ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ಮರೆಯಾದ ಮಾಣಿಕ್ಯ

ವಿಶೇಷ ವರದಿ : ಜಿಲಾನಸಾಬ್ ಬಡಿಗೇರ್

ಮನೆ–ಮನೆಗೆ ಅಲೆದು ಚಹಾಪುಡಿ ಮಾರುತ್ತಿದ್ದ ಆ ಹುಡುಗ ಮುಂದೊಂದು ದಿನ ನಾಡೇ ಮೆಚ್ಚುವಂಥ ಅಧಿಕಾರಿಯಾದ.

ಬಡತನದ ಬೇಗೆಯಲ್ಲಿ ಬೆಂದು, ಸಂಕಷ್ಟಗಳ ಸರಮಾಲೆ ಅನುಭವಿಸಿ, ಎಳವೆಯಲ್ಲೇ ಹೆತ್ತವರನ್ನು ಕಳೆದುಕೊಂಡ ಆ ಹುಡುಗ; ಕಷ್ಟಗಳನ್ನೇ ಮೆಟ್ಟಿಲು ಮಾಡಿಕೊಂಡ. ಛಲವಿದ್ದರೆ ಏನೆಲ್ಲಾ ಸಾಧನೆ ಮಾಡಬಹುದು ಎಂಬುದಕ್ಕೆ ಉದಾಹರಣೆಯಾದ.

ಹೌದು. ಈಚೆಗೆ ಸಂಭವಿಸಿದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಕತೆ ಇದು. ಸ್ವಂತ ಪ್ರಯತ್ನ, ಪ್ರತಿಭೆ, ಕಠಿಣ ಪರಿಶ್ರಮದಿಂದಲೇ ಸಾಧನೆಯ ಉತ್ತುಂಗ ಮುಟ್ಟಿದ ಅವರ ವ್ಯಕ್ತಿತ್ವ ಧೀಮಂತಿಕೆಯಿಂದ ಕೂಡಿತ್ತು.

1974 ರಲ್ಲಿ ರಾಮದುರ್ಗದಲ್ಲಿ ಜನಿಸಿದ ಮಹಾಂತೇಶ್, ಎರಡು ಹೊತ್ತು ಊಟ ಮಾಡದಷ್ಟು ಕಡು ಬಡತನದಲ್ಲಿ ಬೆಳದಿದ್ದರು. ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದರು. ಕೆಎಎಸ್​ ಪಾಸ್​ ಮಾಡಿ ನೇರವಾಗಿ ಎಸಿಯಾಗಿ ಆಯ್ಕೆ ಆಗಿದ್ದರು. ಅನಂತರ ಐಎಎಸ್​​ ಹುದ್ದೆಗೆ ಬಡ್ತಿ ಪಡೆದು ಉನ್ನತ ಸ್ಥಾನಕ್ಕೇರಿದ್ದರು. ಸರ್ಕಾರಿ ಸೇವೆ ನಿರ್ವಹಿಸುತ್ತಿದ್ದರು, ಸ್ಪರ್ಧಾ ವಿದ್ಯಾರ್ಥಿಗಳಿಗೆ ಕೋಚಿಂಗ್​ ನೀಡಿತ್ತಿದ್ದರು. ಅವರ ಈ ಸಾಧನೆ ಯುವಕರಿಗೆ ಪ್ರೇರಣೆಯಾಗಿತ್ತು.

ಧಾರವಾಡದಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡಿದರು. ಅವರು ದಾವಣಗೆರೆ ಜಿಲ್ಲೆಯ ಉಪ ಆಯುಕ್ತರಾಗಿಯೂ ಸೇರಿದಂತೆ ಹಲವಾರು ಪ್ರಮುಖ ಆಡಳಿತಾತ್ಮಕ ಹುದ್ದೆಗಳಲ್ಲಿ ಕೆಲಸ ಮಾಡಿದರು.

