅಂದರೇನು? ನ್ಯಾಯಿಕ ಬೇರ್ಪಡುವಿಕೆ, ಲಿವಿಂಗ್ ಟುಗೆದರ್, ಜ್ಯುಡೀಶಿಯಲ್ ಸೆಪರೇಷನ್ ಇವನ್ನು ಕ್ರಿಮಿನಲ್ ನ್ಯಾಯಾಲಯ, ದಿವಾಣಿ ನ್ಯಾಯಾಲಯ ಅಥವಾ ಫ್ಯಾಮಿಲಿ ಕೋರ್ಟ್ ನಲ್ಲಿ ಹೇಗೆ ಪರಿಗಣಿಸುತ್ತಾರೆ? ಹೇಗೆ ನಿರ್ಣಯಿಸುತ್ತಾರೆ ಎಂಬುದನ್ನು ವಿವರವಾಗಿ ತಿಳಿಸಿಕೊಟ್ಟರು.
ಆರ್ ಎಸ್ ಬೈಲಕೇರಿ, ಶ್ಯಾಮ್ ಭಟ್, ವಿ ಆರ್ ಭಟ್, ಲಕ್ಷ್ಮಣ ಶಾನಭಾಗ , ಎಲ್ ಜಿ ಭಟ್ಗದ್ದೆ, ಶಂಕರ ಹೆಗಡೆ ಭದ್ರನ್, ಆರ್ ಎಸ್ ಹೆಗಡೆ ಇವರ ಸಾಮೂಹಿಕ ಪುರುಷ ಸೂಕ್ತ ಪಠಣದ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ರವಿ ಹೆಗಡೆ ಗಡಿಹಳ್ಳಿ , ನಾರಾಯಣ ಪುರಾಣಿಕ ಉಪನ್ಯಾಸಕರ ಪರಿಚಯ ಮಾಡಿಕೊಟ್ಟರು, ಶಾಂತಿ ಪುರಾಣಿಕ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಣೆ ಮಾಡಿದರೆ, ಬಳಗದ ಮುಖ್ಯಸ್ಥ ಎಂ ಎಸ್ ಹೆಗಡೆ ಉಪನ್ಯಾಸಕರಿಗೆ ಗೌರವ ಸಮರ್ಪಣೆ ಮಾಡಿದರು. ಬಳಗದ ವಿಶ್ವೇಶ್ವರ ಗಾಯತ್ರಿ ಎಲ್ಲರನ್ನೂ ವಂದಿಸಿದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಸಂಪಾದಕ ಅಶೋಕ ಹಾಸ್ಯಗಾರ , ಪತ್ರಕರ್ತ ರಘುಪತಿ ಯಾಜಿ, ಅಂಕಣಕಾರ ಎಸ್ ಜಿ ಕಡೇಮನಿ, ಅನಂತ ಪದ್ಮನಾಭ, ಪ್ರೊ. ಕೆ ಎನ್ ಹೊಸಮನಿ, ಡಾ. ಕೆ ವಿ ಶಿವರಾಮ, ಡಾ. ವತ್ಸಲಾ ರಾಯ್ಸದ್, ಲ.ಶ್ರೀಕಾಂತ ಹೆಗಡೆ, ಅನಿತಾ ಹೆಗಡೆ, ತ್ರಿವೇಣಿ ಹೆಗಡೆ, ಕೃಷ್ಣವೇಣಿ ಹೆಗಡೆ, ಇಂದಿರಾ ಬೈಲಕೇರಿ, ಆಶಾ ಸಭಾಹಿತ, ಆರ್ ಜಿ ದೇಶಪಾಂಡೆ, ಎಸ್ ಮಂಜುನಾಥ್, ಎ ಎನ್ ಕಲ್ಲಪ್ಪ, ಬಿ ಕೆ ಹೆಗಡೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್




















