ಬೀದರ/ ಚಿಟಗುಪ್ಪಾ: ಬೆಂಗಳೂರು ನಗರದಲ್ಲಿ ಮತ್ತೊಂದು ಐತಿಹಾಸಿಕ ಉದ್ಯಾನವನ ರಚನೆಗೆ ಕರ್ನಾಟಕ ಸರ್ಕಾರ ಮುಂದಾಗಿರುವುದು ಬಹಳ ಸಂತೋಷ ಪಡುವ ಸಂಗತಿ. ಈ ನಿಟ್ಟಿನಲ್ಲಿ ಸಂಪುಟ ಸಭೆಯಲ್ಲಿ ಎಲ್ಲಾ ಸಚಿವರು ಇದಕ್ಕೆ ಒಪ್ಪಿಗೆ ಸೂಚಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಸಾಹಿತಿ, ಪರಿಸರ ಸಂರಕ್ಷಕರಾದ ಸಂಗಮೇಶ ಎನ್. ಜವಾದಿ ನುಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಅರಣ್ಯ ಇಲಾಖೆಯಿಂದ 153 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಿರುವ ವಿಶ್ವಗುರು ಬಸವಣ್ಣನವರ ಜೀವವೈವಿಧ್ಯ ಉದ್ಯಾನ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ಲಭಿಸಿದ್ದು ಬಸಾಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ ತಂದಿದೆ.
ಬೆಂಗಳೂರು ನಗರಕ್ಕೆ ಅತ್ಯಗತ್ಯವಾದ ಶ್ವಾಸ ತಾಣ ಹಾಗೂ ಮನೋಲ್ಲಾಸ ಕೇಂದ್ರವಾಗಿ ಈ ಉದ್ಯಾನವನ್ನು ಅಭಿವೃದ್ಧಿಪಡಿಸಲು ₹.50 ಕೋಟಿ ಅನುದಾನ ಮಂಜೂರಾಗಿದೆ. ಈ ಮಹತ್ವದ ನಿರ್ಧಾರಕ್ಕೆ ಸಹಕರಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಹಾಗೂ ಎಲ್ಲಾ ಸಂಪುಟ ಸಹೋದ್ಯೋಗಿಗಳಿಗೆ ಹಾಗೂ ವಿಶೇಷವಾಗಿ ಅರಣ್ಯ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ರವರಿಗೆ ತುಂಬು ಹೃದಯದ ಹೃದಯಸ್ಪರ್ಶಿ ಅಭಿನಂದನೆಗಳು ಹಾಗೂ ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇವೆ ಎಂದರು.
1760ರಲ್ಲಿ ನಿರ್ಮಾಣವಾದ ಲಾಲ್‌ಬಾಗ್ ಮತ್ತು 1870ರ ಕಬ್ಬನ್ ಪಾರ್ಕ್ ನಂತರ, ಬಹುತೇಕ ಒಂದೂವರೆ ಶತಮಾನಗಳ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಾಣವಾಗುತ್ತಿರುವುದು ಅತ್ಯಂತ ಸಂತಸದ ವಿಚಾರ.
ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಸಮೀಪದ ಮಾದಪ್ಪನಹಳ್ಳಿಯಲ್ಲಿ ಅಭಿವೃದ್ಧಿಯಾಗಲಿರುವ ಈ ಉದ್ಯಾನವು ರಾಜ್ಯ ರಾಜಧಾನಿಯ ಮೂರನೇ ಅತಿದೊಡ್ಡ ಉದ್ಯಾನವಾಗಲಿದೆ ಎಂದು ಸಂಗಮೇಶ ಎನ್. ಜವಾದಿ ತಿಳಿಸಿದರು.
- ಕರುನಾಡ ಕಂದ ಪತ್ರಿಕೆ




















