
ಗುರುಮಠಕಲ್/ಮಲ್ಲಾಪುರ: ಕ್ಯಾನ್ಸರ್ ಎಂದ ತಕ್ಷಣ ಭಯಪಡದೆ ಅದನ್ನು ಸಾಮಾನ್ಯ ತಲೆ ನೋವಿನ ಹಾಗೆ ಪರಿಗಣಿಸಿ, ಧೈರ್ಯದಿಂದಿರಿ ಅದೇ ನಿಜವಾದ ಔಷಧವಾಗುತ್ತದೆ ಎಂದು ಕೃಷ್ಣಗಿರಿಯ ಮಹಾರಾಜ ಯೋಗಿ ಕೃಷ್ಣಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಗುರುವಾರ ಉಸೇನಪ್ಪ ಅವರು ಆಯೋಜಿಸಿದ್ದ ‘ಆಯುರ್ವೇದ ಆರೋಗ್ಯ ಶಿಬಿರ’ ದಲ್ಲಿ ಮಾತನಾಡಿದರು.
ತೆಲಂಗಾಣದ ತಮ್ಮ ಆಶ್ರಮಕ್ಕೆ ಇಲ್ಲಿಂದ ಸಾಕಷ್ಟು ಭಕ್ತರು ಆಯುರ್ವೇದ ಔಷಧಕ್ಕಾಗಿ ಬರುತ್ತಿರುವದು ನನ್ನ ಗಮನಕ್ಕೆ ಬಂದಿದೆ, ನಿಮ್ಮ ಅನುಕೂಲಕ್ಕಾಗಿ ತಿಂಗಳಿಗೆ ಒಮ್ಮೆ ಮಲ್ಲಾಪುರ ಗ್ರಾಮ ಭೇಟಿ ನೀಡಿ ಚಿಕಿತ್ಸೆ ನೀಡುತ್ತೇನೆ ಎಂದು ಹೇಳಿದರು.
ಗೋವುಗಳ ಮೂತ್ರದಿಂದ ಶಿಲಾಜಿತ್ ಪರಿಣಾಮಕಾರಿ ಔಷಧ ತಯಾರಿಸಿ ನೀಡಲಾಗುವುದು, ಕ್ಯಾನ್ಸರ್, ಥೈರಾಯ್ಡ್, ಬಿಪಿ, ಶುಗರ್ ಇತ್ಯಾದಿ ರೋಗಗಳಿಗೆ ಆಯುರ್ವೇದದಲ್ಲಿ ಪರಿಹಾರ ಇದೆ, ಬಡ ಜನತೆಯ ಸೇವೆಯೇ ನಮ್ಮ ಗುರಿ ಎಂದು ಹೇಳಿದರು.
ತಾಯಿ, ತಂದೆ ಮತ್ತು ಗುರುಗಳು ಸಾಕ್ಷಾತ್ ದೈವ ಸ್ವರೂಪ ಇವರ ಸೇವೆಯಿಂದ ಎಲ್ಲವೂ ಪ್ರಾಪ್ತಿ ಎಂದು ಹೇಳಿದರು. ಮದ್ಯ ಸೇವನೆ ಮತ್ತು ಮಾಂಸಹಾರ ಬಿಟ್ಟು ಮಾತಾ ಮಾಣಿಕೇಶ್ವರಿ ಅಮ್ಮನವರು ನುಡಿದಂತೆ ಅಹಿಂಸಾ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಈ ಹಿಂದೆ ಚಿಂತನಳ್ಳಿ ಗವಿ ಸಿದ್ದಲಿಂಗೇಶ್ವರ ಪ್ರದೇಶದಲ್ಲಿ ನಾನು ಇದ್ದೇ,ನನಗೆ ಈ ಭಾಗದ ಔಷಧೀಯ ಸಸಿಗಳ ಬಗ್ಗೆ ಮಾಹಿತಿ ಇದೆ ಎಂದು ಹೇಳಿದರು.
ಆಯೋಜಕ ಉಷನಪ್ಪ ಹಾಗೂ ಮುಖಂಡ ಶಿವರೆಡ್ಡಿ ಆಯುರ್ವೇದ ಶಿಬಿರ ಕುರಿತಾಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಜಗನ್, ಲಕ್ಷ್ಮಣ, ನರಸಿಂಹ, ಸದಾಶಿವರೆಡ್ಡಿ, ಶ್ರೀನಿವಾಸರೆಡ್ಡಿ, ವೆಂಕಟರೆಡ್ಡಿ, ವೆಂಕಟಪ್ಪ, ಶಿವ, ರಮೇಶ, ಕಿಶನ್, ಸಾಬಣ್ಣ, ರಮುನಾಯಕ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ




















