
ಯಾದಗಿರಿ/ಗುರುಮಠಕಲ್ : ಭಾರತೀಯ ಸಮಾಜ ಲಿಂಗಬೇಧದ ಅಸಮಾನತೆಯಲ್ಲಿ ಬಳಲುತ್ತಿದ್ದಾಗ, ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಮೇಲ್ದರ್ಜೆಯ ಸಮಾಜ ನಿರಾಕರಿಸಿದ್ದ ಕಾಲಘಟ್ಟದಲ್ಲಿ ಸಾವಿತ್ರಿಬಾಯಿ ಫುಲೆ ಶೋಷಿತರಿಗೆ ಅಕ್ಷರದ ಬೆಳಕು ನೀಡಿದ ಮೊದಲ ಮಹಿಳಾ ಶಿಕ್ಷಕಿ ಎಂದು ಲಾಲಪ್ಪ ತಲಾರಿ ತಾಲೂಕಾ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಅಭಿಪ್ರಾಯಪಟ್ಟರು.
ಪಟ್ಟಣದದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು 80ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅಂಕಲಿಪಿ ವಿತರಿಸಿ ಮಾತನಾಡಿದರು.
ದಲಿತ ಮತ್ತು ಶೋಷಿತ ಸಮುದಾಯದ ಬಾಲಕಿಯರಿಗೆ ಶಾಲೆ ಪ್ರಾರಂಭಿಸಿ, ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆ ಅವರ ಜೀವನ ರೋಚಕವಾದುದು, ಸಮಾಜದ ಬಹಿಷ್ಕಾರ ಹಾಗೂ ಹೆಜ್ಜೆ ಹೆಜ್ಜೆಗೂ ಅವಮಾನ ಅನುಭವಿಸಿದರೂ, ಛಲ ಬಿಡದೇ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದ ಸಾವಿತ್ರಿಬಾಯಿಯನ್ನು ಭಾರತೀಯ ಸಮಾಜ ಎಂದೂ ಮರೆಯಬಾರದು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಮೂಹ ಸಂಪನ್ಮೂಲ ವ್ಯಕ್ತಿ ಬಾಲಪ್ಪ ಸಿರಿಗೆಂ ಸಾವಿತ್ರಿ ಬಾಯಿ ಫುಲೆ ಹಿಂದುಳಿದ ಹೆಣ್ಣುಮಕ್ಕಳಿಗೆ ಅಕ್ಷರ ಕಲಿಸುತ್ತಾರೆಂದು ಅವರ ಮೇಲೆ ಸೆಗಣಿ ಎರಚಲಾಯಿತು. ಕಲ್ಲು ತೂರಲಾಯಿತು. ಈಗ ಸರಕಾರದಿಂದ ಸಾಕಷ್ಟು ಪ್ರಮಾಣದಲ್ಲಿ ಸೌಲಭ್ಯ ನೀಡುತ್ತಿದ್ದು ಎಲ್ಲರೂ ಸದುಪಯೋಗ ಪಡೆದುಕೊಳ್ಳಲು, ಹಾಗೂ ಪೋಷಕರು ಮಕ್ಕಳಿಗೆ ಮನೆಯಲ್ಲಿ ಕಲಿಕಾ ವಾತಾವರಣ ಸೃಷ್ಟಿ ಮಾಡಬೇಕು ಎಂದು ಸಲಹೆ ನೀಡಿದರು.
ಶಾಲೆಯ ಮುಖ್ಯ ಗುರುಗಳು ಕಲಾವತಿ, ಎಸ್ ಡಿ ಎಮ್ ಸಿ ಅಧ್ಯಕ್ಷ ಭೀಮಶಪ್ಪ, ಪುರಸಭೆ ನಾಮ ನಿರ್ದೇಶಕ ಸದಸ್ಯ ಭೀಮಶಪ್ಪ ಶನಿವಾರಂ, ಮಾತನಾಡಿ ಮಕ್ಕಳೊಂದಿಗೆ ಪೋಷಕರ ಹಾಗೂ ಶಿಕ್ಷಕರ ಸಂಪರ್ಕ ನಿರಂತರವಾಗಿ ಇರುವದರಿಂದ ಮಕ್ಕಳ ಕಲಿಕೆ ಮಟ್ಟ ಹೆಚ್ಚಾಗುತ್ತದೆ, ಪ್ರತಿ ನಿತ್ಯ ಮಕ್ಕಳು ಶಾಲೆಯಿಂದ ಮನೆಗೆ ಬಂದ ತಕ್ಷಣ ಅವರೊಂದಿಗೆ ಶಾಲೆಯಲ್ಲಿ ಬೋಧಿಸಿದ ವಿಷಯಗಳ ಅವಲೋಕನೆ ಮಾಡಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಡಿಎಸ್ಎಸ್ ಕಿಷ್ಟಪ್ಪ ಸೈದಾಪುಳ ಯಲ್ಲಪ್ಪ ಶ್ರೀಕಾಂತ್ ತಲಾರಿ, ನರೇಶ್ ನಾಟೆಕರ್, ಯಲ್ಲಪ್ಪ ಪಾಪನೂಳ ಭೀಮಾಶಪ್ಪ ಗುಡಸೆ, ಶಾಲೆಯ ಶಿಕ್ಷಕರು, ಪೋಷಕರು ಭಾಗವಹಿಸಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ




