ನಂತರ ಅವರು ಈ ವರ್ಷದ ಜನವರಿಯಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಮ್) ನೇತೃತ್ವ ವಹಿಸಿದ್ದರು.

ಬಾಲ್ಯದಿಂದಲೂ ಕಷ್ಟಕರ ಜೀವನ ನಡೆಸಿದ ಅವರು ಬೆಳೆದು ಬಂದ ರೀತಿಯೇ ವಿಶೇಷವಾಗಿತ್ತು. ಅವರ ತಾಯಿ ಮನೆಗೆಲಸ ಮಾಡಿ ಮಹಾಂತೇಶ್ ಶಿಕ್ಷಣವನ್ನು ಮುಂದುವರಿಸಿದರು. ಕೆಎಎಸ್ ಪರೀಕ್ಷೆ ಮತ್ತು ನಂತರ ಐಎಎಸ್ ಪರೀಕ್ಷೆ ಪಾಸ್ ಮಾಡಿ ಉತ್ತಮ ಜೀವನ ಕಟ್ಟುಕೊಂಡಿದ್ದರು. ತಮ್ಮ ಬಾಲ್ಯದಲ್ಲಿ ತಾನು ಮತ್ತು ತಮ್ಮ ಸಹೋದರರು 5 ನೇ ವಯಸ್ಸಿನಿಂದ ಹೇಗೆ ಕಷ್ಟಪಟ್ಟರು ಎಂಬುದನ್ನು ಬೀಳಗಿ ಅವರು ಹಲವಾರು ಸಂದರ್ಶನಗಳಲ್ಲಿ ನೆನಪಿಕೊಂಡಿದ್ದರು. ಮೃತರಿಗೆ ಪತ್ನಿ ಮತ್ತು ಮಕ್ಕಳಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು.

ಬಾಲ್ಯದಲ್ಲಿ ತನ್ನ ತಂದೆಯನ್ನು ಮಹಾಂತೇಶ್ ಬೀಳಗಿ ಕಳೆದುಕೊಂಡರು. ಕಡು ಬಡತನದಲ್ಲಿ ತಾಯಿ ಕೂಲಿ ನಾಲಿ ಮಾಡಿ ಮಗ ಮಹಾಂತೇಶ್ ಬೀಳಗಿಯವರನ್ನು ಸಾಕಿದ್ದರು. ತನಗೆ ವಿಧವಾ ವೇತನ ಬರುತ್ತದೆ ಎನ್ನುವ ಮಾಹಿತಿ ಆಕೆಗೆ ಸಿಕ್ಕಿತ್ತು. ಇದಕ್ಕಾಗಿ ಅಧಿಕಾರಿಯ ಬಳಿಗೆ ತೆರಳಿ, ತನ್ನ ಕಡು ಬಡತನದ ಜೀವನದ ಬಗ್ಗೆ ಹೇಳಿಕೊಂಡು ವಿಧವಾ ವೇತನಕ್ಕೆ ಮನವಿ ಮಾಡಿದರು.

ಬಡತನದ ನಡುವೆಯೂ ಮಹಾಂತೇಶ್ ಅವರಿಗೆ ಅಧ್ಯಯನದ ಬಗ್ಗೆ ಇದ್ದ ಅಗಾಧ ಆಸಕ್ತಿಯ ಬಗ್ಗೆ ಪಿಯುಸಿ ಮತ್ತು ಡಿಗ್ರಿಯಲ್ಲಿ ಬೀಳಗಿ ಅವರೊಂದಿಗೆ ಓದಿದ್ದ ಸ್ನೇಹಿತರು ವಿವರಿಸಿದ್ದಾರೆ. ಆರಂಭದಲ್ಲಿ ಸಾಧಾರಣ ವಿದ್ಯಾರ್ಥಿಯಾಗಿದ್ದರೂ, 10ನೇ ತರಗತಿಯ ನಂತರ ಓದಿನಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡರು. ನಂತರದ ದಿನಗಳಲ್ಲಿ ಪ್ರತಿ ತರಗತಿಯಲ್ಲೂ ಪ್ರಥಮ ಶ್ರೇಣಿ ಗಳಿಸಿ ಎಲ್ಲರ ಗಮನ ಸೆಳೆದರು. ಬಸವೇಶ್ವರ ಕಾಲೇಜಿನಲ್ಲಿ ಪಿಯುಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಅವರು, ಸಿ ಎಸ್ ಬೆಂಬಳಗಿ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದರು. ನಂತರ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು ಎಂದು ಸ್ನೇಹಿತರು ನೆನಪಿಸಿಕೊಂಡಿದ್ದಾರೆ.

