ಕಂಪ್ಲಿ : ಸರ್ಕಾರದ ರಚಿಸಿರುವ ಸಂಜೀವಿನಿ ಒಕ್ಕೂಟಗಳು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವಲ್ಲಿ ಯಶಸ್ವಿಯಾಗಿವೆ’ ಎಂದು ಪಿಡಿಒ ಕೆ.ಅಪರಂಜಿ ಹೇಳಿದರು.
ತಾಲ್ಲೂಕಿನ ನೆಲ್ಲುಡಿ ಗ್ರಾ. ಪಂ. ಆವರಣದಲ್ಲಿ ಹೊಸ ನೆಲ್ಲುಡಿ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ನೇತೃತ್ವದಲ್ಲಿ ಗ್ರಾ. ಪಂ. ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಸಂಜೀವಿನಿ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿ, ಮಹಿಳೆಯರಲ್ಲಿ ಕೌಶಲ ಅಭಿವೃದ್ಧಿಗೊಳಿಸಿ ಅವರನ್ನು ಆರ್ಥಿಕವಾಗಿ ಪ್ರಗತಿಶೀಲರನ್ನಾಗಿಸುವ ಸಲುವಾಗಿ ಸಂಜೀವಿನಿ ಒಕ್ಕೂಟಗಳನ್ನು ರಚಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸ್ವಸಹಾಯ ಸಂಘಗಳ ಸಂಜೀವಿನಿ ಒಕ್ಕೂಟಗಳಿದ್ದು, ಮಹಿಳೆಯರ ಸ್ವಾವಲಂಬನೆಯ ಬದುಕಿಗೆ ಹಾಗೂ ಆರ್ಥಿಕವಾಗಿ ಸಬಲರಾಗಲು ಸಂಜೀವಿನಿ ಒಕ್ಕೂಟದ ಪಾತ್ರ ಮಹತ್ವದ್ದಾಗಿದೆ. ಈ ಒಕ್ಕೂಟದಿಂದ ಸಾಕಷ್ಟು ಮಹಿಳೆಯರು ತಮ್ಮ ಭವಿಷ್ಯವನ್ನು ಆರ್ಥಿಕವಾಗಿ ವೃದ್ಧಿಸಿಕೊಂಡಿದ್ದಾರೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಮ್ಮಿಗನೂರು ವಲಯ ಮೇಲ್ವಿಚಾರಕಿ ಯರ್ರೆಮ್ಮ ಮಾತನಾಡಿ, ‘ಮಹಿಳೆಯರು ಆರ್ಥಿಕವಾಗಿ ಪ್ರಗತಿ ಸಾಧಿಸಿದರೆ ಇಡೀ ಕುಟುಂಬವೇ ಪ್ರಗತಿ ಸಾಧಿಸುತ್ತದೆ. ಮಹಿಳೆಯರು ಸಂಘಗಳ ಮೂಲಕ ಬಿಡುವಿನ ಸಮಯವನ್ನು ಆರ್ಥಿಕತೆಗೆ ಬಳಸಿಕೊಳ್ಳಬೇಕು. ಯಾವುದೇ ಉದ್ದಿಮೆ ಯಶಸ್ಸಿಗೆ ಆರ್ಥಿಕ ಶಿಸ್ತು ಮುಖ್ಯವಾಗಿದ್ದು, ಸಂಘದಲ್ಲೂ ಆರ್ಥಿಕ ಚಟುವಟಿಕೆಗಳಲ್ಲಿ ಶಿಸ್ತನ್ನು ರೂಢಿಸಿಕೊಳ್ಳಬೇಕು’ ಎಂದರು.
ತಾಲೂಕು ಮಹಿಳಾ ಒಕ್ಕೂಟದ ಸಂಯೋಜಕಿ ಪಾರ್ವತಿ ಮಾತನಾಡಿ, ಸ್ತ್ರೀಶಕ್ತಿ ಯೋಜನೆ 2000-01ರ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಾರಿಗೊಂಡಿದ್ದು, ಸ್ವ-ಸಹಾಯ ಗುಂಪುಗಳ ಮೂಲಕ ಗ್ರಾಮೀಣ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ ಇದರ ಮುಖ್ಯ ಉದ್ದೇಶವಾಗಿದೆ, ಇದರಿಂದ ಮಹಿಳೆಯರು ಉಳಿತಾಯ ಮಾಡಿ, ಬ್ಯಾಂಕ್ಗಳ ಮೂಲಕ ಸಾಲ ಪಡೆದು ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡುತ್ತಿದೆ. ಆರ್ಥಿಕವಾಗಿ ಸಬಲರಾಗಲು ಈ ಯೋಜನೆ ಅನುಕೂಲವಾಗಿದೆ. ಪ್ರತಿ ವರ್ಷದಂತೆ ಗ್ರಾಪಂ ಮಟ್ಟದಲ್ಲಿ ವಾರ್ಷಿಕ ಸಾಮಾನ್ಯ ಸಭೆ ಮಾಡಿ, ಮಹಿಳೆಯರ ಸ್ವಾವಲಂಬನೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ ಎಂದರು.
ನಂತರ ಸಾಕ್ಷರತಾ ಯೋಜನೆಯಡಿ ಉತ್ತಮ ಕಲಿಕೆಯ ಸಾಧನೆ ಮಾಡಿದ ಮಹಿಳೆಯರಿಗೆ ಪ್ರಮಾಣಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಜಯಮ್ಮ, ಸದಸ್ಯೆ ಶಾಂತಿ, ಕಾರ್ಯದರ್ಶಿ ಕೆ.ಮನೋಜ್, ಬಿಲ್ ಕಲೆಕ್ಟರ್ ಡಿ.ರಾಜಾಸಾಬ್, ಡಾಟಾ ಆಪರೇಟರ್ ಪೀರಾಸಾಬ್, ಹೊಸ ನೆಲ್ಲುಡಿ ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟದ ಅಧ್ಯಕ್ಷ ಸರೋಜಮ್ಮ, ಕಾರ್ಯದರ್ಶಿ ಗಂಗಮ್ಮ, ಖಜಾಂಚಿ ಲಕ್ಷ್ಮೀ, ಮಹತ್ವಕಾಂಕ್ಷಿ ಯೋಜನೆಯ ತಾಲೂಕು ಸಂಯೋಜಕ ಬಸವನಗೌಡ, ತಾಲೂಕು ಸಂಪನ್ಮೂಲ ವ್ಯಕ್ತಿ ಶ್ರೀಗೌರಿ, ಎಲ್ಸಿಆರ್ಪಿ ಮಾಲಾ, ಎನ್ಬಿಕೆ ತ್ರಿವೇಣಿ, ಪಶುಸಕಿ ಬಿ.ಮಾನಸ, ಕೃಷಿಸಕಿ ಚಂದ್ರಕಲಾ ಸೇರಿದಂತೆ ಸ್ವಸಹಾಯ ಸಂಘದ ಸದಸ್ಯರು, ಮಹಿಳೆಯರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