ಮಾಸಿಕ 25 ರೂಪಾಯಿ ವಿಧವಾ ವೇತನ ಮಾಡಿಕೊಡಲು ಆ ಅಧಿಕಾರಿ ಮಾತ್ರ ರೂ.100 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಷಯ ತಿಳಿದಂತ ಮಹಾಂತೇಶ್ ಬೀಳಗಿ ಅವರು, ಅಂದೇ ತಾನು ಲಂಚ ಪಡೆಯದ ಅಧಿಕಾರಿಯಾಗಬೇಕು ಎಂಬುದಾಗಿ ನಿರ್ಧರಿಸಿದರು. ತಾನು ಐಎಎಸ್ ಮಾಡಬೇಕು ಎಂಬುದಾಗಿ ಛಲ ತೊಟ್ಟಂತ ಛಲದಂಕ ಮಲ್ಲರಾದಂತ ಮಹಾಂತೇಶ್ ಬೀಳಗಿ ಅವರು ಕನ್ನಡ ಮಾಧ್ಯಮದಲ್ಲಿ ಓದಿದರೂ, ಎಂ.ಎ ಬಳಿಕ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ತಯಾರಿ ನಡೆಸಿದರು.

BOX

2012ರಲ್ಲಿ ಐಎಎಸ್

ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಓದಿದಂತ ಮಹಾಂತೇಶ್ ಬೀಳಗಿ ಅವರು, ಮೊದಲು ಕೆಎಎಸ್ ಪಾಸ್ ಮಾಡಿ ಎಸಿಯಾಗಿ ಸರ್ಕಾರಿ ಸೇವೆಗೆ ಸೇರುತ್ತಾರೆ. ಆ ಬಳಿಕ 2012ರಲ್ಲಿ ಐಎಎಸ್ ಅಧಿಕಾರಿಯಾಗಿ ಬಡ್ತಿ ಹೊಂದುತ್ತಾರೆ. ಆ ಬಳಿಕ ವಿವಿಧ ಹುದ್ದೆಯನ್ನು ನಿರ್ವಹಿಸಿದವರು. ತಮ್ಮ ಸೇವಾವಧಿಯುದ್ದಕ್ಕೂ ಒಂದು ರೂಪಾಯಿ ಲಂಚ ಪಡೆಯದೆ ಜನ ಸೇವೆಯೇ ಜನಾರ್ದನ ಸೇವೆ ಅಂತ ಸೇವೆಯಲ್ಲಿ ತಲ್ಲೀನರಾಗಿದ್ದರು. ಅದ್ರಲ್ಲೂ ಕೊರೊನಾ ಸಮಯದಲ್ಲಿ ಓರ್ವ ಡಿಸಿಯಾಗಿದ್ರೂ ಬೀದಿಗಿಳಿದು ಜನಸಾಮಾನ್ಯರಂತೆ ಕೆಲಸ ಮಾಡಿದರು. ದಾವಣಗೆರೆಯ ಜಿಲ್ಲಾಧಿಕಾರಿಯಾಗಿದ್ದಾಗ ಅವರು ಮಾಡಿದ ಸೇವೆಯಂತೂ ಜನಜನಿತ.

ರಾಮದುರ್ಗದ ಬಗ್ಗೆ ಅವರಿಗೆ ಅಪಾರ ಅಭಿಮಾನವಿತ್ತು. ‘ನನ್ನ ಹುಟ್ಟಿದ ಊರು, ನನ್ನ ಜನ್ಮ ಕೊಟ್ಟ ಊರು’ ಎಂದು ಆಗಾಗ ಹೇಳುತ್ತಿದ್ದರು. ಉನ್ನತ ಹುದ್ದೆಗೆ ಏರಿದ ನಂತರವೂ ತಮ್ಮ ಸ್ನೇಹಿತರೊಂದಿಗೆ ಅವರ ಬಾಂಧವ್ಯ ಎಂದಿಗೂ ಕಡಿದಾಗಲಿಲ್ಲ. ಓದುವ ದಿನಗಳಲ್ಲಿ ಹೇಗೆ ಒಟ್ಟಾಗಿ ಇದ್ದರೋ, ಅದೇ ರೀತಿ ಜೀವನದುದ್ದಕ್ಕೂ ಆ ಸ್ನೇಹವನ್ನು ಉಳಿಸಿಕೊಂಡಿದ್ದರು.

ಮಹಾಂತೇಶ್ ಬೀಳಗಿ ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದವರು. ಅವರ ಬಾಲ್ಯದಲ್ಲಿ ಎರಡು ಹೊತ್ತು ಊಟಕ್ಕೂ ಕಷ್ಟಪಡುತ್ತಿದ್ದರು. ಅವರು ಸ್ವತಃ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಿ, ತಮ್ಮ ಶಿಕ್ಷಣಕ್ಕೆ ಹಣವನ್ನು ಗಳಿಸಿಕೊಂಡಿದ್ದರು. ಅವರ ತಾಯಿಯವರು ಊರೂರಿಗೆ ಹಣ್ಣು ಮಾರಿ ಕುಟುಂಬವನ್ನು ಸಾಗಿಸುತ್ತಿದ್ದರು. ಪುಸ್ತಕಗಳನ್ನು ಖರೀದಿಸಲು ಹಣವಿಲ್ಲದಿದ್ದಾಗ, ತಮ್ಮ ಆತ್ಮೀಯ ಸ್ನೇಹಿತರು ಮತ್ತು ಸಹಪಾಠಿಗಳಿಂದ ಪುಸ್ತಕಗಳನ್ನು ಪಡೆದು, ಗ್ರಂಥಾಲಯಗಳನ್ನು ಬಳಸಿಕೊಂಡು ಅಭ್ಯಾಸ ಮಾಡುತ್ತಿದ್ದರು ಎಂದು ಮಹಾಂತೇಶ್ ಬೀಳಗಿ ಅವರ ಬಾಲ್ಯ ಸ್ನೇಹಿತರು ನೆನಪಿಸಿಕೊಂಡಿದ್ದಾರೆ.

ಇಂಥವರನ್ನ ಕಂಡು ಆ ದೇವರಿಗೂ ಅದೆಂಥಾ ಹೊಟ್ಟೆ ಉರಿಯೋ ಗೊತ್ತಿಲ್ಲ. ಕಲಬುರಗಿ ಜಿಲ್ಲೆಯ ಜೇವರ್ಗಿ ಬಳಿ ನಡೆದ ಕಾರು ಅಪಘಾತದಲ್ಲಿ ಇಬ್ಬರು ಸಹೋದರರೊಂದಿಗೆ ದುರ್ಮರಣ ಹೊಂದಿದ್ದಾರೆ. ಆ ಮೂಲಕ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಇನ್ನಿಲ್ಲವಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮತ್ತೆ ಹುಟ್ಟಿ ಬನ್ನಿ ಸರ್ ಎಂಬುದು ಅವರ ಅಪಾರ ಅಭಿಮಾನಿಗಳ ನೊಂದ ನುಡಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!